ಅತ್ಯಾಚಾರವಂತೆ ಅತ್ಯಾಚಾರ ಎಲ್ಲೆಲ್ಲೂ, ಅದೂ ಸಾಮೂಹಿಕ ಅತ್ಯಾಚಾರ, ಛೆ, ಇನ್ನೆಷ್ಟು ದಿನ ಈ ಕರ್ಣ ಕಠೋರ ಸುದ್ದಿ ಕೇಳುತ್ತಾ ಬದುಕುವುದು. ಇದಕ್ಕೊಂದು ಅಂತ್ಯವಿಲ್ಲವೇ ? ಘೋಷಿಸಿ ಬಿಡಿ, ಹೆಣ್ಣು ಭೋಗದ ವಸ್ತುವೆಂದು.
ಘೋಷಿಸಿ ಬಿಡಿ, ಹೆಣ್ಣು ಇರುವುದೇ ಗಂಡಿಗಾಗಿ ಎಂದು.
ಘೋಷಿಸಿ ಬಿಡಿ, ಹೆಣ್ಣು ಸುಖ ನೀಡುವ ಯಂತ್ರವೆಂದು.
ತಾಖತ್ತಿದ್ದವರು ಬೆಲೆ ಕೊಟ್ಟು ಕೊಂಡುಕೊಳ್ಳಲಿ, ಶಕ್ತಿ ಇದ್ದವರು ಹೊಡೆದಾಡಿ ಪಡೆದುಕೊಳ್ಳಲಿ, ಗಂಡಸ್ತನವಿದ್ದವರು ಭರವಸೆ ನೀಡಿ ಉಪಯೋಗಿಸಿಕೊಳ್ಳಲಿ, ಧೈರ್ಯವಿದ್ದವರು ಪ್ರೀತಿಯ ನಾಟಕವಾಡಿ ಬಳಸಿಕೊಳ್ಳಲಿ, ಸಂಪ್ರದಾಯವಾದಿಗಳು ಮದುವೆಯಾಗಿ ಅನುಭವಿಸಲಿ, ಖದೀಮರು ಅತ್ಯಾಚಾರ ಮಾಡಿ ಸುಖಿಸಲಿ, ಬೆಲೆ ನಿಗದಿ ಮಾಡಿ, ಆಕೆಯ ಸೌಂದರ್ಯ ಆಧರಿಸಿ, ಆಕೆಯ ಬಣ್ಣ ನೋಡಿ, ಆಕೆಯ ಅಲಂಕಾರ ಗಮನಿಸಿ, ಆಕೆಯ ನಗುವ ರೀತಿ ನೋಡಿ, ಆಕೆಯ ಉಡುಪಿನ ಭಿನ್ನತೆ ಗಮನಿಸಿ. ಆಗ ಅಕ್ಕ ತಂಗಿ ತಾಯಿ ಹೆಂಡತಿಯೂ ಸೇರಿ ನಮಗೆ ನಿಯಂತ್ರಣವಿರುವ ಎಲ್ಲರನ್ನೂ ಮಾರಿ ಲಾಭ ಗಳಿಸಬಹುದು. ಆಗಲಾರದರೂ ಕನಿಷ್ಠ ಈ ಅತ್ಯಾಚಾರವೆಂಬ ಸುದ್ದಿಗಳಿಂದ ದೂರವಿರಬಹುದು. ಆಗ ಅತ್ಯಾಚಾರವೂ ನೇರ, ದಿಟ್ಟ, ನಿರಂತರ ಮತ್ತು ಅಧೀಕೃತ.
ಆಹಾರಕ್ಕಾಗಿ ಪ್ರಾಣಿ ವಧೆ ಮಾಡುವುದಿಲ್ಲವೇ, ಹಾಗೆ ಪುರುಷ ಸುಖಕ್ಕಾಗಿ ಹೆಣ್ಣಿನ ಮೇಲೆ ಅತ್ಯಾಚಾರ. ಆಗ, ಈ ಸುದ್ದಿಯೂ ಸಹಜ ಸ್ವಾಭಾವಿಕವಾಗುತ್ತದೆ. ಯಾವುದೇ ಮಾನಸಿಕ ಹಿಂಸೆ ಇರುವುದಿಲ್ಲ, ಹೆಣ್ಣೆಂಬ ಮಮಕಾರವೂ ಉಳಿಯುವುದಿಲ್ಲ.
