ಲಲಿತಾ ಸಹಸ್ರನಾಮ ೩೩೫ - ೩೩೭

Veda-vedyā वेद-वेद्या (335)

೩೩೫. ವೇದ-ವೇದ್ಯಾ

           ದೇವಿಯನ್ನು ವೇದಗಳ ಮೂಲಕ ಅರಿಯಬಹುದು. ಎಲ್ಲಾ ವೇದಗಳು ಅಂತಿಮ ಸತ್ಯವಾದ ಬ್ರಹ್ಮದೆಡೆಗೆ ಕರೆದೊಯ್ಯುತ್ತವೆ. ಬ್ರಹ್ಮವು ವೇದಗಳ ಸ್ವರೂಪವಾಗಿದೆ.

           ಭಗವದ್ಗೀತೆಯಲ್ಲಿ (೧೫.೧೫) ಶ್ರೀಕೃಷ್ಣನು ಹೇಳುತ್ತಾನೆ, "ಎಲ್ಲಾ ವೇದಗಳಿಂದಲೂ ನಾನು ತಿಳಿಯಲ್ಪಡಬೇಕಾದವನು ......ನಾನು ಎಲ್ಲಾ ವೇದಗಳನ್ನೂ ಬಲ್ಲವನಾಗಿದ್ದೇನೆ".

           ವೇದಗಳನ್ನು ಕೇವಲ ಜ್ಞಾನದ ಮೂಲಕವಷ್ಟೇ ಅರಿಯಬಹುದು. ಬೇರೆ ವಿಧವಾಗಿ ಹೇಳುವುದಾದರೆ, ಒಬ್ಬನಿಗೆ ಜ್ಞಾನವಿದ್ದಲ್ಲಿ ಮಾತ್ರವೇ ಆತ್ಮಸಾಕ್ಷಾತ್ಕಾರವು ಸಾಧ್ಯವಾಗುತ್ತದೆ. ಬ್ರಹ್ಮವು ಜ್ಞಾನದ ಸಾರವಾಗಿದೆ. ವೇದ ಮತ್ತು ವೇದಾಂತಗಳಲ್ಲಿ ವ್ಯತ್ಯಾಸವಿದೆ. ವೇದಾಂತವು ಉಪನಿಷತ್ತುಗಳ ಬೋಧನೆಯನ್ನು ಕುರಿತಾಗಿ ಹೇಳುತ್ತದೆ. ಉಪನಿಷತ್ತುಗಳ ಅಧ್ಯಯನವು ಜ್ಞಾನಕ್ಕೆ ಬೇಕಾದ ಪ್ರೌಢಿಮೆಯನ್ನು ಒದಗಿಸಿತ್ತದೆ.

          ಶ್ರೀ ಚಕ್ರದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ದ್ವಾರಗಳಿದ್ದು ಅವು ಪ್ರತಿಯೊಂದೂ ಒಂದೊಂದು ವೇದವನ್ನು ಪ್ರತಿನಿಧಿಸುತ್ತವೆಂದು ಹೇಳಲಾಗುತ್ತದೆ. ದೇವಿಯನ್ನು ವೇದಗಳ ಮೂಲಕ ತಿಳಿದುಕೊಳ್ಳುವುದನ್ನು ‘ಶುದ್ಧ ವಿದ್ಯಾ’ (ಪರಿಪೂರ್ಣ ಜ್ಞಾನ) ಎಂದು ಕರೆಯಲಾಗುತ್ತದೆ ಇದಕ್ಕೆ ವ್ಯತಿರಿಕ್ತವಾಗಿ ‘ಶ್ರೀ ವಿದ್ಯೆ’ಯು ಬಹುತೇಕ ಹೋಮ ಹವನಗಳಿಂದ ಕೂಡಿದೆ.

