ನೆನಪಿನ ಶಕ್ತಿಯ ಕಿರು ಪರಿಚಯ : ಬಹಳ ವರ್ಷಗಳ ನಂತರ ನಾನು ಹುಟ್ಟೂರಿಗೆ ಹೋದಾಗ, ವಾಯು-ವಿಹಾರದಲ್ಲಿ ಸಂಜೆ ಗಾಳಿಯ ಸುಯ್ದಾಟಕ್ಕೆ, ನಾನಾಡುತ್ತಿದ್ದ ಆಟದ ಬಯಲಿನ ನೆನಪಾಯ್ತು. ನನ್ನ ಸ್ಮೃತಿಪಟಲದಲ್ಲಿ ಆ ಮಣ್ಣಿನ ಸೊಗಡು, ಬಾಲ್ಯದ ಮಿತ್ರರು, ಅವರೊಂದಿಗೆ ಆಡಿದ ಕುಚೇಷ್ಟೆಗಳು ಎಲ್ಲವೂ ಪುಂಖಾನುಪುಂಖವಾಗಿ ಹಾದು ಹೋದವು. ಆಗ ನನ್ನ ಮೈ ಮನಗಳು ಬಾಲ್ಯದ ಸ್ಥಿತಿ ತಲುಪಿದವು. ಇನ್ನೊಂದು ಮಧ್ಯಾಹ್ನ ತೋಟದ ತೊರೆಯ ಹರಿವು ನೋಡಿದಾಗ, ದಶಮಾನಗಳ ಹಿಂದೆ ನೀರಲ್ಲಿ ತೇಲಿಬಿಟ್ಟ ಕಾಗದದ ದೋಣಿಯು ಕಣ್ಣೆದುರು ಬಂತು. ಆ ಒಂದು ಶಬ್ದ, ತಂಗಾಳಿಯ ಸ್ಪರ್ಶ, ಆ ದೃಶ್ಯ, ಬಹಳ ಹಿಂದಿನ ಆ ಕ್ಷಣಗಳನ್ನು ಸಂಪೂರ್ಣ ಜೀವಂತ ಮಾಡಿದವು. ಅಹಂಕಾರಕ್ಕಾದ ಒಂದು ನೋವು ಯುಗ ಕಳೆದರೂ ಮಾಸದು, ಅದೇ ಮತ್ತೊಂದು ಸಂತೋಷ ವಾರದಲ್ಲಿ ಮಾಸುವುದು. ಸಂದರ್ಭಕ್ಕೆ ತಕ್ಕಂತೆ ಮರೆವಿನ-ನೆನಪಿನ ಈ ಕಣ್ಣಾಮುಚ್ಚಾಲೆ ಆಡುವವರು ಯಾರು? 

ನೆನಪಿನ ದೋಣಿ ಯಾವ ಸಾಗರದಲ್ಲಿ ತೇಲುತ್ತಿದೆ? ಈ ದೋಣಿಯಲ್ಲಿರುವ ಪಯಣಿಗ ಯಾರು? ಈ ಪದಗಳನ್ನು ಎಲ್ಲೋ ಕೇಳಿದಂತಿದೆಯಲ್ಲವೇ?! (ಚಿತ್ರ: ಶುಭಮಂಗಳ, ಪಲ್ಲವಿ ಯಾವ ಭಕ್ತಿಗೀತೆಗೂ ಕಡಿಮೆಯಿಲ್ಲ). ಮಾನವನ ಸ್ಮೃತಿಯನ್ನು (memory) ಗಮನಿಸಿದರೆ, ಕೆಲ ಘಟನೆಗಳು ಚೆನ್ನಾಗಿ ನೆನಪಿರುವವು, ಕೆಲವು ಸಂಪೂರ್ಣ ಮರೆಯುವವು, ಕೆಲವು ಅನುಭವಗಳು ನಮಗೆ ತಿಳಿಯದೆ ನಮ್ಮೊಳಗಿದ್ದು, ನಮ್ಮ ನಡೆ-ನುಡಿಯಲ್ಲಿ ವ್ಯಕ್ತವಾಗುವವು. ಹಾಗಾದರೆ ಸ್ಮೃತಿ ಕೇವಲ ನೆನಪಿನ ಸಂಗ್ರಹವೇ? ಅಥವಾ ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಜೀವಂತ ಶಕ್ತಿಯೇ? ದೇಹ ದೃಷ್ಟಿಯಿಂದ ಯೋಚಿಸಿದರೆ ನಾವು ‘ಸ್ವಂತ’ ಸ್ಮೃತಿಯನ್ನು ಬಳಸಿದಂತೆ ಅನಿಸುವುದು. ಒಂದು ಕ್ಷಣ ಯೋಚಿಸಿ- ನೀವು ಜೀವನದಲ್ಲಿ ನೋಡಿದ, ಕೇಳಿದ, ಕಲಿತ, ಅನುಭವಿಸಿದ ಎಲ್ಲವನ್ನೂ ಕ್ಷಣಮಾತ್ರದಲ್ಲಿ ಮರೆತರೆ... ‘ನೀವು’ಉಳಿಯುವಿರಾ?, ‘ಸ್ವಂತಿಕೆ’ ಇರುವುದೇ?, ಭಯವಾಯಿತಲ್ಲವೇ? ಈ ರೀತಿ ದೇಹಾತೀತವಾಗಿ ಯೋಚಿಸಿದಾಗ ಸೃಷ್ಟಿಯಲ್ಲಿ ಅಡಕವಾದ ಸ್ಮೃತಿಯೇ ಈ ದೇಹದ ಮೂಲಕ ತನ್ನ ಕೆಲಸ ನಡೆಸುವಂತೆ ಅನಿಸುವುದು. ಬಹುಶಃ ಬದುಕಿನ ಬಲಿಷ್ಠ ಬಂಧನವೇ ಸವಿ ನೆನಪು, ಅದೇ ಬದುಕಿನ ಬಲವಾದ ರಕ್ಷಣೆಯೂ ನಮ್ಮೊಳಗಿನ ಕಹಿ ನೆನಪುಗಳ ಮರೆವಲ್ಲವೇ? ಹಾಗಾದರೆ ಸ್ಮೃತಿ (memory) ಎಲ್ಲಿದೆ? ಜೀವಿಯ ಅನುಭವ ಸಂಗ್ರಹ ಎಲ್ಲಿದೆ?

ತತ್ವಶಾಸ್ತ್ರದಲ್ಲಿ ನೆನಪನ್ನು ಚಿತ್ತ ಎನ್ನುವರು.ಆದರೆ ಚಿತ್ತವನ್ನು ಕೇವಲ ‘ಸ್ಮೃತಿ ಸಂಗ್ರಹ’ದಂತೆ ಕಂಡರೆ ನಮಗೆ ಅದರ ಸ್ಪಷ್ಟತೆ ಸಿಗುವುದಿಲ್ಲ. ಚಿತ್ತವನ್ನು ಸರಳವಾಗಿ ಸಾಂದರ್ಭಿಕ ಸ್ಮೃತಿ (contextual memory) ಎಂದರೂ, ಚಿತ್ತದಲ್ಲಿ ನೆನಪಿನೊಂದಿಗೆ, ಅಭಿವ್ಯಕ್ತಿ (expression), ಅರ್ಥ (interpretation), ಅನುಭವದ (experience) ಅಂಶಗಳೂ ಹುದುಗಿವೆ. ಇವೆಲ್ಲವೂ ಒಂದೇ ಜಾಗದಲ್ಲಿ ಇರುವುದಿಲ್ಲ, ಪ್ರತಿಯೊಂದು ಅಂಶವೂ ಬಲೆಯಂತೆ ಚದುರಿವೆ. ಹಾಗಾಗಿ ಒಂದು ಘಟನೆ ನೆನಪಾದಾಗ ಅದರ ಜೊತೆ ಹೆಣೆದಿರುವ ಹಲವಾರು ಅಂಶಗಳೂ ಅಲೆ ಅಲೆಯಾಗಿ ಎದ್ದು ಬರುವವು. ಈ ಅಂಶಗಳು ಒಬ್ಬೊಬ್ಬರಲ್ಲೂ ಬೇರೆ ರೀತಿಯಲ್ಲಿ ಉಳಿದಿರುತ್ತವೆ. ಅಂದರೆ ನಾವೆಲ್ಲ ದೈಹಿಕವಾಗಿ ಈ ಜಗತ್ತಲ್ಲಿದ್ದರೂ, ನಮ್ಮ ಮನದ, ಬದುಕಿನ ವಾಸ್ತವಗಳು ನಮ್ಮದೇ ಚಿತ್ತ ಕಟ್ಟಿದ ಅದರದೇ ಆದ ಬೇರೆ ಬೇರೆ ಮನೋಲೋಕದಲ್ಲಿವೆ. ಹಾಗಾಗಿ, ನೆನಪು ಒಂದೇ ಆದರೂ, ಅದರ ಪರಿಣಾಮ ಒಬ್ಬೊಬ್ಬರಲ್ಲೂ ಬೇರೆಯಾಗುವುದು. ಉದಾ: ಯಾರೋ ಐತಿಹಾಸಿಕ ವ್ಯಕ್ತಿಯ ಸ್ಮೃತಿ, ಒಬ್ಬರಲ್ಲಿ ಒಳ್ಳೆಯ ಭಾವನೆ, ಇನ್ನೊಬ್ಬರಲ್ಲಿ ತಟಸ್ಥಭಾವನೆ, ಮತ್ತೊಬ್ಬರಲ್ಲಿ ಕೆಟ್ಟ ಭಾವನೆಯನ್ನು ಮೂಡಿಸುವುದು. ಆಳವಾದ ನೆನಪಿನ ಕಡಲು (ಚಿತ್) ಒಂದೇ ಆದರೂ, ಅದರಲ್ಲಿ ಸಾಗುವ ದೋಣಿಗಳು ಒಂದರಂತೆ ಇನ್ನೊಂದಿಲ್ಲ. ಈ ಪಯಣದ ಆರಂಭ, ಅಂತ್ಯದ ಅರಿವು ಅಂಬಿಗನಿಗೆ ಮಾತ್ರ ಗೊತ್ತು, ಉಳಿದವರಿಗಿಲ್ಲ. ಯಾವಾಗಲಾದರೂ ಮಗುಚುವ ಬದುಕೆಂಬ ನೆನಪಿನ ದೋಣಿಯ ನಾವಿಕ ನಾನೇ ಎನ್ನುವ ಭ್ರಮೆ ಪಯಣಿಗನಿಗೆ!