ಪ್ರತಿನಿತ್ಯ , ಮಗುವಿನಿಂದ ಮುದುಕಿಯವರೆಗೆ, ಭಿಕ್ಷುಕಿಯಿಂದ ಸನ್ಯಾಸಿನಿಯವರೆಗೆ, ವಿದ್ಯಾರ್ಥಿನಿಯಿಂದ ಮಾನಸಿಕ ಅಸ್ವಸ್ಥತೆಯವರೆಗೆ, ಹೆಣ್ಣು ಎಂಬ ಒಂದೇ ಕಾರಣದಿಂದ ಈ ಅತ್ಯಾಚಾರದ ಸುದ್ದಿ ಕೇಳಿ ಕೇಳಿ ಸಾಕಾಗಿದೆ. ಸುದ್ದಿಯಾಗದ ಲೈಂಗಿಕ ಶೋಷಣೆಯ ಸಭ್ಯ ಮುಖವಾಡಗಳೆಷ್ಟೋ? ಪಕ್ಷ ಪಂಥಗಳ ಆಧಾರದ ಮೇಲೆ ಅತ್ಯಾಚಾರ ಸಮರ್ಥಿಸುವವರೆಷ್ಟೋ? ಇಂತಹವರನ್ನು ಯಾವುದಕ್ಕೆ ಹೋಲಿಸಿದರೂ ಅದಕ್ಕೆ ಅವಮಾನವಾಗುತ್ತದೆ. ನನಗೆ ಪದಗಳೇ ಸಿಗುತ್ತಿಲ್ಲ.
ಈ ರಕ್ಕಸತನಕ್ಕೆ ಕೊನೆ ಎಂದು? ಅತ್ಯಾಚಾರದ ಸುದ್ದಿಗಳಿಲ್ಲದ ದಿನಗಳು ಬರುವುದು ಎಂದು? ನಾಗರಿಕ ಸಮಾಜ ನಿರ್ಮಾಣ ಆಗುವುದು ಎಂದು? ನಮಗೆ ನಮ್ಮ ಜೀವ ಮುಖ್ಯ, ಪ್ರಾಣ ಮುಖ್ಯ. ಮಾನ ಮುಖ್ಯ ಎಂದು ಭಾವಿಸಿದ್ದೆವು. ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದೆವು. ಸಾಧ್ಯವಾಗುತ್ತಿಲ್ಲ. ಬೇಲಿಯೇ ಎದ್ದು ಹೊಲ ಕಬಳಿಸಿದರೆ ರಕ್ಷಣೆ ಎಲ್ಲಿಂದ. ಕನಿಷ್ಠ ಪ್ರಾಣವಾದರೂ ಉಳಿಯಲಿ. ಗಲ್ಲು ಶಿಕ್ಷೆಗೂ ಹೆದರಲಿಲ್ಲವೆಂದರೆ ನಿಮ್ಮನ್ನು ಇನ್ನು ತಡೆಯಲು ಸಾಧ್ಯವಿಲ್ಲ. ನಮ್ಮನ್ನು ನೋಡಿದ ತಕ್ಷಣ ನಿಮ್ಮ ತೆವಲು ಕೆರಳಿದರೆ ನಾವೇನು ಮಾಡಲು ಸಾಧ್ಯ. ಅದು ಒಮ್ಮೆ ಮಾತ್ರವಲ್ಲ ನಿಮ್ಮ ಜೀವನ ಪರ್ಯಂತ, ಒಬ್ಬರು ಮಾತ್ರವಲ್ಲ ಹಲವರು. ಹಣವಿಲ್ಲದವರು ಬಲವಂತದಿಂದ ದೌರ್ಜನ್ಯದಿಂದ, ಹಣ ಅಧಿಕಾರ ಇರುವವರು ಆಸೆ ಆಮಿಷಗಳಿಂದ ನಮ್ಮನ್ನು ಭೋಗಿಸುತ್ತಾರೆ. ಎರಡೂ ಒಂದೇ, ವ್ಯತ್ಯಾಸವೇನಿಲ್ಲ. ದೇಹದಲ್ಲಿ ಏನಿದೆ ಪಾವಿತ್ರ್ಯತೆ, ಮನಸ್ಸಿನಲ್ಲಿ ಇಲ್ಲದ ಮೇಲೆ ಅಲ್ಲವೇ? ಯಾವ ದೇವರೂ, ಯಾವ ಧರ್ಮವೂ, ಯಾವ ಕಾನೂನು ನಮ್ಮನ್ನು ಕಾಪಾಡಲಿಲ್ಲ. ಇನ್ನು ಇದನ್ನು ತಡೆಯುವುದು ನಮ್ಮಿಂದ ಸಾಧ್ಯವಿಲ್ಲ.
