ಕನ್ನಡ ರಾಜ್ಯೋತ್ಸವದ ಹೊಸ್ತಿಲಿನಲ್ಲಿ ನನ್ನ ತಾಯಿ ಭಾಷೆಯ ಬಗ್ಗೆ ಒಂದಷ್ಟು ಅನಿಸಿಕೆ. ಸಾಮಾಜಿಕ ಜಾಲತಾಣಗಳಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲೆ ಬೀರಿದ ಪ್ರಭಾವ. ಸುಮಾರು 10-15 ವರ್ಷಗಳ ಹಿಂದೆ ಇದ್ದ ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗೆಗಿನ ಆತಂಕ ಈಗ ಅಷ್ಟಾಗಿ ಕಾಣುತ್ತಿಲ್ಲ. ಫೇಸ್ ಬುಕ್, ವಾಟ್ಸ್ ಆಪ್, ಎಕ್ಸ್, ಇನ್ಸ್ಟಾಗ್ರಾಂ ಮುಂತಾದ ಜಾಲತಾಣಗಳ  ಸಂಪರ್ಕ ಕ್ರಾಂತಿಯಿಂದ ಆದ ಕೆಲವು ಒಳ್ಳೆಯ ಬೆಳವಣಿಗೆಗಳಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಬಹಳ ಉಪಯೋಗವಾಗಿದೆ ಎಂಬುದನ್ನು ಗಮನಿಸಬಹುದು.

ಮೊದಲೆಲ್ಲಾ ಕೇವಲ ಪತ್ರಿಕೆಗಳು, ನಿಯತಕಾಲಿಕೆಗಳು , ಒಂದಷ್ಟು ಸಾಂಸ್ಕೃತಿಕ ವೇದಿಕೆಗಳು, ಪ್ರಕಾಶನಗಳು ಮತ್ತು ಬೆರಳೆಣಿಕೆಯ ಬರಹಗಾರರು ಬಿಟ್ಟರೆ ಸಾಮಾನ್ಯರಿಂದ ಸಾಹಿತ್ಯ ದೂರವೇ ಇತ್ತು. ಸಿನಿಮಾ ಜನಪ್ರಿಯತೆಗೆ ಹೋಲಿಸಿದರೆ ಸಾಹಿತ್ಯ ಕೆಲವೇ ಜನರ ಆಸಕ್ತಿದಾಯಕ ಕ್ಷೇತ್ರವಾಗಿತ್ತು. ಆದರೆ ಈಗ ನೋಡಿ ಸಾಮಾನ್ಯ ಜನರೂ ತಮ್ಮ ಭಾವನೆ ಅಭಿಪ್ರಾಯಗಳನ್ನು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅದೂ ಕನ್ನಡದಲ್ಲಿಯೇ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ಯುವ ಪ್ರತಿಭೆಗಳಂತೂ ಮೂಕವಿಸ್ಮಿತರಾಗುವಂತೆ ತಮ್ಮ ಬರಹಗಳನ್ನು ಮೂಡಿಸುತ್ತಿದ್ದಾರೆ. ಅವರ ಭಾಷೆ ಕಲ್ಪನೆ ನಿರೂಪಣೆ ಹಿಂದಿನ ಕನ್ನಡ ಸಾಹಿತ್ಯದ ಸ್ವರ್ಣಯುಗ ಮತ್ತೆ ಮರುಕಳಿಸುತ್ತಿದೆಯೇನೋ ಎಂಬ ಭಾವನೆ ಉಂಟುಮಾಡುತ್ತಿದೆ. ಫೇಸ್ಬುಕ್, ವಾಟ್ಸಾಪ್  ಗ್ರೂಪ್ ಗಳ ಹೆಸರನ್ನೇ ಗಮನಿಸಿ, ಎಷ್ಟೊಂದು ಆಕರ್ಷಕ, ಎಷ್ಟೊಂದು ಮುದ್ದು.

