ಲಲಿತಾ ಸಹಸ್ರನಾಮ ೧೫೪ - ೧೫೭
Nirupādhiḥ निरुपाधिः (154)
೧೫೪. ನಿರುಪಾಧಿಃ
ಆಕೆಯು ಉಪಾಧಿ ಇಲ್ಲದವಳಾಗಿದ್ದಾಳೆ; ಉಪಾಧಿ ಎಂದರೆ ಪರಿಮಿತಿ. ಉಪಾಧಿಯ ದೆಸೆಯಿಂದಾಗಿ ಅಪರಿಮಿತವಾದ ವಸ್ತುವು ಪರಿಮಿತಿ ಹೊಂದಿದಂತೆ ಕಾಣುವುದು. ಉದಾಹರಣೆಗೆ ಆಕಾಶವು ಪರಿಮಿತಿಯುಳ್ಳದ್ದೆಂದು ಕಾಣುತ್ತದೆ; ಆದರೆ ವಾಸ್ತವವಾಗಿ ಅದು ಅನಂತವಾದದ್ದು ಅಥವಾ ಪರಿಮಿತಿಯಿಲ್ಲದ್ದು. ಉಪಾಧಿಯನ್ನು ಒಂದು ವಸ್ತುವಿಗೆ ಇಲ್ಲದೇ ಇರುವ ಗುಣವನ್ನು ಆರೋಪಿಸುವುದು ಎಂದೂ ಕೂಡಾ ವ್ಯಾಖ್ಯಾನಿಸಬಹುದು. ಉದಾಹರಣೆಗೆ, ಸ್ಪಟಿಕದೊಂದಿಗೆ ಇರಿಸಲ್ಪಟ್ಟ ದಾಸವಾಳದ ಹೂವು; ಇಲ್ಲಿ ಸ್ಪಟಿಕಕ್ಕೆ ಯಾವುದೇ ವಿಧವಾದ ಬಣ್ಣವಿರುವುದಿಲ್ಲ. ದಾಸವಾಳದ ಕೆಂಪು ಬಣ್ಣದಿಂದಾಗಿ ಸ್ಪಟಿಕವೂ ಕೂಡಾ ಕೆಂಪಾಗಿ ಕಾಣಿಸುವುದು; ಇದನ್ನೇ ಉಪಾಧಿ ಎನ್ನುವುದು. ಉಪಾಧಿ ಎನ್ನುವುದನ್ನು ಹೀಗೆ ನಿಷ್ಪತ್ತಿಗೊಳಿಸಬಹುದು. ಉಪ ಎಂದರೆ ಹತ್ತಿರ ಮತ್ತು ಆಧಿ ಎಂದರೆ ಗುಣಗಳು. ಅಜ್ಞಾನವು ಉಪಾಧಿ, ಏಕೆಂದರೆ ಅಜ್ಞಾನಿಯೊಬ್ಬನ ಅಜ್ಞಾನವು ಅವನ ನಡೆ-ನುಡಿಗಳಲ್ಲಿ ಪ್ರತಿಫಲಿತವಾಗುವುದು. ದೇವಿಯು ಈ ರೀತಿಯ ಉಪಾಧಿಗಳನ್ನು ಹೊಂದಿಲ್ಲದೇ ಇರುವವಳು ಮತ್ತು ಆಕೆಯು ಪರಿಮಿತಿಯಿಲ್ಲದವಳು. ಬ್ರಹ್ಮವು ಎಲ್ಲಾ ವಿಧವಾದ ಮಿತಿಗಳಿಗೆ ಅತೀತವಾದದ್ದು. ದೇವಿಯು ವರ್ಣರಹಿತಳಾಗಿದ್ದಾಳೆ ಮತ್ತು ಪಾರದರ್ಶಕವಾಗಿದ್ದಾಳೆ ಮತ್ತು ಆಕೆ ಸ್ಪಟಿಕದಂತೆ ಕಾಣಿಸುತ್ತಾಳೆ. ಸಹಸ್ರನಾಮದ ಧ್ಯಾನ ಶ್ಲೋಕಗಳು ಶಕ್ತಿಯು ಕೆಂಪಾದ ಬಣ್ಣವನ್ನು ಹೊಂದಿದವಳೆಂದು ಹೇಳುತ್ತವೆ. ಯಾವಾಗ ಆಕೆಯು ಶಿವನ ಬಳಿಯಲ್ಲಿ ಕುಳಿತುಕೊಳ್ಳುತ್ತಾಳೆಯೋ ಆಗ ಅವನೂ ಕೂಡಾ ಕೆಂಪು ಮೈಕಾಂತಿ ಉಳ್ಳವನಾಗಿ ಕಾಣುತ್ತಾನೆ. ದೇವಾನುದೇವತೆಗಳು ಈ ದೃಶ್ಯವನ್ನು ನೋಡಿ ಉದಯಿಸುವ ಸೂರ್ಯನೆನ್ನುವ ಭ್ರಮೆಗೊಳಗಾಗುತ್ತಾರೆ, ಇದು ಕೂಡಾ ಉಪಾಧಿಯೇ.
