ನಾಡ ದೇವಿ ತಾಯಿ ಚಾಮುಂಡೇಶ್ವರಿ, ನಿನಗೆ ತುಂಬು ಹೃದಯದ ಧನ್ಯವಾದಗಳು. ನಿನ್ನ ಪಾದ ಕಮಲಗಳಿಗೆ ನನ್ನ ಶಿರಷ್ಟಾಂಗ ನಮಸ್ಕಾರಗಳು. ಮೈಸೂರು ದಸರಾ ಉತ್ಸವವನ್ನು ಭಕ್ತಿ ಪೂರ್ವಕವಾಗಿ ಅತ್ಯಂತ ವಿಜೃಂಭಣೆಯಿಂದ ಯಶಸ್ವಿಯಾಗಿಸಿದ್ದಕ್ಕೆ ಕೋಟಿ ಕೋಟಿ ನಮನಗಳು.

ತಾಯೇ, ಈ ರಾಜ್ಯಕ್ಕೆ ಆಡಳಿತ ನಡೆಸಲು ಅತ್ಯುತ್ತಮ ಮುಖ್ಯಮಂತ್ರಿಯನ್ನು, ಅವರ ಮಂತ್ರಿಮಂಡಲವನ್ನು ಕೊಟ್ಟಿದ್ದಕ್ಕೆ, ಅತ್ಯದ್ಭುತ ವಿರೋಧ ಪಕ್ಷಗಳನ್ನು ಕಾವಲು ಕಾಯಲು ನೇಮಿಸಿದಕ್ಕೆ, ಈ ರಾಜ್ಯವನ್ನು ಸುಭಿಕ್ಷವಾಗಿಡಲು 224 ಅತ್ಯುತ್ಕೃಷ್ಟ ಎಮ್ಎಲ್ಎ ಗಳೆಂಬ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ನಿನಗೆ ಇಡೀ ಕನ್ನಡ ನಾಡಿನ ಜನರ ಪರವಾಗಿ ಅಂತರಾಳದ ನಮಸ್ಕಾರಗಳು. 

ಕರ್ನಾಟಕದ ಬಹುತೇಕ ವಿಐಪಿ ಗಳು ಸಿನಿಮಾ ನಟರು, ಧಾರ್ಮಿಕ ಮುಖಂಡರು, ಉನ್ನತ ಅಧಿಕಾರಿಗಳು, ಉದ್ಯಮಿಗಳು, ಪತ್ರಕರ್ತರು, ಪ್ರಭಾವಿ  ಸಂಪರ್ಕ ಹೊಂದಿರುವ ಸಾಧಕರು ಎಲ್ಲರನ್ನೂ ಮುಖ್ಯ ವ್ಯಕ್ತಿಗಳೆಂದು ಪರಿಗಣಿಸಿ ಅವರನ್ನು ನಿನ್ನ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಿ ಕರೆಸಿಕೊಂಡಿದ್ದಕ್ಕೆ ನಿನಗೆ ಮರೆಯಲಾಗದ ಭಕ್ತಿ ಪೂರ್ವಕ ವಂದನೆಗಳು.

ತಾಯಿ, ಈ ರಾಜ್ಯದ ಕೆಲವರು ಎಷ್ಟೊಂದು ಸುಖ ಸಮೃದ್ಧಿಯಿಂದ ಇದ್ದಾರೆಯೋ ಅದಕ್ಕೆ ನೀನೇ ಕಾರಣ. ನಿನ್ನ ದರ್ಶನಕ್ಕೆ ಬೆಂಗಳೂರಿನಿಂದ ದಶಪಥದ ರಸ್ತೆಯನ್ನು ನಿರ್ಮಿಸಲಾಗಿದೆ. ರೈಲು, ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದೆ. ನಿನ್ನ ರಕ್ಷಣೆಗೆ ಸರ್ಕಾರದ ಜೊತೆಗೆ ಇಡೀ ಮೈಸೂರು ಅರಮನೆಯೇ ನಿಂತಿದೆ. ನಿನ್ನ ಸಂಭ್ರಮಕ್ಕೆ ಕಾಡಿನ ದಷ್ಟಪುಷ್ಟ ಆನೆಗಳನ್ನೇ ಕರೆಸಲಾಗುತ್ತದೆ. ನಿನ್ನ ಅಲಂಕಾರಕ್ಕೆ ಕೋಟ್ಯಂತರ ವಿದ್ಯುತ್ ದೀಪಗಳನ್ನು ಬೆಳಗಿಸಲಾಗಿದೆ. ತಾಯೇ ಇದನ್ನು ನೋಡುತ್ತಿರುವ ನಾವೇ ಧನ್ಯರು, ನಾವೇ ಪುಣ್ಯಾತ್ಮರು. ಎಷ್ಟೊಂದು ಸಂಭ್ರಮ, ಸಡಗರ ತಾಯಿ. ನಿನ್ನ ಶಕ್ತಿಗೆ ನಮೋ ನಮಃ