         ವೇದಗಳ ಕುರಿತಾಗಿ ಹಲವಾರು ಉತ್ತಮವಾದ ವ್ಯಾಖ್ಯಾನ ಗ್ರಂಥಗಳು ದೊರೆಯುತ್ತವೆಯಾದರೂ, ವಾಸ್ತವ  ಸಂಗತಿಯೇನೆಂದರೆ ವೇದಗಳು ಮಾನವನ ವಿಶ್ಲೇಷಣೆಗೆ ನಿಲುಕಲಾರದವುಗಳಾಗಿವೆ. ಒಬ್ಬರು ವೇದಗಳನ್ನು ನೋಡಿದಾಗ ಅವು ಕೆಲವು ಯಜ್ಞ-ಯಾಗಾದಿಗಳನ್ನು ಕುರಿತಾದ ಬಾಹ್ಯ ಆಚರಣೆಗಳ ಕಂತೆಯಾಗಿ ತೋರಬಹುದು ಆದರೆ ವಾಸ್ತವವಾಗಿ ಅದು ಹಾಗಿಲ್ಲ. ವೇದಗಳು ಹಲವಾರು ಅಂತರ್ಗತ ಸೂಕ್ಷ್ಮ ವ್ಯಾಖ್ಯಾನಗಳನ್ನು ವ್ಯಕ್ತಪಡಿಸುತ್ತವೆ ಮತ್ತು ಅಂತಹ ವ್ಯಾಖ್ಯಾನಗಳಿಂದಾಗಿಯೇ ಉಪನಿಷತ್ತುಗಳು ಹುಟ್ಟಿರುವುವು. ಉಪನಿಷತ್ತುಗಳು ಸರಳವಾಗಿ ಮಾತನಾಡುತ್ತವೆ ಮತ್ತು ನೇರವಾಗಿ ವಿಷಯವನ್ನು ಪ್ರಸ್ತಾಪಿಸುತ್ತವೆ. ಅವುಗಳು ಬ್ರಹ್ಮದ ಗುಣಲಕ್ಷಣಗಳನ್ನು ಸಕಾರಾತ್ಮಕ ಮತ್ತು ನಕಾರಾತ್ಮಕ ಹೇಳಿಕೆಗಳ ಮೂಲಕ ದೃಢಪಡಿಸಲು ಪ್ರಯತ್ನಿಸುತ್ತವೆ. ದೇವಿಯು ಈ ವೇದಗಳ ಸಾರವಾಗಿದ್ದಾಳೆ.

ವೇದಗಳ ಕುರಿತು ಹೆಚ್ಚಿನ ಮಾಹಿತಿ:

         ವೇದಗಳು ಮಾನವ ಸಂತತಿಗೆ ಮಹತ್ವದ ಉದ್ಗ್ರಂಥಗಳಾಗಿವೆ. ಅವುಗಳು, ಆರ್ಯರ ಕಾಲದಲ್ಲಿ ಬಳಕೆಯಲ್ಲಿದ್ದ ಉಚ್ಛಮಟ್ಟದ ಪುರಾತನ ಸಂಸ್ಕೃತ ಭಾಷೆಯಲ್ಲಿವೆ. ವೇದಗಳ ಸೂತ್ರಗಳನ್ನು ವಿವಿಧ ಕೋನಗಳಿಂದ ವಿಶ್ಲೇಷಿಸಬಹುದು, ಉದಾಹರಣೆಗೆ ಸಾಹಿತ್ಯ, ಆಧ್ಯಾತ್ಮಿಕ, ಧಾರ್ಮಿಕ, ವ್ಯಾಕರಣ, ತತ್ವ-ಸಿದ್ಧಾಂತ ಮೊದಲಾದವು. ಇಂದು ವೇದಗಳ ವ್ಯಾಖ್ಯಾನಗಳ ಕುರಿತಾದ ಹಲವಾರು ಗ್ರಂಥಗಳು ಲಭ್ಯವಿದ್ದರೂ ಸಹ ಅವುಗಳು ವೇದಗಳ ಉದ್ದೇಶಿತ ಅರ್ಥವನ್ನು ಹೊಮ್ಮಿಸುತ್ತವೆ ಎನ್ನುವುದು ಅನುಮಾನದ ವಿಷಯವಾಗಿದೆ. ಇದು ಏಕೆಂದರೆ ಅವುಗಳು ದೋಷಪೂರಿತ ವ್ಯಾಖ್ಯಾನಗಳಿಂದ ಕೂಡಿವೆ ಎಂದಲ್ಲ ಅಥವಾ ವ್ಯಾಖ್ಯಾನಕಾರರ ಅಸಾಮರ್ಥ್ಯದಿಂದಾಗಲ್ಲ ಆದರೆ ಸ್ಥೂಲ ಹಾಗೂ ಸೂಕ್ಷ್ಮ ವಿಷಯಗಳನ್ನೂ ವೇದಗಳು ವ್ಯಕ್ತಮಾಡುವ ಅಸಾಧಾರಣ ಸಾಮರ್ಥ್ಯದಿಂದಾಗಿ. ವೇದಗಳನ್ನು ಸೂಕ್ಷ್ಮವಾಗಿ ಜಾಗರೂಕತೆಯಿಂದ ಓದಿಕೊಂಡಾಗ ಅದರಲ್ಲಿರುವ ಸೂತ್ರಗಳು ಸಾಧಕನ ದೇಹದ ಒಂದೊಂದೇ ಅಂಗಗಳನ್ನು ಸಾಂಕೇತಿಕವಾಗಿ ಬೇರ್ಪಡಿಸಿ ಅವುಗಳನ್ನು ಉಚ್ಛ ಮಟ್ಟದ ಶಕ್ತಿ ಕ್ಷೇತ್ರಗಳಿಗೆ ಸಮರ್ಪಿಸಿ ಶುದ್ಧೀಕರಿಸಿಕೊಳ್ಳಬಹುದೆನ್ನುವುದು ವಿಶದವಾಗುತ್ತದೆ. ವೇದಗಳು ಎಂದಿಗೂ ಪ್ರಾಣಿಗಳ ಭೌತಿಕ ವಧೆಯನ್ನು ಕುರಿತಾಗಿ ಬೋಧಿಸಿಲ್ಲ. ಆದರೆ ಪ್ರಾಣಿಗಳ ವಿವಿಧ ಅಂಗಗಳನ್ನು ಆಹುತಿಯಾಗಿ ಅರ್ಪಿಸಬೇಕೆಂದು ತಪ್ಪಾಗಿ ಅರ್ಥೈಸಲಾಗಿದೆ. ವೇದಗಳು ದೈವೀ ಸಂವಹನದಿಂದ ಹೊರಹೊಮ್ಮಿದವುಗಳು. ಬಹಳ ಕಾಲದವರೆಗೆ ಅವುಗಳು ಗ್ರಂಥ ರೂಪದಲ್ಲಿ ಬರೆಯಲ್ಪಟ್ಟಿರಲಿಲ್ಲ ಆದರೆ ಅವುಗಳು ಗುರುಮುಖೇನ ಅವರ  ಶಿಷ್ಯರಿಗೆ ಬಾಯಿ ಮಾತಿನ ಮೂಲಕ ಹರಿದು ಬಂದವು. ಋಷಿ ಮುನಿಗಳು ಈ ಉಕ್ತ ಮೂಲದ ದಾರಿಯನ್ನು ಆರಿಸಿಕೊಂಡರು ಏಕೆಂದರೆ ಬಹುಶಃ ಅವರಿಗೆ ಇದರಿಂದಾಗಿ ಅದರಲ್ಲಿ ನುಸುಳಬಹುದಾದ ವಿಷಯ ವಿಕಾರಗಳನ್ನು ತಡೆಯಬಹುದೆನಿಸಿದ್ದರಿಂದ. ಬಹುತೇಕ ವೇದಗ್ರಂಥಗಳು ಸೂತ್ರ ರೂಪದಲ್ಲಿವೆ. ಇವುಗಳನ್ನು ಮಂತ್ರ ಸೂಕ್ತಗಳೆಂದು ಕರೆಯಲಾಗಿದ್ದು ಅವುಗಳ ಮುಖತಃ ಹರಿಯುವಿಕೆಯು ಉಚ್ಛಾರಣೆ ಮತ್ತು ಲಯಬದ್ಧತೆಯಲ್ಲಿ ಅಡಗಿದೆ. ವೇದಗಳ ಕೆಲವೊಂದು ಭಾಗಗಳು ಗದ್ಯ ರೂಪದಲ್ಲಿಯೂ ಇದ್ದು ಅವುಗಳನ್ನು ಬ್ರಾಹ್ಮಣಗಳೆಂದು ಕರೆಯುತ್ತಾರೆ. ಈ ಪಂಕ್ತಿಗಳು ಹೆಚ್ಚಾಗಿ ಯಜ್ಞ-ಯಾಗಾದಿಗಳ ಪ್ರಾಯೋಗಿಕ ಕ್ರಮಗಳ ಕುರಿತಾಗಿ ಹೇಳುತ್ತವೆ.

