ಸಂಪದ ಶ್ರಾವ್ಯ · ಸಂಚಿಕೆ 3
browser does not support audio playback? Download MP3
ಬೆಳಗಾವಿ ಮತ್ತು ಗಡಿಯಲ್ಲಿರುವ ಕೆಲವು ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ನಿರ್ಣಯವೊಂದನ್ನು ಬೆಳಗಾವಿ ಮಹಾನಗರ ಪಾಲಿಕೆ ಅಂಗೀಕರಿಸಿತ್ತು. ಇದಕ್ಕೆ ಕರ್ನಾಟಕಾದ್ಯಂತ ಪ್ರತಿಭಟನೆ ವ್ಯಕ್ತವಾಗಿದೆ.(ಈಗ ಕರ್ನಾಟಕ ಸರಕಾರ ಬೆಳಗಾವಿ ಮಹಾನಗರ ಪಾಲಿಕೆಯನ್ನು ರದ್ದು ಮಾಡಿ ಆಡಳಿತಾಧಿಕಾರಿಯನ್ನು ನೇಮಿಸಿದೆ.) ಇತ್ತೀಚೆಗೆ ಬೆಳಗಾವಿ ನಗರ ಪಾಲಿಕೆಯ ಮೇಯರ್ ವಿಜಯ್ ಪಾಂಡುರಂಗ ಮೋರೆ ಬೆಂಗಳೂರಿಗೆ ಬಂದು ಶಾಸಕರ ಭವನದಲ್ಲಿ ಇಳಿದುಕೊಂಡಿದ್ದಾಗ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು 'ಮಿಂಚಿನ ದಾಳಿ' ನಡೆಸಿ ವಿಜಯ್ ಮೋರೆಯವರ ಮುಖಕ್ಕೆ ಮಸಿ ಬಳಿದು ಹಲ್ಲೆ ನಡೆಸಿ ತಮ್ಮ ಕನ್ನಡಾಭಿಮಾನವನ್ನು ತೋರಿಸಿದರು. ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರ ಹಿಂಸಾತ್ಮಕ ಪ್ರತಿಭಟನೆ ಈಗ ಬಿಸಿಯೇರಿದ ಚರ್ಚೆಗಳಿಗೆ ಕಾರಣವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಈ ಮಸಿಬಳಿಯುವಿಕೆಯನ್ನು 'ಕ್ರಿಯೆಗೆ ತಕ್ಕ ಪ್ರತಿಕ್ರಿಯೆ'ಎಂದು ಸಮರ್ಥಿಸಿಕೊಂಡರು. ಇದೇ ವೇಳೆ ಜ್ಞಾನಪೀಠ ಪುರಸ್ಕೃತ ಯು.ಆರ್. ಅನಂತಮೂರ್ತಿ 'ಕನ್ನಾಡಭಿಮಾನ'ದ ಹಿಂಸಾತ್ಮಕ ಅಭಿವ್ಯಕ್ತಿಯನ್ನು ವಿರೋಧಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಚಂದ್ರಶೇಖರ ಪಾಟೀಲ್ 'ಮಸಿಬಳಿದದ್ದನ್ನು ವಿರೋಧಿಸುವವರು ಮಸಾಲೆ ದೋಸೆ ಸಾಹಿತಿಗಳು'ಎಂದು ಟೀಕಿಸಿದರು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಂಪದ ಬಳಗ ಯು.ಆರ್ .ಅನಂತಮೂರ್ತಿಯವರನ್ನು ಸಂದರ್ಶಿಸಿದೆ. ಹಿಂಸಾತ್ಮಕ ಕನ್ನಡಾಭಿಮಾನವನ್ನು ಗೋಕಾಕ್ ಚಳವಳಿಯ ಕಾಲದಿಂದಲೂ ವಿರೋಧಿಸುತ್ತಲೇ ಬಂದಿರುವ ಅನಂತಮೂರ್ತಿ ಈ ಸಂದರ್ಶನದಲ್ಲಿ ತಮ್ಮ ಬಗೆಗಿನ ಟೀಕೆಗಳಿಗೆ ಉತ್ತರಿಸಿದ್ದಾರೆ. ಜತೆಗೆ ಕನ್ನಡದ ಸಂದರ್ಭದಲ್ಲಿ ಭಾಷೆಯ ಅಭಿವೃದ್ಧಿ, ಭಾಷಾಭಿಮಾನ, ಭಾಷಾಂಧತೆಗಳ ಕುರಿತ ತಮ್ಮ ಚಿಂತನೆಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ಸಂದರ್ಶನದ ಆಡಿಯೋ ಕೇಳಲು ಇಲ್ಲಿ ಕ್ಲಿಕ್ ಮಾಡಿ. (28 MB) ಈ ಸಂದರ್ಶನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನೂ, ಅದರಲ್ಲಿ ಚರ್ಚಿಸಲಾಗಿರುವ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನೂ ಸಂಪದದಲ್ಲಿ ಕಾಮೆಂಟ್ ಮೂಲಕ ತಿಳಿಸಿ. ಸಂದರ್ಶನದ ವೇಳೆ ತೆಗೆದ ಕೆಲವು ಫೋಟೋಗಳು:

ಅವರ ಆಫೀಸಿನಲ್ಲಿ.
ಯು ಆರ್ ಅನಂತಮೂರ್ತಿಯವರ ರೀಡಿಂಗ್ ರೂಮ್ ಪಕ್ಕದಲ್ಲಿದ್ದ ಆಂಜನೇಯ.
ನಮಸ್ಕಾರ. ತಮಗೆಲ್ಲ ಸಂಪದ ಪಾಡ್ ಕ್ಯಾಸ್ಟಿಂಗ್ನ ಮೂರನೇ ಸಂಚಿಕೆಗೆ ಸ್ವಾಗತ. ಈ ಬಾರಿಯ ನಮ್ಮ ಅತಿಥಿ ಕನ್ನಡದ ಪ್ರಸಿದ್ಧ ಲೇಖಕರೂ ಚಿಂತಕರೂ ಆಗಿರುವ ಜ್ಞಾನಪೀಠ ಪುರಸ್ಕೃತ ಯು.ಆರ್.ಅನಂತಮೂರ್ತಿಯವರು.
ಸರ್, ನಮ್ಮೆಲ್ಲ ಕೇಳುಗರ ಪರವಾಗಿ ಸಂಪದ ಪಾಡ್ ಕ್ಯಾಸ್ಟಿಂಗ್ ಗೆ ನಿಮ್ಮನ್ನು ಸ್ವಾಗತಿಸುತ್ತಿದ್ದೇನೆ.
ಪ್ರಶ್ನೆಗಳು
ಪ್ರಶ್ನೆ ೧ | ಪ್ರಶ್ನೆ ೨ | ಪ್ರಶ್ನೆ ೩ | ಪ್ರಶ್ನೆ ೪ | ಪ್ರಶ್ನೆ ೫ | ಪ್ರಶ್ನೆ ೬
ಪ್ರಶ್ನೆ ೧
ಹಿಂಸಾತ್ಮಕವಾದ ಕನ್ನಡಾಭಿಮಾನ ಮತ್ತೆ ಪ್ರಬಲವಾಗುತ್ತಾ ಇರುವ ಹಾಗೆ ಕಾಣಿಸುತ್ತಿದೆ. ಈ ಬಾರಿ ಕನ್ನಡಾಭಿಮಾನವನ್ನು ಮೂಲಭೂತವಾದದಂತೆ ಪ್ರತಿಪಾದಿಸುತ್ತಿರುವವರಿಗೆ ಕೆಲವರು ಲೇಖಕರು, ಸಾಹಿತಿಗಳ ಬೆಂಬಲ ಕೂಡ ದೊರೆಯುತ್ತಿದೆ. ಇದೊಂದು ಅಪಾಯಕಾರಿ ಬೆಳವಣಿಗೆ ಅನ್ನಿಸ್ತಾ ಇದೆಯಲ್ಲ?!
ಉತ್ತರ
ತುಂಬ ಅಪಾಯಕಾರಿ ಅನ್ನಿಸುತ್ತೆ. ನಾನು ಗೋಕಾಕ್ ಚಳವಳಿಯನ್ನೂ ವಿರೋಧಿಸಿದ್ದೆ. ಆಗಲೂ ನನ್ನ ನಿಲುವು ಬಹಳ ಸ್ಪಷ್ಟವಾಗಿತ್ತು. ನಮ್ಮ ಮಾಧ್ಯಮ ಕನ್ನಡವಾಗಬೇಕು ಅಂತ. ನಮ್ಮೆಲ್ಲರ ಕಲಿಕೆಯ ಮಾಧ್ಯಮ ಕನ್ನಡ ಭಾಷೆಯಾಗಬೇಕು. ಆಮೇಲೆ ನನ್ನ ನಿಲುವು ಹೀಗೆ. ನನ್ನ ಮಗ ಮಹಾರಾಷ್ಟ್ರದಲ್ಲಿ ಓದುತ್ತಿದ್ದರೆ ಅವನ ಕಲಿಕೆಯ ಮಾಧ್ಯಮ ಮರಾಠಿಯಾಗಬೇಕು. ಒಬ್ಬ ಮಹಾರಾಷ್ಟ್ರದವನು ಕರ್ನಾಟಕದಲ್ಲಿದ್ದರೆ ಅವನ ಕಲಿಕೆಯ ಮಾಧ್ಯಮ ಕನ್ನಡ ಆಗಬೇಕು. ಆದರೆ, ಮರಾಠಿ ಭಾಷೆಯನ್ನು ಅವನಿಗೆ ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗಬೇಕು. ಹಾಗಾಗಿ, ಭಾಷೆಯಾಗಿ ಮರಾಠಿಯನ್ನು ಕಲಿಯಬೇಕು. ಮಾಧ್ಯಮವಾಗಿ ಆಯಾಯ ದೇಶದ ಭಾಷೆಗಳೇ ಮಾಧ್ಯಮವಾಗಬೇಕು. ತಮಿಳುನಾಡಿನಲ್ಲಿ ನಾನು ಇದ್ದರೆ ತಮಿಳು ನನ್ನ ಮಾಧ್ಯಮ. ಆದರೆ, ಕನ್ನಡ ಉಳಿಸಿಕೊಳ್ಳುತ್ತೇನೆ.
ನಾನು ನಮ್ಮ ಭಾಷೆಗಳನ್ನು ಮೂರು ವರ್ಗವಾಗಿ ವಿಂಗಡಿಸುತ್ತೇನೆ. ಮೊದಲನೆಯದು, ಮನೆ ಮಾತು, ಬೀದಿ ಮಾತು, ಅಟ್ಟದ ಮಾತು.
ಮನೆಮಾತು ಅಂದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹಳ ಜನರಿಗೆ ಕೊಂಕಣಿ ಮನೆಮಾತು ಅಥವಾ ತುಳು ಮನೆಮಾತು. ಮುಸ್ಲಿಮರಿಗೆ ಉರ್ದು ಮನೆಮಾತು. ಮನೆಮಾತು ನಮಗೆ ಬಹಳ ಅಗತ್ಯ. ಯಾಕೆಂದರೆ, ನಮಗೆ ಸಾಂಸ್ಕೃತಿಕವಾಗಿ ಅಗತ್ಯ. ನಮ್ಮ ಮನೆಯಲ್ಲಿ ನನ್ನ ಮಗಳು ಮದುವೆ ಆಗಬೇಕಿದ್ದರೆ, ನಾನು ಮುಸ್ಲಿಮ್ ಆಗಿದ್ದರೆ, ನನ್ನ ಮಗಳಿಗೆ ಉರ್ದು ಬರುವುದಾಗಿದ್ದರೆ ಹೈದರಾಬಾದ್ ನಲ್ಲಿ ಮದುವೆಯಾಗಬಹುದು. ನಾನು ಅಯ್ಯಂಗಾರ್ ಆಗಿದ್ದರೆ, ನನ್ನ ಮಗಳಿಗೆ ತಮಿಳು ಬರುವುದಾಗಿದ್ದರೆ, ಅವಳು ತಮಿಳುನಾಡಿನಲ್ಲಿ ಮದುವೆ ಆಗಬಹುದು. ಇಂತಹ ಅಗತ್ಯಗಳೂ ಇದ್ದಾವೇ ನಮ್ಮಲ್ಲಿ. ನಮ್ಮ ಭಾಷೆ ಅನ್ನುವುದು ಮನೆಮಾತಾಗಿ ಆ ದೃಷ್ಟಿಯಲ್ಲಿ ಬಹಳ ಅಗತ್ಯ.