ಎಲ್ಲೋ ಆಗಾಗ ಕೆಲವೇ ಸಾಹಿತ್ಯಾಸಕ್ತ ಗುಂಪುಗಳಲ್ಲಿ ನಡೆಯುತ್ತಿದ್ದ ಕವಿಗೋಷ್ಟಿ, ವಿಚಾರ ಸಂಕಿರಣ, ಸಾಹಿತ್ಯ ಸ್ಪರ್ಧೆ ಈಗ ರಾಜ್ಯಾದ್ಯಂತ ಆಗಾಗ ನಡೆಯುತ್ತಲೇ ಇದೆ. ತಮ್ಮದೇ ಗ್ರೂಪ್ ಗಳಲ್ಲಿ ಸಾಹಿತ್ಯದ ಬಗ್ಗೆ ನಿರಂತರ ಚರ್ಚೆಗಳಾಗುತ್ತಲೇ ಇದೆ. ಅದರಲ್ಲೂ ಶಾಲಾ ಶಿಕ್ಷಕ/ಶಿಕ್ಷಕಿಯರು, ಮಾಹಿತಿ ತಂತ್ರಜ್ಞಾನದ ಆಧುನಿಕ ಜೀವನ ಶೈಲಿಯ ಹುಡುಗ/ಹುಡುಗಿಯರು, ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು , ಇನ್ನೂ ಆಶ್ಚರ್ಯವೆಂದರೆ ಉರ್ದು ಮಾತೃಭಾಷೆಯ ಮುಸ್ಲಿಂಮರೂ ಕೂಡ ಕನ್ನಡದ ಅತ್ಯಂತ ಪ್ರತಿಭಾವಂತ ಬರಹಗಾರರಾಗಿ ಮೂಡಿಬರುತ್ತಿರುವುದು ಭಾಷೆಯ ಬೆಳವಣಿಗೆಯ  ದೃಷ್ಟಿಯಿಂದ ಹೆಮ್ಮೆಪಡುವ ಸಂಗತಿ.

ಇದೇನು ಕಡಿಮೆ ಸಾಧನೆಯಲ್ಲ. ಹಳೆಯ ತಲೆಮಾರಿನ ಕೆಲವು ಬರಹಗಾರರು ಒಂದಷ್ಟು  ಅಸೂಯೆ ಪಡುವಷ್ಟು, ತಳಮಳಗೊಳ್ಳುವಷ್ಟು ಇದು ಬೆಳೆದಿದೆ. ಬದಲಾವಣೆಯ ಸಂದರ್ಭಗಳಲ್ಲಿ ಇದು ಸಹಜ ಇರಲಿ. ಅದೂ ಅಲ್ಲದೆ ಸಾಹಿತ್ಯ ಪ್ರಕಾರದ ಅತ್ಯಂತ ಕಠಿಣ ರೂಪವಾದ ವಿಮರ್ಶಾ ವಿಭಾಗದಲ್ಲಿಯೂ ಹೊಸ ರೀತಿಯ ಚಿಂತನಾ ನೋಟ ಕಾಣುತ್ತಿರುವುದು ತುಂಬಾ ಸಂತೋಷ ಉಂಟುಮಾಡುತ್ತಿದೆ. ಎಂದಿನಂತೆ ಒಂದಷ್ಟು ಉಢಾಪೆ, ಜೊಳ್ಳು ಇದ್ದದ್ದೇ. ಅದು ಅನುಭವದೊಂದಿಗೆ ಪಕ್ವವಾಗುತ್ತಾ ಸಾಗುತ್ತದೆ ಎಂದು ನಿರೀಕ್ಷಿಸೋಣ.

ಕೊನೆಯದಾಗಿ ಒಂದು ಕಾಡುವ ಕೊರತೆಯೆಂದರೆ ಕನ್ನಡ ಶಾಲೆಗಳ ಅಧೋಗತಿ ಮತ್ತು ಅಲ್ಲಿ ಕಲಿಯುವವರ ಸಂಖ್ಯೆ ಗಾಬರಿಯಾಗುವಷ್ಟು ಕಡಿಮೆಯಾಗಿರುವುದು. ಅದು ದೀರ್ಘಾವಧಿಯಲ್ಲಿ ಖಂಡಿತ ಕೆಟ್ಟ ಪರಿಣಾಮ ಬೀರುತ್ತದೆ. ಇದು ಆಡಳಿತಾಗಾರರ - ವ್ಯವಸ್ಥೆಯ ಲೋಪ. ಅದು ಬಿಟ್ಟರೆ ಕನ್ನಡ ಭಾಷೆ ಮತ್ತು ಸಾಹಿತ್ಯ ಅತ್ಯಂತ ಉಲ್ಲಾಸದಾಯಕವಾಗಿದೆ. ಸಹಜತೆಯತ್ತ ಮರಳುತ್ತಿದೆ ನನ್ನ ತಾಯಿಭಾಷೆ - ಅದೇ ಕನ್ನಡ, ಕನ್ನಡಕ್ಕಾಗಿ ಕೈ ಎತ್ತು ಅದೇ ಕಲ್ಪ ವೃಕ್ಷ.

