ನೈತಿಕ ಪೋಲೀಸ್ಗಿರಿ ವಿರುದ್ಧ ಪ್ರತಿಭಟನೆಗಾಗಿ ಕೆಲವರು ಕಿಸ್ ಆಫ್ ಲವ್ ಆಯೋಜಿಸಲು ಮುಂದಾದಾಗ ಇದು ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಎಂದು ರಾಜ್ಯಾದ್ಯಂತ ಭಾರೀ ಪ್ರತಿಭಟನೆ ವ್ಯಕ್ತವಾಯಿತು.  ಈ ರೀತಿಯ ಪ್ರತಿಭಟನೆ ವ್ಯಕ್ತಪಡಿಸಿದ ಮಹಾನುಭಾವರೇ ಬೇರೆ ಹಲವು ವಿಷಯಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಲ್ಲಿ ಎಗ್ಗಿಲ್ಲದೆ ತೊಡಗಿದ್ದಾರೆ.  ಉದಾಹರಣೆಗೆ ಇಂದು ಗಂಡಸರು ತೊಡುವ ಪ್ಯಾಂಟ್ ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಲ್ಲದೆ ಮತ್ತಿನ್ನೇನು?  ಭಾರತೀಯ ಸಂಸ್ಕೃತಿಯಲ್ಲಿ ಗಂಡಸರು ಪಂಚೆ ಉಡುವುದು ರೂಢಿ ಆದರೆ ಇಂದು ಬಹುತೇಕ ಗಂಡಸರು ಪ್ಯಾಂಟ್ ಧರಿಸುತ್ತಾರೆ.  ಅದೇ ರೀತಿ ಇಂದು ನಗರಗಳಲ್ಲಿ ಬಹುತೇಕ ಮಂದಿ ತಮ್ಮ ಮಕ್ಕಳನ್ನು ಪೂರ್ವ ಪ್ರಾಥಮಿಕ ಹಂತದಿಂದಲೇ ಪಾಶ್ಚಾತ್ಯ ಸಂಸ್ಕೃತಿಯಾದ ಇಂಗ್ಲೀಷ್ ಮಾಧ್ಯಮದಲ್ಲಿಯೇ ಓದಿಸುತ್ತಾರೆ.  ನಮ್ಮ ಸಂಸ್ಕೃತಿಯ ಬಗ್ಗೆ ಗೌರವ ಇದ್ದಿದ್ದರೆ ಈ ರೀತಿ ಇಂಗ್ಲೀಷ್ ಮಾಧ್ಯಮದಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದರೆ?  ನಮ್ಮ ಸಂಸ್ಕೃತಿಯ ಬಗ್ಗೆ ಗೌರವ ಇರುವವರು ಕನ್ನಡ ಮಾಧ್ಯಮದಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕಲ್ಲವೇ?  ನೈತಿಕ ಪೋಲೀಸ್ಗಿರಿ ಮಾಡುವವರು ಇದೇ ರೀತಿ ಇಂಗ್ಲೀಷ್ ಮಾಧ್ಯಮ ಶಾಲೆಗಳ ಮೇಲೆ ಧಾಳಿ ಏಕೆ ಮಾಡುವುದಿಲ್ಲ?  ನಮ್ಮ ಸಂಸ್ಕೃತಿಯ ಬಗ್ಗೆ ದೊಡ್ಡ ದೊಡ್ಡ ಭಾಷಣ ಬಿಗಿಯುವವರು ಮೊದಲು ಇಂಗ್ಲೀಷ್ ಮಾಧ್ಯಮ ಶಾಲೆಗಳ ಮೇಲೆ ಧಾಳಿ ಮಾಡಿ ಅಂಥ ಶಾಲೆಗಳನ್ನು ನಡೆಸದಂತೆ ತಡೆಯಬೇಕು.  ಅಂಥ ತಾಕತ್ತು ನೈತಿಕ ಪೋಲೀಸ್ಗಿರಿ ಮಾಡುವವರಿಗೆ ಇದೆಯೇ?

ಇಂದು ಬೆಂಗಳೂರಿನಂಥ ನಗರಗಳಲ್ಲಿ ಕನ್ನಡಿಗರೂ ಇಂಗ್ಲೀಷಿನಲ್ಲಿ ಮಾತಾಡುವುದು ದೊಡ್ಡಸ್ತಿಕೆಯ ವಿಷಯ ಆಗಿದೆ.  ಇದು ಯಾವ ಸಂಸ್ಕೃತಿ?  ಇದರ ಬಗ್ಗೆ ನೈತಿಕ ಪೊಲೀಸರು ಏಕೆ ಮೌನವಾಗಿದ್ದಾರೆ?  ಇಂಗ್ಲೀಷಿನಲ್ಲಿ ಮಾತಾಡುವವರ ಮೇಲೆ ಧಾಳಿ ಮಾಡುವ ಬೆದರಿಕೆ ಹಾಕಿ ಇದನ್ನು ನಿಲ್ಲಿಸಬಹುದಲ್ಲವೇ?  ಅಂಥ ತಾಕತ್ತು ನೈತಿಕ ಪೊಲೀಸರಿಗೆ ಏಕೆ ಇಲ್ಲ?  ಏಕೆ ಈ ವಿಷಯದಲ್ಲಿ ಇವರು ತಮ್ಮ ಪೌರುಷ ತೋರಿಸಿ ನಮ್ಮ ಭಾಷೆಯನ್ನು ಉಳಿಸಲು ಮುಂದಾಗುವುದಿಲ್ಲ?