Nīriśvarā नीरिश्वरा (155)
೧೫೫. ನಿರೀಶ್ವರಾ
ಈಶ್ವರಾ ಎಂದರೆ ಶ್ರೇಷ್ಠವಾದ/ಉನ್ನತವಾದ ಅಥವಾ ಒಡೆಯ. ದೇವಿಗಿಂತ ಉನ್ನತವಾದವರು ಅಥವಾ ವರಿಷ್ಠರಾದವರು ಯಾರೂ ಇಲ್ಲ, ಆಕೆಯೇ ಪರಮ ಪಾಲಕಿ. ಶಿವನು ಆಕೆಗಿಂತ ಉನ್ನತವಾದ ಸ್ಥಾನದಲ್ಲಿದ್ದಾನೆಂದು ಒಬ್ಬರು ವಾದ ಮಾಡಬಹುದು. ಶಿವನಿಗೆ ಕೆಲವು ನಿರ್ಧಿಷ್ಟವಾದ ಕಾರ್ಯಗಳಿವೆ ಅದರಲ್ಲಿ ತನ್ನ ಪ್ರಕಾಶ ರೂಪದಿಂದ ಶಕ್ತಿಯನ್ನು ಸೃಷ್ಟಿಸುವುದು; ಅವನು ಸೃಷ್ಟಿ ಕ್ರಿಯೆಯಲ್ಲಿ ನಿಷ್ಕ್ರಿಯ ಪಾಲುದಾರನಾಗಿದ್ದರೂ ಕೂಡಾ ಅವನು ಸ್ವಯಂ ಆಗಿ ಸೃಷ್ಟಿ, ಸ್ಥಿತಿ ಮತ್ತು ಲಯ ಕಾರ್ಯಗಳಲ್ಲಿ ಭಾಗಿಯಾಗುವುದಿಲ್ಲ. ಶಿವನು ಶಕ್ತಿಯ ಆಡಳಿತದಲ್ಲಿ (ವಿಮರ್ಶಾ ರೂಪವು ಶಕ್ತಿ ಎಂದು ಕರೆಯಲ್ಪಡುತ್ತದೆ) ತಲೆ ಹಾಕುವುದಿಲ್ಲ. ಆದ್ದರಿಂದ ಆಕೆಗಿಂತ ಉನ್ನತವಾದವರು ಯಾರೂ ಇಲ್ಲ ಎಂದು ಹೇಳಲಾಗಿದೆ.
ಈ ನಾಮಕ್ಕೆ ಅನೇಕ ವ್ಯಾಖ್ಯಾನಗಳಿದ್ದರೂ ಕೂಡಾ ಇಲ್ಲಿ ಬ್ರಹ್ಮದ ವಿವರಣೆಗೆ ಸೂಕ್ತವಾದ ಅರ್ಥವನ್ನು ಕೊಡುವ ವ್ಯಾಖ್ಯಾನವನ್ನು ಮಾತ್ರ ತೆಗೆದುಕೊಳ್ಳಲಾಗಿದೆ. ಬ್ರಹ್ಮದ ಲಕ್ಷಣಗಳನ್ನು ಕುರಿತಾಗಿ ಚರ್ಚಿಸುತ್ತಿರುವಾಗ, ಅದಕ್ಕಿಂತ ಭಿನ್ನವಾದ ಅರ್ಥಗಳನ್ನು ಕೊಡುವ ವ್ಯಾಖ್ಯಾನಗಳನ್ನು ವಿಶ್ಲೇಷಿಸುವುದು ಸಮಂಜಸವೆನಿಸುವುದಿಲ್ಲ.