ನೀವು ಹಿಂದೂ ಆಗಿರಿ, ಮುಸ್ಲಿಂ ಆಗಿರಿ, ಕ್ರಿಶ್ಚಿಯನ್ ಆಗಿರಿ, ಬೌದ್ದರಾಗಿರಿ ಜೈನರಾಗಿರಿ, ಸಿಖ್ ಆಗಿರಿ, ಪಾರ್ಸಿಯಾಗಿರಿ ಅಥವಾ ಇನ್ಯಾವುದೇ ಧರ್ಮದವರಾಗಿರಿ. ನೀವು ಕಾಂಗ್ರೇಸ್ ಆಗಿರಿ, ಬಿಜೆಪಿ ಆಗಿರಿ, ಜೆಡಿಎಸ್ ಆಗಿರಿ, ಕಮ್ಯುನಿಸ್ಟ್ ಆಗಿರಿ, ಸಮಾಜವಾದಿ ಪಕ್ಷ ಆಗಿರಿ, ಸಂಯುಕ್ತ ಜನತಾದಳ ಆಗಿರಿ, ಬಿಎಸ್ಪಿ ಆಗಿರಿ, ಎಎಪಿ ಆಗಿರಿ, ಕೆ ಆರ್ ಎಸ್ ಆಗಿರಿ, ಪ್ರಜಾಕೀಯ ಆಗಿರಿ ಅಥವಾ ಇನ್ಯಾವುದೇ ಪಕ್ಷದವರಾಗಿರಿ, ನೀವು ಪರಿಶಿಷ್ಟ ಜಾತಿಯವರಾಗಿರಿ, ಪಂಗಡದವರಾಗಿರಿ, ಬ್ರಾಹ್ಮಣರಾಗಿರಿ, ಲಿಂಗಾಯತರಾಗಿರಿ, ಒಕ್ಕಲಿಗರಾಗಿರಿ, ಕುರುಬರಾಗಿರಿ, ವಾಲ್ಮೀಕಿ ಸಮುದಾಯದವರಾಗಿರಿ, ವಿಶ್ವಕರ್ಮದವರಾಗಿರಿ, ತಿಗಳರಾಗಿರಿ, ಯಾದವರಾಗಿರಿ ಅಥವಾ ಯಾವುದೇ ಜಾತಿಯವರಾಗಿರಿ, ನೀವು ವೈದ್ಯರಾಗಿರಿ, ಶಿಕ್ಷಕರಾಗಿರಿ, ಭಿಕ್ಷುಕರಾಗಿರಿ, ಕೂಲಿಯಾಗಿರಿ, ವಕೀಲರಾಗಿರಿ, ಆರಕ್ಷಕರಾಗಿರಿ, ಲೆಕ್ಕ ಪರಿಶೋಧಕರಾಗಿರಿ, ರಾಜಕಾರಣಿಯಾಗಿರಿ, ಅಧಿಕಾರಿಯಾಗಿರಿ, ರೈತರಾಗಿರಿ, ಕಾರ್ಮಿಕರಾಗಿರಿ ಅಥವಾ ಯಾರೇ ಆಗಿರಿ. ಕರ್ನಾಟಕದ ಶಾಶ್ವತ ನಿವಾಸಿಗಳಾಗಿದ್ದರೆ, ತಾಯಿ ಭಾಷೆ ಕನ್ನಡದ ವಿಷಯ ಬಂದಾಗ ದಯವಿಟ್ಟು ಕನ್ನಡಿಗರಾಗಿರಿ ಮತ್ತು ಒಕ್ಕೊರಲಿನಿಂದ ಕನ್ನಡ ಪರ ಧ್ವನಿ ಎತ್ತಿ. ಅದು ಹಿಂದಿ ಏರಿಕೆ ಇರಬಹುದು, ಸಂಸ್ಕೃತಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರಬಹುದು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡದ ಕಡೆಗಣನೆ ಇರಬಹುದು, ರಾಜಕೀಯ ಕಾರಣಗಳಿಗಾಗಿ ಕರ್ನಾಟಕದ ಹಕ್ಕುಗಳು ಮೇಲಿನ ಹಲ್ಲೆ ಇರಬಹುದು ಅಥವಾ ಯಾವುದೇ ವಿಷಯವಿರಲಿ ಎಲ್ಲಾ ಭಿನ್ನಾಭಿಪ್ರಾಯಗಳ ನಡುವೆ ಕನ್ನಡ ಪರ ಸರ್ವ ಸಮ್ಮತ ಅಭಿಪ್ರಾಯ ಮೂಡುವಂತೆ ಕಾರ್ಯನಿರ್ವಹಿಸಿ. 

ತಾಯಿ ಭಾಷೆ ಉಳಿಯದಿದ್ದರೆ ನಮ್ಮ ಬದುಕು ಸಹಜವಾಗಿ ಉಳಿಯುವುದು ಕಷ್ಟ. ಅದು ಅಸಹಜವಾಗಿ ಬೆಳೆಯುತ್ತದೆ.

