ಕಳೆದ ಜೂನ್ ತಿಂಗಳಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ರವರಿಂದ ಉದ್ಘಾಟನೆಗೊಂಡ ಕನಕಪುರ ರಸ್ತೆಯಲ್ಲಿರುವ ಇಸ್ಕಾನ್ ಸಂಸ್ಥೆಯ ರಾಜಾಧಿರಾಜ ಗೋವಿಂದ ದೇವಾಲಯಕ್ಕೆ ಇತ್ತೀಚೆಗೆ ಸಂಬಂಧಿಗಳೊಂದಿಗೆ ಭೇಟಿ ಕೊಟ್ಟಾಗ, ದೇವಸ್ಥಾನದ ಆವರಣದಲ್ಲಿ, ದೇವರ ಸನ್ನಿಧಿಯಲ್ಲಿ ಇರಬೇಕಾದ ಭಕ್ತಿ ಭಾವನೆ ಗಿಂತಲೂ ಹೆಚ್ಚಾಗಿ ಅಲ್ಲಿಯ ವೈಭವ, ಆಡಂಬರದ ವಾತಾವರಣ ನೋಡಿ ಮನಸ್ಸಿಗೆ ಎಲ್ಲೋ ಒಂದು ಕಡೆ ಖೇದ ಉಂಟಾಯಿತು. ದೇವರಿಂದ ನಾವು ಏನು ಬಯಸುತ್ತೇವೆ ಮತ್ತು ದೇವರು ನಮ್ಮಿಂದ ಏನು ನಿರೀಕ್ಷಿಸುತ್ತಾನೆ ಎನ್ನುವ ಜಿಜ್ಞಾಸೆ ಮನಸ್ಸಿನಲ್ಲಿ ಉಂಟಾಯಿತು. ನಾವು ದೇವರನ್ನು ಒಲಿಸಿಕೊಳ್ಳಲು ದೇವರಿಗಿಷ್ಟವಾದದ್ದನ್ನು ಮಾಡಬೇಕೋ ಅಥವಾ ನಮಗೆ ಇಷ್ಟವಾದದ್ದನ್ನು ದೇವರ ಮೇಲೆ ಹೇರಬೇಕೋ ತಿಳಿಯದಾಗಿದೆ. ಕನಕಪುರ ರಸ್ತೆಯಲ್ಲಿ, ಈ ನಗರದ ಪ್ರಮುಖ ಸ್ಥಳದಲ್ಲಿ  ಸುಮಾರು 28 ಎಕರೆಯಲ್ಲಿ ತಲೆಯೆತ್ತಿರುವ ಈ ಬೃಹದಾಕಾರದ ದೇವಸ್ಥಾನದ ಹೆಚ್ಚಿನ ಭಾಗ ಗ್ರಾನೈಟ್ ನೆಲಹಾಸು, ಗಾಜಿನ ಬೃಹತ್ ಕಿಟಕಿಗಳು, ಅನಾವಶ್ಯಕವಾಗಿ ಸುತ್ತು ಬಳಸಿ ಹೋಗುವ ಪಾದಚಾರಿ ಮಾರ್ಗಗಳು, ಇವೆಲ್ಲಾ ಬೇಕಾ ಎನಿಸುತ್ತದೆ.  ಝಗಮಗಿಸುವ ವಿದ್ಯುತ್, ಪ್ರಖರವಾದ ಬೆಳಕಿನಲ್ಲಿ ಮಿಂಚುವ ಬಂಗಾರದ ಆಭರಣಗಳನ್ನು ಹಾಕಿ ಅವುಗಳ ಮುಂದೆ ದೇವರ ವಿಗ್ರಹ ಮಂಕಾಗಿ ಕಾಣುವಂತಾಗಿದೆ. ಜಾಗತಿಕ ತಾಪಮಾನ ಏರಿಕೆ, ವಾಯುಮಾಲಿನ್ಯ, ಪರಿಸರ ಮಾಲಿನ್ಯ, ಇಂತಹ ಗಂಭೀರ ಸಮಸ್ಯೆಗಳಿಗೆ ಉತ್ತೇಜನ ಕೊಡುವ ಇಂತಹ ಯೋಜನೆಗಳ  ಬದಲು,ಇರುವ 28 ಎಕರೆಯಲ್ಲಿ, ಮೂರು ಎಕರೆ ಕಟ್ಟಡ ದೇವಸ್ಥಾನಗಳಿಗೆ ಮೀಸಲಿಟ್ಟು, ಉಳಿದ 25 ಎಕರೆಯಲ್ಲಿ ಗಿಡ ಮರ ಬೆಳೆದು ಲಾಲ್ಬಾಗ್, ಕಬ್ಬನ್ ಪಾರ್ಕ್ ನಂತಹ ವಾತಾವರಣ ಕಲ್ಪಿಸ ಬಹುದಲ್ಲವೆ. ಪರಿಸರ ಸಂರಕ್ಷಣೆಗೆ ಪೂರಕವಾಗಬಹುದಲ್ಲವೇ?ಅಕ್ಷಯಪಾತ್ರೆಯಂತಹ  ಸಮಾಜ ಮುಖಿ ಕಾರ್ಯಕ್ರಮಗಳನ್ನು ಹೊಂದಿರುವ ಇಸ್ಕಾನ್ ಸಂಸ್ಥೆ , ಈ ನಿಟ್ಟಿನಲ್ಲಿ ಗಮನ ಹರಿಸಿ, ಕನಿಷ್ಠ ಜಾಗದಲ್ಲಿ ದೇವಸ್ಥಾನದ ಕಟ್ಟಡ ಕಟ್ಟಿ ಉಳಿದ ಭಾಗದಲ್ಲಿ ಮರ ಗಿಡ ಬೆಳೆಸಿ ಪರಿಸರ ಸಂರಕ್ಷಣೆಗೆ ಪೂರಕವಾದ ಅಂತಹ ಯೋಜನೆಗಳನ್ನು ಹಮ್ಮಿಕೊಳ್ಳವುದೆಂದು ನಿರೀಕ್ಷಿಸಬಹುದೇ. ಸಾರ್ವಜನಿಕರ ದೇಣಿಗೆಯಿಂದ ಅನುಷ್ಠಾನ ಗೊಳಿಸುತ್ತಿರುವ ಈ ಯೋಜನೆಯಿಂದ, ಇಸ್ಕಾನ್ ಸಂಸ್ಥೆಯ, ಪ್ರತಿಷ್ಠೆ ಹೆಚ್ಚಿಸಿಕೊಳ್ಳುವ ಬದಲು ಸಾರ್ವಜನಿಕರ ಜೀವನಕ್ಕೆ ಅನುಕೂಲ ಮಾಡುವುದು ಸಂಸ್ಥೆಯ ಬಾಧ್ಯತೆಯಲ್ಲವೆ.  ಈ ನಿಟ್ಟಿನಲ್ಲಿ ಇದೇ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮ, ಕೊಯಂಬತೂರಿನ ಈಶ ಫೌಂಡೇಶನ್ ಇವರುಗಳು ಮಾದರಿಯಾಗಬಹುದು,