ಅನ್ಯರೊರೆದುದನೆಬರೆದುದನೆನಾಬರೆಬರೆದು

ಬಿನ್ನಗಾಗಿದೆಮನವು. ಬಗೆಯೊಳಗನೇತೆರೆದು

ನನ್ನನುಡಿಯೊಳೆಬಣ್ಣಬಣ್ಣದಲಿಬಣ್ಣಿಸುವ

ಪನ್ನತಿಕೆಬರುವನಕನನ್ನಬಾಳಿದುನರಕ.

 

ಇವು ಕವಿ ಗೋಪಾಲಕೃಷ್ಣ ಅಡಿಗರ ಮೊದಲನೆ ಕವನ ಸಂಕಲನ "ಭಾವತರಂಗ "ದ ಮೊದಲ ಪದ್ಯ "ನನ್ನ ನುಡಿ"ಯ ಸಾಲುಗಳು. ಕನ್ನಡ ನವ್ಯಕಾವ್ಯದ ಪ್ರವರ್ತಕರಾದ ಅಡಿಗರ ಕಾವ್ಯಮಾರ್ಗದ ಹೊರಳುವಿಕೆಯನ್ನ ವಿಮರ್ಶಕರು(ಹಾಗೂ ಸ್ವತ: ಅಡಿಗರು) ಅವರ ಕವನ ಸಂಕಲನ "ನಡೆದು ಬಂದ ದಾರಿ"ಯಿಂದ ಎಂದು ಗುರುತಿಸಿದ್ದರೂ ತನ್ನದೇ ಹೊಸ ಕಾವ್ಯಮಾರ್ಗ ನಿರ್ಮಿಸಿಕೊಳ್ಳುವ ಅವರ ತುಡಿತ ಈ ಮೊದಲ ಪದ್ಯದಲ್ಲೇ ವ್ಯಕ್ತವಾಗಿದೆ. "ಚ೦ದ್ರಸೂರ್ಯರನೆರವಿ೦ದೆಬೆಳಗುವಳೀವಸು೦ಧರೆಗೆ೦ದುಬಹುದೋಸ್ವಯ೦ದೀಪಕತೆ". ಈ ಸಾಲು ಕೂಡ ಅದೇ ಕವನದ್ದು. ಅಡಿಗರ ಸಮಗ್ರ ಕಾವ್ಯ  ಪುಸ್ತಕ ಓದುತ್ತಿರುವ ನನಗೆ ಅವರ ಕಾವ್ಯಯಾನ ಈ ಸ್ವಯ೦ದೀಪಕತೆಯ ಸಾಕ್ಷಾತ್ಕಾರದಂತೆ ತೋರುತ್ತಿದೆ.

ಅವರ ಪ್ರಸಿದ್ಧ ಪದ್ಯ "ಭೂತ" [https://sites.google.com/site/kavanasangraha/Home/itara-lekhanagalu/gopalakrsna-adigara-bhuta---sunatha] ದಲ್ಲಿ ವ್ಯಕ್ತಪಡಿಸಿರುವ ಬಯಕೆ ಇದು-

 

ಹೊರತೆಗೆದುಸುಟ್ಟುಸೋಸುವಪರಂಜಿವಿದ್ಯೆಗಳ

ಇನ್ನಾದರೂಕೊಂಚಕಲಿಯಬೇಕು :

ಹೊನ್ನಕಾಯಿಸಿಹಿಡಿದುಬಡಿದಿಷ್ಟದೇವತಾ---

ವಿಗ್ರಹಕ್ಕೊಗ್ಗಿಸುವಅಸಲುಕಸಬು.

 

ಸಮಗ್ರಕಾವ್ಯಓದುತ್ತಿರುವಾಗ ಈ ಅಸಲುಕಸಬಿನ ಸಿದ್ಧಿ ಸಾಧ್ಯವಾದದ್ದು ಸಮ್ಯಕ್ ವೇದ್ಯವಾಗುತ್ತದೆ.