“ಬೀದಿಮಾತು” ಅಂದರೆ, ನಮ್ಮ ಕನ್ನಡ ಕರ್ನಾಟಕದಲ್ಲಿ ಬೀದಿಮಾತು. ತಮಿಳುನಾಡಿನಲ್ಲಿ ತಮಿಳು ಬೀದಿಮಾತು. ಈ ಬೀದಿಮಾತು ನಮ್ಮ ಜ್ಞಾನಕ್ಕೆ ಅಗತ್ಯ ಯಾಕೆಂದರೆ, ನಾವು ನಮ್ಮ ಸುತ್ತಲಿನ ವಾತಾವರಣದಿಂದಲೂ ಅನೇಕ ಜ್ಞಾನವನ್ನು ಸಂಗ್ರಹಿಸುತ್ತಿರುತ್ತೇವೆ. ನಮ್ಮ ಬುದ್ಧಿ ಬೆಳೆಯವುದು ಬೀದಿಯಲ್ಲಿ. ಹಾಗಾಗಿ, ಬೀದಿಮಾತು ಬಹಳ ಅಗತ್ಯ. ಇಲ್ಲೊಬ್ಬ ಫ್ರಾನ್ಸ್ ನವನು ಬಂದು ಇರುತ್ತಾನೆಂದರೆ, ಆ ಫ್ರೆಂಚ್ ಮಗುವಿಗೆ ಕನ್ನಡ ಗೊತ್ತಿರಬೇಕು. ಇಲ್ಲದಿದ್ದರೆ ತನ್ನ ವಾತಾವರಣದಿಂದ ಕಲಿಯುವುದಕ್ಕೆ ಆಗುವುದಿಲ್ಲ. ನನ್ನ ಮಗು ಫ್ರಾನ್ಸ್ ನಲ್ಲಿ ಇರುವುದಾದರೆ ಫ್ರೆಂಚ್ ಗೊತ್ತಿರಬೇಕು. ಯಾಕೆಂದರೆ, ಫ್ರಾನ್ಸ್ ನ ವಾತಾವರಣದಿಂದ ಕಲಿಯುವುದಕ್ಕೆ. ಅದು ಬೀದಿಮಾತು.
ಈ ಬೀದಿಮಾತು, ಮನೆಮಾತು ಅಲ್ಲದೆ “ಅಟ್ಟದ ಮಾತು” ಅಂತ ಒಂದು ಇದೆ. ಅದು ಬೇರೆ ದೇಶದ ಸಂಪರ್ಕ ಮಾಡುವುದಕ್ಕೆ ಹಿಂದೆ ಸಂಸ್ಕೃತ ಇತ್ತು, ಆಮೇಲೆ ಪರ್ಷಿಯನ್, ನಮ್ಮ ಅಟ್ಟದ ಮಾತಾಯಿತು, ಸಂಸ್ಕೃತ, ಪರ್ಷಿಯನ್. ಈಗ ಇಂಗ್ಲಿಶ್ ಅಟ್ಟದ ಮಾತಾಗಿದೆ. ಅದು ಬೇಕಾಗುತ್ತೆ. ಯಾಕೆಂದರೆ, ಬೇರೆಯವರ ಜೊತೆ ಸಂಪರ್ಕ ಮಾಡುವುದಕ್ಕೆ. ನಾವು ಏನು ಮಾಡುತ್ತಿದ್ದೇವೆಂದರೆ, ನಮ್ಮ ಅಟ್ಟದ ಮಾತನ್ನೇ ನಮ್ಮ ಬೀದಿಮಾತು ಮಾಡಿಕೊಳ್ಳುತ್ತೇವೆ. ಯಾಕೆಂದರೆ, ಬೀದಿಮಾತು ಬೇಕಾಗಿಲ್ಲ ಅಂತ. ಹಾಗೇನೇ ಮನೆಮಾತು ಸಾಕು ಅನ್ನುವಂತಹವರು ಬೀದಿಮಾತು ಬೇಕಾಗಿಲ್ಲ ಅಂತಾರೆ. ಅದು ಬಹಳ ತಪ್ಪು ಅಂತ ನಾನು ಹೇಳುತ್ತೇನೆ. ಯಾಕೆ ತಪ್ಪು ಅಂದರೆ, ಮನುಷ್ಯನ ಮನಸ್ಸಿನ ಬೆಳವಣಿಗೆಯ ದೃಷ್ಟಿಯಿಂದಲೇ ಇದು ಒಳ್ಳೆಯದಲ್ಲ. ಅದರಿಂದ “ಭಾಷಾ ಅಂಧ”ನ ರೀತಿಯಲ್ಲಿ ಭಾಷೆಯ ಬಗ್ಗೆ ಅಭಿಮಾನಪಡುವವರು ಎಲ್ಲೋ ಒಂದು ಕಡೆ ತಮ್ಮ ಮಾನವೀಯತೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಈಗ ನಾನು ಬೆಳಗಾವಿಯಲ್ಲಿದ್ದೇನೆ ಎಂದಿಟ್ಟುಕೊಳ್ಳಿ. ಬೆಳಗಾವಿಯಲ್ಲಿ ಹೆಚ್ಚು ಜನ ಮರಾಠಿ ಮಾತನಾಡುತ್ತಾರೆ. ಹೇಗೆಂದರೆ, ಕಾಸರಗೋಡಿನಲ್ಲಿ ಹೆಚ್ಚು ಜನ ಕನ್ನಡ ಮಾತನಾಡುವ ಹಾಗೆ. ಕಾಸರಗೋಡಿನಲ್ಲಿ ಒಂದು ಮುನಿಸಿಪಾಲಿಟಿಯಾಗಿ ಅವರು ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂದು ನಿರ್ಣಯ ಮಾಡಿದ್ದರು ಅಂತಿಟ್ಟುಕೊಂಡರೆ, ನಾವು ಇಲ್ಲಿ ಚಪ್ಪಾಳೆ ತಟ್ಟುತ್ತಿದ್ದೆವು. ಹಾಗೆ ಒಂದು ನಿರ್ಣಯ ಮಾಡುವುದು ಅವರ ಭಾಷಾಭಿಮಾನದಿಂದ ಮಾತ್ರವಲ್ಲ. ಕಾಸರಗೋಡಿನಲ್ಲಿರುವವರಿಗೆ ಬಹಳ ಮಂದಿ ನೆಂಟರು, ಇಷ್ಟರು ಎಲ್ಲ ಇರುವುದು ಮಂಗಳೂರಿನಲ್ಲಿ. ಹಾಗಾಗಿ, ಹತ್ತಿರ ಇರಬೇಕು ಅನ್ನಿಸುತ್ತೆ. ಬೆಳಗಾವಿಯವರಿಗೆ ಮಹಾರಾಷ್ಟ್ರ ಹತ್ತಿರದಲ್ಲಿರಬೇಕು ಎಂದೆನಿಸುತ್ತೆ. ಇದು ಸಹಜವಾದ ಸ್ಥಿತಿ. ಆದರೆ, ನಾನು ಮರಾಠಿ ಸೋದದರಿಗೆ ಏನು ಹೇಳುವುದಕ್ಕೆ ಇಷ್ಟಪಡುತ್ತೇನೆಂದರೆ, ನೋಡಪ್ಪ, ಕರ್ನಾಟಕದಲ್ಲಿರುವುದು ಒಂದು ಲಾಭಾನೇ ಆಗಬಹುದು. ಕರ್ನಾಟಕಕ್ಕೂ ಮಹಾರಾಷ್ಟ್ರಕ್ಕೂ ನಡುವೆ ಒಂದು ಸೇತುವೆ ಕಟ್ಟಬೇಕು. ಆ ಸೇತುವೆ ಕಟ್ಟುವ ಜನರೆಲ್ಲ ಇನ್ನು ಮುಂದೆ ಬೆಳಗಾವಿಯಲ್ಲಿರುತ್ತಾರೆ. ಯಾಕೆಂದರೆ, ಅವರಿಗೆ ಮರಾಠಿಯೂ ಗೊತ್ತಿರುತ್ತೆ, ಇಡೀ ಕನ್ನಡನಾಡಿನ ಬೀದಿಮಾತು ಕನ್ನಡವಾದ್ದರಿಂದ ನೀವು ಬೆಂಗಳೂರಿಗೆ ಬಂದರೆ, ಬೇರೆ ಊರಿಗೆ ಹೋದರೆ ನಿಮಗೆ ಕೆಲಸ ಮಾಡುವುದಕ್ಕೆ ಕನ್ನಡ ಗೊತ್ತಿರಲೇಬೇಕು. ಆದರೆ, ಕನ್ನಡ ಮಾಧ್ಯಮವನ್ನು ಒಪ್ಪಿಕೊಳ್ಳಿ. ಮರಾಠಿಯನ್ನು ಭಾಷೆಯಾಗಿ ಉಳಿಸಿಕೊಳ್ಳಿ. ಎರಡರ ನಡುವೆ ಸೇತುವೆಯನ್ನು ಕಟ್ಟಿ. ಅದರಿಂದ, ಕನ್ನಡವೂ ಶ್ರೀಮಂತವಾಗುತ್ತೆ, ಆಗುತ್ತೆ, ಮರಾಠಿಯೂ ಶ್ರೀಮಂತವಾಗುತ್ತೆ. ಈ ಥರದ್ದು ಯಾರೂ ಯೋಚನೆ ಮಾಡುತ್ತಿಲ್ಲ. ಇದು ಬಹಳ ದುಃಖದ ಮಾತು. ನಿಮಗೊಂದು ಗೊತ್ತಿರಬೇಕು, ನಮಗಾರಿಗೂ ಗೊತ್ತಿಲ್ಲ. ಅದನ್ನು ಹೇಳುತ್ತಿದ್ದೇನೆ. ಧಾರವಾಡದಲ್ಲಿ ಕುಲಕರ್ಣಿ ಅಂತ ಒಬ್ಬರು ಇದ್ದರು. ಅವರು ಮಹಾರಾಷ್ಚ್ರದ ಅತ್ಯಂತ ಪ್ರಸಿದ್ಧ ಸಣ್ಣ ಕತೆಗಾರ. ಅವರು ಎಷ್ಟು ಪ್ರಸಿದ್ಧರೆಂದರೆ, ಮರಾಠಿ ಜನ ಕುಲಕರ್ಣಿಗಿಂತ ಬೆಟರ್ ಶಾರ್ಟ್ ಸ್ಟೋರಿ ರೈಟರ್ ಈ ಕಾಲದಲ್ಲಿ ಇರಲಿಲ್ಲ ಅಂತಾರೆ. ಆದರೆ, ಆತ ಬಹಳ ಒಂಟಿ ಜೀವಿ ಅಂತೆ. ಏಕಾಕಿ. ಇಂಗ್ಲೀಶ್ ಮೇಷ್ಟ್ರಾಗಿ ಧಾರವಾಡದಲ್ಲಿ ಇಡೀ ಜೀವನ ಇದ್ದು, ಸತ್ತಿದ್ದಾರೆ. ಅವರದೊಂದು ಮನೆ ಇದೆ. ನನಗೆ ಮರಾಠಿ ಸ್ನೇಹಿತರೆಲ್ಲ ಅವರ ಮನೆಯನ್ನು ಒಂದು ಸ್ಮಾರಕವನ್ನಾಗಿ ಮಾಡಿ ಇಟ್ಟುಕೊಳ್ಳಬೇಕು ಅಂತಿದ್ದೇವೆ ಎಂದು ಹೇಳುತ್ತಿದ್ದರು. ನನ್ನ ಕರ್ತವ್ಯ ಏನೆಂದರೆ, ಆ ಮನೆಯನ್ನು ಸ್ಮಾರಕ ಮಾಡುವುದು. ಒಬ್ಬ ಕನ್ನಡ ಲೇಖಕನಾಗಿ. ಯಾಕೆಂದರೆ, ಇಲ್ಲಿ ಇದ್ದು ಒಬ್ಬ ಮರಾಠಿ ಲೇಖಕನಾಗಿದ್ದಾರೆ. ನಮಗೆ ಬೇಂದ್ರೆ ಇದ್ದಾರೆ, ಮಾಸ್ತಿ ಇದ್ದಾರೆ. ತುಳು ಮಾತನಾಡುತ್ತಾ ಇದ್ದವರು ಕನ್ನಡ ಲೇಖಕರಾಗಿದ್ದಾರೆ.