ಇಡೀ ಜೀವನಪರ್ಯಂತ ಈ ಸಮಾಜದಲ್ಲಿ ನಾವು ಭಯದಿಂದಲೇ ಸಾಯಬೇಕೆ. ರಸ್ತೆಗಳಲ್ಲಿ ಓಡಾಡುವಂತಿಲ್ಲ, ಬಸ್ಸು ರೈಲು ಕಾರುಗಳಲ್ಲಿ ನೆಮ್ಮದಿಯಿಂದ ಪ್ರಯಾಣಿಸುವಂತಿಲ್ಲ, ಶಾಲಾ ಕಾಲೇಜುಗಳಲ್ಲಿ ಒಂಟಿಯಾಗಿ ಇರುವಂತಿಲ್ಲ, ಉದ್ಯೋಗ ಸ್ಥಳದಲ್ಲಿ ನೆಮ್ಮದಿ ಇಲ್ಲ. ಯಾರಿಗೆ ಬೇಕು ಈ ಜೀವನಾ. ಈ ಸಮಾಜ ಇರುವುದು ಪುರುಷರಿಗಾಗಿ, ಅವರ ಸುಖಕ್ಕಾಗಿ, ಅವರ ತೆವಲಿಗಾಗಿ. ನಾವೇನಿದ್ದರೂ ಅವರ ಗುಲಾಮರು ಅಡಿಯಾಳುಗಳು. ಅದಕ್ಕಾಗಿ ನಮಗೆ ಉಳಿದಿರುವುದು ಒಂದೇ ಮಾರ್ಗ. ಅದೇ ವೇಶ್ಯೆಯರಾಗುವುದು. ದೇವದಾಸಿಯರಾಗುವುದು. ಆಗ ನಮಗೆ ಸಾವಿನ ಭಯ ಇರುವುದಿಲ್ಲ. ಯಾರಾದರೂ ಅನುಭವಿಸಿಕೊಳ್ಳಿ. ಅದನ್ನು ಅಧೀಕೃತ ಗೊಳಿಸಿದರೆ ಕನಿಷ್ಠ ನಮ್ಮ ಪ್ರಾಣಗಳಾದರೂ ಉಳಿಯುತ್ತದೆ.
ಒಬ್ಬರೋ ಇಬ್ಬರೋ ವೇಶ್ಯೆಯರಾಗುವುದು, ಅವರನ್ನು ಅತ್ಯಂತ ಕೀಳಾಗಿ ನೋಡುವುದು, ಆ ಹೆಣ್ಣು ನರಳುವುದು ಬೇಡವೇ ಬೇಡ. ಸಾಮೂಹಿಕವಾಗಿ ನಾವೆಲ್ಲರೂ ವೇಶ್ಯೆಯರಾಗುತ್ತೇವೆ. ಹೆಣ್ಣಿನ ನೋವನ್ನು ಹಂಚಿಕೊಳ್ಳುತ್ತೇವೆ. ತೀರಿಸಿಕೊಳ್ಳಿ ನಿಮ್ಮ ಗಂಡಸುತನವನ್ನು ದಾಹ ತೀರುವವರೆಗೂ...
