ರಾಜರಾಜೇಶ್ವರಿಯ ಚಿತ್ರಕೃಪೆ: ಅಂತರ್ಜಾಲ
ಲಲಿತಾ ಸಹಸ್ರನಾಮ ೩೭೬ - ೩೮೦
Śṛṅgāra-rasa- saṁpūrṇā शृङ्गार-रस-संपूर्णा (376)
೩೭೬. ಶೃಂಗಾರ-ರಸ-ಸಂಪೂರ್ಣಾ
ದೇವಿಯು ಪ್ರೇಮದ ಸಾರವಾಗಿದ್ದಾಳೆ. ಹಿಂದಿನ ನಾಮವು ನಾಲ್ಕು ಪೀಠಗಳ ಕುರಿತಾಗಿ ಅದರಲ್ಲೂ ಪ್ರತ್ಯೇಕವಾಗಿ ಕಾಮಗಿರಿ ಪೀಠ ಅಥವಾ ಮೂಲಾಧಾರ ಚಕ್ರವನ್ನು ಕುರಿತಾಗಿ ಹೇಳುತ್ತದೆ. ಈ ನಾಮದಲ್ಲಿ ಪೂರ್ಣಗಿರಿ ಪೀಠ ಅಥವಾ ಮಣಿಪೂರಕ ಚಕ್ರದ ಕುರಿತಾಗಿ ಉಲ್ಲೇಖಿಸಲಾಗಿದೆ. ಹಿಂದಿನ ನಾಮದಲ್ಲಿ ಉಲ್ಲೇಖಿಸಲಾಗಿರುವ ಮೂಲಾಧಾರ ಚಕ್ರ ಅಥವಾ ಕಾಮಗಿರಿ ಪೀಠದಲ್ಲಿ ಪರಾ ವಾಕ್ ಎನ್ನುವುದು ಉದ್ಭವವಾಗಿ ಅದು ಮುಂದಿನ ವಿಕಸನದ ಹಂತಕ್ಕಾಗಿ ಮಣಿಪೂರಕ ಚಕ್ರ ಅಥವಾ ಈ ಪೂರ್ಣಗಿರಿ ಪೀಠವನ್ನು ಪ್ರವೇಶಿಸುತ್ತದೆ. ಮಣಿಪೂರಕ ಚಕ್ರದಲ್ಲಿ ’ಕಾರಣ ಬಿಂದು’ ಎಂದು ಕರೆಯಲ್ಪಡುವ ಚುಕ್ಕೆಯು ಈ ಚಕ್ರದಲ್ಲಿ ’ಕಾರ್ಯಬಿಂದು’ ಆಗುತ್ತದೆ. ೩೬೬ನೇ ನಾಮದಲ್ಲಿ ಈ ಬಿಂದುಗಳ ಕುರಿತಾಗಿ ವಿವರವಾಗಿ ಚರ್ಚಿಸಲಾಗಿದೆ.
ಲಲಿತಾಂಬಿಕೆಯು ಜೀವನದ ಎಲ್ಲಾ ಸುಂದರ ವಸ್ತುಗಳ ಸಾರ ಅಥವಾ ರಸದ ಮೂರ್ತ ರೂಪವಾಗಿದ್ದಾಳೆ. ಎಂಟರಿಂದ ಹತ್ತು ವಿಧವಾದ ರಸಗಳಿವೆಯೆಂದು ಹೇಳಲಾಗುತ್ತದೆಯಾದರೂ ಸಾಮಾನ್ಯವಾಗಿ ಒಂಭತ್ತು ವಿಧವಾದ ರಸಗಳನ್ನು (ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ ಮತ್ತು ಶಾಂತ ಎಂಬ ಒಂಬತ್ತು ರಸಗಳು) ಮಾತ್ರ ಕುರಿತು ಉಲ್ಲೇಖಿಸಲಾಗುತ್ತದೆ. ಆ ಹತ್ತು ರಸಗಳೆಂದರೆ ಶೃಂಗಾರ, ವೀರ, ಭೀಭತ್ಸ, ರೌದ್ರ, ಹಾಸ್ಯ, ಭಯಾನಕ, ಕರುಣ, ಅದ್ಭುತ, ಶಾಂತ ಮತ್ತು ಎದೆ ತುಂಬಿದ ಅನುಭವ ನೀಡುವ ರಸ (ಕಕ್ಷಾವೇಕ್ಷಕ कक्षावेक्षक= ಎದೆ ತುಂಬಿದ/ ಬೆಚ್ಚನೆಯ ಅನುಭವ, warmth). ಸೌಂದರ್ಯ ಲಹರಿಯು ದೇವಿಯು ವಿವಿಧ ಸಮಯಗಳಲ್ಲಿ ಪ್ರದರ್ಶಿಸುವ ಎಂಟು ವಿಧವಾದ ರಸಗಳನ್ನು ಹೆಸರಿಸುತ್ತದೆ. ಆಕೆಯು ಶಿವನೊಂದಿಗೆ ಶೃಂಗಾರ ರಸವನ್ನು ಪ್ರದರ್ಶಿಸಿದರೆ, ವೀರ ರಸವನ್ನು ದುಷ್ಟ ಶಕ್ತಿಗಳನ್ನು ನಾಶ ಮಾಡುವಾಗ, ಭೀಭತ್ಸ ರಸವನ್ನು ಅಜ್ಞಾನಿಗಳೊಡನೆ, ಭಯಾನಕತೆಯನ್ನು ಶಿವನ ಮೈಮೇಲಿರುವ ಹಾವುಗಳನ್ನು ನೋಡಿದಾಗ, ರೌದ್ರವನ್ನು ಗಂಗಾ ದೇವಿಯ ಮೇಲೆ ತೋರುತ್ತಾಳೆ (ಆಕೆಯನ್ನು ಶಿವನು ತನ್ನ ಜಟೆಯಲ್ಲಿ ಬಂಧಿಸಿದಾಗ), ಅದ್ಭುತವನ್ನು ಶಿವನ ಮೂರನೆಯ ಕಣ್ಣನ್ನು ನೋಡಿದಾಗ, ತನ್ನ ಭಕ್ತರ ಸಾನಿಧ್ಯದಲ್ಲಿದ್ದಾಗ ಎದೆ ತುಂಬಿದ ಅನುಭವದ ರಸವನ್ನು ಮತ್ತು ಲಾಸ್ಯ ರಸವನ್ನು (ನಾಟ್ಯ ಮಾಡುವಂತಹ ಭಾವನೆಗಳನ್ನು) ತನ್ನ ಅನುಚರರನ್ನು ಗಮನಿಸುವಾಗ ತೋರುತ್ತಾಳೆ. ಶಿವ ಮತ್ತು ಶಕ್ತಿಯರ ಪ್ರೇಮವನ್ನು ವಿವಿಧ ಗ್ರಂಥಗಳು ಬಹು ಚೆನ್ನಾಗಿ ವರ್ಣಿಸುತ್ತವೆ. ಪ್ರೇಮದ ಸಾರ ಅಥವಾ ಶೃಂಗಾರ ರಸವು ಎಲ್ಲಾ ರಸಗಳಿಗೆ ಕಾರಣವಾಗಿದೆ. ಈ ಎಲ್ಲಾ ಹೇಳಿಕೆಗಳು ದೇವಿಯ ಸಗುಣ ರೂಪವನ್ನು ಅರಿಯುವಾಗ ಉಪಯೋಗಕ್ಕೆ ಬಂದರೂ ಸಹ ಆಕೆಯ ನಿರ್ಗುಣ ಅಥವಾ ಪರಮಸ್ವರೂಪವು ಎಲ್ಲಾ ವಿಧವಾದ ಗುಣ ಮತ್ತು ರೂಪಗಳಿಗೆ ಅತೀತವಾಗಿದೆ.
ಈ ನಾಮಕ್ಕೆ ಮತ್ತೊಂದು ವ್ಯಾಖ್ಯಾನವೂ ಇದೆ. ಶೃಂಗವೆಂದರೆ ಮೂಲಭೂತವಾದ ಮತ್ತು ಅರರ ಎಂದರೆ ಮುಸುಕು, ಸಂಪೂರ್ಣ ಎಂದರೆ ಪರಬ್ರಹ್ಮವೆಂದು ಅರ್ಥ. ಈ ವಿಧವಾಗಿ ವಿಶ್ಲೇಷಿಸಿದಾಗ, ದೇವಿಯು ಶುದ್ಧ ಬ್ರಹ್ಮದ ಅಥವಾ ನಿರ್ಗುಣ ಬ್ರಹ್ಮದ ಸ್ವರೂಪದಲ್ಲಿದ್ದಾಳೆಂದೂ ಮತ್ತು ಆಕೆಯು ಸಗುಣ ಬ್ರಹ್ಮದ ಸ್ವರೂಪದಲ್ಲೂ (ಮಾಯಾ ರೂಪದಲ್ಲೂ) ಇದ್ದಾಳೆಂದು ಅರ್ಥವಾಗುತ್ತದೆ.