ಭಾರತೀಯ ಸಂಸ್ಕೃತಿಯಲ್ಲಿ ಅವಿಭಕ್ತ ಕುಟುಂಬ ಪ್ರಧಾನವಾದುದು.  ಆದರೆ ಇಂದು ಎಲ್ಲರೂ ವಿಭಕ್ತ ಕುಟುಂಬದ ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಲ್ಲಿ ತೊಡಗಿಲ್ಲವೇ?  ತಂದೆ ತಾಯಿಯರನ್ನು ಹಳ್ಳಿಗಳಲ್ಲಿ ಏಕಾಂಗಿಯಾಗಿ ಬಿಟ್ಟು ಎಷ್ಟು ಜನ ಹಣದ ಬೆನ್ನ ಹಿಂದೆ ಬಿದ್ದು ಬೇರೆ ದೇಶಗಳಲ್ಲಿ, ಬೇರೆ ನಗರಗಳಲ್ಲಿ ಐಶಾರಾಮದ ಜೀವನದಲ್ಲಿ ಮುಳುಗಿಲ್ಲ?  ಹಾಗೆ ನೋಡುವುದಾದರೆ ನಗರ ಜೀವನವು ಕೂಡ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯೇ ಆಗಿದೆ.  ಪಾಶ್ಚಾತ್ಯ ದೇಶಗಳು ನಗರೀಕರಣದಲ್ಲಿ ಮೊದಲು ತೊಡಗಿದ್ದು ಈಗ ಭಾರತೀಯರೂ ತಮ್ಮ ಸಂಸ್ಕೃತಿಯಾದ ಹಳ್ಳಿ ಜೀವನವನ್ನು ತೊರೆದು ಪಾಶ್ಚಾತ್ಯರ ಅಂಧಾನುಕರಣೆಯಲ್ಲಿ ನಗರೀಕರಣಕ್ಕೆ ಬಲಿಯಾಗುತ್ತಿಲ್ಲವೇ?  ಪ್ರಜಾಪ್ರಭುತ್ವ ವ್ಯವಸ್ಥೆ ಕೂಡ ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯೇ ಆಗಿದೆ ಏಕೆಂದರೆ ಭಾರತದಲ್ಲಿ ಪ್ರಜೆಗಳು ಮತ ಹಾಕಿ ನಾಯಕರನ್ನು, ಆಡಳಿತ ನಡೆಸುವವರನ್ನು ಆರಿಸುವ ವ್ಯವಸ್ಥೆ ಇರಲೇ ಇಲ್ಲ.  ಇಲ್ಲಿ ಇದ್ದದ್ದು ಊಳಿಗಮಾನ್ಯ ಸ್ವರೂಪದ ರಾಜ, ಸಾಮಂತ, ಪಾಳೆಗಾರ ಇಂಥ ವ್ಯವಸ್ಥೆ ಮಾತ್ರ.

ಭಾರತದಲ್ಲಿ ಲೈಂಗಿಕ ವಿಷಯಗಳಲ್ಲಿ ಮಾತ್ರ ನೈತಿಕತೆಯ ಬಗ್ಗೆ ಭಾರೀ ದೊಡ್ಡ ದೊಡ್ಡ ಮಾತನ್ನು ಆಡಲಾಗುತ್ತದೆ ಹಾಗೂ ಭಾರೀ ಪ್ರತಿಭಟನೆ ನಡೆಯುತ್ತದೆ.  ಉಳಿದ ವಿಷಯಗಳಲ್ಲಿ ನೈತಿಕತೆಯ ಬಗ್ಗೆ ಪ್ರತಿಭಟನೆ, ಪ್ರತಿರೋಧ ತೋರುವವರು ಯಾರೂ ಇಲ್ಲ.  ಉದಾಹರಣೆಗೆ ಭ್ರಷ್ಟಾಚಾರ.  ಭ್ರಷ್ಟಾಚಾರದ ವಿರುದ್ಧ ನೈತಿಕ ಪೋಲೀಸ್ಗಿರಿ ನಡೆಸುವವರು ಚಕಾರ ಎತ್ತುವುದಿಲ್ಲ ಹಾಗೂ ಭ್ರಷ್ಟರ ಮೇಲೆ ಧಾಳಿ ನಡೆಸುವ ಬೆದರಿಕೆ ಹಾಕುವುದಿಲ್ಲ.  ಇವರು ಭ್ರಷ್ಟರ ಮೇಲೆ ಇದೇ ರೀತಿಯ ಅಬ್ಬರದ ಧಾಳಿ ಮಾಡಿದ್ದಿದ್ದರೆ ಭಾರತದಲ್ಲಿ ಲಂಚ ತೆಗೆದುಕೊಳ್ಳಲು ಯಾವನಿಗೆ ಧೈರ್ಯ ಬಂದೀತು?  ನೈತಿಕ ಪೋಲೀಸ್ಗಿರಿ ಮಾಡುವವರು ತಾಕತ್ತು ಇದ್ದರೆ ಭ್ರಷ್ಟ ಅಧಿಕಾರಿಗಳ ಮೇಲೆ, ಭ್ರಷ್ಟ ರಾಜಕಾರಣಿಗಳ ಮೇಲೆ ಅಬ್ಬರದಿಂದ ಧಾಳಿ ಮಾಡಿ ತಮ್ಮ ಪೌರುಷ ತೋರಿಸಿದರೆ ಭ್ರಷ್ಟಾಚಾರವನ್ನು ಭಾರತದಿಂದ ಹೇಳಹೆಸರಿಲ್ಲದಂತೆ ತೊಲಗಿಸಬಹುದು.  ಅಂಥ ಧೈರ್ಯ ಅವರಲ್ಲಿ ಇದೆಯೇ?