 

ಅಡಿಗರ ಮೊದಮೊದಲಿನ ಕವನಗಳಲ್ಲಿ ಭಾವಗೀತಾತ್ಮಕ ಲಯವಿದೆ. ಸಹಜವಾಗಿಯೆ ಭಾವಗೀತೆಗಳಾಗಿ ಪ್ರಸಿದ್ಧವಾಗಿರುವ "ಇಂದು ಕೆಂದಾವರೆ", "ಯಾವ ಮೋಹನ ಮುರಳಿ", "ಮೌನ ತಬ್ಬಿತು ನೆಲವ" , "ಅಳುವ ಕಡಲೊಳು" ಇತ್ಯಾದಿಗಳು ಅವರಆರಂಭಿಕ ಕವನ ಸಂಕಲನಗಳಲ್ಲಿವೆ.ಹಾಡುಗಳಾಗಿ ಜನಮಾನಸವನ್ನ ಮುಟ್ಟಿವೆ.ಆದರೆ ಅಡಿಗರ ಟ್ರೇಡ್ ಮಾರ್ಕ್ ಕಾವ್ಯ ಸುಗಮ ಸಂಗೀತದ ನಿಲುಕಿಗೆ ಸಿಗದೇ ಹೋಗಿದೆ,ಕೆಲವು ಅಪವಾದಗಳೊಂದಿಗೆ.ಉದಾಹರಣೆಗೆ,ಗಾಯಕ ಚಂದ್ರಶೇಖರ ಕೆದ್ಲಾಯರ ದನಿಯಲ್ಲಿ ಅಡಿಗರ "ಬರುತ್ತಾರೆ" ಕವನದ ಆ ತೀಕ್ಷ್ಣ ವ್ಯಂಗ್ಯ ಚೆನ್ನಾಗಿ ಮೂಡಿಬಂದಿದೆ. [ http://www.youtube.com/watch?v=BMi1VDyYXSk ].

 

ಅಡಿಗರು ತಮ್ಮ ಮೂರನೆ ಸಂಕಲನ "ನಡೆದು ಬಂದ ದಾರಿ" ಯ ಮುನ್ನುಡಿಯಲ್ಲಿ ಹೀಗೆ ಹೇಳುತ್ತಾರೆ.

"..ಆಧುನಿಕ ಕನ್ನಡ ಕಾವ್ಯದಲ್ಲಿ ಒಂದು ಘಟ್ಟ ಕಳೆದು ಇನ್ನೊಂದು ಘಟ್ಟ ಮೊದಲಾಗುತ್ತಿದೆ.ಕಾವ್ಯರೂಪದಲ್ಲಿ ಬದಲಾವಣೆ ಆಗಬೇಕಾದ ಕಾಲ ಆಗಲೇ ಬಂದು ಬಿಟ್ಟಿದೆ.ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವ ತನಕ ಇದ್ದ ವಾತಾವರಣ ಈಗ ಸಮೂಲ ಪರಿವರ್ತನಗೊಂಡಿದೆ. ಸ್ವಾತಂತ್ರ್ಯ ಸಂಗ್ರಾಮದ ಉತ್ಸಾಹ, ಉದ್ವೇಗ ಆದರ್ಶಪರವಶತೆಯ ಹಾರಾಟ ಮುಗಿದು ಈಗ ನಮ್ಮ ಮನಸ್ಸು ಮತ್ತೆ ನೆಲಕ್ಕಿಳಿದಿದೆ, ಮೋಡವಾಗಿ ಮೇಲೇರಿದ ಮನಸ್ಸು ಮಳೆಯಾಗಿ ಬಿದ್ದು ಮತ್ತೆ ಹಳ್ಳ ಕೊಳ್ಳಗಳಲ್ಲಿ ತುಂಬಿಕೊಂಡಿದೆ . ತಳದಲ್ಲಿ ಕೂತಿದ್ದ ಕೊಳೆಕಸರಾಡಿಯೆಲ್ಲ ಈಗ ಮೇಲೆದ್ದು ಬಂದು ಕನ್ನಡಿಯಂಥ ನೀರು ಕಲಕಿದೆ.ಹೊಸಆದರ್ಶಕ್ಕಾಗಿಹೊಸ ಕಣಸಿಗಾಗಿ ದೇಶದ ಮನಸ್ಸು ಹಸಿದು ಕಾಯುತ್ತಿದೆ. ಇಂಥ ವಾತಾವರಣ ಸುತ್ತಮುತ್ತಲೂ ಇರುವಾಗ, ಜೀವನಾವಲಂಬಿಯಾದ ಕಾವ್ಯವೂ ಪರಿವರ್ತನೆಗೊಳ್ಳುವುದು ಸಹಜ. ಗಾಂಧಿಯುಗದಲ್ಲಿ ಬರೆದ ರೀತಿಯಲ್ಲೆ ಇನ್ನೂ ಬರೆದರೆ ಬಹುಶ: ಅದು ಕಾವ್ಯಾಭಾಸವಾಗುತ್ತದೆ, ಇಲ್ಲವೆ ಸತ್ವಹೀನ ಕಾವ್ಯವಾಗುತ್ತದೆ; ಚರ್ವಿತ ಚರ್ವಣವಾಗುತ್ತದೆ. ಆಗ ಭಾವವನ್ನು ಕೊಲ್ಲುವ ಮಾತು ಭೇತಾಳದಂತೆ ನಮ್ಮ ಬೆನ್ನು ಹತ್ತಿ, ಸಮಾಜದ ಬೆಳವಣಿಗೆಗೆ ಮಾರಕವಾಗುತ್ತದೆಂದು ನನಗೆ ತೋರುತ್ತದೆ.ಆದಕಾರಣ ಈಗ ಕಾಣುತ್ತಿರುವ ಹೊಸ ಮನೋಧರ್ಮವನ್ನು ವ್ಯಕ್ತಪಡಿಸಲು ಹೊಸ ನಾಲಗೆ, ನುಡಿಗಟ್ಟು ರೂಪುಗೊಳ್ಳಬೇಕಾಗಿದೆ."

