ಗಣಕಯಂತ್ರವನ್ನು ಅವ್ಯಕ್ತ ದೇವರಿಗೆ ಹೋಲಿಸಬಹುದೇ ? ತಕ್ಷಣ ಇದೆಲ್ಲಿಯ ಹೋಲಿಕೆ ಎನಿಸಬಹುದು. ಕೆಲವರು ಮೊದಲ ಬಾರಿ ನೋಡಿದಾಗಲೇ ನಮ್ಮ ಆತ್ಮೀಯರಾಗುವರು. ಕೆಲವು ಸ್ಥಳಗಳಿಗೆ ಹೋದಾಗ, ಕಳೆದುಹೋದ ಮನೆಗೆ ಬಂದ ಅನುಭವ ಆಗುವುದು. ಈ ಭಾವನೆಗಳು ತಂತಾನೇ ಹೇಗೆ ಬರುವವು? ಅವುಗಳ ಹಿಂದೆ ನಮಗೆ ತಿಳಿಯದ ನೆನಪುಗಳಿವೆಯೇ, ಮನಸ್ಸಿನ ಸೂಕ್ಷ್ಮ ಆಯಾಮಗಳಿವೆಯೇ, ಅಥವಾ ಅವ್ಯಕ್ತ ಮೂಲವಿದೆಯೇ? ನಾವು ಸಾಮಾನ್ಯವಾಗಿ ನೋಡುವುದು ಬದುಕಿನ ಮೇಲ್ಮೈ ಮಾತ್ರ. ಅದರ ಹಿನ್ನೆಲೆಯ, ಏಕೆ, ಹೇಗೆ, ಎನ್ನುವ ಅರಿವು ನಮಗಿದೆಯೇ? ಇದೇರೀತಿ ಯೋಚಿಸಿದರೆ, ಗಣಕದಲ್ಲಿ ಕಾಣುವ ಚಿತ್ರ, ಧ್ವನಿ, ಚಲನೆ, ಇವೆಲ್ಲ ಅದರಲ್ಲಿ ಕೆಲಸ ಮಾಡುವ ಅನೇಕ ಪದರಗಳ ಫಲ. ನಮಗೆ ಕಾಣುವುದು ಕೇವಲ ಗಣಕದ ಹೊರಮೈ ಆದರೂ, ಗಣಕದೊಳಗೆ ಅಡಗಿರುವ ಕ್ರಮ, ನಿಯಮ, ಕಾರ್ಯವಿಧಾನಗಳನ್ನು ಯಾರು ಬಲ್ಲರು?!
ನಾನು ಸೃಷ್ಟಿಯನ್ನು ಈ ದೃಷ್ಟಿಯಲ್ಲಿ ನೋಡಿದಾಗಲೂ ಇದೇ ಅಚ್ಚರಿಯ ಭಾವನೆ ಮೂಡಿದ್ದು ಸಹಜ. ಸೃಷ್ಟಿ ಎಂದರೆ ಬ್ರಹ್ಮಾಂಡದ ಉಗಮವೇ, ಅಥವಾ ಅವರ ಅರಿವಿನಂತೆ ಅವರವರ ಜಗತ್ತು ರೂಪುಗೊಳ್ಳುವ ಪ್ರಕ್ರಿಯೆಯೇ? ನಮ್ಮ ಮನಸ್ಸಿಗೆ ಸಿಗುವುದು ಕೇವಲ ಪ್ರಕೃತಿಯ ಮೇಲ್ಮೈ ಮಾತ್ರವೇನೋ? ಅದರ ಹಿಂದೆ ಇನ್ನೂ ಆಳವಾದ ಅವ್ಯಕ್ತ ವ್ಯವಸ್ಥೆ ಕೆಲಸ ಮಾಡುತ್ತಿದೆಯೇನೋ ಎನ್ನುವ ಅನುಮಾನ. ಈ ಪ್ರಶ್ನೆಗಳೇ ನನ್ನ ಯೋಚನೆಗೆ ಹೊಸ ಆಯಾಮವನ್ನು ತೆರೆದವು. ಸೃಷ್ಟಿ ಮತ್ತು ಗಣಕ ತಂತ್ರಾಂಶದ ನಡುವೆ ಕಂಡುಬಂದ ಆ ಸಾಮ್ಯತೆಗಳು ಕೇವಲ ಕಾಲ್ಪನಿಕವೋ, ಅಥವಾ ಅದರಲ್ಲಿ ಯಾವುದೋ ಸೂಕ್ಷ್ಮ ಸತ್ಯ ಅಡಗಿದೆಯೋ, ಅದಿನ್ನೂ ಅರಿಯಬೇಕಷ್ಟೇ. ಆದರೆ ಒಂದಂತೂ ಖಚಿತ: ಪ್ರಶ್ನೆಗಳಿಂದಲೇ ಅನ್ವೇಷಣೆಯ ಆರಂಭ; ಅನ್ವೇಷಣೆಯಿಂದಲೇ ದಾರಿ ಸತ್ಯದೆಡೆ ನಿಧಾನವಾಗಿ ತೆರೆಯುವುದು.