ಈ ಸಂದರ್ಭದಲ್ಲಿ ನನಗೆ ಬಹಳ ದುಃಖ ಆಗಿದ್ದು ತೇಜಸ್ವಿ ಹಾಗೆ ಮಾತನಾಡಿದಾಗ. ಪಾಟೀಲ್ ಮಾತನಾಡಿದಾಗಲೂ ಬಹಳ ದುಃಖವಾಯಿತು. ಯಾಕೆಂದರೆ, ಅವರು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರು. ಅಂದರೆ, ನಮ್ಮನ್ನೆಲ್ಲ ರೆಪ್ರಸೆಂಟ್ ಮಾಡುವವರು. ನಾವೆಲ್ಲರೂ ಉಪಯೋಗಕ್ಕೆ ಬಾರದಿರುವ ಸಾಹಿತಿಗಳು ಅಂತ ಅಂದಿದ್ದಾರೆ. ಅವರೇನಾದರೂ ಧಾರವಾಡದಲ್ಲಿದ್ದುಕೊಂಡು ಆ ಮಾತನಾಡಿದ್ದಿದ್ದರೆ, ಅವರ ಸ್ವಭಾವಕ್ಕೆ ತಕ್ಕ ಹಾಗೆ ಮಾತನಾಡಿದ್ದಾರೆ ಎಂದು ತಿಳಿದಿರುತ್ತಿದ್ದೆ. ಆದರೆ, ಈಗ ಅವರು ತಮ್ಮ ಸ್ವಭಾವವನ್ನು ಮೀರಿದವರಾಗಬೇಕಿತ್ತು. ಯಾಕೆಂದರೆ, ಅಧ್ಯಕ್ಷರಾಗಿದ್ದಾರೆ. ಅವರು ಹಾಗೆ ಹೇಳಬಾರದಾಗಿತ್ತು. ನನ್ನ ದೃಷ್ಟಿಯಲ್ಲಿ ಅದು ಕನ್ನಡ ಸಾಹಿತ್ಯ ಪರಿಷತ್ ಅಲ್ಲ. ಕರ್ನಾಟಕ ಸಾಹಿತ್ಯ ಪರಿಷತ್ ಆಗಬೇಕಾಗಿತ್ತು. ಹಿಂದೆ ಹಾಗೆಯೇ ಕರೆದಿದ್ದರು ಅದನ್ನ. ಅಂದರೆ, ಕರ್ನಾಟಕದ ಬೇರೆ ಭಾಷೆಗಳನ್ನು ಕೂಡ ಅಭಿಮಾನದಿಂದ ಕಾಣಬೇಕು ಅಂತ. ಈಗ ಮರಾಠಿಯೂ ಕೂಡ ಕರ್ನಾಟಕದ ಒಂದು ಭಾಷೆ.
ಪ್ರಶ್ನೆ ೨
ಕರ್ನಾಟಕದ ಸಂದರ್ಭದಲ್ಲಿ ಈಗ ಐದು ಬಗೆಯ ಹಿಂಸೆಗಳು ಬಹಳ ಸ್ಪಷ್ಟವಾಗಿ ಕಾಣಿಸುತ್ತಾ ಇವೆ ಸರ್. ಒಂದು, ಕೋಮುವಾದಿ ಹಿಂಸೆ. ಎರಡನೆಯದು ಪ್ರಭುತ್ವದ ಹಿಂಸೆ. ಅಂದರೆ, ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳನ್ನೂ ಜನ ಹಿತಕ್ಕೆ ವಿರುದ್ಧವಾದ ಸರಕಾರದ ನಿರ್ಧಾರಗಳನ್ನೂ ಬಹಳ ಹಿಂಸಾತ್ಮಕವಾಗಿ ಅನುಷ್ಠಾನಕ್ಕೆ ತರುತ್ತಿರುವಂತಹ ಪ್ರಭುತ್ವದ ಹಿಂಸೆ. ಮೂರನೆಯದು, ಪ್ರಭುತ್ವದ ಹಿಂಸೆಗೆ ಪ್ರತಿಕ್ರಿಯೆಯೇನೋ ಅನ್ನೋ ಥರ ಸಶಸ್ತ್ರ ಹೋರಾಟ ಮಾಡುತ್ತೇವೆ ಎನ್ನುತ್ತ ಮಾವೊವಾದಿಗಳು ಸೃಷ್ಟಿಸುತ್ತಿರುವ ಹಿಂಸೆ. ನಾಲ್ಕನೆಯದು ಭಾಷಾಭಿಮಾನದ ಹೆಸರಿನಲ್ಲಿ ಉಳಿದೆಲ್ಲ ಭಾಷಿಕರನ್ನು ಹಿಂಸಿಸುವ ಕೆಲವು ಸಂಘಟನೆಗಳ ಹಿಂಸಾತ್ಮಕವಾದ ನಿಲುವು. ಐದನೆಯದು, ಈ ಎಲ್ಲದಕ್ಕೂ ಓವರ್ ಲ್ಯಾಪಿಂಗ್ ಅನ್ನಿಸುವಂತಹ ನಿಯೊ ಲಿಬರಲ್. ಗ್ಲೋಬಲೈಜೇಶನ್ ಸುತ್ತ ಮತ್ತು ಅದರ ಮೂಲಕ ಇದರ ಸುತ್ತ ಇವೆಲ್ಲಕ್ಕೂ ಸುಪ್ತವಾಗಿ ಬೆಂಬಲ ಕೊಡುತ್ತಿರುವ ಒಂದು ಬಗೆ. ಇವೆಲ್ಲವೂ ಬೇರೆಬೇರೆ ಕಾಣಿಸುತ್ತಾ ಇದ್ದರೂ ಒಂದಕ್ಕೊಂದು ಹೊಂದಿಕೊಂಡಿವೆ. ಒಂದು ಹಿಂಸೆ ಮತ್ತೊಂದು ಹಿಂಸೆಗೆ ಪ್ರೇರಕವಾಗಿವೆ. ಈ ಸವಾಲನ್ನು ಎದುರಿಸುವುದಕ್ಕೆ ಶಾಂತಿಪ್ರಿಯ ಕನ್ನಡಿಗರ ಸ್ಟ್ರಾಟೆಜಿ, ಅಥವಾ ಕನ್ನಡ ಲೇಖಕರ ಸ್ಟ್ರಾಟೆಜಿ ಏನಾಗಿರಬೇಕು ಅಂತ ತಾವು ಅಂದುಕೊಳ್ಳುತ್ತೀರಿ.
ಉತ್ತರ
ಕೂಡಲೇ ಗೊತ್ತಾಗುತ್ತಿಲ್ಲ. ಈಗ ಸದ್ಯ ಮಸಿ ಬಳಿದಿದ್ದನ್ನು ಟಿವಿಯಲ್ಲಿ ನೋಡಿದೆ. ಮುಖಕ್ಕೆ ಮಸಿ ಬಳಿದಿದ್ದಷ್ಟೆ ಅಲ್ಲ, ಅವರನ್ನು ಜಗ್ಗಾಡಿ ಅವರ ಶರ್ಟನೆಲ್ಲ ಕಿತ್ತಿದ್ದಾರೆ. ಆ ಮನುಷ್ಯನೇನಾದರೂ ಹಾರ್ಟ್ ಪೇಶೆಂಟ್ ಆಗಿದ್ದರೆ, ಅಲ್ಲಿ ಹಾರ್ಟ್ ಅಟ್ಯಾಕ್ ಆಗಬೇಕಿತ್ತು. ಇದು ಗೊತ್ತಾಗಬೇಕು ಅಷ್ಟೆ. ನನ್ನದೊಂದು ನಂಬಿಕೆ ಏನಪ್ಪಾ ಅಂದ್ರೆ, ಕನ್ನಡದ ಜನರಿಗೆ ಇದು ಗೊತ್ತಾಗುತ್ತೆ. ಅಯ್ಯೋ ಅಂತ ಅನ್ನಿಸಬಹುದು, ಬಹಳ ಜನರಿಗೆ. ಹೇಳೋಕೆ ಹೆದರುತ್ತಾರೇನೋ ಅಂತ ಕಾಣುತ್ತೆ. ಯಾಕೆಂದರೆ, ಈ ಪಡ್ಡೆ ಹುಡುಗರು ಎಲ್ಲಿ ನಮ್ಮನ್ನು ಏನು ಮಾಡ್ತಾರೋ ಅಂತ. ನಿಜವಾಗಿ ನಾನು ಹೇಳಬೇಕೆಂದ್ರೆ, ನಾನದನ್ನು ಹೇಳಿದಾಗ ನನ್ನ ಹೆಂಡತಿ ಗಾಬರಿ ಆಗಿಬಿಟ್ಟಳು, ಯಾಕೆಂದರೆ, ಮತ್ತೆ ಅದನ್ನು ಮಾತನಾಡಲಿಕ್ಕೆ ಹೋಗಬೇಡಿ ಅಂತ ಮನೆಯಲ್ಲಿ ಅದೇ ಜಗಳವಾಗುತ್ತಿದೆ. ಆದರೆ, ಎಲ್ಲಿ ಹೋದರೂ ನಾನದನ್ನು ಹೇಳಲೇಬೇಕು. ಯಾಕೆಂದರೆ, ಅದನ್ನು ಹೇಳದಿದ್ದರೆ ನಾನೊಬ್ಬ ಕನ್ನಡಿಗನಾಗಿ ಮಾನವಂತನಾಗಿ ಉಳಿಯಲಿಕ್ಕೆ ಸಾಧ್ಯವೇ ಇಲ್ಲ. ಈ ಭಾವನೆ ಬರುವಂತಹ ಜನ ಬೇಕು ಅಷ್ಟೆ. ಬಹಳ ಗಟ್ಟಿಯಾಗಿ ಈ ಥರ ಭಾವನೆ ಬರುವವರು ಬೇಕು. ಗೋಕಾಕ್ ಚಳುವಳಿ ಆಗುತ್ತಾ ಇದ್ದಾಗಲೂ ಹಾಗೆಯೇ ಆಯಿತು. ನನಗೆ ಬೆನ್ನು ನೋವು ಆಗಿ ಆಸ್ಪತ್ರೆಯಲ್ಲಿದ್ದೆ. ನನಗೆ ಟ್ರ್ಯಾಕ್ಶನ್ ಆಗಿತ್ತು. ಆಗ ಡಿ.ಆರ್.ನಾಗರಾಜ್ ಬಂದ ನನ್ನ ಹತ್ತಿರ, ಹೀಗೆಲ್ಲ ಆಗುತ್ತಾ ಇದೆಯಲ್ಲ ಸರ್, ನೀವೇನು ಹೇಳುತ್ತಿರಿ ಅಂದ. ನಾನು ಅವನಿಗೆ ಹೇಳಿ ಬರೆಸಿದೆ ಒಂದು ಆರ್ಟಿಕಲ್, ಪ್ರಜಾವಾಣಿಯಲ್ಲಿ. ಅದಾದ ನಂತರ ನನ್ನ ಮೇಲೆ ಬಹಳ... ನಾನು ಯೂನಿವರ್ಸಿಟಿಗೆ ಹೋಗಲಿಕ್ಕೆ ಪೊಲೀಸ್ ಸಹಾಯ ತೆಗೆದುಕೊಂಡು ಹೋಗಬೇಕಾಗಿತ್ತು ಕೆಲವು ದಿನ. ಆಗ ನನಗೆ ಭಯವಾಗಿದ್ದೇನು ಗೊತ್ತೇನು? ಒಬ್ಬ ಹುಡುಗನ ಕೈಯಲ್ಲಿ ತಮಿಳು ಪುಸ್ತಕ ಇದೆ ಅಂತ ಅವನಿಗೆ ಹೊಡೆದಿದ್ದರು. ಒಂದು ಹುಡುಗ ಉರ್ದು ಪುಸ್ತಕ ತೆಗೆದುಕೊಂಡು ಓಡಾಡುತ್ತಿದ್ದಾನೆ ಎಂದು ಅವನಿಗೆ ಹೊಡೆದಿದ್ದರು. ಕನ್ನಡಾಭಿಮಾನ ಅನ್ನುವುದು ಆಂಟಿ-ಮುಸ್ಲಿಮ್, ಆಂಟಿ-ತಮಿಳ್ ಇವೆಲ್ಲ ಆಗಲಿಕ್ಕೆ ಶುರುವಾಯಿತು. ಇದು ಪ್ರತಿ ಸಾರಿಯೂ ಆಗಬೇಕಿಲ್ಲ.