ಹೀಗೆ ದಾರಿ ಬದಲಾಯಿಸಿದ್ದನ್ನ ಹೇಳಿದ ಅಡಿಗರ "ನಡೆದು ಬಂದ ದಾರಿ" ಪದ್ಯ ಶುರುವಾಗುವುದು ಹೀಗೆ-

 

ನಡೆದುಬಂದದಾರಿಕಡೆಗೆ

ತಿರುಗಿಸಬೇಡ-

ಕಣ್ಣ-

ಹೊರಳಿಸಬೇಡ.

 

ಹೀಗೆ ನಂತರದ ಪದ್ಯಗಳಲ್ಲಿ ಕವನದಿಂದ ಕವನಕ್ಕೆ ವ್ಯಂಗ್ಯ,ವಿಷಾದ, ವ್ಯವಸ್ಥೆಯ ಬಗ್ಗೆ ರೋಷ ತೀಕ್ಷ್ಣವಾಗುತ್ತ ಸಾಗುತ್ತದೆ.ಅಂತೆಯೆ ಕವನಗಳ ಪ್ರತಿಮಾ ಲೋಕ ಯಾವಯಾವುದೋ ಆಕರಗಳಿಂದ ಸ್ಪೂರ್ತಿ ಪಡೆದು ನನ್ನಂತ ಸಾಮಾನ್ಯವಾದ ಓದುಗನಿಗೆ ಅರ್ಥೈಸಲು ಕಷ್ಟವಾಗಿ ಕಕ್ಕಾವಿಕ್ಕಿಯಾಗುತ್ತದೆ. [ಪ್ರಾಸಂಗಿಕವಾಗಿ ಇಲ್ಲಿ ಅಡಿಗರಕಾವ್ಯಅರ್ಥೈಸಲುಓದುಗನಿಗೆ ಗರುಡಪುರಾಣ ಗೊತ್ತಿರಬೇಕು ಎಂದ ತೇಜಸ್ವಿಯವರ ಮಾತನ್ನು ಉಲ್ಲೇಖಿಸಬಹುದು]. ಅನಂತಮೂರ್ತಿಯವರು ಬರೆದ ಅಡಿಗರ  "ಶ್ರೀರಾಮನವಮಿಯ ದಿವಸ"[http://kendasampige.com/article.php?id=5523] ಪದ್ಯದ ವಿಶ್ಲೇಷಣೆ "ಪದ್ಯ ಬಗೆಯುವ ಬಗೆ" ಓದದಿದ್ದರೆ ನಿಮಗೆ ಆ ಪದ್ಯದ ಸೂಕ್ಷ್ಮ ಒಳನೋಟಗಳು ದಕ್ಕದೆ ಹೋಗಬಹುದು. ಯಾರಾದರು ಅಡಿಗರ ಎಲ್ಲ ಪದ್ಯಗಳನ್ನ ಹೀಗೆ ವಿಶ್ಲೇಷಿಸಿದ್ದರೆ ಚೆನ್ನಿತ್ತು ಅನಿಸಿದೇ ಇರದು. ಆದರೆ ಒಂದು ಕವನದ ಅರ್ಥ ಓದುಗನ ಭಾವಕೋಶದಲ್ಲಿದ್ದು ಬೇರೆಯವರ ವಿಶ್ಲೇಷಣೆಯಿಂದ ಮಾತ್ರ ದಕ್ಕಿಸಿಕೊಂಡರೆ ಅದು ಅವರ ಕನ್ನಡಕದಲ್ಲಿ ಜಗತ್ತನ್ನ ನೋಡಿದಂತೆ ಎಂಬ ವಿವೇಕ ನಮ್ಮನ್ನು ಕಾಯಬೇಕು. ಅವರೇ "ಅರ್ಥವಾಗುವ ಹಾಗೆ ಬರೆಯಬೇಕು" ಅಂತ ವ್ಯಂಗ್ಯದ ಕವನದ ಬರೆದಿದ್ದಾರೆ! ಇದರ ಹಿನ್ನೆಲೆಗಾಗಿ ಎಸ್.ದಿವಾಕರರ ಈ ಲೇಖನ ನೋಡಿ.[http://www.prajavani.net/show_page.php?nid=151734] 

