ಗುಡಿ ಮುಂದಿನ ಬಿಕ್ಷುಕಿ ಬಿಕ್ಕುತಿಹಳು ,,,,,,,

ದಿನವೂ ಇಲ್ಲಿಯೇ 

ದೇವನ ಭಜಿಸಿ

ದಕ್ಕಿದ್ದೆರಡು  ಉರೂಟು ಪಾವಲಿಯಲಿ 

ಹೊಟ್ಟೆಗಿಲ್ಲದೆ ಕಿರುಚುವಾಗ 

ಎಲ್ಲಿದ್ದ ನನ್ನ ದೇವರು ?

ಆ ಬೇವರ್ಸಿ ದೇವರು ?

ಕಣ್ಣಿರದ ನನ್ನ ಕಂದಾ 

ಅವ್ವಾ ಎಂದು ಕಿರುಚಿ 

ಗುಡಿ ಎದುರಲ್ಲೇ 

ಗಾಡಿಗೆ ಸಿಕ್ಕಿ ಸತ್ತಾಗ 

ಎಲ್ಲಿದ್ದ ನನ್ನ ದೇವರು ?

ಆ ಬೇವರ್ಸಿ ದೇವರು ?

ರಾತ್ರಿ, ಗುಡಿಯಾ ಮಗ್ಗುಲಲಿ 

ಕುಡುಕನೊಬ್ಬ  ಅವನ 

ಪುರುಷತ್ವದ ಖದ್ಗಡಲಿ 

ಹೆಣ್ತನವ ಇರಿಯಲು ಬಂದಾಗ 

ಎಲ್ಲಿದ್ದ ನನ್ನ ದೇವರು ?

ಆ ಬೇವರ್ಸಿ ದೇವರು ?

ಸತ್ತವರಿಗೆಸೆದ 

ತೆಂಗಿನ ಚೂರನು 

ನಾಯಿಗೆ ಪೈಪೋಟಿಯಲಿ 

ನಾ ಕಚ್ಚಿ ತಿನ್ನುವಾಗ 

ಎಲ್ಲಿದ್ದ ನನ್ನ ದೇವರು ?

ಆ ಬೇವರ್ಸಿ ದೇವರು ?

ನನ್ನ ಗರ್ಭದೊಳಗೆ 

ಯಾರದೋ ವೀರ್ಯದ ಆತ್ಮ  

ಅನ್ನವಿಲ್ಲದೆ ಕರಕಲಾಗಿರುವಾಗ 

ಅವನು,,, ಗರ್ಭ ಗುಡಿಯೊಳಗೆ 

ಬೆಚ್ಚಗೆ ಮಲಗಿಹನು 

ಅವನಾವ ದೇವರು?

ಬಿಕ್ನಾಸಿ ದೇವರು?

ಅವ್ವ-ಅಪ್ಪ ಅಂತ ದೈನ್ಯವಾಗಿ 

ನಾ ಬೇಡಿದರೂ 

ಕೆಂಗಣ್ಣು ಬೀರಿ ಹೋಗುವ ಜನ 

ಅವನ ಹುಂಡಿಯೊಳಗೆ 

ಲಕ್ಷ ಲಕ್ಷ ಸುರಿದು ಸುಡುವಾಗ 

ಅವನೇನಾ ದೇವರು?

ಅಡ್ನಾಡಿ ದೇವರು ?

ಭಕ್ಷಕರ ರಕ್ಷಕ ಅಷ್ಟೇ ಆತ !

ಕುತಂತ್ರಿಗಳ ಮಂತ್ರಿ ಅಷ್ಟೇ ಆತ !

ಇದ್ದವರ ಗದ್ದಕ್ಕೆ ಮುತ್ತಿಟ್ಟು ರಮಿಸುವವ,,,

ಪುರುಷ ಪುಂಗವ ಆತ,,,,

-- ನಾನೆಂಬ ಅಹಂಕಾರ