ನೀವು ಬಹಳ ಚೆನ್ನಾಗಿ ಹೇಳಿದಿರಿ. ಎಲ್ಲ ರೀತಿಯ ಹಿಂಸೆಗೂ ಒಂದಕ್ಕೊಂದು ಸಂಬಂಧ ಇದೆ. ಒಂದು ಇನ್ನೊಂದನ್ನು ಬೆಳೆಸುತ್ತೆ. ನಾನು ಸಿಂಹಳದಲ್ಲಿ ಕೇಳಿದೆ. ಅಲ್ಲಿ ಎಲೆಕ್ಷನ್ ಆಗುವಾಗ ಇವನೇ ಎಲೆಕ್ಟ್ ಆಗಿರೋದ್ರಿಂದ ಅಲ್ಲಿ ತಮಿಳಿನ ಉಗ್ರಗಾಮಿಗಳಿಗೆ ಸಂತೋಷವಾಗಿದೆಯಂತೆ. ಯಾಕೆಂದರೆ, ಈಗ ಉಗ್ರಗಾಮಿಗಳಾಗಿರುವುದಕ್ಕೆ ಒಂದು ಸರ್ಟಿಫಿಕೇಟ್ ಸಿಕ್ಕಂತಾಗಿದೆ. ಅಂದರೆ, ತಮ್ಮನ್ನು ವಿರೋಧಿಸಿದವನೊಬ್ಬ ಎಲೆಕ್ಟ್ ಆಗಿ ಬಂದಿದಾನೆ. ಬಹಳ ಜನ ಈ ಥರ, ಅದರಲ್ಲೂ ಲಾಭ ಇರೋರು. ಈ ಚಳುವಳಿಗಳಲ್ಲೆಲ್ಲ ಲಾಭ ಇದೆ. ನನಗನ್ನಿಸುವುದು ಅವರಿಗೆ ಸ್ವಲ್ಪ ದುಡ್ಡು ಸಿಗುತ್ತೆ ಅಂತ ಕಾಣುತ್ತೆ. ಈಗ ಕನ್ನಡ ಚಳುವಳಿಗಾರರು ದುಡ್ಡು ಎತ್ತುತ್ತಾರೆ. ಹಾಗೇನೇ ನಕ್ಸಲೀಯರು, ಅವರ ಥರದ ದುಡ್ಡನ್ನು ಎತ್ತುತ್ತಾರೆ. ಇಲ್ಲದೆ ಹೋದರೆ ಆ ಗನ್ನುಗಳು ಎಲ್ಲಿಂದ ಸಿಗಬೇಕು. ಎಲ್ಲಿಯವರೆಗೆ ಇರುತ್ತೆ ಅಂದರೆ, ನಕ್ಸಲಿಸಂ ಬೆಂಗಾಲ್ನಲ್ಲಿ ಶುರುವಾದಾಗ ಅಲ್ಲಿ ಪಾಪ, ಈ ಕಮ್ಯುನಿಸ್ಟರು ಸ್ವಲ್ಪ ಕೆಲಸ ಮಾಡುತ್ತಾ ಇದ್ದರು. ಈ ಭೂ ಹಂಚಿಕೆ ಅದು ಇದು ಅಂತ. ಅದಕ್ಕೆ ನಕ್ಸಲೀಯರಿಗೆ ಸಿಐಎ ದುಡ್ಡು ಕೊಟ್ಟಿದೆ ಅಂತ ಕೇಳಿದ್ದೇನೆ. ಅಮೆರಿಕದಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಬಹಳ ದೊಡ್ಡ ಚಳುವಳಿ ಶುರುಮಾಡಿದಾಗ ಅವನಿಗೆ ವಿರೋಧಿಯಾಗಿ ಒಂದು ಕಪ್ಪುಜನರ ಚಳುವಳಿ ಶುರುವಾಯಿತು. ಅದು ಸತ್ಯವಾಗೆಯೇ ಶುರುವಾಯಿತು. ಯಾಕೆಂದರೆ, ಇವನು ಬಹಳ ಉದಾರವಾದಿಯಾಗಿದ್ದಾನೆ. ಬೇಗ ಆಗಬೇಕು ಈ ಥರ ಅಂತ ಅನ್ನಿಸುವುದು ಸಹಜಾನೇ. ಅದು ತಪ್ಪು ಅಂತ ನಾನು ಹೇಳುವುದಿಲ್ಲ. ಹಾಗೆ ಅನ್ನಿಸುವುದಕ್ಕೆ ಶುರುವಾದಾಗ ಬ್ಲ್ಯಾಕ್ ಗೆ ವಿರೋಧಿಯಾಗಿದ್ದ ವೈಟ್ ರೇಸಿಸ್ಟ್ಸ್ ಇವರಿಗೆ ಧನಸಹಾಯ ಮಾಡುವುದಕ್ಕೆ ಶುರುಮಾಡಿದರು. ಯಾಕೆಂದರೆ, ಮಾರ್ಟಿನ್ ಲೂಥರ್ ಕಿಂಗ್ ಗೆ ಮಸಿ ಬಳಿದರೆ ಆಗ ಅವರು ಕ್ಷೇಮ ಅಂತ ಅವರಿಗೆ ಗೊತ್ತಿತ್ತು. ಯಾಕೆಂದರೆ, ನೀವು ಅತ್ಯಂತ ಕ್ರಾಂತಿಕಾರಕವಾದ ಮಾತುಗಳನ್ನಾಡಿದಾಗ ಯಾರೂ ಹೆದರಲ್ಲ. ಯಾಕೆಂದರೆ, ಅದು ಆಗಲ್ಲ ಅಂತ ಎಲ್ಲರಿಗೂ ಗೊತ್ತಿರುತ್ತೆ. ಅದರ ನೆಕ್ಸ್ಟ್ ಹೆಜ್ಜೆ ತಗೊಳ್ಳೋನು ಇದಾನಲ್ಲ, ಅವನೇ ಹೆಚ್ಚು ಅಪಾಯಕಾರಿಯಾಗಿ ಕಾಣ್ತಾ ಇರ್ತಾನೆ. ಸಾಮಾನ್ಯವಾಗಿ ನಾವು ರಾಜಕೀಯ ಚಿಂತನೆಯಲ್ಲಿ ಇದನ್ನು ಗುರುತಿಸುವುದೇ ಇಲ್ಲ, ಬಹಳ ಕ್ರಾಂತಿಕಾರಿಯಾಗಿ ಮಾತನಾಡುತ್ತಾ ಇರುವವನೇ ಸರಿ ಅಂತ ಅನ್ನಿಸುತ್ತಿರುತ್ತದೆ. ಅಲ್ಲ, ಈ ಒಂದು ಹೆಜ್ಜೆ ಇಡುವವನು ಬಹಳ ಮುಖ್ಯ. ನನಗೆ ಗೋಪಾಲಗೌಡರು ಒಂದು ಸಾರಿ ಇದನ್ನು ಹೇಳಿದ್ದರು. ಅವರೆಲ್ಲ ಆಕಾಶ ಹಂಚಿಕೊಂಡ ನಂತರ ಭೂಮಿ ಹಂಚಿಕೊಳ್ಳೋಣ ಅನ್ನುವವರು ಅಂತ. ಅದು ಒಳ್ಳೆಯ ಮೆಟಫರ್. ನಮಗೆ ಗೊತ್ತು, ಹೇಗಿದ್ದರೂ ಆಕಾಶ ಹಂಚಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಅಂತ. ಹಾಗಾಗಿ, ಭೂಮಿಯನ್ನೂ ನಾವು ಹಂಚಿಕೊಳ್ಳಬೇಕಾಗಿಲ್ಲ, ಈ ಎಲ್ಲ ನಿಯೊ-ಕ್ರಾಂತಿಕಾರರು ಅಂತ ಹೇಳಿದಿರಲ್ಲ, ಹಿಂಸೆ ಮಾಡುವವರು ಅವರೆಲ್ಲರಲ್ಲೂ ಆ ಒಂದು ಗುಣ ಇದೆ. ಅವರು ಯಾವತ್ತೂ ಕೂಡಲೇ ಕಾರ್ಯಗತವಾಗುವಂತದ್ದನ್ನು ಆಲೋಚನೆ ಮಾಡುತ್ತಿರುವುದಿಲ್ಲ.
ಪ್ರಶ್ನೆ ೩
ಕರ್ನಾಟಕದಲ್ಲಿರುವ ರಾಜಕೀಯ ಪಕ್ಷಗಳಿಗೆ ಒಂದು ಮಿತಿಯಿದೆ. ಇಲ್ಲಿ ಹೆಚ್ಚು ಪವರ್ ಫುಲ್ ಆಗಿರುವ ಪಕ್ಷಗಳೆಲ್ಲ ರಾಷ್ಟ್ರೀಯ ಪಕ್ಷಗಳು. ಕಾಂಗ್ರೆಸ್ ಅಥವಾ ಬಿಜೆಪಿ ಕರ್ನಾಟಕದಲ್ಲಿ ಕಾಣಿಸುವ ಎರಡು ಪ್ರಬಲ ರಾಜಕೀಯ ಪಕ್ಷಗಳು. ಈಗ ಜೆಡಿಎಸ್ ಇದೆ, ಆದರೆ ಅದು ರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರುವಷ್ಟು ಪ್ರಬಲವಾಗಿಲ್ಲ. ಈ ರಾಷ್ಚ್ರೀಯ ಪಕ್ಷಗಳ ದೊಡ್ಡ ಮಿತಿಯೆಂದರೆ, ಪಾನ್ ಇಂಡಿಯನ್ ಆಗಿರುವಂತಹ ಸಮಸ್ಯೆಗಳೇ ಇವುಗಳಿಗೆ ಬಹಳ ಮುಖ್ಯವಾಗಿ ಕಾಣಿಸುತ್ತಾ ಇರುತ್ತವೆ. ತೀರಾ ಕರ್ನಾಟಕದ್ದೇ ಆದ ಸಮಸ್ಯೆಗಳನ್ನು ಅವು ಯಾವಾಗಲೂ ಎತ್ತಿಕೊಳ್ಳುವುದಿಲ್ಲ. ಯಾಕೆಂದರೆ, ಅವುಗಳಿಗೆ ಅವುಗಳದ್ದೇ ಆದ ಸಮಸ್ಯೆಗಳಿವೆ. ಅವುಗಳ ರಾಷ್ಟ್ರೀಯ ಗುಣಗಳನ್ನು ಉಳಿಸಿಕೊಳ್ಳುವುದಕ್ಕೆ ಯಾವಾಗಲೂ ಪ್ರಯತ್ನಿಸುತ್ತಿರುತ್ತವೆ. ಅವುಗಳಿಗೆ ಒಂದಷ್ಟು ರಾಷ್ಟ್ರೀಯ ನಾಯಕರೂ ಇರುತ್ತಾರೆ. ಅವರ ಒತ್ತಡಗಳಿಗೂ ಇವರು ಮಣಿಯಬೇಕಾಗುತ್ತದೆ. ಹೀಗಾಗಿ ಯಾವಾಗಲೂ ಕರ್ನಾಟಕದ ರಾಜಕೀಯ ಪಕ್ಷಗಳಿಂದ ಅಥವಾ ಕರ್ನಾಟಕದಲ್ಲಿರುವ ಎಲ್ಲ ರಾಷ್ಟ್ರೀಯ ಪಕ್ಷಗಳಿಂದ ಯಾವ ಉಪಯೋಗವೂ ಇಲ್ಲ ಎನ್ನುವ ಹತಾಶ ಭಾವನೆ ಎಲ್ಲ ಥರದ ಕನ್ನಡ ಸಂಘಟನೆಗಳಲ್ಲೂ ಬರುತ್ತಾ ಇರುತ್ತವೆ. ಯಾಕೆಂದರೆ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಎಕ್ಸಾಂಪಲ್ಗಳನ್ನ ನೋಡುತ್ತಲೇ ಇರುತ್ತಾರೆ. ಅದು ಎಐಎಡಿಎಂಕೆಯಾಗಿರಬಹುದು, ಡಿಎಂಕೆಯಾಗಿರಬಹುದು, ತೆಲುಗುದೇಶಂ ಆಗಿರಬಹುದು. ಕೇಂದ್ರದ ಮೇಲೆ ಒತ್ತಡ ಹೇರುವುದಕ್ಕೆ ಸಕ್ಸಸ್ ಫುಲ್ ಆಗುತ್ತವೆ. ಈ ಥರದ ಹತಾಶೆ ಹಿಂಸೆಗೆ ತಿರುಗುವ ಅನುಮಾನವೂ ಇದೆಯಲ್ಲ!