        ನಾಲ್ಕು ವೇದಗಳಿದ್ದು ಅವುಗಳು ಕ್ರಮವಾಗಿ ಋಗ್,ಯಜುರ್, ಸಾಮ ಮತ್ತು ಅಥರ್ವವಾಗಿವೆ (ऋग्, यजुर्, साम, अथर्व). ಮೊದಲ ಮೂರು ವೇದಗಳನ್ನು ತ್ರಿವಿದ್ಯಾ (त्रिविद्या) ಅಂದರೆ ಅದರ ಶಬ್ದಶಃ ಅರ್ಥವು ಮೂರು ವಿಧವಾದ ಜ್ಞಾನ ಎನ್ನುವುದಾಗಿದೆ. ಅಥರ್ವಣ ವೇದವು ನಂತರದ ಕೃತಿಯಾಗಿದ್ದು ಅದನ್ನು ಇಲ್ಲಿ ಸೇರಿಸಲಾಗಿಲ್ಲ. ಮೊದಲ ಮೂರು ವೇದಗಳ ಮೂಲವು ಗೊತ್ತಿಲ್ಲ. ಆದರೆ ವಾಸ್ತವದ ಸಂಗತಿಯೇನೆಂದರೆ ಅವು ಕಾಲನ ಪರಿಮಿತಿಯನ್ನು ಅಧಿಗಮಿಸಿ ಈಗಿನ ಸಮಕಾಲೀನ ಜಗತ್ತಿನಲ್ಲಿ ಇಂದಿಗೂ ಪ್ರಸ್ತುತವಾಗಿವೆ. ವೇದಗಳನ್ನು ಶ್ರುತಿಗಳೆಂದೂ ಕರೆಯುತ್ತಾರೆ. ವೇದಗಳನ್ನು ಅವುಗಳ ಮೂಲ ರೂಪದಲ್ಲಿ ಅರ್ಥೈಸಿಕೊಳ್ಳಲು ಬಹಳ ಕಷ್ಟವೆಂದು ಹೇಳಲಾಗುತ್ತದೆ ಏಕೆಂದರೆ ಅವುಗಳನ್ನು ಸ್ವಯಂ ಭಗವಂತನೇ ಪುರಾತನ ಋಷಿ ಮುನಿಗಳಿಗೆ ಹೇಳಿದನೆನ್ನಲಾಗಿದೆ. ಋಷಿಗಳು ತಮ್ಮ ಪರಮೋನ್ನತ ಬ್ರಹ್ಮಾಂಡ ಮೇದಸ್ಸನ್ನು ಪರಮ ಚೈತನ್ಯದ ಜ್ಞಾನದೊಂದಿಗೆ ಮೇಳೈವಿಸಿ ದೇವರ ನುಡಿಗಳನ್ನು ವೇದಗಳನ್ನಾಗಿ ಸಂಯೋಜಿಸಿದ್ದಾರೆ. ಅವರು ಈ ಸೂತ್ರಗಳನ್ನು ಕಂಠಪಾಠ ಮಾಡಿ ಅದನ್ನು ಅವರ ಶಿಷ್ಯರಿಗೆ ಬಾಯಿ ಮುಖೇನ ಪ್ರವಹಿಸುವಂತೆ ಮಾಡಿದರು. ಒಂದು ವೇಳೆ ಋಷಿಗಳು ಅವನ್ನು ತಾಳೆಗರಿಗಳ ಮೂಲಕ ದಾಖಲಿಸಲು ಪ್ರಯತ್ನಿಸಿದ್ದರೆ ಅವುಗಳು ಈ ವೇಳೆಗಾಗಲೇ ಪ್ರಕೃತಿ ಮಾತೆಯ ದಾಳಿಗೆ ಸಿಲುಕಿ ನಾಶವಾಗಿರುತ್ತಿದ್ದವು ಅಥವಾ ಮಾರ್ಪಾಡು ಹೊಂದುತ್ತಿದ್ದವು. ದೇವರ ಮಾತಿನ ಮರ್ಮವನ್ನು ತಿಳಿಯುವುದು ಮಾನವನ ಶಕ್ತಿಗೆ ಮೀರಿದ ವಿಷಯವಾಗಿದೆ. ಆದ್ದರಿಂದ ಅದನ್ನು ಸ್ವಲ್ಪ ಮಟ್ಟಿಗೆ ಸುಗುಮಗೊಳಿಸಲು ವೇದಗಳನ್ನು ಹಲವಾರು ವಿಷಯಾಧಾರಿತ ವಿಭಾಗಗಳನ್ನಾಗಿ ಮಾಡಿ ಒಂದೊಂದು ವಿಭಾಗವನ್ನೂ ಆಯಾ ಕ್ಷೇತ್ರಗಳಲ್ಲಿ ಪರಿಣಿತರಾದವರು ವಿಶ್ಲೇಷಿಸಲು ಪ್ರಯತ್ನಿಸಿದರು. ಈ ಅಧ್ಯಯನವನ್ನೇ ವೇದಾಂಗವೆಂದು ಕರೆಯಲಾಗಿದ್ದು ಇದು ಪದೋಚ್ಛಾರಣೆ, ಯಜ್ಞಯಾಗಾದಿಗಳ ವಿಧಿಗಳು, ಭಾಷಾ ಪರಿಣಿತಿ, ವ್ಯಾಕರಣ, ಶಬ್ದೋತ್ಪತ್ತಿ, ಶಬ್ದಕೋಶ, ವಾಕ್ಯರಚನೆ (ಛಂದಸ್ಸು), ಖಗೋಳ ವಿಜ್ಞಾನ ಮತ್ತು ಜ್ಯೋತಿಷ್ಯಗಳನ್ನು ಒಳಗೊಂಡಿದೆ.

