ಅಬ್ಬಾ...ಇದೆಂಥ ಕ್ರಿಕೆಟ್ ಆಟ ಅಂತ ನಿಮಗೆ ಅನಿಸುತ್ತಿದೆಯಲ್ಲಾ, ಬಾಲ್ಯದ ದಿನಗಳಲ್ಲಿ ಕ್ರಿಕೆಟ್ ಆಡಲು ಈಗಿನ ತರ ಬ್ಯಾಟ್, ಬಾಲ್ ಗಳು ಇರಲಿಲ್ಲ. ಆದರೆ ಹುಡುಗರಿಗೆ ಆಡದೇ ಇರೋದಕ್ಕೆ ಸಾಧ್ಯವೇ ಇಲ್ಲ. ಹಾಗಾಗಿ ಅವರು ಕೊತ್ತಲಿಗೆಯಿಂದ ಆಡುತ್ತಿದ್ದರು. ಕೊತ್ತಲಿಗೆ ಅಂದರೆ ತೆಂಗಿನ ಗರಿಗಳ ದಂಡನ್ನು ಸವಾರಿ ಮಾಡಿ ತಯಾರಿಸುತ್ತಿದ್ದುದು. ಅದನ್ನೇ ಬ್ಯಾಟ್ ಅಂತ ತಿಳಿದುಕೊಂಡು, ಬಟ್ಟೆಯ ಉಂಡೆಗಳನ್ನೇ ಬಾಲ್ ಮಾಡಿ ಆಡುತ್ತಿದ್ದರು. ಹೀಗೆ ಕೊತ್ತಲಿಗೆಯಿಂದ ಆಡುತ್ತಿದ್ದಾಗ ಹುಡುಗರಿಗೆ ಕಪ್ ಗೆದ್ದಷ್ಟೇ ಖುಷಿಯಾಗುತ್ತಿತ್ತು.
ಈಗ ಹೀಗೆ ಆಡುವುದು ನೋಡಲು ಸಿಗುವುದೇ ಇಲ್ಲ. ಹಿಂದಿನ ಕಾಲದ ಕೊತ್ತಲಿಗೆ ಬ್ಯಾಟ್ ಗಳು ಕಾಣೆಯಾಗಿ ಅವುಗಳ ಬದಲು ವಿನೂತನ ಮಾದರಿಯ ಮಾಡರ್ನ್ ಬ್ಯಾಟ್ ಗಳು ಬಂದಿವೆ. ಆದರೆ ನಮಗೆ ಕೊತ್ತಲಿಗೆಯಿಂದ ಆಡಿದಷ್ಟು ಖುಷಿ ಇಂತಹ ಬ್ಯಾಟ್ ಗಳಿಂದ ಸಿಗುವುದಿಲ್ಲ. ಆ ದಿನಗಳನ್ನು ಮತ್ತೆ ನೆನಪಿಸಿಕೊಳ್ಳಲು ಮೊನ್ನೆ ಬೆಳ್ತಂಗಡಿಯಲ್ಲಿ ಹುಡುಗರೆಲ್ಲಾ ಸೇರಿ ‘ಕೊತ್ತಲಿಗೆ ಕ್ರಿಕೆಟ್ ಟೂರ್ನಿ' ಅಂತ ಮಾಡಿದ್ದರು. ನನಗೊಮ್ಮೆ ಕೇಳಿ ಆಶ್ಚರ್ಯ ಆಯಿತು. ಜೊತೆಗೆ ನಗುನೂ ಬಂತು. ಏನಪ್ಪಾ...ಈ ಕಾಲದಲ್ಲೂ ಹೀಗೆ ಆಡುವವರಿದ್ದಾರಾ? ಅಂತ ಅಂದುಕೊಂಡೆ. ಇದು ಬರೀ ಮನೋರಂಜನೆಗೆ ಆಡಿದ್ದಲ್ಲ. ಗೆದ್ದವರಿಗೆ ನಗದು ಬಹುಮಾನ ಜೊತೆ ಟ್ರೋಫಿ ಕೂಡ ಕೊಟ್ಟಿದ್ದರು. ಅವರ ಈ ಪ್ರಯತ್ನಕ್ಕೆ ಮೆಚ್ಚುಗೆ ಸೂಸಲೇ ಬೇಕು. ಚಿಕ್ಕವರಿದ್ದಾಗ ಮನೋರಂಜನೆಗೆ ಆಡುತ್ತಿದ್ದ ಆಟ ಈಗ ಸ್ಪರ್ಧೆಯಾಗಿದೆ. ಏನೇ ಹೇಳಿ...ಕೊತ್ತಲಿಗೆಯಿಂದ ಆಡುವಾಗ ಆಗುವ ಖುಷಿಯೇ ಬೇರೆ, ಅದನ್ನು ವರ್ಣಿಸಲಾಗದು.
-ಆಯುಷಿ ನಾಯಕ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!