ಈ ನಾಮದಲ್ಲಿ ಪೂರ್ಣಗಿರಿ ಪೀಠವನ್ನೂ ಸಹ ಉಲ್ಲೇಖಿಸಲಾಗಿದೆ ಎಂದು ಹೇಳಲಾಗುತ್ತದೆ.
Jayā ज़या (377)
೩೭೭. ಜಯಾ
ದೇವಿಯು ಯಾವಾಗಲೂ ವಿಜಯಿಯಾಗಿರುತ್ತಾಳೆ. ಆಕೆಯು ವಿಜಯದ ಮೂರ್ತರೂಪವೇ ಆಗಿದ್ದಾಳೆ. ಬಹುಶಃ ಇದು ಒಬ್ಬರು ತನ್ನ ಇಂದ್ರಿಯಗಳ ಮೇಲೆ ಜಯ ಸಾಧಿಸುವುದರ ಮೂಲಕ ದೇವಿಯ ವಿಜಯ ಸ್ವರೂಪವನ್ನು ಅರಿಯಬಹುದೆಂದು ಸೂಚಿಸುತ್ತದೆ. ಆತ್ಮ ಸಾಕ್ಷಾತ್ಕಾರದ ಹಾದಿಯಲ್ಲಿ ಇಂದ್ರಿಯಗಳನ್ನು ಬಹುಶಃ ಅತ್ಯಂತ ಕೆಟ್ಟ ಶತ್ರುಗಳೆಂದು ಭಾವಿಸಲಾಗಿದೆ; ಏಕೆಂದರೆ ಇವುಗಳ ಪ್ರಭಾವದಿಂದ ಮನಸ್ಸು ಮಲಿನವಾಗುತ್ತದೆ. ಆದರೆ ಮನಸ್ಸನ್ನು ನಿಯಂತ್ರಣದಲ್ಲಿಟ್ಟರೆ ಇಂದ್ರಿಯಗಳು ಅದರ ಮೇಲೆ ಯಾವುದೇ ವಿಧವಾದ ದುಃಷ್ಪರಿಣಾಮವನ್ನುಂಟು ಮಾಡಲಾರವು ಹಾಗೂ ಮನಸ್ಸಿನ ಶಾಂತ ಚಿತ್ತವನ್ನು ವಿಕಲ್ಪಗೊಳಿಸಲಾರವು. ವಿಷ್ಣು ಸಹಸ್ರನಾಮದ ೫೦೯ನೇ ನಾಮವೂ ಸಹ ಜಯಃ ಆಗಿದ್ದು ಅದಕ್ಕೆ, "ಯಾರು ಎಲ್ಲಾ ಜೀವಿಗಳನ್ನು ಜಯಿಸುತ್ತಾನೆಯೋ ಅವನು" ಎಂದು ವ್ಯಾಖ್ಯಾನಿಸಲಾಗಿದೆ.
Jālandhra-sthitā जालन्ध्र-स्थिता (378)
೩೭೮. ಜಾಲಂಧ್ರ-ಸ್ಥಿತಾ
ಇಲ್ಲಿ ಜಾಲಂಧರ ಪೀಠ ಅಥವಾ ಹೃದಯ ಚಕ್ರ (ಅನಾಹತ)ವನ್ನು ಉಲ್ಲೇಖಿಸಲಾಗಿದೆ, ಇಲ್ಲಿ ಶಬ್ದವು ಇನ್ನಷ್ಟು ಪರಿಷ್ಕರಣೆಗೊಂಡು ಮಧ್ಯಮಾ ಆಗಿ, ಅದು ಶಬ್ದವು ಹೊರಹೊಮ್ಮುವ ಅಂತಿಮ ಹಂತಕ್ಕಿಂತ ಮುಂಚಿನ ಹಂತವಾಗಿರುತ್ತದೆ. ಇದು, ದೇವಿಯ ಶಬ್ದ ಬ್ರಹ್ಮದ ಒಂದು ರೂಪವಾಗಿದೆ.