         ಒಂದು ವೇಳೆ ವೇದಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಬಹುದಾಗಿದ್ದರೆ, ಅವುಗಳ ದೀರ್ಘವಾದ ಅಧ್ಯಯನವನ್ನು ಕೈಗೊಳ್ಳುವ ಅವಶ್ಯಕತೆ ಉಂಟಾಗುತ್ತಿರಲಿಲ್ಲ! ವೇದಾಂಗಗಳು ಮೊದಲಿಗೆ ವಿವಿಧ ಪರಿಣಿತರ ವ್ಯಾಖ್ಯಾನಗಳನ್ನು ಸಮೀಕರಿಸಲು ಪ್ರಯತ್ನಿಸಿ ಅದರ ಮೂಲಕ ಮೊದಲು ವೇದಗಳ ಸ್ಥೂಲ ವ್ಯಾಖ್ಯಾನವನ್ನು ಅರಿತು ನಂತರ ಅದರ ಗೂಡಾರ್ಥಗಳನ್ನು ಅರಿಯಲು ಪ್ರಯತ್ನಸಿದವು. ಮಾನವ ಜೀವನದ ಹುಟ್ಟಿನಿಂದ ಆರಂಭಿಸಿ ಮರಣಿಸುವವರೆಗಿನ ಪ್ರತಿಯೊಂದು ಚಟುವಟಿಕೆಯನ್ನೂ ವೇದಗಳು ಚರ್ಚಿಸುತ್ತವೆ ಎನ್ನುವ ನಿರ್ಣಯಕ್ಕೆ ಬರಲಾಯಿತು. ಈ ನಿರ್ಣಯದಂತೆ ಅವುಗಳನ್ನು ಮೂರು ವಿಶಾಲ ಭಾಗಗಳನ್ನಾಗಿ ವಿಭಾಗಿಸಲಾಯಿತು, ಅವೆಂದರೆ ಜ್ಞಾನ, ಕರ್ಮ ಮತ್ತು ಉಪಾಸನೆ. ಇಲ್ಲಿ ಜ್ಞಾನವೆಂದರೆ ವಿವೇಕ ಮತ್ತದು ಸಾಹಿತ್ಯಕ ಅರ್ಥದ ಜ್ಞಾನವಲ್ಲ. ಸಾಮಾನ್ಯವಾಗಿ ಜ್ಞಾನವೆಂದರೆ ಕಲಿಕೆ ಮತ್ತು ತರ್ಕದಿಂದ (ಕಾರಣಗಳ ವಿಶ್ಲೇಷಣೆಯಿಂದ) ದೊರೆತ ಫಲಿತಾಂಶದ ಮಾನಸಿಕ ಗ್ರಹಿಕೆಯಾಗಿದೆ. ವಿವೇಕವೆಂದರೆ ಗಳಿಸಿಕೊಂಡ ಜ್ಞಾನವನ್ನು ಪ್ರಾಯೋಗಿಕವಾಗಿ ನಿರ್ಣಯಗಳನ್ನು ತೆಗೆದುಕೊಳ್ಳುವುದಕ್ಕೆ, ವಿವೇಚನೆ ಮತ್ತು ಅಂತದೃಷ್ಟಿಯನ್ನು ಹೊಂದುವುದಕ್ಕೆ ಉಪಯೋಗಿಸುವುದಾಗಿದೆ. ಆದ್ದರಿಂದ ವಿವೇಕವನ್ನು ಜ್ಞಾನಕ್ಕಿಂತ ಹಿರದಾದುದೆಂದು ಪರಿಗಣಿಸಲಾಗಿದೆ. ವೇದಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ವಿವೇಕವನ್ನು