 

ಕುವೆಂಪುರವರ ಕಾವ್ಯನಾಯಕನಿಗೆ ತನ್ನ ವಾಣಿಯ ಉತ್ತಾಲತೆಯಲ್ಲಿ ಅತೀವ ವಿಶ್ವಾಸ[ಉದಾಹರಣೆಗೆ ನೋಡಿ ಕುವೆಂಪುರವರ "ನನ್ನ ಕವಿತೆ ತನ್ನ ವಿಮರ್ಶಕನಿಗೆ"[http://kanaja.in/ಕೃತ್ತಿಕೆ-ನನ್ನ-ಕವಿತೆ-ತನ್ನ್ನ/] ನೋಡಿ]. ಆದರೆ ಅಡಿಗರ ಕಾವ್ಯನಾಯಕ ಹಾಗಲ್ಲ.ಆತನಿಗೆ ತನ್ನ ಸಾಮರ್ಥ್ಯದ ಬಗ್ಗೆ ಅಪನಂಬಿಕೆ, ತನ್ನನ್ನೇ ಗೇಲಿ ಮಾಡಿಕೊಳ್ಳುವ ಸ್ವಭಾವ, ವ್ಯವಸ್ಥೆಯ ಅರೆಕೊರೆಯ ಬಗ್ಗೆ ಸಿಟ್ಟು. ಅಡಿಗರ ಭೂತ, ವರ್ಧಮಾನ,ಕೂಪಮಂಡೂಕ, ನೆಹರೂ ನಿವೃತ್ತರಾಗುವುದಿಲ್ಲ,ಬತ್ತಲಾರದ ಗಂಗೆ ಮೊದಲಾದ ಕವನಗಳು ಅವರ ಕಾವ್ಯಶೈಲಿಗೆ ಟಿಪಿಕಲ್ ಮಾದರಿಗಳು.ತನ್ನನ್ನೆ ಗೇಲಿ ಮಾಡಿಕೊಳ್ಳುವ ರೀತಿಗೆ "ನನ್ನ ಅವತಾರ" ಪದ್ಯ ನೋಡಬಹುದು[https://www.facebook.com/permalink.php?story_fbid=562477400429928&id=169019336500051]. ಮತ್ತೊಂದು ಗಮನಾರ್ಹ ವಿಷಯ ಅವರ ಕಾವ್ಯದಲ್ಲಿ ಬರುವ ಭೀಭತ್ಸ್ಯದ ಪ್ರತಿಮೆಗಳು.“ಚ೦ಡೆಮದ್ದಳೆ“ಕವನಸ೦ಕಲನದ "ಹಿಮಗಿರಿಯಕ೦ದರ” ಪದ್ಯದ  “ಮಿದುಳು - ಬಚ್ಚಲಹ೦ಡೆಯಲ್ಲಿಬೇಯುವಆಮೆ – ಎದ್ದೆದ್ದುಬಿದ್ದುಒದ್ದಾಡುತ್ತಿತ್ತು. ಕಿಟಕಿಯಲಿಬೆ೦ಕಿಹೊಳೆಹರಿದುಕುರ್ಚಿಯಮೇಲೆಉರಿಕೆ೦ಡ, ಮೇಜುಅಗ್ನಿಯಕು೦ಡ.” ಸಾಲುಗಮನಿಸಿ.

