ಸುಗಂಧ ದ್ರವ್ಯಗಳು ಮತ್ತು ಆರೋಗ್ಯ: ವಸ್ತುಗಳಲ್ಲಿರುವ ಸುವಾಸನೆ ಆ ವಸ್ತುವಿನ ಮಾರಾಟ ದೊಂದಿಗೆ ಮುಕ್ತಾಯಗೊಳ್ಳುವುದು ಇಲ್ಲ. ಇದು ಗ್ರಾಹಕನ ಮನೆಯನ್ನೋ, ದೇಹವನ್ನೋ ಸೇರಿ ಅಲ್ಲಿ ಪರಿಣಾಮ ಬೀರುತ್ತದೆ. ಈ ಸುವಾಸನೆಗಳನ್ನು ನಿರಂತರವಾಗಿ ಬಳಸಿದಾಗ ನಮ್ಮ ದೇಹದಲ್ಲಿ ಆ ರಾಸಾಯನಿಕ ಹೆಚ್ಚು ಹೆಚ್ಚು ಸಂಗ್ರಹಗೊಂಡು ದುಷ್ಪರಿಣಾಮಗಳು ಉಂಟುಮಾಡುತ್ತವೆ. ನಿಮಗೆ ನೆನಪಿರಲಿ, ಇಂದು ಕೃತಕ ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಸುಮಾರು 3000 ರಾಸಾಯನಿಕ ವಿಷಗಳು ಬಳಕೆಯಾಗುತ್ತಿವೆ. ತಜ್ಞರ ಪ್ರಕಾರ, ಕಳೆದ 20 ವರ್ಷಗಳಲ್ಲಿ ಈ ಕೃತಕ ಸುವಾಸನೆಗಳ ಉತ್ಪಾದನೆ ಹಾಗೂ ಬಳಕೆ ಗಾಬರಿಗೊಳಿಸುವಷ್ಟು ಏರಿದೆ.

ಬಳಕೆಯಾಗುವ ರಾಸಾಯನಿಕಗಳು: ಈ ಕೃತಕ ಸುಗಂಧ ದ್ರವ್ಯಗಳಲ್ಲಿರುವ ರಾಸಾಯನಿಕಗಳಲ್ಲಿ ಹೆಚ್ಚಿನವು ಅಲರ್ಜಿ ತರುತ್ತವೆ. ಈ ರಾಸಾಯನಿಕಗಳು ಮೂಗನ್ನು ಪ್ರವೇಶಿಸುತ್ತಿದ್ದಂತೆಯೇ ಹೋಗು, ಗಂಟಲು ಹಾಗೂ ಕಣ್ಣುಗಳಲ್ಲಿ ಕಿರಿಕಿರಿ ಶುರುವಾಗುತ್ತದೆ. ಇವುಗಳ ತಯಾರಿಕೆಯಲ್ಲಿ ಪ್ರಮುಖವಾಗಿ ಬಳಕೆಯಾಗುವುದು ಪೆಟ್ರೋ ರಾಸಾಯನಿಕಗಳು- ಅಂದರೆ ಪೆಟ್ರೋಲಿಯಂ ಉತ್ಪನ್ನಗಳು. ಈ ಪೆಟ್ರೋ ರಾಸಾಯನಿಕಗಳಿಂದ ಏರ್ ರಿಫ್ರೆಷರ್ ಗಳು, ಸೋಪುಗಳು, ಡಿಟರ್ಜೆಂಟ್ ಗಳು, ಕ್ಲೀನರ್ ಗಳು, ಡಿಯೋಡ್ರೆಂಟ್ ಗಳು, ಲೋಷನ್ ಗಳು, ಪರ್ಫ್ಯೂಮ್ ಗಳು ಮತ್ತು ಇತರೆ ಸುಗಂಧ ದ್ರವ್ಯಗಳನ್ನು ತಯಾರಿಸುತ್ತಾರೆ. ಇವುಗಳಲ್ಲಿ ಬಳಕೆಯಾಗುವ ರಾಸಾಯನಿಕಗಳೆಂದರೆ ಬೆಂಜಿನ್, ಟಾಲೀನ್, ಕ್ಸೆಲೀನ್ ಮತ್ತು ಮೆಥನಾಲ್ ಗಳಂತಹ ಸುವಾಸನೆಯನ್ನು ಬೀರುವ ಪೆಟ್ರೋ ರಾಸಾಯನಿಕಗಳು.

ಸಂಭವನೀಯ ರೋಗಗಳು: ಈ ಕೃತಕ ಸುಗಂಧ ದ್ರವ್ಯಗಳನ್ನು ' ಟ್ರೇಡ್ ಮಾರ್ಕ್ ಸೆಂಟ್' ಗಳೆಂದೇ ಕರೆಯುತ್ತಾರೆ. ಇದು ಇಂದಿಗೂ ವ್ಯಾಪಾರಿ ಗುಟ್ಟಾಗಿಯೇ ಉಳಿದಿದೆ. ಇವುಗಳ ಬಳಕೆಯ ಮೇಲೆ ಯಾವುದೇ ನಿರ್ಬಂಧವಿಲ್ಲ. ಅಲ್ಲದೆ ಉತ್ಪನ್ನದ ಪೊಟ್ಟಣಗಳ ಮೇಲೆ ನಮೂದಿಸಬೇಕೆಂದು ಕಡ್ಡಾಯವೇನೂ ಇಲ್ಲ. ಈ ಬೆಂಜಿನ್ ಉತ್ಪನ್ನಗಳು ವಿಷಕಾರಿಯಾಗಿದ್ದು ಕ್ಯಾನ್ಸರ್., ಹುಟ್ಟಿದ ದೋಷಗಳು, ಕೇಂದ್ರ ನರಮಂಡಲದ ನ್ಯೂನತೆಗಳು, ಅಲರ್ಜಿ, ಚರ್ಮ ರೋಗಗಳು ಹಾಗೂ ಶ್ವಾಸಕೋಶದ ಕಾಯಿಲೆಗಳನ್ನು ತರುವುದರಲ್ಲಿ ಯಾವುದೇ ಸಂಶಯಗಳಿಲ್ಲ

ಮುಂದಿನ ಪೀಳಿಗೆಗೆ...: ಈ ಸುಗಂಧಗಳಲ್ಲಿರುವ ರಾಸಾಯನಿಕಗಳು ಉಸಿರಾಟ ಮತ್ತು ಚರ್ಮದ ಮೂಲಕ ನಮ್ಮ ದೇಹವನ್ನು ಸೇರುತ್ತವೆ. ಅಲ್ಲಿಂದ ನಮ್ಮ ರಕ್ತ ಪರಿಚಲನೆಗೆ ಸೇರಿ ನಮ್ಮ ಶ್ವಾಸಕೋಶದ ಮೂಲಕ ದೇಹಕ್ಕೆ ಸೇರುತ್ತವೆ. ಈ ಮಾರಕ ರಾಸಾಯನಿಕಗಳು ಬಳಸುವವರನ್ನು ಮಾತ್ರ ಬಾಧಿಸದೆ ಮುಂದಿನ ಪೀಳಿಗೆಗೂ ರವಾನೆಯಾಗಿ ದುಷ್ಪರಿಣಾಮಗಳನ್ನು ಉಂಟುಮಾಡುತ್ತವೆ ಎಂದು ಸಂಶೋಧನೆಗಳಿಂದ ದೃಡಪಟ್ಟಿದೆ.

(ಮುಗಿಯಿತು)

-ಕೆ. ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