ಗಳಿಸಿಕೊಳ್ಳಲು ಸೂಚನೆಗಳನ್ನೀಯುತ್ತವೆ. ವಿವೇಕವೆನ್ನುವುದು ಅನುಭವದಿಂದ ಪಡೆದುಕೊಂಡದ್ದು ಮತ್ತು ಅನುಭವಗಳು ಕರ್ಮಗಳನ್ನು ಮಾಡಲು ಸೂಚಿಸುತ್ತವೆ. ಕರ್ಮಗಳೆಂದರೆ ಕೆಲಸಗಳು ಅಥವಾ ಕ್ರಿಯೆಗಳು. ನಿರಂತರ ಕ್ರಿಯೆಯಿಂದ ಅನುಭವವು ಹೊಂದಲ್ಪಡುತ್ತದೆ ಮತ್ತು ಹಾಗೆ ಗಳಿಸಲ್ಪಟ್ಟ ಅನುಭವದಿಂದ ಒಬ್ಬನು ಒಳ್ಳೆಯದು ಮತ್ತು ಕೆಟ್ಟದರ ನಡುವಿನ ಭೇದಗಳನ್ನು ಅರಿಯಲು (ವಿವೇಚಿಸಲು) ಶಕ್ತನಾಗುತ್ತಾನೆ. ಮುಂದಿನದೇ ಉಪಾಸನೆ ಅಂದರೆ ಯಜ್ಞ ಯಾಗ ಮೊದಲಾದ ವಿಹಿತ ಕರ್ಮಗಳನ್ನು ಮಾಡುವುದು. ಉಪಾಸನೆಯು ಕರ್ಮಕ್ಕಿಂತ ಭಿನ್ನವಾಗಿದೆ. ಕರ್ಮವು ಕೇವಲ ದೈಹಿಕ ಅಸ್ತಿತ್ವಕ್ಕಾಗಿ ಕೈಗೊಳ್ಳುವ ಕೆಲಸಗಳನ್ನು ಸೂಚಿಸುತ್ತದೆ. ಆದರೆ ಉಪಾಸನೆಯೆಂದರೆ ದೈವ ಸಾಕ್ಷಾತ್ಕಾರ ಪಡೆಯಲು ಮಾಡಬೇಕಾಗಿರುವ ಕ್ರಿಯೆಗಳು. ವೇದಗಳು ದೇವರ ಕಲ್ಪನೆಗೆ ಲೆಕ್ಕವಿಲ್ಲದಷ್ಟು ವ್ಯಾಖ್ಯಾನಗಳನ್ನು ಕೊಡುತ್ತವೆ. ವೇದಗಳ ಮೂಲ ಉದ್ದೇಶವು, ಅವುಗಳು ಬ್ರಹ್ಮವೆಂದು ಕರೆಯುವ ದೈವದ ಸಾಕ್ಷಾತ್ಕರವನ್ನು ಪಡೆಯಬೇಕು ಎನ್ನುವುದಾಗಿದೆ. ಬ್ರಹ್ಮ ಸಾಕ್ಷಾತ್ಕಾರಕ್ಕೆ ಜ್ಞಾನ, ಕರ್ಮ ಮತ್ತು ಉಪಾಸನೆ ಈ ಮೂರೂ ವಿಷಯಗಳಲ್ಲಿ ಪರಿಣಿತಿಯನ್ನು ಪಡೆಯಬೇಕೆಂದು ಹೇಳುತ್ತವೆ. ಆದ್ದರಿಂದ ವೇದಗಳನ್ನು ಅವುಗಳ ವಿಶಿಷ್ಠ ಶೈಲಿಯಲ್ಲಿಯೇ ಖಂಡಿತವಾಗಿ ಅರಿತುಕೊಳ್ಳಬೇಕೆಂದು ವಿಧಿಸಲಾಗಿದೆ, ಏಕೆಂದರೆ ಅದರಲ್ಲಿರುವ ಸೂಕ್ತಿಗಳಿಗೆ ಸುಪ್ತವಾದ ವಿಶೇಷಾರ್ಥಗಳಿವೆ.