Oḍyāṇa-pīṭha-nilayā ओड्याण-पीठ-निलया (379)
೩೭೯. ಓಡ್ಯಾಣ-ಪೀಠ-ನಿಲಯಾ
ದೇವಿಯು ಸ್ಥೂಲ ಶರೀರದ ನಾಲ್ಕನೆಯ ಪೀಠವಾದ ಓಡ್ಯಾಣದಲ್ಲಿ ನೆಲಸಿರುತ್ತಾಳೆ. ಇಲ್ಲಿ ಸಂಪೂರ್ಣವಾಗಿ ರೂಪಗೊಂಡ ಶಬ್ದವು ವೈಖರೀ ರೂಪದಲ್ಲಿ ಹೊರಹಾಕಲ್ಪಡುತ್ತದೆ. ಓಡ್ಯಾಣ ಪೀಠವು ಕಂಠ ಚಕ್ರ ಅಥವಾ ವಿಶುದ್ಧಿ ಚಕ್ರಕ್ಕೆ ಸಂಭಂದಿಸಿದ್ದಾಗಿದೆ.
Bindumaṇḍala-vāsini बिन्दुमण्डल-वासिनि (380)
೩೮೦. ಬಿಂದುಮಂಡಲ-ವಾಸಿನಿ
ದೇವಿಯು ಬಿಂದು ಮಂಡಲದಲ್ಲಿ ವಾಸಿಸುತ್ತಾಳೆ. ಬಿಂದುವೆಂದರೆ ಶ್ರೀ ಚಕ್ರದ ಮಧ್ಯದಲ್ಲಿರುವ ಚುಕ್ಕೆಯಾಗಿದ್ದು ಅಲ್ಲಿ ದೇವಿಯು ತನ್ನ ಸಂಗಾತಿಯಾದ ಶಿವನೊಡನೆ ವಾಸಿಸುತ್ತಾಳೆ. ಶ್ರೀ ಚಕ್ರದ ಈ ಬಿಂದುವನ್ನು ಬಹಳ ಶಕ್ತಿಯುತವಾದದ್ದೆಂದು ಪರಿಗಣಿಸಲಾಗಿದೆ ಏಕೆಂದರೆ ಅದು ಕಾಮೇಶ್ವರ ಮತ್ತು ಕಾಮೇಶ್ವರೀ ಇವರಿಬ್ಬರ ಆವಾಸ ಸ್ಥಾನವಾಗಿದೆ.
ಈ ಬಿಂದವನ್ನು ಸಹಸ್ರಾರದಲ್ಲಿರುವ ರಂಧ್ರಕ್ಕೂ ಸಮೀಕರಿಸಲಾಗುತ್ತದೆ; ಅದನ್ನು ಬ್ರಹ್ಮರಂಧ್ರವೆಂದೂ ಕರೆಯುತ್ತಾರೆ ಮತ್ತದರ ಮೂಲಕ ದೇವರೊಂದಿಗೆ ಅನ್ಯೋನ್ಯ ಸಂಸರ್ಗವು (ಆಪ್ತ ಸಂಪರ್ಕವು) ಏರ್ಪಡುತ್ತದೆ. ಬ್ರಹ್ಮಾಂಡದ ಶಕ್ತಿಯು ಕಿರೀಟ ಚಕ್ರದಲ್ಲಿರುವ ಈ ರಂಧ್ರದ ಮೂಲಕ ಮತ್ತು ಬೆನ್ನ ಹುರಿಯಲ್ಲಿರುವ ಮೆದುಳ ಬಳ್ಳಿಯ (ಹಿಂದಲೆಯ ಚಕ್ರದ) ಮೂಲಕವಷ್ಟೇ ಮಾನವ ಶರೀರದ ಒಳಗೆ ಪ್ರವೇಶವನ್ನು ಮಾಡಬಲ್ಲದು. ಯಾವಾಗ ಈ ಎರಡು ಸ್ಥಳಗಳು ಪ್ರಕೃತಿ ಮಾತೆಗೆ ಮತ್ತು ಬೆಳಗಿನ ಸೂರ್ಯನಿಗೆ ಹೊರಚಾಚಲ್ಪಡುತ್ತವೆಯೋ ಆಗ ರೋಗ ರಹಿತ ಜೀವನಕ್ಕೆ ಸಾಕಾಗುವಷ್ಟು ಬ್ರಹ್ಮಾಂಡ ಶಕ್ತಿಯನ್ನು ಸ್ಥೂಲ ಶರೀರವು ಒಳಗೆಳೆದುಕೊಳ್ಳಬಲ್ಲುದು.
*******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 376-380 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
ಪ್ರತಿಕ್ರಿಯೆ (2)