ದಾಸರು ಹೇಳಿದಂತೆ, ನಿನ್ನೊಳು ಮಾಯೆಯೋ ಇಲ್ಲಾ ನೀ ಮಾಯೆಯೊಳಗೋ? ದೈವತ್ವ ಕೇವಲ ಸೃಷ್ಟಿಯಿಂದ ಆಚೆ ಇರುವ ಒಂದು ಸತ್ವವೋ? ಅಥವಾ ದೈವತ್ವ ತನ್ನ ಸಹಜ ಸ್ಥಿತಿಯನ್ನು ಬಿಡದೆ ಸೃಷ್ಟಿಯಲ್ಲಿ ಅಡಕವಾಗಿರುವ ಸಾಮರ್ಥ್ಯವೋ? ಎನ್ನುವ ದ್ವಂದ್ವ ಮೊದಲಿಂದ ಇತ್ತು. ಮೊದಲನೆಯದು ವಿಚಾರವಾದರೆ, ಎರಡನೆಯದು ಆಚಾರಕ್ಕೆ ಹತ್ತಿರ. ತಾಳ್ಮೆಯಿಂದ ಯೋಚಿಸಿದಾಗ ನನ್ನ ಅಧ್ಯಯನಕ್ಕೆ ಎರಡನೆಯದು ಹೆಚ್ಚು ಸರಿ ಎನಿಸಿತು. ಅಂದರೆ, ‘ದೈವತ್ವಕ್ಕೆ’ ಕೆಲಸ ಮಾಡುತ್ತಿದ್ದರೂ ತನ್ನ ಮೂಲ, ಸಹಜ ಸ್ಥಿತಿಯನ್ನು ಬಿಡದೆ ಎಲ್ಲವನ್ನೂ ಸೃಷ್ಟಿಸಿಕೊಳ್ಳುವ ಸಾಮರ್ಥ್ಯವಿದೆ. ದೈವತ್ವವನ್ನು ನೋಡುವ ಕಣ್ಣು, ತಿಳಿಯುವ ಪ್ರಜ್ಞೆ ಇರಬೇಕಷ್ಟೆ. ಈ ಸೃಷ್ಟಿಯ ವಿಧಾನವನ್ನು ಒಂದು ಉದಾಹರಣೆಯ ಮೂಲಕ ಆಳವಾಗಿ ತಿಳಿಯಬಹುದು. ಗಣಕಯಂತ್ರಕ್ಕೆ (CPU, mother board) ತನ್ನ ಭೌತಿಕ ಸ್ಥಿತಿಯನ್ನು ಬಿಡದೆ ಅನೇಕ ತಂತ್ರಾಂಶಗಳ ಮೂಲಕ (software execution) ಅನೇಕ ಚಿತ್ರ, ಧ್ವನಿ, ಚಲನೆಗಳನ್ನು ಸೃಷ್ಟಿಸುವ ಸಾಮರ್ಥ್ಯವಿದೆ. ಆದರೆ ಗಣಕಯಂತ್ರವನ್ನು ನಾವೆಂದೂ ಅದರ ಭೌತಿಕ ಸ್ವರೂಪವನ್ನು ಬಿಟ್ಟು, ಅದು ಸೃಷ್ಟಿಸಿದ ಚಿತ್ರ, ಧ್ವನಿ, ಚಲನೆ ಎಂಬಂತೆ ನೋಡಲ್ಲ. ಆದರೂ ಗಣಕಯಂತ್ರ-ಅದರ ಸಾಮರ್ಥ್ಯ, ಒಂದಿಲ್ಲದೆ ಇನ್ನೊಂದಿಲ್ಲ. ಇದೇ ಸ್ಪಷ್ಟತೆ ಹಾಗೂ ಅನುಭವದಿಂದ ದೈವತ್ವದ ಚಿಂತನೆ ಮಾಡಿದಾಗ ಅದಾಗೇ ಒಂದು ಅಂತಿಮ ಸತ್ಯ, ಅನಂತ ಸಾಮರ್ಥ್ಯ, ನನ್ನ ಕಣ್ಣೆದುರು ಮಿಂಚಿ ಮಾಯವಾಗಿದ್ದಂತೂ ನಿಜ. ತನ್ನ ಸಹಜ ಸ್ಥಿತಿಯನ್ನು ಬಿಡದೆ ಸೃಷ್ಟಿಯ ಎಲ್ಲಾ ಆಧಾರವಾಗಿರುವ, ನನ್ನಲ್ಲೂ, ನಿಮ್ಮಲ್ಲೂ, ಎಲ್ಲೆಲ್ಲೂ ಇರುವ, ಆ ಒಂದು ನಿಶ್ಚಲ ಸತ್ವ, ಶಾಶ್ವತ ಚೈತನ್ಯ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!