Vindhyācala-nivāsinī विन्ध्याचल-निवासिनी (336)

೩೩೬. ವಿಂಧ್ಯಾಚಲ-ನಿವಾಸಿನೀ

          ದೇವಿಯು ವಿಂಧ್ಯಾಚಲ ಪರ್ವತಗಳಲ್ಲಿ ನಿವಸಿಸುತ್ತಾಳೆ. ದುರ್ಗಾ ಸಪ್ತಶತಿಯ (ಇದರಲ್ಲಿ ಭಗವದ್ಗೀತೆಯ ರೀತಿಯಲ್ಲಿ ೭೦೦ ಶ್ಲೋಕಗಳಿದ್ದು ಇದು ಮಾರ್ಕಂಡೇಯ ಪುರಾಣದ ಭಾಗವಾಗಿದೆ) ಹನ್ನೊಂದನೇ ಅಧ್ಯಾಯದ ೪೧ನೇ ಶ್ಲೋಕದಲ್ಲಿ, ದೇವಿಯು ಹೇಳುತ್ತಾಳೆ, "ನಾನು ನಂದಗೋಪನ (ಭಗವಾನ್ ಕೃಷ್ಣನ ತಂದೆಯ) ಮನೆಯಲ್ಲಿ ಜನಿಸುತ್ತೇನೆ ಮತ್ತು ವಿಂಧ್ಯ ಪರ್ವತಗಳಲ್ಲಿ ವಾಸಿಸುತ್ತೇನೆ, ಆ ಸಮಯದಲ್ಲಿ ನಾನು ಇಬ್ಬರು ರಾಕ್ಷಸರ (ಶುಂಭ ಮತ್ತು ನಿಶುಂಭರ) ಸಂಹಾರವನ್ನು ಮಾಡುತ್ತೇನೆ". ಈ ಶ್ಲೋಕವು ಕೃಷ್ಣನೇ ಲಲಿತಾಂಬಿಕೆಯೆಂದು ಗುರುತಿಸಲು ಬಹಳ ಸ್ಪಷ್ಟವಾದ ಪ್ರಮಾಣವನ್ನೊದಗಿಸುತ್ತದೆ. ಬಹುಶಃ ಈ ಸಹಸ್ರನಾಮದ ಹಲವಾರು ನಾಮಗಳು ಅವಳನ್ನು ವಿಷ್ಣುವಿನೊಂದಿಗೆ ಗುರುತಿಸಿರುವುದಕ್ಕೆ ಇದೇ ಕಾರಣವಾಗಿರಬಹುದು. ಆಕೆಯನ್ನು ವಿಷ್ಣುವಿನ ಸಹೋದರಿ ಎಂದು ಕರೆದಿರುವುದಕ್ಕೆ ಹಲವಾರು ನಿದರ್ಶನಗಳಿವೆ. ಈ ಸಹಸ್ರನಾಮದ ೨೮೦ನೇ ನಾಮದಲ್ಲಿ ಆಕೆಯನ್ನು ಪದ್ಮನಾಭ ಸಹೋದರೀ ಎಂದು ಕರೆಯಲಾಗಿದೆ, ಪದ್ಮನಾಭನೆನ್ನುವುದು ವಿಷ್ಣುವಿನ ಹಲವಾರು ಹೆಸರುಗಳಲ್ಲೊಂದು.