ಪುರುಷ ಬಾಂಧವರೇ.... ಒಂದು ಸಣ್ಣ ವಿಷಯ ನೆನಪಿಸುತ್ತೇನೆ. ಹೆಣ್ಣು ಎಂದಾಗ ನಿಮ್ಮ ತಾಯಿ ತಂಗಿ ಅಕ್ಕ ಮಗಳು ಸೊಸೆ, ಅಜ್ಜಿ, ಚಿಕ್ಕಮ್ಮ ಅತ್ತಿಗೆ ಎಲ್ಲರೂ ಸೇರುತ್ತಾರೆ. ಅವರನ್ನೂ ಬಿಡಬೇಡಿ. ಪುರುಷರ ತಾಖತ್ತು ಎಲ್ಲಾ ಕಡೆಯೂ ನಡೆಯಲಿ. ಧರ್ಮ ನೈತಿಕತೆ ಸಂಪ್ರದಾಯ ಎಲ್ಲರಿಗೂ ಸಮನಾಗಿ ಅನ್ವಯಿಸಲಿ.
ಭಾರತದಲ್ಲಿ ಅತ್ಯಾಚಾರ ಅಪರೂಪವಲ್ಲ, ಪ್ರತಿ 20 ನಿಮಿಷಕ್ಕೆ ಒಂದು ಅತ್ಯಾಚಾರವಾಗುತ್ತದೆ. ಕೆಲವು ಘಟನೆಗಳು ಮಾತ್ರ ವರದಿಯಾಗುತ್ತವೆ. ದಾಖಲೆಗೆ ಸಿಗದ ಪ್ರಕರಣಗಳು ಇನ್ನೆಷ್ಟೋ, ಪರೋಕ್ಷ ದೌರ್ಜನ್ಯಗಳು ಮತ್ತೆಷ್ಟೋ, ಒಬ್ಬ ಬಾಲಕಿಯನ್ನು ಬೀದಿ ಬದಿಯ ಕಾಮುಕರು ಎತ್ತೊಯ್ದು ಅತ್ಯಾಚಾರ ಮಾಡಿ ಸುಟ್ಟು ಹಾಕುತ್ತಾರೆಂದರೆ ನಾವು ಯಾವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಗೆಳತಿಯರೇ ನನ್ನದೊಂದ ಕಳಕಳಿಯ ಮನವಿ. ಈ ಸಲಹೆ ಉತ್ತಮ ಎನಿಸಿದರೆ ಇದನ್ನು ಯಾವುದಾದರೂ ಮಹಿಳಾ ಸಂಘಟನೆಗಳು ಒಂದು ಅಭಿಯಾನವಾಗಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಆರಂಭಿಸಿ.
ಕೊನೆಯದಾಗಿ, ಗಂಡು ಹೆಣ್ಣಿನ ಮಿಲನ ಮಹೋತ್ಸವ, ಪ್ರೀತಿಯ, ಒಪ್ಪಿಗೆಯ, ಸಹಮತದಿಂದ ನಡೆದರೆ ಅದೊಂದು ಮನುಷ್ಯ ಪ್ರಾಣಿಯ ಅತ್ಯುತ್ಕೃಷ್ಟ ಸುಖಮಯ ಕ್ಷಣ. ಅದು ಬಲವಂತದ ಅತ್ಯಾಚಾರವಾದರೆ ಹೆಣ್ಣಿಗೆ ಅದು ನರಕಯಾತನೆ, ಗಂಡಿಗೆ ಅದೇ ಆತನ ಅಂತಿಮ ಯಾತ್ರೆಯಾಗಲಿ ಎಂದು ಆಶಿಸುತ್ತಾ....
(ಕಾಠಿಣ್ಯ ಎನಿಸಿದರೆ ಕ್ಷಮೆ ಇರಲಿ)
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!