 

"ಆ ಕಾಲವೊಂದಿತ್ತು ದಿವ್ಯ ತಾನಾಗಿತ್ತು" ಎನ್ನುವ ನಾಸ್ಟಾಲಾಜಿಕ್ ಹಳಹಳಿಕೆಯಲ್ಲಿ ಕವಿಗೆ ನಂಬಿಕೆಯಿಲ್ಲ. "ಇಂದು ನಮ್ಮೀ ನಾಡು" ಪದ್ಯದಲ್ಲಿ ಅಂತಹ ಮನೋಭಾವವನ್ನ ಲೇವಡಿಮಾಡಿದ್ದಾರೆ.[http://sampada.net/ಇಂದು-ನಮ್ಮೀ-ನಾಡು] .

 

’ಇತ್ತು’ಗಳಧ್ವಜವಹಿಡಿದೆತ್ತಿನಿಲ್ಲೋಮಗೂ,
’ಇದೆ’ಯಹೃದಯದ್ರಾವಬೇಡನಿನಗೆ.
ಮರವುಂಟು, ಮರಕೆಬಂಗಾರವುಂಟಲ್ಲದೆಯೇ
ಕಟ್ಟೆಯುಂಟಲ್ಲ! ನೀರಿಕ್ಕುಅದಕೆ!

 

 

ಇಂತಹ ಅಡಿಗರು ’ಇತ್ತು’ಗಳಧ್ವಜವಹಿಡಿದೆತ್ತಿನಿಲ್ಲಿಸುವ ಪಕ್ಷವೊಂದರಿಂದ ಚುನಾಚಣೆಗೆ ನಿಂತದ್ದು ಸೋಜಿಗದ ವಿಷಯ. ಇಂತಹ ವೈರುಧ್ಯಗಳನ್ನ ನೇರನುಡಿಯ ನಿಷ್ಥುರ ವಿಮರ್ಶಕ ಜಿ.ರಾಜಶೇಖರ ಅಡಿಗರ ಕವನ ಸಂಕಲನವೊಂದಕ್ಕೆ ಬರೆದ ಮುನ್ನುಡಿಯಲ್ಲೇ ಗುರುತಿಸಿದ್ದಾರೆ!

 

ಅಡಿಗರ ಪದ್ಯಗಳ ಹಲವಾರು ರೂಪಕ,ಪ್ರತಿಮೆಗಳನ್ನ  ಓದಿದಾಗ ಹೀಗೂ ಬರೆಯಲು ಸಾಧ್ಯವೆ ಅನಿಸುತ್ತದೆ. ಉದಾಹರಣೆಗೆ-

 

"ಕಾರ್ಮೋಡಕುಡಿದುಬಿಟ್ಟಿದೆಕಣೋ, ಕಡಲಪಡಖಾನೆಯಲಿನೊರೆಗರೆವವ್ಹಿಸ್ಕಿಸೋಡಾ"

 

"ಹರೆಯದೀಮಾ೦ತ್ರಿಕನಮಾಟಮುಸುಳುವಮುನ್ನ"

 

“ದೊಡ್ಡದೊಡ್ಡಮಾತುಬೆಲೂನುಹಿಗ್ಗುವಾಗ್ಗೆಲ್ಲತಾಗಿಸುನಿಜದಸೂಜಿಮೊನೆ”

 