ಉತ್ತರ
ಮೊದಲು ನಾನು ಈ “ರಾಷ್ಟ್ರ” ಅನ್ನುವ ಶಬ್ದವನ್ನು ಉಪಯೋಗಿಸದೆಯೇ ಮಾತನಾಡಲಿಕ್ಕೆ ಇಷ್ಟಪಡುತ್ತೇನೆ. ಒಂದು ಭಾರತ ಅನ್ನುವಂತದ್ದೆ ಒಂದು ಇದೆ, ಅದು ಎಲ್ಲಿದೆಯಪ್ಪ ಅಂತಂದ್ರೆ, ಬಹಳ ಮುಖ್ಯವಾಗಿ ಬಡವರಿಗೆ. ತಮಿಳುನಾಡಿನ ಬಡವರೆಲ್ಲ ತಮ್ಮ ಕೆಲಸ ಹುಡುಕಿಕೊಂಡು ಹೋಗುವುದು ಕರ್ನಾಟಕಕ್ಕೆ. ಕರ್ನಾಟಕದ ಬಹಳ ಜನ ಬಡವರು ತಮ್ಮ ಕೆಲಸ ಹುಡುಕಿಕೊಂಡು ಹೋಗುವುದು ಗೋವಕ್ಕೆ. ಬಿಹಾರಿನ ಎಲ್ಲ ಬಡವರು ಹೋಗಿ ಕೆಲಸ ಮಾಡುವುದು ಬಂಗಾಳದಲ್ಲಿ ಅಥವಾ ಅಸ್ಸಾಂನಲ್ಲಿ. ಎಷ್ಟು ಬಡವರಿಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವ ಅಗತ್ಯ ಇದೆ ಎಂದರೆ, ಅದನ್ನು ಮರೀಬಾರ್ದು ನಾವು. ಹಾಗೇನೇ, ಒಂದು ಎಲೀಟ್ ಕ್ಲಾಸ್ಗೂ ಅಗತ್ಯ ಇದೆ. ಅದು ಕೂಡ ಒಂದು ಕಡೆಯಿಂದ ಇನ್ನೊಂದು ಕಡೆ ಹೋಗಲಿಕ್ಕೆ. ಇವತ್ತಿನ ಮಾರ್ಕೆಟ್ಗೂ ಅಗತ್ಯವಿದೆ. ಮಾರ್ಕೆಟ್ನ ಬೆಳೆಸುವುದಕ್ಕೆ ಅಗತ್ಯವಿದೆ. ನೀವು ಯಾವುದನ್ನು “ನೇಶನ್” ಎಂದು ಕರೆಯುತ್ತೀರಿ ಅದು ಮಾರುಕಟ್ಟೆಯ ಅಗತ್ಯಕ್ಕಾಗಿ ಮತ್ತು ತುಂಬ ಮೇಲೆ ಬಂದವರ ಸಖ್ಯ, ಒಡನಾಟ, ಹೊಂದಾಣಿಕೆಗಳ ಆಗತ್ಯಕ್ಕಾಗಿ. ಮೂರನೆಯದು, ಕಡುಬಡವರ ಅಗತ್ಯಕ್ಕಾಗಿ. ಈ ಮೂರಾಗಿಯೂ ಒಂದು ದೇಶ ಅಂತ, “ಭಾರತ” ಅಂತ ಒಂದು ಇದೆ. ಇನ್ನೊಂದು ಕಾರಣಕ್ಕಾಗಿ ಒಂದು “ಭಾರತ” ಅಂತ ಒಂದು ಇದೆ. ಈ “ಭಾರತ” ಅಂತ ಒಂದು ಕಾನ್ಸೆಪ್ಟೇ ಇರದಿದ್ದಲ್ಲಿ, ಈ ದೇಶದಲ್ಲಿ ದಿ ಲೆಜಿಸ್ಲೇಶನ್ ಟು ಎಂಡ್ ಅನ್ಟಚಬಿಲಿಟಿ – ಅಸ್ಪ್ರೃಶ್ಯತೆಯ ನಿವಾರಣೆಯಂತಹ ಒಂದು ಕಾನೂನೇ ಬರುತ್ತಿರಲಿಲ್ಲ. ದೇಶ ಸ್ವತಂತ್ರವಾಯಿತು. ಆದ ಕೂಡಲೇ ಗಾಂಧಿ, ಅಂಬೇಡ್ಕರ್ ಚಳುವಳಿ ಎಲ್ಲ ಇತ್ತಲ್ಲ, ಅದಕ್ಕೋಸ್ಕರ ಕೂಡಲೇ ಅಸ್ಪೃಶ್ಯತೆಯನ್ನು ಕಾನೂನುಬಾಹಿರ ಅಂತ ಮಾಡಿದರು. ಟೆಂಪಲ್ ಎಂಟ್ರಿ ಬಿಲ್ ಅಂತ ತಂದರು. ಈಗ ತರುವುದಕ್ಕಾಗುತ್ತಿರಲಿಲ್ಲ. ಈಗ ಯಾರಾದರೂ ಸುಪ್ರೀಂ ಕೋರ್ಟಿಗೆ ಹೋಗಿರುತ್ತಿದ್ದರು. ಒಬ್ಬರ ಧಾರ್ಮಿಕ ಆಚರಣೆಗಳ ನಡುವೆ ಪ್ರವೇಶ ಮಾಡುವ ಹಾಗಿಲ್ಲ ಅಂತ. ಒಂದು ಹಾಗಿರುತ್ತಿತ್ತು. ಹಾಗೆ ಭಾರತ ಅಂತ ಒಂದು ಇದ್ದಿದ್ದರಿಂದ ಎಲ್ಲರಿಗೂ ಒಂದು ವೋಟ್ ಸಿಕ್ಕಿತ್ತು. ಇಲ್ಲ ಅಂದಿದ್ದರೆ, ಎಲ್ಲರಿಗೂ ಓಟ್ ಸಿಕ್ಕಿರುತ್ತಿತ್ತು. ಶ್ರೀಮಂತರಿಗೆ ಓಟ್ ಕೊಟ್ಟಿರುತ್ತಿತ್ತು. ಒಬ್ಬೊಬ್ಬರಿಗೆ ಇಷ್ಟ ಬಂದ ಹಾಗೆ ಮಾಡಿರುತ್ತಿದ್ದರು. ಆಮೇಲೆ ಈ ಮೈನಾರಿಟೀಸ್ ಗೆ ಭಾರತ ಬಹಳ ಅಗತ್ಯ. ಹಾಗೆಯೇ ದಲಿತರಿಗೂ ಅನ್ನಬಹುದು. ಈ ಮುಸ್ಲಿಮರಿಗೆ ಅವರು ಒಂದು ಇಡೀ ಭಾರತ ಅಂತ ಯೋಚನೆ ಮಾಡದೆ ಹೋದರೆ ಮುಸ್ಲಿಮರು ಕೆಲವು ಪ್ರಾಂತ್ಯಗಳಲ್ಲಿ ಬಹಳ ದಾರುಣ ಪರಿಸ್ಥಿತಿಗೆ ಬಂದುಬಿಡುತ್ತಿದ್ದರು. ಆದುದದರಿಂದ, ಸಾಮಾನ್ಯವಾಗಿ ಈ “ರಾಷ್ಟ್ರ” ಅನ್ನುವುದನ್ನು ವಿರೋಧಿಸುವ ಒಂದು ಆಲೋಚನಾಕ್ರಮ ಇದೆ. ಆ ಆಲೋಚನಾಕ್ರಮದ ಜೊತೆ ನಾನು ಇಲ್ಲ. ನಾನು ಇನ್ನೂ ಬೇರೆ ಬೇರೆ ಆಯಾಮಗಳಲ್ಲಿ ಭಾರತ ಅನ್ನೋ ಒಂದು ಕಲ್ಪನೆಯನ್ನ ಇಟ್ಟುಕೊಂಡಿರುವವನು. ಆದ್ದರಿಂದ ರಾಜಕೀಯ ಪಕ್ಷಕ್ಕೆ ಭಾರತ ಅನ್ನುವ ಒಂದು ಕಲ್ಪನೆ ಬೇಕು. ಅದು ಇಲ್ಲದೆ ಇದ್ದರೆ ಮರಾಠಿಗರನ್ನು ಏನು ಬೇಕಾದರೂ ಮಾಡಬಹುದು. ಹಾಗೆಯೇ, ಮಹಾರಾಷ್ಟ್ರದಲ್ಲಿ ಕನ್ನಡಿಗರನ್ನು ಏನು ಬೇಕಾದರೂ ಮಾಡಬಹುದು ಅಂತ ಅವರು ತಿಳಿದುಕೊಳ್ಳುತ್ತಾರೆ. ಆದ್ದರಿಂದ, ಅಖಿಲ ರಾಷ್ಟ್ರಮಟ್ಟದ ಪಕ್ಷಗಳು ಇರಬೇಕು. ಇದ್ದರೆ ಅವು ಈ ಸಮಸ್ಯೆಗಳನ್ನು ನೋಡದೇ ಇರುವುದಕ್ಕೆ ಕಾರಣ ಏನೆಂದರೆ, ಬರೀ ಚುನಾವಣಾ ಮಟ್ಟಕ್ಕೆ ತಯಾರಾಗುತ್ತಿರುತ್ತವೆ ಅನ್ನುವುದು. ಚುನಾವಣಾ ಮಟ್ಟಕ್ಕೆ ತಯಾರಾಗುತ್ತಿರುತ್ತವೆ ಅನ್ನುವುದರಿಂದ ಚುನಾವಣಾ ಸಂದರ್ಭದಲ್ಲಿ ಏನು ಹೇಳಬೇಕೋ ಅದನ್ನು ಹೇಳುತ್ತಿರುತ್ತವೆ. ಅದು ಆ ರಾಜಕೀಯ ಪಕ್ಷಗಳ ದೌರ್ಬಲ್ಯವೇ ಹೊರತು ರಾಷ್ಟ್ರೀಯ ಪಕ್ಷಗಳಾಗಿರುವುದರಿಂದಲೇ ಇರುವಂತಹ ದೌರ್ಬಲ್ಯಗಳಲ್ಲ. ನೀವು ಹೇಳುವ ಕ್ರಮದಲ್ಲಿ, ರಾಷ್ಟ್ರೀಯ ಪಕ್ಷಗಳಾಗಿರುವುದರಿಂದಲೇ ಅಂತ ದೌರ್ಬಲ್ಯ ಇದೆ ಅಂತ, ಆದರೆ ನಾನು ಹಾಗೆ ಅಂದುಕೊಂಡಿಲ್ಲ. ಆಕ್ಚುಯಲಿ ಅದರಿಂದಲೇ ಒಂದು ವಿಸ್ಡಂ ಇರೋದಕ್ಕೆ ಸಾಧ್ಯ. ಒಂದು ವಿವೇಕ ಇರುವುದಕ್ಕೆ ಸಾಧ್ಯ. ಆದರೆ, ನಾನು ಹೇಳೋದು ಏನೆಂದರೆ, ನಾವು ಒಂದು ಪ್ರಾಂತೀಯ ಪಕ್ಷ ಮಾಡಿಕೊಂಡರೂನೂ ರಾಷ್ಟ್ರೀಯವಾಗಿ ಯೋಚನೆ ಮಾಡುವಂತಹ ಒಂದು ಪ್ರಾಂತೀಯ ಪಕ್ಷ ಬೇಕು ಅಂತ. ಅಂದರೆ, ಇಡೀ ದೇಶದ ಕುರಿತು ಆಲೋಚನೆ ಮಾಡುವ ಪ್ರಾಂತೀಯ ಪಕ್ಷ ಬೇಕು ಅಂತ.
ಪ್ರಶ್ನೆ ೪
ಇಂಗ್ಲಿಶ್ ನ ದಾಳಿಗೆ ಜರ್ಜರಿತವಾಗಿರವುದು ಕೇವಲ ಕನ್ನಡ ಮಾತ್ರವಲ್ಲ. ನಮ್ಮ ಕನ್ನಡ ಹೋರಾಟಗಾರರು ದ್ವೇಷಿಸುತ್ತಿರುವ ತಮಿಳು, ಮರಾಠಿ ಭಾಷೆಗಳು ಕೂಡ ಇಂಗ್ಲಿಶ್ ನ ಕುರಿತಂತೆ ಕನ್ನಡ ಎದುರಿಸುತ್ತಿರುವ ಸಮಸ್ಯೆಯನ್ನೇ ತಮಿಳು, ಮರಾಠಿಗಳು ಕೂಡ ಎದುರಿಸುತ್ತವೆ. ಕರ್ನಾಟಕದ ಒಳಗೆ ಇರುವ ತುಳು, ಕೊಂಕಣಿ, ಕೊಡವ, ಬ್ಯಾರಿ ಅರೆಭಾಷೆಗಳು ಕನ್ನಡದ ಯಾಜಮಾನ್ಯವನ್ನು ಬೇರೆಯ ಥರದಲ್ಲಿ ಅನುಭವಿಸುತ್ತಾ ಇವೆ. ಯಾಕೆಂದರೆ, ತುಳುವಿನ ಅನೇಕ ಬರಹಗಾರರು ಕನ್ನಡದಲ್ಲಷ್ಟೇ ಬರೆಯುವುದಕ್ಕೆ ಇಷ್ಟಪಡುವುದರಿಂದ, ಕನ್ನಡದಲ್ಲಿ ಬರೆದರಷ್ಟೆ ದೊಡ್ಡ ಆಡಿಯನ್ಸ್ ಸಿಗುತ್ತಾರೆ ಅಂತ ಅಂದುಕೊಳ್ಳುವುದರಿಂದ ತುಳುವಿನಲ್ಲಿ ಕಾನ್ಸೆಂಟ್ರೇಟ್ ಮಾಡಿ ಬರೆಯುವುದು ಇಲ್ಲದ ಹಾಗಾಗಿದೆ. ಬ್ಯಾರಿ ಭಾಷೆಯಲ್ಲಂತೂ ಬರವಣಿಗೆಯೇ ಇಲ್ಲದಂತಹ ಸ್ಥಿತಿಗೆ ತಲುಪಿದೆ. ಹೀಗೆ ನೋಡುತ್ತಿರುವಾಗ ಕನ್ನಡಕ್ಕೆ ಮಾತ್ರ ಅಪಾಯ ಅಂತ ಹೇಳೋದು ಬಹಳ ಸ್ವಾರ್ಥ ಅಂತ ಅನ್ನಿಸೋದಿಲ್ವ?