ಈ ನಾಮದೊಂದಿಗೆ ದೇವಿಯ ನಿರ್ಗುಣ ಬ್ರಹ್ಮದ ಲಕ್ಷಣಗಳ ವಿವರಣೆಯು ಕೊನೆಗೊಳ್ಳುತ್ತದೆ. ಬ್ರಹ್ಮಕ್ಕೆ ಯಾವುದೇ ಗುಣ-ಲಕ್ಷಣಗಳಿಲ್ಲದಿದ್ದರೂ ಒಬ್ಬರು ವಾಕ್-ದೇವಿಗಳೇಕೆ ಬ್ರಹ್ಮದ ಗುಣಗಳನ್ನು ವರ್ಣಿಸುತ್ತಿದ್ದಾರೆ ಎಂದು ಚಕಿತರಾಗಬಹುದು! ಈ ಮೊದಲೇ ತಿಳಿಸಿದಂತೆ ಸಾಮಾನ್ಯ ಮನುಷ್ಯನಿಗೆ, ಬ್ರಹ್ಮವು ಇದಲ್ಲ ಎನ್ನುವುದರ ಮೂಲಕ ವಿವರಿಸಬಹುದು ಏಕೆಂದರೆ ಬ್ರಹ್ಮವು ಗ್ರಹಣೇಂದ್ರಿಯಗಳಿಂದ ಅರಿಯಲಸಾಧ್ಯವಾದದ್ದು. ಆದ್ದರಿಂದ ಪೂರ್ವ ಪ್ರತ್ಯಯಗಳಾದ ನಿಸ್ ಅಥವಾ ನಿರ್ (ಇಲ್ಲ/ರಹಿತ) ಎನ್ನುವುಗಳನ್ನು ೧೩೨-೧೫೫ರವರೆಗಿನ ಎಲ್ಲಾ ನಾಮಗಳಲ್ಲಿ ಉಪಯೋಗಿಸಲಾಗಿದೆ; ೧೪೧ನೇ ನಾಮವನ್ನು ಹೊರತುಪಡಿಸಿ. ಬ್ರಹ್ಮದ ಕುರಿತಾಗಿ ಜ್ಞಾನವು ’ಅದು ಅಲ್ಲ’ ಎನ್ನುವುದರಿಂದ ಪ್ರಾರಂಭವಾಗಿ ’ಅದು ನಾನೇ’ ಎನ್ನುವುದರೊಂದಿಗೆ ಕೊನೆಗೊಳ್ಳುತ್ತದೆ. ಮೊದಲನೆಯದು ನಕಾರಾತ್ಮಕವಾದುದಾದರೆ ಕೊನೆಯದು ಸಕಾರಾತ್ಮಕವಾದುದು ಅಥವಾ ದೃಢವಾದದ್ದು. ಯಾವುದೇ ಹೇಳಿಕೆಯು ದೃಢವಾದದ್ದೆಂದು ಸಾಧಿಸಬೇಕಾದರೆ ಆ ವಿಷಯದ ಕುರಿತಾಗಿ ಒಬ್ಬನಿಗೆ ಕೂಲಂಕುಷವಾದ ಜ್ಞಾನವು ಇರಬೇಕಾಗುತ್ತದೆ. ೧೫೬ರಿಂದ ೧೯೫ನೇ ನಾಮಗಳು ಆಕೆಯ ನಿರಾಕಾರ ರೂಪವನ್ನು ಪೂಜಿಸುವುದರಿಂದ ಉಂಟಾಗುವ ಫಲಗಳನ್ನು ಕುರಿತಾಗಿ ಚರ್ಚಿಸುತ್ತದೆ.
Nīrāgā नीरागा (156)
೧೫೬. ನಿರಾಗಾ
ರಾಗವೆಂದರೆ ಆಸೆ; ದೇವಿಯು ಆಶಾ ರಹಿತಳಾಗಿದ್ದಾಳೆ. ಈ ನಾಮ ಮತ್ತು ಈ ಹಿಂದಿನ ಗುಂಪಿನ ಕೆಲವು ನಾಮಗಳು ಒಂದೇ ತೆರನಾಗಿ ಕಂಡರೂ ವಾಸ್ತವವಾಗಿ ಅವು ಹಾಗಿಲ್ಲ. ಅಂತಃಕರಣವು ನಾಲ್ಕು ವಿಧವಾದ ವಸ್ತುಗಳನ್ನು ಒಳಗೊಂಡಿದೆ, ಅವೆಂದರೆ ಮನಸ್ಸು, ಬುದ್ಧಿ, ಚಿತ್ತ/ಪ್ರಜ್ಞೆ (ಮನಸ್ಸಿನಲ್ಲಿ ರೂಪಾಂತರ ಹೊಂದಿದ ಸ್ಥಿತಿಯಲ್ಲಿರುತ್ತದೆ) ಮತ್ತು ಅಹಂಕಾರ. ಈ ನಾಲ್ಕೂ ವಸ್ತುಗಳು ಯಾವುದೇ ವಿಧದಲ್ಲಿ ಬ್ರಹ್ಮ ಅಥವಾ ಆತ್ಮಕ್ಕೆ ಸಂಭಂದಿಸಿಲ್ಲ. ಆದರೆ ಅಂತಃಕರಣದ ಈ ಅಂಶಗಳು ಆತ್ಮಸಾಕ್ಷಾತ್ಕಾರಕ್ಕೆ ಇರುವ ತಡೆಗಳಾಗಿವೆ. ಅಂತಃಕರಣಕ್ಕೆ ಹೊರತಾಗಿ ಇನ್ನೂ ಆರು ಅಡಚಣೆಗಳಿವೆ ಅವೆಂದರೆ ಆಸೆ, ಕೋಪ, ದ್ವೇಷ, ಗೊಂದಲ, ಗರ್ವ ಮತ್ತು ಹೊಟ್ಟೆಕಿಚ್ಚು. ಈ ಆರು ವಿಷಯಗಳ ಕುರಿತಾಗಿ ವಿವರಿಸುವ ಅವಶ್ಯಕತೆಯಿಲ್ಲ, ಏಕೆಂದರೆ ಅವುಗಳ ಹೆಸರೇ ಅವು ಎಷ್ಟು ಭಯಂಕರವಾದವುಗಳೆನ್ನುವುದನ್ನು ಸೂಚಿಸುತ್ತದೆ. ಈ ನಾಮಗಳು ಅವುಗಳಿಂದ ಹೇಗೆ ಮುಕ್ತರಾಗ ಬೇಕೆನ್ನುವುದನ್ನು ವಿವರಿಸುತ್ತವೆ. ಮೊದಲನೆಯದಾಗಿ, ವಾಕ್ ದೇವಿಗಳು ಬ್ರಹ್ಮದ ಪರಿಕಲ್ಪನೆಯನ್ನು ಕುರಿತಾಗಿ ಹೇಳುತ್ತವೆ ಮತ್ತು ಈಗ ಅವು ಆ ಪರಬ್ರಹ್ಮವನ್ನು ಹೇಗೆ ಅರಿಯಬೇಕು ಎನ್ನುವುದರ ಕುರಿತಾಗಿ ವಿವರಿಸುತ್ತಾ ಸಾಗುತ್ತಿವೆ; ಇಲ್ಲಿ ಆತ್ಮ ಸಾಕ್ಷಾತ್ಕಾರದೆಡೆಗೆ ಹಂತಹಂತವಾಗಿ ಸಾಗುವ ಮಾರ್ಗದರ್ಶನವಿದೆ.
Rāgamathanī रागमथनी (157)
೧೫೭. ರಾಗಮಥನೀ
ದೇವಿಯು ತನ್ನ ಭಕ್ತರ ಆಸೆಗಳನ್ನು ನಾಶಮಾಡುತ್ತಾಳೆ. ಇದು ದೇವಿಯ ಪರಬ್ರಹ್ಮ ರೂಪವನ್ನು (ನಿರಾಕಾರ ರೂಪವನ್ನು) ಆರಾಧಿಸುವ ಮೂಲಕ ಹೊಂದಲ್ಪಡುವ ಹಲವಾರು ಒಳಿತುಗಳಲ್ಲಿ ಮೊದಲನೆಯದು. ಆಸೆ ಎನ್ನುವುದು ಆಧ್ಯಾತ್ಮಿಕ ಮಾರ್ಗದಲ್ಲಿನ ಮೂಲ ಅಡಚಣೆಯಾಗಿದೆ ಮತ್ತು ಇದು ವ್ಯಕ್ತಿಯನ್ನು ಪ್ರಾಪಂಚಿಕ ಬಂಧನಗಳಿಗೆ ಕಟ್ಟಿ ಹಾಕುತ್ತದೆ.
ಪಾತಂಜಲಿಯ ಯೋಗ ಸೂತ್ರ (೨.೩) ಹೇಳುತ್ತದೆ, " ಒಬ್ಬನ ಜೀವನದಲ್ಲಿ ಐದು ವಿಧವಾದ ನೋವನ್ನುಂಟು ಮಾಡುವ ಅಡಚಣೆಗಳಿವೆ; ಅವುಗಳೆಂದರೆ - ಅಜ್ಞಾನ ಮತ್ತದರಿಂದ ಉಂಟಾಗುವ ಪರಿಣಾಮಗಳು. ಆ ಪರಿಣಾಮಗಳೆಂದರೆ ಅಹಂಕಾರ, ಮೋಹ, ದ್ವೇಷ, ಬದುಕಿಗೆ ಜೋತು ಬೀಳುವುದು."
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 154-157 http://www.manblunder.com/2009/09/lalitha-sahasranamam-154-157.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
ಪ್ರತಿಕ್ರಿಯೆ (1)