ನಿನ್ನೆ ಅದನ್ನು ಟಿವಿ ಮಾಧ್ಯಮದಲ್ಲಿ ವೀಕ್ಷಿಸಿದಾಗ ನನ್ನ ಕಣ್ಣುಗಳು ಪಾವನವಾದವು. ಈ ಜನ್ಮ ಸಾರ್ಥಕವಾಯಿತು. ತಾಯಿ ನೀನು ಮತ್ತು ನಿನ್ನ ಪುಣ್ಯಾತ್ಮ ವಿವಿಐಪಿ ಗಳು, ವಿಐಪಿ ಗಳು ಸಾವಿರಾರು ವರ್ಷಗಳ ಕಾಲ ಹೀಗೆ ನಗುನಗುತ್ತಾ, ಸುಖ ಸಮೃದ್ಧಿ ಅನುಭವಿಸುತ್ತಾ  ಇರಿ. ರಾಜ ಮನೆತನ ಶಾಶ್ವತವಾಗಲಿ. ಈ ಎಲ್ಲಾ ಜನಪ್ರತಿನಿಧಿಗಳು ಬದುಕಿರುವವರೆಗೂ ಅಧಿಕಾರ ಸ್ಥಾನದಲ್ಲಿಯೇ ಮುಂದುವರೆಯಲಿ. 

ತಾಯಿ, ರಾಜ್ಯದಲ್ಲಿ ಇನ್ನೂರಕ್ಕೂ ಹೆಚ್ಚು ತಾಲ್ಲೂಕುಗಳು ಬರಪೀಡಿತವಾಗಿದೆಯಂತೆ. ಈ ಬಾರಿ ಮಳೆ ಕಡಿಮೆಯಾಗಿ ಬೆಳೆಗಳು ನಾಶವಾಗುತ್ತಿವೆಯಂತೆ. ನೀನು ಹೆಚ್ಚು ತಲೆ ಕೆಡಿಸಿಕೊಳ್ಳಬೇಡ ತಾಯಿ. ಅದು ಪ್ರಕೃತಿಯ ಮುನಿಸು. ಮುಂದೆ ಸರಿ ಹೋಗಬಹುದು. ನೀನು ಮಾತ್ರ ಆರಾಮವಾಗಿರು. ತಾಯಿ, ನಮ್ಮ ರಾಜ್ಯದಲ್ಲಿ ಎಷ್ಟೋ ಕನ್ನಡ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆಯಂತೆ. ಪಾಳು ಬಿದ್ದ ಕಟ್ಟಡದಲ್ಲಿದ್ದ ಕೆಲವೇ ಶಾಲೆಗಳು ಇನ್ನು ಶಾಶ್ವತವಾಗಿ ನಮ್ಮಿಂದ ದೂರ ಸರಿಯುತ್ತದೆ. ತಾವು ಇದಕ್ಕೆ ನೊಂದುಕೊಳ್ಳಬೇಡಿ. ತಾವು ತಮ್ಮ ಹಾಗೂ ತಮ್ಮ ವಿಐಪಿಗಳ ಯೋಗ ಕ್ಷೇಮವನ್ನು ನೋಡಿಕೊಳ್ಳಿ ತಾಯಿ. 

ಈ ರಾಜ್ಯದ ಪ್ರತಿ ಸರ್ಕಾರಿ ಕಚೇರಿಗಳಲ್ಲಿ ಪ್ರತಿನಿತ್ಯ ಕೋಟಿ ಕೋಟಿ ಹಣ ಲಂಚ ರೂಪದಲ್ಲಿ ಹರಿದಾಡುತ್ತಿದೆ. ನೀವು ಆ ಬಗ್ಗೆ ಗಮನಹರಿಸಬೇಡಿ ತಾಯಿ. ಯಾವ ದುಷ್ಟರು ಈ ರೀತಿ ಮಾಡುತ್ತಾರೋ ಆ ಭ್ರಷ್ಟರನ್ನು ಹಿಡಿಯಲು ಲೋಕಾಯುಕ್ತ ಇದೆ ಅಥವಾ ಅವರು ಭ್ರಷ್ಟಾಚಾರದಲ್ಲಿ ಹಣ ಮಾಡಿದರು ಅದನ್ನು ತಪ್ಪು ಕಾಣಿಕೆ ರೂಪದಲ್ಲಿ ಕೆಲವೊಮ್ಮೆ ನಿನಗೂ ಅರ್ಪಿಸುತ್ತಾರೆ ಅದನ್ನು ಸ್ವೀಕರಿಸು. ನೀನು ಚಿಂತ ಮಾಡಬೇಡ ತಾಯಿ.