ಇದನ್ನು ಸ್ವಲ್ಪ ಬೇರೆ ಥರದಲ್ಲಿ ಯೋಚನೆ ಮಾಡಿ.ಈ “ಯಜಮಾನಿಕೆ” ಅನ್ನೋದು, ಎಲ್ಲ ಥರದ ಯಜಮಾನಿಕೆ ಒಂದೇ ಥರದ್ದಲ್ಲ. ಇಂಗ್ಲಿಶ್ಗೆ ಕನ್ನಡದ ಮೇಲಿರೋ ಯಜಮಾನಿಕೆ ಒಂದು ಥರದ್ದು. ಕನ್ನಡಕ್ಕೆ ಬೇರೆ ಭಾಷೆಗಳ ಮೇಲಿರೋ ಯಜಮಾನಿಕೆ ಇನ್ನೊಂದು ಥರದ್ದು. ಇವೆರಡೂ ಒಂದೇ ಥರದ್ದು. ಅವೆರಡಕ್ಕೂ ವ್ಯತ್ಯಾಸ ಇದೆ. ಯಾಕೆಂದರೆ, ಕನ್ನಡದ ಯಜಮಾನಿಕೆಯಲ್ಲಿ ಬೇರಾವ ಭಾಷೆಯೂ ನಾಶವಾಗಲಿಲ್ಲ. ಇಂಗ್ಲಿಷ್ ನ ಯಜಮಾನಿಕೆಯಲ್ಲಿ ನಾಶವಾಗುವ ಸಾಧ್ಯತೆ ಇದೆ. ಯಾಕೆಂದರೆ, ಈ ಯಜಮಾನಿಕೆಗೆ ಹೆಚ್ಚಿನ ಶಕ್ತಿ ಇದೆ, ಒಂದನೆಯದು. ಇನ್ನೊಂದು, ಭಾರತದಲ್ಲಿ ಅನೇಕ ಸಂಬಂಧಗಳು ಒಂದು ಇನ್ನೊಂದನ್ನು ನಾಶಮಾಡದ ಹಾಗೆ ಯಜಮಾನಿಕೆ ನಡೆಸಿವೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಯಜಮಾನಿಕೆ ಇನ್ನೊಂದನ್ನು ನಾಶವೇ ಮಾಡಿದೆ. ಈಗ ಬಿಳಿಜನರ ನಾಗರಿಕತೆ ಎಲ್ಲ ಟ್ರೈಬಲ್ಗಳ ನಾಗರಿಕತೆಯನ್ನು ನಾಶಮಾಡಿಬಿಟ್ಟಿತು. ಯಾಕೆಂದರೆ, ಅದು ಆಧುನಿಕವಾದ ರೀತಿಯ ಯಜಮಾನಿಕೆ. ಅಮೆರಿಕನ್ ಇಂಡಿಯನ್ಸ್ ಇಲ್ವೇ ಇಲ್ಲ, ಎಲ್ಲೋ ರಿಸರ್ವೇಶನ್ಸ್ನಲ್ಲಿರಬೇಕು. ಆಸ್ಟ್ರೇಲಿಯದಲ್ಲಂತೂ ಹೋಗೇ ಹೋಯಿತು. ಭಾರತದಲ್ಲಿ ನಾಗರಿಕತೆ ಅಷ್ಟೊಂದು ನಾಶಮಾಡಿಲ್ಲ. ಯಾಕೆಂದರೆ, ಇಲ್ಲಿ ನಾವು ಹೆಜಮನೈಸ್ ಮಾಡ್ತಿವಿ. ನನ್ನದೊಂದು ತತ್ವ ಇದೆ. ಎಲ್ಲೆಲ್ಲಿ “ಹೆಜಿಮನಿ” ಕೆಲಸ ಮಾಡುತ್ತೆ, ಅಲ್ಲಿ ನಾಶ ಅಂತ ಇಲ್ಲ. ಒಂದು ಮೇಲೆ ಒಂದು ಕೆಳಗೆ ಅಂತಷ್ಟೇ ಇರುತ್ತೆ. ಕೆಳಗಿರುವುದಕ್ಕೆ ಮೇಲಾಗುವ ಅವಕಾಶ ಇರುತ್ತೆ. ಈಗ ಕನ್ನಡದೊಳಗೆ ಒಂದು ಹೆಜಿಮನಿ ಆಯ್ತು. ಅದು ಕವಿರಾಜಮಾರ್ಗಕಾರನ ಕಾಲದಿಂದ. ಇಂಥ ಪ್ರದೇಶದಲ್ಲಿ ಮಾತನಾಡುವ ಕನ್ನಡ ನಮಗೆಲ್ಲರಿಗೂ ಬೇಕಾದ ಕನ್ನಡ ಅಂದ. ಆವಾಗ ಏನಾಯ್ತು? ಉಳಿದೆಲ್ಲ ಪ್ರದೇಶಗಳಲ್ಲಿ ಮಾತನಾಡುವ ಕನ್ನಡದ ಮೇಲೆ ಇದು ಯಜಮಾನಿಕೆ ಆಯ್ತು. ಹಾಗೆನೇ ಬೆಳೆದುಬಂತು. ಆದರೆ, ಒಬ್ಬ ದೇವನೂರು ಮಹಾದೇವನಂತಹ ಲೇಖಕ ಬಂದಾಗ ಚಾಮರಾಜನಗರದ ಸುತ್ತಮುತ್ತ ಮಾತನಾಡುವ ಭಾಷೆಯನ್ನ ಆತ ಮೇಲಕ್ಕೆ ತರುವುದಕ್ಕೆ ಸಾಧ್ಯವಾಯಿತು. ಒಬ್ಬ ಬೇಂದ್ರೆ ಬಂದಾಗ ಧಾರವಾಡದ ಕಡೆ ಮಾತನಾಡುವ ಭಾಷೆ ಮೇಲಕ್ಕೆ ಬಂತು. ಆದ್ದರಿಂದ, ಎಲ್ಲೆಲ್ಲಿ ಹೆಜಮನಿ ಇರುತ್ತೆ ಅಲ್ಲಲ್ಲಿ ಹೆಜಮನಿಗೆ ವಿರುದ್ಧವಾಗಿ ಕಾಲಾನುಕ್ರಮದಲ್ಲಿ ಕೆಲವು ಮೇಲೆ ಬರುವ ಸಾಧ್ಯತೆ ಇರುತ್ತೆ. ಆದರೆ ಯುರೋಪಿಯನ್ ರೀತಿಯ ಯಜಮಾನಿಕೆ ಇದೆಯಲ್ಲ ಅದು ಇನ್ನೊಂದನ್ನು ಸಂಪೂರ್ಣವಾಗಿ ನಾಶಮಾಡುವಂತಹ ಒಂದು ರೀತಿಯ ಯಜಮಾನಿಕೆ. ಹಾಗಾಗಿ ಅದು ನೆನಪಿನಲ್ಲೇ ಉಳಿದಿರುವುದಿಲ್ಲ. ಆ ವ್ಯತ್ಯಾಸವನ್ನು ಮಾಡುವುದಕ್ಕೆ ನಾನು ಇಷ್ಟಪಡುತ್ತೇನೆ. ೬ಇಲ್ಲದಿದ್ದರೆ ಇದರ ಬಗ್ಗೆ ನಾವು ಮಾಡುವ ಆಲೋಚನಾಕ್ರಮದಲ್ಲಿ ತಪ್ಪಾಗುತ್ತೆ. ನಾನು ಏನನ್ನೂ ಸಮರ್ಥಿಸಿಕೊಳ್ಳುವುದಕ್ಕೋಸ್ಕರ ಹೇಳುತ್ತಿಲ್ಲ, ಅರ್ಥಮಾಡಿಕೊಳ್ಳುವುದಕ್ಕೋಸ್ಕರ ಹೇಳುತ್ತಿದ್ದೇನೆ. ಅದರಿಂದ, ಕನ್ನಡಕ್ಕೆ ತುಳು ಇತ್ಯಾದಿಗಳ ಮೇಲೆ ಇರುವಂತಹ ಯಜಮಾನಿಕೆ ಅಂತದ್ದಲ್ಲ. ಅದು ತುಳುವರ ಅಗತ್ಯಕ್ಕಾಗಿ ಬಂದಿರುತ್ತೆ. ಅವರ ಓಡಾಟದ ಅಗತ್ಯಕ್ಕಾಗಿ.
ನಾನು ಒಂದು ಸಾರಿ ತ್ರಿಪುರಕ್ಕೆ ಹೋಗಿದ್ದೆ. ನಾನು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿದ್ದಾಗ ನನಗೂ ಅಲ್ಲಿನ ಚೀಫ್ ಮಿನಿಸ್ಟರ್ಗೂ ಚರ್ಚೆಯಾಯಿತು. ಅವರು ಕಮ್ಯುನಿಶ್ಟರಾಗಿದ್ದರು. ಅವರು ಏನಂದ್ರೂ ಅಂದ್ರೆ, ಇಲ್ಲಿರುವ ಎಲ್ಲ ಟ್ರೈಬಲ್ ಶಾಲೆಗಳಲ್ಲೂ ಅವರವರ ಟ್ರೈಬಲ್ ಭಾಷೆಯಲ್ಲೇ ಹೇಳಿಕೊಡುತ್ತೇವೆ ಅಂದರು. ತಪ್ಪು ಅಂದೆ, ಅವರಿಗೆ ಬಂಗಾಳಿ ಹೇಳಿಕೊಡಬೇಕು ಅಂದೆ. ಯಾಕೆ ಅಂದರು? ಅವರಿಗೆ ಚಿಕ್ಕ ವಯಸ್ಸಿನಲ್ಲಿ ವಿಷಯವನ್ನು ಕಲಿಯುವುದಕ್ಕೆ ಅವರ ಭಾಷೆಯನ್ನೇ ಉಪಯೋಗಿಸಬೇಕು. ಮದರ್ ಟಂಗನ್ನ. ಆದರೆ, ಅವರು ಬೆಳೀತಾ ಹೋದ ಹಾಗೆ, ಬೆಂಗಾಲಿಯಲ್ಲಿ ಕಲಿಯೋದನ್ನೇ ಕಲಿತುಕೊಳ್ಳಬೇಕು. ಯಾಕೆಂದರೆ, ಹತ್ತು ಕಿಲೋಮೀಟರ್ ಆಚೆಗೆ ಅವನು ಏನೂ ಮಾಡದೆ ಹೋಗುತ್ತಾನೆ. ಅದಕ್ಕೆ ಈಗಿನ ಕಾಲಕ್ಕೆ ಹತ್ತು ಕಿಲೋಮೀಟರ್ ಅಷ್ಟೆ ಆತನ ಪ್ರಪಂಚ ಅಂತ ಹೇಳೋ ಹಾಗಿಲ್ಲ. ಹಿಂದೆ ಹಾಗಿತ್ತು. ಆ ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಅವನಿಗೆ ಎಲ್ಲವೂ ಲಭ್ಯವಾಗುತ್ತಿತ್ತು. ಆ ರೀತಿಯ ಒಂದು ಎಕಾನಮಿ ಇತ್ತು. ಅಂತಹ ಒಂದು ಎಕಾನಮಿಯಲ್ಲಿ, ಈ ಕ್ಯಾಪಿಟಲಿಸಂ ಅಂತ ಬರುವ ಹಿಂದಿನ ಎಕಾನಮಿಯಲ್ಲಿ ಆಯಾಯ ಪ್ರಾಂತ್ಯ, ತನ್ನ ಉತ್ಪಾದನಾ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವಂತಹ ಉತ್ಪಾದನಾಕ್ರಮವಿತ್ತು. ಅದನ್ನು ಮಾರ್ಕ್ಸ್ ಕೂಡ ಹೇಳುತ್ತಾನೆ. ಇಂಗ್ಲೆಂಡ್ನಲ್ಲಿ ಡಾ.ಜಾನ್ಸನ್ ಅಂತ ಇದ್ದಾಗ ಆತನ ಮನೆಯಲ್ಲಿ ನೀವು ಕಾಣಬಹುದಾದಂತಹ ವಸ್ತುಗಳು ಹತ್ತು ಕಿಲೋ ಮೀಟರ್ ವಿಸ್ತೀರ್ಣದ ಒಳಗೆ ಸಿಗುವಂತಹ ವಸ್ತುಗಳೇ ಆಗಿರುತ್ತಿದ್ದವು. ಹಿಂದೆ ಸೌತ್ ಕೆನರಾದಲ್ಲೂ ಹಾಗೆಯೇ ಇತ್ತು. ಆವಾಗ ಆಯಾ ಭಾಷೆಯ ಒಳಗೇನೇ ಬದುಕೋದು ಸಾಧ್ಯವಾಗಿತ್ತು. ಆದರೆ, ಈಗ ಅದು ಸಾಧ್ಯವಾಗಲ್ಲ. ಆದ್ದರಿಂದ ನಮಗೆ ಈವತ್ತು ತುಳುವನಿಗೆ ಕನ್ನಡ ಬೇಕಾಗುತ್ತೆ. ತುಳುವ ಮತ್ತು ಕನ್ನಡಿಗರಿಬ್ಬರಿಗೂ ಇಂಗ್ಲಿಶ್ ಬೇಕಾಗುತ್ತೆ. ಆದ್ದರಿಂದ ನಾನು ಇಂಗ್ಲಿಶನ್ನು ನಿರಾಕರಿಸುವವನಲ್ಲ. ನಿರಾಕರಿಸಿದ ಕೂಡಲೇ ನಾವು ಏನನ್ನೂ ಸಾಧಿಸುವುದಕ್ಕೆ ಆಗುವುದಿಲ್ಲ. ಅದರಿಂದ ಅದು ಈ ಭಾಷೆಗಳ ಜೊತೆಗೆ ಇದ್ದು ಅವುಗಳನ್ನು ನಾಶಮಾಡದ ಹಾಗೆ ಇರುವುದಕ್ಕೆ ಸಾಧ್ಯವೇ ಎಂಬುದನ್ನು ನಾವು ಹುಡುಕಬೇಕಾಗುತ್ತದೆಯಷ್ಟೆ. ಅದು ಇಂಗ್ಲಿಶನ್ನಾಗಲಿ, ಹಿಂದಿಯಾಗಲಿ. ಇವೆಲ್ಲ ನಾವು ಜೀವನದಲ್ಲಿ ಮಾಡಿಕೊಳ್ಳೋ ಒಪ್ಪಂದಗಳು. ಆ ರೀತಿ ಆಲೋಚನೆ ಮಾಡದೆ ಇದ್ದರೆ ಇನ್ನೊಂದು ರೀತಿಯ ಫಂಡಮೆಂಟಲಿಸಂಗೆ ನಾವು ಹೋಗಬೇಕಾಗುತ್ತದೆ.