ತನ್ನ ರಾಜಕುಮಾರತನದ ಮೀಸೆಯ ಚಿಗುರು 

ದೇಶ ಕಾಣದ ಹಾಗೆ ನೆರೆದು, ಕತ್ತಿನ ಕುಣಿಕೆ 

            ಹರಿದು ಹರವೋ ಹರ. ಹುಲ್ಲು, ಧರೆ, ಗಿಡ, ಹೊದರು- 

ಎಲ್ಲವನ್ನೆತ್ತೆತ್ತಿ ಕುತ್ತಿ ತೀರದ ತುರಿಕೆ 

ಮೊಳೆವ ಕೊಂಬಿಗೆ. ಆಕಾಶ ಕೈಗೆಟುಕದಿದ್ದಕ್ಕೆ, 

                                 ಕೋಶಾವಸ್ಥೆ ಮರಳಿಬಾರದ್ದಕ್ಕೆ, ತನಗಿಂತ ಮೊದಲೆ ತನ್ನಪ್ಪ ಹುಟ್ಟಿದ್ದಕ್ಕೆ, 

ಮೊಲೆ ಬಿಡಿಸಿದವಮಾನ ಮುಯ್ಯಿ ತೀರದ್ದಕ್ಕೆ 

ರೊಚ್ಚು; ಕೊಚ್ಚುತ್ತಾನೆ ಗಾಳಿಮೋಪು; 

ರೇಗಿ ಕಿರುಚುತ್ತಾನೆ ಭಾರಿ ರೋಪು; 

ಹೂಂಕರಿಸಿ ಹಾರುತ್ತಾನೆ ಮೂರು ಗುಪ್ಪು. 

                              (ವರ್ಧಮಾನ)

 

ಏನಾದರೂ ಮಾಡುತಿರು ತಮ್ಮ; 
ನೀ ಸುಮ್ಮನಿರಬ್ಯಾಡ; 
ಆ ಸಸಿಯ ಕೀಳು, ಚಿವುಟೀ ಚಿಗುರ. 
ಹೂವ ಕಂಡರೆ ಹಿಸುಕಿ ಬಿಸುಡು; ಹುಲ್ಲೆಲ್ಲೆಲ್ಲಿ 
ಅಲ್ಲಲ್ಲಿ ಕೊಳ್ಳಿ ಹಿಡಿದಾಡು ಲಂಕಾದಹನ. 
ಮರಿ ಚಿಟ್ಟೆ, ಗಿಳಿ, ಗುಬ್ಬಿ - ಎಲ್ಲಿ ಕಂಡರೆ ಅಲ್ಲಿ 
ಅಟ್ಟು, ಹಿಡಿ, ಕುಟ್ಟು; ಕಿತ್ತೆಸೆ ಪಕ್ಕಪುಕ್ಕಗಳ. 
ಕಾಡಾನೆ ಹೊಕ್ಕ ನಂದನದಲ್ಲಿ 
ಬಿಕ್ಕುತಿದೆ ಇಲ್ಲಿ ಮಲ್ಲಿಗೆ ಅಲ್ಲಿ ಹೊಂಬಾಳೆ. 
ಸುತ್ತಲೂ ಗೋಡೆ ಮೇಲೆಲ್ಲ ಪೌರುಷಬಲದ
ಸ್ವಿಚ್ಚು; ಕಣ್ಣನು ಮುಚ್ಚು; 
ಒತ್ತು ಹತ್ತಿಪ್ಪತ್ತನೊಂದೆ ಸಲ; ನೆಲ; ನೀರು; ಆಕಾಶ - 
-ಬಂಗಾರಮೊಟ್ಟೆಕೋಳಿಯ ಹೊಟ್ಟೆ - ಬಗೆ ಸೀಳು. 

 

ಕೊನೆಯದಾಗಿ ನಿಮಗೆ ಸಾಹಿತ್ಯ ರಚನೆಯಲ್ಲಿ ಆಸಕ್ತಿಯಿದ್ದರೆ ಅಡಿಗರ ಈ ಸಂದರ್ಶನವನ್ನ ತಪ್ಪದೇ ಓದಿ.

http://kanaja.in/ಬೆತ್ತಲೆ-ಪೂಜೆ-ಯಾಕೆ-ಕೂಡದು-ಗ/