ಆದ್ದರಿಂದ ಚಿತ್ತವು relational database ಗೆ ಹೆಚ್ಚು ಹೋಲುವುದು. ಇನ್ನು ಕೆಲಬಾರಿ ಘಟನೆ ಮಾಸಿದರೂ, ಅದರ ಪರಿಣಾಮವಾದ- ಆಸೆ, ತಿರಸ್ಕಾರ, ಹಗೆ, ಇತ್ಯಾದಿಗಳು ಅಚ್ಚಳಿಯದೆ ಸ್ಮೃತಿಪಟಲದ ಹಿಂದಿರುವವು. ಆದ್ದರಿಂದ, ಮಾನವನ ಪ್ರತೀ ಅನುಭವವೂ ಚಿತ್ತದಲ್ಲಿ ಗುರುತು ಬಿಡುವುದು. ಕೆಲವು ಗುರುತುಗಳು ಬೇಗ ಮಾಸುವವು. ಕೆಲವು ವರ್ಷಗಳಾದರೂ ಉಳಿಯುವವು. ಕೆಲವು ವ್ಯಕ್ತಿತ್ವದ ಭಾಗವಾಗಿ ಬಿಡುವವು. ಒಮ್ಮೆ ಮೂಡಿದ ಗುರುತು ಮರುಬಳಸಲ್ಪಟ್ಟರೆ ಆ ಗುರುತೇ ಅಭ್ಯಾಸವಾಗುವುದು. ಅಭ್ಯಾಸಗಳು ನಂತರ ಸ್ವಭಾವವಾಗುವವು. ಸ್ವಭಾವವೆಂಬ ಹೆಗ್ಗುರುತು ಸಂಸ್ಕಾರವಾಗಿ ಮುಂದೆ ಪ್ರವೃತ್ತಿಯಾಗುವುದು. ಪ್ರವೃತ್ತಿಯಿಂದ ವ್ಯಕ್ತಿತ್ವ ರೂಪಿಸಲ್ಪಟ್ಟು, ವ್ಯಕ್ತಿತ್ವವು ವ್ಯಕ್ತಿಯ ದೃಷ್ಟಿಕೋನವನ್ನು ನಿರ್ಧರಿಸುವುದು. ಹಾಗಾಗಿ ಒಂದೇ ಪರಿಸ್ಥಿತಿಗೆ, ಒಬ್ಬರ ಪ್ರತಿಕ್ರಿಯೆ ಆಶಾದಾಯಕ, ಇನ್ನೊಬ್ಬರ ಪ್ರತಿಕ್ರಿಯೆ ನಿರಾಶಾದಾಯಕವಾಗಲು ಸಂಸ್ಕಾರದ ವ್ಯತ್ಯಾಸವೇ ಕಾರಣ. ಪ್ರತೀ ಜೀವಿಯೂ ಹಿಂದಿನ ನೆನಪಿನ ಆಧಾರದ ಮೇಲೆ ಬದುಕುವುದು. ನೆನಪಿಲ್ಲದೆ ಕಲಿಕೆ, ಸಂಬಂಧ, ವ್ಯಕ್ತಿತ್ವ, ಬದುಕಿಗೂ ಸಹ ಅರ್ಥವಿಲ್ಲ. ಹಾಗಾಗಿ ಚಿತ್ತವು ಬಹಳ ಸಂಕೀರ್ಣ, ಆಳವಾದದ್ದು, ಪ್ರಭಾವಶಾಲಿ. ಚಿತ್ತವನ್ನು ಸೃಷ್ಟಿಯ ಜೊತೆ ಯೋಚಿಸಿದಾಗ, ಸ್ಮೃತಿಯನ್ನು ಜೀವರಾಶಿಗಳೂ ಬಳಸುವವು ಹಾಗೂ ಚಿತ್-ಶಕ್ತಿಯಾಗಿ ಸೃಷ್ಟಿಕಾರ್ಯದಲ್ಲೂ ಬಳಕೆಯಾಗುವುದು. ಈ ಒರತೆ ಮನಸ್ಸಿಗೆ ಬಂದಾಗ, ಗಣಕ ವ್ಯವಸ್ಥೆಯ ಕೆಲವು ಸಾದೃಶ್ಯಗಳು ನನ್ನ ಯೋಚನೆಗೆ ಹೊಸ ಕವಲು ತೆರೆದವು. ಚಿತ್ತವನ್ನು ಗಣಕಯಂತ್ರದ ಸ್ಮೃತಿ ಪದರಗಳ ಮೂಲಕ ಪರಿಶೀಲಿಸಿದರೆ ಆಳವಾದ ಅರ್ಥ ಸಿಗುವುದು (layered cloud memory, user and context based access).