ಉದಾಹರಣೆಗೆ, ಇತ್ತೀಚಿನ ವರ್ಷಗಳಲ್ಲಿ ಕಂಪ್ಯೂಟರ್ ಮತ್ತು ಮೊಬೈಲ್‌ ತಂತ್ರಜ್ಞಾನದ ಇಂಟರ್ ನೆಟ್ ಎಂಬ ಮಾಹಿತಿಯ ಭಾಷೆ ಹೆಚ್ಚು ಬೆಳವಣಿಗೆ ಹೊಂದುತ್ತಿರುವ ಸಮಯದಲ್ಲಿ ಸ್ವಲ್ಪ ಹಳೆಯ ಪೀಳಿಗೆಯ ಯಾವುದೇ ಕ್ಷೇತ್ರದ ದೊಡ್ಡ ದೊಡ್ಡ ವಿದ್ವಾಂಸರು, ಚಿಂತಕರು, ಜ್ಞಾನಿಗಳೇ ಈ ತಂತ್ರಜ್ಞಾನದ ಮುಂದೆ ಅನಕ್ಷರಸ್ಥರಂತೆ ಕಾಣುತ್ತಿದ್ದಾರೆ. ಕಾರಣ ಈ ಗ್ಯಾಜೆಟ್ ಭಾಷೆಯಲ್ಲಿ ಸಣ್ಣ ಮಕ್ಕಳೇ ನುರಿತವರಂತೆ ಉಪಯೋಗಿಸುತ್ತಾರೆ.

ನಾನು ಕಂಡಂತೆ ಮೊಬೈಲಿನಲ್ಲಿ ಎರಡು/ಮೂರು ವರ್ಷದ ಮಗು ಯೂಟ್ಯೂಬ್ ತಾನೇ ತೆಗೆದು ನೋಡುತ್ತದೆ. ಐದು ವರ್ಷದ ಮಗು ಸ್ವಿಗ್ಗಿ, ಜೊಮೋಟೋ, ಫ್ಲಿಪ್ ಕಾರ್ಟ್, ಅಮೆಜಾನ್ ಉಪಯೋಗಿಸಿಕೊಂಡು ಊಟ ತರಿಸಿಕೊಳ್ಳುತ್ತದೆ. ಕೆಲವರು ಅವರ ಅಪ್ಪ ಅಮ್ಮ ಅಜ್ಜ ಅಜ್ಜಿಗೆ ರೈಲ್ವೆ ಟಿಕೆಟ್, ಔಷಧಿ ಮತ್ತು ಇತರ ಅವಶ್ಯಕ ವಸ್ತುಗಳನ್ನು ಖರೀದಿಸಿ ಕೊಡುತ್ತಾರೆ. ಇನ್ನೂ ಹೆಚ್ಚಿನ ಮಾಹಿತಿ ನೀಡುತ್ತಾರೆ. ಸಾಮಾಜಿಕ ಜಾಲತಾಣಗಳನ್ನು ಸುಲಭವಾಗಿ ಉಪಯೋಗಿಸುತ್ತಾರೆ. ಅಂದರೆ ಹೊಸ ಭಾಷೆ ಅಥವಾ ನಮ್ಮದಲ್ಲದ ಭಾಷೆ ಸೃಷ್ಟಿಯಾದಾಗ ಅದು ನಮ್ಮನ್ನು ಅನಾಥ ಪ್ರಜ್ಞೆಗೆ ದೂಡುತ್ತದೆ.

ಒಂದು ವೇಳೆ ನೀವು ಹೊಸ ಭಾಷೆಯನ್ನು ನಿಧಾನವಾಗಿ ಕಲಿಯಬಹುದು ಎಂದೇ ಭಾವಿಸಿ. ಆಗಲೂ ಸಹ ಸಂಪರ್ಕ ಸುಲಭವಾಗಬಹುದು. ಆದರೆ ಸ್ವಾಭಾವಿಕ ಸಂಸ್ಕೃತಿ ನಮ್ಮಿಂದ ಮರೆಯಾಗುತ್ತದೆ. ಬದುಕು ಅಸಹಜವೆನಿಸಿ ಭಾರವಾಗುತ್ತದೆ. ಆದ್ದರಿಂದ ನಮ್ಮಗಳ ನಡುವೆ ಎಷ್ಟೇ ಸೈದ್ದಾಂತಿಕ ಭಿನ್ನಾಭಿಪ್ರಾಯ ಅಥವಾ ಇನ್ನೇನೆ ಅಭಿಪ್ರಾಯ ಭೇದಗಳು ಇದ್ದರೂ ದಯವಿಟ್ಟು ಕನ್ನಡ ತಾಯಿ ಭಾಷೆಯನ್ನು ಉಳಿಸೋಣ, ಬೆಳೆಸೋಣ ಮತ್ತು ಬದುಕಿನ ಭಾಗವಾಗಿ ಅಳವಡಿಸಿಕೊಳ್ಳೋಣ. ದಕ್ಷಿಣದ ಭಾಷೆಗಳಲ್ಲಿ ಕನ್ಬಡವೇ ಸ್ವಲ್ಪ ನಮ್ಮವರಿಂದಲೇ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