ಪ್ರಶ್ನೆ ೫
ಐಟಿ ಮತ್ತು ಕನ್ನಡಕ್ಕೆ ಸಂಬಂಧಪಟ್ಟ ಹಾಗೆ ಸಾಕಷ್ಟು ಚರ್ಚೆಗಳು ಇಲ್ಲಿಯವರೆಗೆ ನಡೆದಿವೆ. ಈ ಚರ್ಚೆಗಳಲ್ಲೆಲ್ಲ ಒಂದು ಕೇಳಿಬಂದಿರುವುದು ಏನೆಂದರೆ, ಈ ಐಟಿ ಉದ್ಯಮಗಳೆಲ್ಲ ಕನ್ನಡಕ್ಕೆ ಸಂಬಂಧಪಟ್ಟ ತಮ್ಮ ಜವಾಬ್ದಾರಿಯನ್ನು ಒಂದಲ್ಲ ಒಂದು ಥರದಲ್ಲಿ ತೋರಿಸಬೇಕು ಎನ್ನುವುದು. ಅದಕ್ಕೆ ಬಂದ ಒಂದು ಪ್ರಪೊಸಲ್ ಎಂದರೆ, ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಕೊಡಬೇಕು ಎನ್ನುವುದು. ಇಂತಹ ಪ್ರಯತ್ನವನ್ನು ಐಟಿ ಉದ್ಯಮಗಳು ಸ್ವಯಂಪ್ರೇರಣೆಯಿಂದ ತಾವೇ ಮಾಡಬಹುದಿತ್ತು. ಇಂತಹ ಒಂದು ಕ್ರಮವನ್ನು. ಅದನ್ನು ಅವರು ಮಾಡಲಿಲ್ಲ. ಮೀಸಲಾತಿ ಕೊಡುವುದಲ್ಲದೆ ಇನ್ನೂ ಬೇಕಾದಷ್ಟು ಐಡಿಯಾಗಳು ಅವರ ಹತ್ತಿರ ಇರಬಹುದು. ಹಾಗೆಯೇ, ಸರ್ಕಾರ ಕೂಡ ಕಾನೂನಿನ ಮೂಲಕ ಇದನ್ನು ತರಬೇಕು ಅನ್ನೋ ಇನ್ನೂ ಒಂದು ವಾದ ಇದೆ. ಈ ಎರಡರಲ್ಲಿ ಯಾವುದು ಹೆಚ್ಚು ಸೂಕ್ತ, ತಾವು ಯಾವುದನ್ನು ಹೆಚ್ಚು ಬೆಂಬಲಸುತ್ತೀರಿ? ತಾವು ಒಬ್ಬ ಚಿಂತಕರಾಗಿ ಇದಕ್ಕೆ ಯಾವ ಪರಿಹಾರವನ್ನು ಸೂಚಿಸುತ್ತೀರಿ?
ಉತ್ತರ
ಇಲ್ಲಿ ಯಾವ ಮಲ್ಟಿನ್ಯಾಶನಲ್ ಬಂದರೂನೂ ಎರಡು ಇರಬೇಕು. ಒಂದು, ಆದಷ್ಟು ಸ್ಥಳೀಯರಿಗೆ ಕೆಲಸವನ್ನು ಕೊಡಬೇಕು. ಎರಡನೆಯದು, ಸ್ಥಳೀಯ ಭಾಷೆಯನ್ನು ಒಂದು ಭಾಷೆಯನ್ನಾಗಿ ಉಪಯೋಗಿಸಬೇಕು. ಅದೊಂದನ್ನೇ ಅಲ್ಲ. ಅದೊಂದನ್ನೇ ಅಂದರೆ ತಪ್ಪಾಗುತ್ತದೆ. ಸ್ಥಳೀಯ ಭಾಷೆಯನ್ನೂ ಅವರು ಜಾರಿಗೆ ತರಬೇಕು. ಕಾನೂನು ಮುಖಾಂತರ ಯಾಕೆ ಮಾಡಬೇಕು ಅಂತ ಹೇಳುತ್ತೇನೆ ಎಂದರೆ, ನಮ್ಮ ದೇಶದಲ್ಲಿ ನಾವು ಆಧುನಿಕ ವ್ಯವಸ್ಥೆಗೆ ಅನಿವಾರ್ಯವಾಗಿ ನಾವು ಹೋಗುತ್ತಿದ್ದೇವೆ. ಇದು ಬಹಳ ಪೇನ್ಫುಲ್ ಆಲ್ಸೋ. ಬದಲಾಗುತ್ತಿರುವುದು. ಇದರಲ್ಲಿ ಹಿಂದುಳಿದ ವರ್ಗಗಳನ್ನು ನಮ್ಮ ಜೊತೆಯಲ್ಲಿ ತೆಗೆದುಕೊಂಡು ಹೋಗದಿದ್ದರೆ ಅಪಾರವಾದ ಅಂತರ ಉಂಟಾಗಿಬಿಡುತ್ತದೆ. ಅದರಿಂದ ನಾನು ಸಂಪೂರ್ಣವಾಗಿ ರಿಸರ್ವೇಶನ್ನನ್ನು ಬೆಂಬಲಿಸುವವನು. ರಿಸರ್ವೇಶನ್ ಎಷ್ಟು ಮುಖ್ಯ ಅಂದರೆ, ಸರ್ಕಾರಿ ನೌಕರಿಯಲ್ಲಿ ಮಾತ್ರವಲ್ಲ, ಇಲ್ಲಿ ಯಾರು ಯಾವ ಕೆಲಸ ಮಾಡುವುದಕ್ಕೆ ಬಂದರೂ ಆ ರಿಸರ್ವೇಶನ್ನನ್ನು ಅವರು ಪಾಲಿಸಬೇಕು ಅಂತ ಒಂದು ಕಾನೂನು ಇರಬೇಕು. ಇದನ್ನು ಕೆನಡಿ ಮಾಡಿದ. ಯಾಕೆಂದರೆ, ಅದಿಲ್ಲದಿದ್ದರೆ ಕಪ್ಪುಜನ ಅಮೆರಿಕದ ಮುಖ್ಯವಾಹಿನಿಯಲ್ಲಿ ಬರುತ್ತಲೇ ಇರಲಿಲ್ಲ. ಪ್ರೈವೇಟ್ ಕಂಪೆನಿಗಳಲ್ಲೂ ಇಷ್ಟು ಜನ ಕಪ್ಪುಜನರನ್ನು ತೆಗೆದುಕೊಳ್ಳಬೇಕು ಎಂದು ಕಾನೂನು ಆಯಿತು. ನೀವು ಯಾವುದನ್ನು “ಎಫಿಶಿಯೆನ್ಸಿ” ಎಂದು ಕರೆಯುತ್ತೀರಿ ಅನೇಕ ಸಾರಿ ಅದು ಎಫಿಶಿಯೆನ್ಸಿ ಪ್ರಶ್ನೆ ಅಲ್ಲ. ಅದನ್ನು ಕಲಿತುಕೊಂಡುಬಿಡುತ್ತಾರೆ. ಅಕ್ಷರ ಬರದೆ ಇದ್ದವರು ಎಷ್ಚು ಬುದ್ಧಿವಂತರು ಇದ್ದಾರೆಂದರೆ ನಮ್ಮಲ್ಲಿ, ಅದರಲ್ಲೂ ಈ ನಿಮ್ಮ ಐಟಿ-ಬಿಟಿಗಳಲ್ಲಿ ಈ ಸಾಫ್ಟ್ವೇರ್ ಆದಾಗ ಬ್ರಾಹ್ಮಣರು ಮತ್ತು ಆ ಥರದ ಜಾತಿಯವರೇ ಮುಖ್ಯವಾಗಿಬಿಡುತ್ತಾರೆ. ಹಾರ್ಡ್ವೇರ್ಗೆ ಬಂದರೆ ಹತ್ತು ಹನ್ನೆರಡು ವರ್ಷದ ಸಾಬರ ಹುಡುಗ ಒಂದು ಸ್ಕೂಟರ್ ಬಿಚ್ಚಿ ಇಡೀ ರಿಪೇರಿ ಮಾಡಿರುತ್ತಾನೆ ಅಲ್ವ? ಅವನು ಮೂಸಿ ನೋಡಿ ಸ್ಕೂಟರ್ನಲ್ಲಿ ಏನು ತಪ್ಪು ಅಂತ ಹೇಳುತ್ತಿರುತ್ತಾನೆ. ನಾವು ಹಾರ್ಡ್ವೇರ್ಗೆ ಬಂದಾಗ ಬಹಳ ಜ್ಞಾನ ಈ ದೇಶದಲ್ಲಿ ಇದೆ. ಅದು ಯಾರಲ್ಲಿದೆ ಎಂದರೆ, ತುಂಬ ಹಿಂದುಳಿದವರಲ್ಲಿದೆ. ಅದರಿಂದ ನಾನೊಮ್ಮೆ ನಾರಾಯಣಮೂರ್ತಿಗಳನ್ನು ಕೇಳಿದ್ದೆ. ಇಲ್ಲಿ ಇಷ್ಟು ಸಾಫ್ಟ್ ವೇರ್ ಬೆಳೆದಿದೆಯಲ್ಲ, ಹಾರ್ಡ್ ವೇರ್ ಯಾಕೆ ಬೆಳೆದಿಲ್ಲ ಇಲ್ಲಿ ಅಂತ. ಅದಕ್ಕೆ ಹಾರ್ಡ್ವೇರ್ಗೆ ಬೇಕಾದಷ್ಟು ಹಣ ಇಲ್ಲ ನಮ್ಮಲ್ಲಿ ಅದಕ್ಕೆ ಬೆಳೆದಿಲ್ಲ ಅಂದರು. ಆಗ ನಾನು ಹೇಳಿದೆ, ಅದಲ್ಲ. ಹಾರ್ಡ್ವೇರ್ ಗೆ ಬೇಕಾದ ಜನ ಇದಾರಲ್ಲ, ಅವರು ಎಸ್ ಎಸ್ ಎಲ್ ಸಿ ಯೇ ಫೇಲ್ ಆಗಿಬಿಟ್ಟಿರುತ್ತಾರೆ. ಅವರು ಎಸ್ಎಸ್ಎಲ್ಸಿಯಿಂದ ಮುಂದೆ ಹೋಗುವುದೇ ಇಲ್ಲ. ಯಾಕೆಂದರೆ, ಅವನಿಗೆ ಕುಣಿಯೋಕೆ ಬರುತ್ತೆ, ಹಾಡೋಕೆ ಬರುತ್ತೆ. ಕೈಯಲ್ಲಿ ಏನಾದರೂ ಕೆಲಸ ಮಾಡೋಕೆ ಬರುತ್ತೆ. ಅವನ ಜ್ಞಾನ ಬೆರಳುಗಳಲ್ಲಿರುತ್ತೆ. ಅಂತಹವರನ್ನು ನಾವು ಬಳಸಿಕೊಳ್ಳುತ್ತಲೇ ಇಲ್ಲ. ಅದರಿಂದ ನಾವು ಜ್ಞಾನದ ದೃಷ್ಟಿಯಿಂದಲೇ ಇವತ್ತು ರಿಸರ್ವೇಶನ್ ಮಾಡಬೇಕಾಗಿ ಬಂದಿದೆ. ಜ್ಞಾನದ ಬೆಳವಣಿಗೆಯ ದೃಷ್ಟಿಯಿಂದ. ಜ್ಞಾನ ಹೊಸದಾಗುವುದರ ದೃಷ್ಟಿಯಿಂದ. ಈಗ ಲೆದರ್ ಟೆಕ್ನಾಲಜಿ. ನಿಜವಾಗಿಯೂ ಚಿಕ್ಕವಯಸ್ಸಿನಿಂದ ಚರ್ಮದ ಜೊತೆ ಕೆಲಸ ಮಾಡಿದವನು ಎಸ್ಎಸ್ಎಲ್ಸಿ ಪಾಸಾಗಿರಲ್ಲ, ಲೆದರ್ ಟೆಕ್ನಾಲಜಿ ಇನ್ಸ್ಟಿಟ್ಯೂಟ್ ಇದ್ದರೆ ಅಲ್ಲಿಗೆ ಹೋಗುವುದಕ್ಕೆ ಆಗುವುದಿಲ್ಲ, ಅಲ್ವ? ಒಬ್ಬ ಕಾರ್ಪೆಂಟರ್ ಮಗನಿಗೆ ಕಾರ್ಪೆಂಟರಿಗೆ ಸಂಬಂಧಪಟ್ಟಂತಹ ಯಾವುದೇ ವಿಶೇಷವಾದ ಜ್ಞಾನವಿದ್ದರೂ ಅವನಿಗೆ ಅಲ್ಲಿ ಪ್ರವೇಶ ಇಲ್ಲ. ಇದನ್ನು ನಾವು “ಟೆಕ್ನಿಸೈಡ್” ಅಂತೀವಿ. ಸೂಯಿಸೈಡ್ ಇದ್ದ ಹಾಗೆ. ಎಲ್ಲರೂ ತಮ್ಮ ಟೆಕ್ನಾಲಜಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದಲೇ ಐಟಿ-ಬಿಟಿ ಎಲ್ಲದರಲ್ಲೂ ಈ ರಿಸರ್ವೇಶನ್ ಬೇಕು. ಯಾಕೆಂದರೆ, ಆಯಾ ಜ್ಞಾನದ ಬೆಳವಣಿಗೆಯ ದೃಷ್ಟಿಯಿಂದಲೇ. ಬರಿ ಬಡತನದ ನಿವಾರಣೆ ಒಂದೇ ಅಲ್ಲ. ಅದೂನೂ ಹೌದು, ಜೊತೆಗೆ ಇದು ಹೌದು. ಆದ್ದರಿಂದ ಜ್ಞಾನವನ್ನು ನಾವು ರೀಡಿಫೈನ್ ಮಾಡಬೇಕು ಈವತ್ತು. ನಾವು ಬರೀ ಸಾಫ್ಟ್ವೇರ್ ಜ್ಞಾನಕ್ಕೆ ಜ್ಞಾನ ಎಂದು ತಿಳಿದಿದ್ದೇವೆಯೇ ಹೊರತು ಬೇರೆ ಅನೇಕ ರೀತಿಯ ಜ್ಞಾನ ಮಾರ್ಗಗಳಿವೆಯಲ್ಲ ಅವನ್ನು ನಾವು ತುಚ್ಛವಾಗಿ ಕಾಣುತ್ತೇವೆ ನಮ್ಮ ದೇಶದಲ್ಲಿ. ಅದಕ್ಕೆ ಜಾತಿಪದ್ಧತಿಯೂ ಒಂದು ಕಾರಣ.
ಪ್ರಶ್ನೆ ೬
ಹಿಂದೆ ಒಮ್ಮೆ ಮಾತನಾಡುವಾಗ ತಾವು ಮಾನವಿಕಗಳನ್ನೆಲ್ಲ ಕನ್ನಡದಲ್ಲೇ ಬೋಧಿಸಬಹುದು ಅಂತ ಹೇಳಿದ್ದಿರಿ. ಈಗಲೂ ತಾವು ಬೇರೆ ಬೇರೆ ಕಡೆ ಭಾಷಣಗಳಲ್ಲಿ ಪ್ರತಿಪಾದಿಸುತ್ತಲೇ ಬಂದಿದ್ದೀರಿ. ಆದರೆ, ಸರ್ಕಾರದ ಕಡೆಯಿಂದಾಗಲಿ, ಕನ್ನಡಪರ ಹೋರಾಟಗಾರರಿಂದಾಗಲಿ ಈ ಥರದ ಒಂದು ಪ್ರಾಕ್ಟಿಕಲ್ ಆದ ಸೊಲ್ಯೂಶನ್ ಎಲ್ಲಿಂದಲೂ ಬರುತ್ತಿಲ್ಲ. ಕನ್ನಡದ ಹೋರಾಟ ಯಾವಾಗಲೂ ಭಾವನಾತ್ಮಕ ವಿಷಯಗಳ ಸುತ್ತಲೇ ಕಾನ್ಸಂಟ್ರೇಟ್ ಆಗಿ ಅದರ ಸುತ್ತಾನೇ ಚರ್ಚೆ ನಡೆಯುತ್ತಿರುತ್ತೆ. ಇದನ್ನು ಬದಲಾಯಿಸುವುದಕ್ಕೆ ಒಬ್ಬ ಸಾಮಾನ್ಯ ಕನ್ನಡಿಗ, ಅವನ ಲೆವೆಲ್ ನಲ್ಲಿ ಏನು ಮಾಡಬಹುದು ಅನ್ನುವುದು ಹೆಚ್ಚು ಚರ್ಚೆಯಾಗಬೇಕಾಗಿದೆ ಅನ್ನಿಸುತ್ತೆ.
ಉತ್ತರ
ಗೊತ್ತಾಗಲ್ಲ. ಸರಕಾರಕ್ಕೆ ನಿಜವಾಗಲೂ ಮನಸ್ಸಿದ್ದರೆ, ಒಂದು ಇಂಜಿನಿಯರಿಂಗ್ ಕಾಲೇಜು. ಒಂದು ಮೆಡಿಕಲ್ ಕಾಲೇಜನ್ನು ಕನ್ನಡದಲ್ಲಿ ಕಲಿಸೋ ಎರಡು ಕಾಲೇಜುಗಳನ್ನು ಸೃಷ್ಟಿಸಬಹುದು. ಸೃಷ್ಟಿಸಿದರೂ ಅನ್ನಿ. ಅದಕ್ಕೆ ಬೇಕಾದುದನ್ನು ಕಲಿತುಕೊಳ್ಳಬಹುದು. ಭಾಷೆ. ಕನ್ನಡದಲ್ಲಿ ಉ ಕಾರ ಒಂದನ್ನು ಸೇರಿಸಿಬಿಟ್ಟರೆ, ಯಾವ ಶಬ್ದವಾದರೂ ಕನ್ನಡ ಶಬ್ದವಾಗುತ್ತದೆ. ಇಂಗ್ಲಿಶಿಗೆ ಆ ಅಡ್ವಾಂಟೇಜೇ ಇಲ್ಲ. ಈಗ ಚೇರ್ – ಚೇರು, ಅದನ್ನು ಕನ್ನಡದ ಕೂಂಬು, ಡೋರ್- ಡೋರು, ವಿಂಡೋ- ವಿಂಡೋ. ಉ ಕಾರ ವನ್ನು ಸೇರಿಸಿಬಿಟ್ಟರೆ ನಮ್ಮ ಭಾಷೆಯ ಶಬ್ದವೇ ಆಗಿಬಿಡುತ್ತದೆ. ಆಕ್ಸಿಜನ್ನು, ಹೈಡ್ರೋಜನ್ನು, ಅದರಲ್ಲಿ ಯಾವ ಮಡಿವಂತಿಕೆನೂ ಬೇಡ. ಆ ಥರ ಮಾಡುವುದಕ್ಕೆ ಶುರುಮಾಡಿದರೆ, ಗ್ರಂಥದ ಭಾಷೆಯಾಗಿ ಇಂಗ್ಲಿಷ್ ಗೊತ್ತಿರಬೇಕು. ಯಾವ ಇಂಗ್ಲಿಷ್ ಗ್ರಂಥವನ್ನಾದರೂ ಅವನಿಗೆ ಓದಿ ತಿಳಿಯುವುದು ಗೊತ್ತಿರಬೇಕು. ಅದರಲ್ಲಿ ಎರಡೂ ಬರಬೇಕಾಗಿಲ್ಲ. ಆ ಭಾಷೆಯನ್ನು ಬರೆಯುವುದು, ಆ ಭಾಷೆಯನ್ನು ಮಾತನಾಡುವುದು, ಆ ಭಾಷೆಯನ್ನು ಗ್ರಹಿಸುವುದು. ಈ ಮೂರೂ ಇವೆ. ಗ್ರಹಿಸುವುದು ಗೊತ್ತಿರಬೇಕು. ಬರವಣಿಗೆಯೂ ಗೊತ್ತಿರಬೇಕು. ಮಾತನಾಡುವುದು ಗೊತ್ತಿಲ್ಲದಿದ್ದರೂ ಪರವಾಗಿಲ್ಲ. ಗ್ರಹಿಸುವುದು ಗೊತ್ತಿದ್ದರೆ ಒಬ್ಬ ಇಂಗ್ಲಿಶ್ ಲೆಕ್ಚರರನ್ನು ಕೇಳಿ ಬೇಕಾದರೂ ತಿಳಿದುಕೊಳ್ಳಬಹುದು. ಹಾಗೆ ಎರಡು ಕಾಲೇಜನ್ನು ನೀವು ಮಾಡಿದರೆ, ಬಹಳ ಒಳ್ಳೆಯ ಕಾಲೇಜನ್ನು ಮಾಡುವುದಾದರೆ, ಬನಾರಸ್ನಿಂದ ಅಪ್ಲೈ ಮಾಡಿ ಕನ್ನಡ ಕಲಿತುಕೊಂಡು ಆ ಕಾಲೇಜು ಸೇರುತ್ತಾರೆ. ನಮ್ಮ ಹುಡುಗರು ಎಷ್ಟೋ ಜನ ರಷ್ಯಾಕ್ಕೆ ಹೋಗಿ ರಷ್ಯನ್ ಕಲಿತುಕೊಂಡು ಮೆಡಿಸಿನ್ ಮಾಡಿ ಬಂದಿಲ್ವ? ಜರ್ಮನಿಗೆ ಹೋಗಿ ಜರ್ಮನ್ ಕಲಿತುಕೊಂಡು ಮೆಡಿಸಿನ್ ಮಾಡಿ ಬರೋದಿಲ್ವ? ಹಾಗೇನೇ ಇಲ್ಲೂ ಆಗ್ತಿತ್ತು. ಅದಕ್ಕೇನು ಕಾರಣ ಅಂದರೆ, ನಮ್ಮ ಭಾಷಾಭಿಮಾನ ಸುಳ್ಳು ಅಂತ ನನಗನ್ನಿಸುತ್ತೆ. ನಿಜವಾದ ಭಾಷಾಭಿಮಾನ ಅಲ್ಲವೇ ಅಲ್ಲ ಅದು. ಭಾವನಾತ್ಮಕವಾಗಿಯೂ ನನಗೆ ಅದು ಮೋಸ ಅನ್ನಿಸುತ್ತೆ. ಅದು ಕೂಡ ನಿಜಾನೇ. ಬಹಳ ಜನ ಇದನ್ನೊಂದು ದಂಧೆ ಮಾಡಿಕೊಂಡಿರುತ್ತಾರೆ. ಭಾಷೆಯನ್ನು ಪ್ರೀತಿ ಮಾಡುವುದೆಂದರೆ ಏನು ಅಂತ ಗೊತ್ತಿರಬೇಕು. ಗೊತ್ತಿಲ್ಲದೆ ಇರೋರು ಹೀಗೆ ಮಾಡುತ್ತಾರೆ.
ಪ್ರತಿಕ್ರಿಯೆ (2)