ನಮ್ಮಲ್ಲಿ ಅನೇಕ ಆಸ್ಪತ್ರೆಗಳು ಈಗಲೂ ವೈದ್ಯರಿಲ್ಲದೆ, ಒಳ್ಳೆಯ ರೋಗ ತಪಾಸಣಾ ಯಂತ್ರಗಳಿಲ್ಲದೆ, ಸ್ವಚ್ಛತೆ ಇಲ್ಲದೆ ರೋಗಿಗಳು ನರಳಿ ನರಳಿ ಸಾಯುತ್ತಿದ್ದಾರೆ. ನೀನು ಯೋಚಿಸಬೇಡ ತಾಯಿ. ಅದು ಅವರವರ ಕರ್ಮ. ಅವರೇ ಅನುಭವಿಸಲಿ. ನೀನು ಆರಾಮಗಿರು ತಾಯಿ.

ತಾಯಿ, ಗಾಳಿ, ನೀರು, ಆಹಾರ ಎಲ್ಲವೂ ಮಲಿನವಾಗಿ ಜನರು ರೋಗರುಜಿನಗಳಿಗೆ ತುತ್ತಾಗಿ ಅನಾರೋಗ್ಯದಿಂದ ಅಕಾಲಿಕವಾಗಿ ಸಾಯುತ್ತಿದ್ದಾರೆ. ಔಷಧಿಗಳೇ ನಕಲಿಗಳಾಗಿ ಮಾರಾಟ ಮಾಡಲಾಗುತ್ತಿದೆ. ಅದು ಜನರದೇ ಪಾಪದ ಫಲ. ನೀನೇನು ಚಿಂತಿಸಬೇಡ. ನಿನ್ನ ಆರೋಗ್ಯ ನೀನು ಕಾಪಾಡಿಕೊಂಡು ರಾಜ ಮನೆತನದವರ ಆರೋಗ್ಯವನ್ನು ನೋಡಿಕೊಂಡು, ವಿಐಪಿ ವಿವಿಐಪಿಗಳನ್ನು ಸುಖವಾಗಿಟ್ಟು ನೀನು  ಆರಾಮವಾಗಿರು ತಾಯಿ. ಈ ರಾಜ್ಯದ ಕೆಲವು ಶ್ರೀಮಂತರು ನಿನ್ನನ್ನು ಹತ್ತಿರದಿಂದ ನೋಡಿ ಖುಷಿಪಟ್ಟರು. ನಿನಗೂ ಅವರನ್ನು ನೋಡಿ ಖುಷಿಯಾಗಿರಬಹುದು. ಆದರೆ ತಾಯಿ ನಾನಿನ್ನು ಮೈಸೂರನ್ನೇ ನೋಡಿಲ್ಲ. ಇನ್ನು ನೀನು ವಾಸಿಸುವ ಅರಮನೆಯನ್ನು ನೋಡುವುದು ಹೇಗೆ. ನಾವು ಶಾಪಗ್ರಸ್ತರು ತಾಯಿ. ಇಲ್ಲೇ ಸಮುದ್ರ ತೀರದಲ್ಲಿ, ಸಮುದ್ರ ದೇವಿಯ ಕೃಪೆಯಿಂದ ಮೀನುಗಳನ್ನು ಬಲೆ ಬೀಸಿ ಹಿಡಿದು ಅದನ್ನು ಮಾರಾಟ ಮಾಡಿ ಆ ಹಿಂಸೆಯ  ಪಾಪವನ್ನು ಅನುಭವಿಸಿ ಈ ಪಾಪಿ ಜೀವ ಇನ್ನೂ ಉಸಿರಾಡುತ್ತಿದೆ ತಾಯಿ. ಸಾಧ್ಯವಾದರೆ ಬೇಗ ನನ್ನ ನಿನ್ನ ಬಳಿಗೆ ಕರೆಸಿಕೊಂಡು ಬಿಡು ತಾಯಿ. ಬಡವರು ಈ ಭೂಮಿ ಮೇಲೆ ಬದುಕಬಾರದು ತಾಯಿ. ಈ ಭೂಮಿ ಇರುವುದು ಶ್ರೀಮಂತರಿಗೆ ಮಾತ್ರ. ನಿಮ್ಮ ಬಗ್ಗೆ ಮಾತನಾಡುವವರು ಕೋಟ್ಯಂತರ ಮಂದಿ ಸದಾ ನಿಮ್ಮ ಸುತ್ತಲೂ, ನಮ್ಮ ಬಗ್ಗೆ ನಮ್ಮದೇ ಮಾತು ನಮ್ಮ ಆತ್ಮಸಾಕ್ಷಿ, ನಾನು ಏಕಾಂಗಿ, ಚೆನ್ನಾಗಿ ತಿಂದುಂಡವರ ಆದ್ಯತೆಗಳೇ ಬೇರೆ,  ಶ್ರಮಜೀವಿಗಳ ಅವಶ್ಯಕತೆಗಳೇ ಬೇರೆ, ಸರ್ಕಾರಕ್ಕೊಂದು ಚೇಷ್ಟೆ, ಅರಮನೆಗೊಂದು ಕುಚೇಷ್ಟೆ, ಸಾಮಾನ್ಯರಿಗೆ ಬದುಕೇ ಒಂದು ನಿಷ್ಠೆ, ಕ್ಷಮಿಸು ತಾಯಿ ಚಾಮುಂಡೇಶ್ವರಿ.

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