Vidhātrī विधात्री (337)

೩೩೭. ವಿಧಾತ್ರೀ

         ಧಾತ್ರೀ ಎಂದರೆ ತಾಯ್ತನ. ಆಕೆಯು ಶ್ರೀ ಮಾತೆ ಅಥವಾ ಪರಮ ಮಾತೆಯಾಗಿರುವುದರಿಂದ ಆಕೆಯು ಈ ಜಗತ್ತನ್ನು ಪೋಷಿಸುತ್ತಾಳೆ. ಧಾತ್ರೀ ಎಂದರೆ ಆಮ್ಲವೆಂದು ಕರೆಯಲ್ಲಪಡುವ ಬೆಟ್ಟದ ನೆಲ್ಲಿಕಾಯಿ (Embelica Officinalis) ಮತ್ತು ಈ ಸಂದರ್ಭದಲ್ಲಿ ದೇವಿಯು ನೆಲ್ಲಿಕಾಯಿಗಳನ್ನು ಇಷ್ಟಪಡುತ್ತಾಳೆ ಎಂದು ಅರ್ಥೈಸಬಹುದು. ಈ ಮರವನ್ನು ಲಕ್ಷ್ಮೀ ರೂಪದಲ್ಲಿರುವ ಪವಿತ್ರ ವೃಕ್ಷವೆಂದು ಭಾವಿಸಲಾಗಿದೆ. ಸೃಷ್ಟಿಕರ್ತನಾದ ಬ್ರಹ್ಮನನ್ನು ವಿಧಾತ್ರ ಎಂದು ಕರೆಯಲಾಗಿದೆ ಮತ್ತವನ ಸಂಗಾತಿಯು ವಿಧಾತ್ರಿಯಾಗಿದ್ದಾಳೆ. ಪರಮಶಿವನು ಬ್ರಹ್ಮನ ರೂಪದಲ್ಲಿ ಈ ಪ್ರಪಂಚವನ್ನು ಸೃಷ್ಟಿಸುತ್ತಾನೆ, ವಿಷ್ಣುವಾಗಿ ಇದನ್ನು ಪರಿಪಾಲಿಸುತ್ತಾನೆ ಮತ್ತು ರುದ್ರನಾಗಿ ಇದನ್ನು ಲಯಗೊಳಿಸುತ್ತಾನೆ. ಈ ಮೂರು ಹಂತಗಳಲ್ಲಿ ಅವನ ಸಂಗಾತಿಗಳನ್ನು ಅನುಕ್ರಮವಾಗಿ ಸರಸ್ವತೀ, ಲಕ್ಷ್ಮೀ ಮತ್ತು ರುದ್ರಾಣೀ ಎಂದು ಕರೆಯಲಾಗಿದೆ. ಈ ಸಹಸ್ರನಾಮದಲ್ಲಿ ಮುಂದೆ ಹಲವಾರು ನಾಮಗಳಿದ್ದು (೪೫೭, ೮೨೩, ೮೨೬ & ೯೮೫) ಅವುಗಳು ಸಹ ಇದೇ ಅರ್ಥವನ್ನು ಹೊಮ್ಮಿಸುತ್ತವೆ. ಆದರೆ ಒಬ್ಬರು ಅವುಗಳನ್ನು ಆಳವಾಗಿ ವಿಶ್ಲೇಷಿಸಿ ನೋಡಿದಾಗ ಈ ವಿವಿಧ ನಾಮಗಳೂ ಸಹ ಒಟ್ಟಾರೆಯಾಗಿ ಬೇರೆಯದೇ ಅರ್ಥಗಳನ್ನು ಕೊಡುತ್ತವೆ ಎನ್ನುವುದು ವಿಶದವಾಗುತ್ತದೆ.

******

       ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 335-337 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.