'ಮಾಯೆಯ ಮಿತಿ' ಎನ್ನುವ ಸರಣಿ ಶೀರ್ಷಿಕೆಯಡಿಯಲ್ಲಿ ನನ್ನ ಯೋಚನಾ ಲಹರಿಯನ್ನು ನಿಮ್ಮ ಮುಂದೆ ಬಿಚ್ಚಿಡುವ ಪ್ರಯತ್ನ.

~~~~~

ಮನಸ್ಸಿನ ಹಿಂದೆ ಓಡುವುದು ನನ್ನ ನಿತ್ಯದ ಕೆಲಸ. ಕೆಲವೊಮ್ಮೆ ಈ ಓಟ ಅನಿಶ್ಚಿತ ಭವಿಷ್ಯದ ಗುರಿಯ ಕಡೆಗಾದರೆ, ಕೆಲಬಾರಿ ಮನಸ್ಸಿನ ಓಟ, ಬದಲಿಸಲಾಗದ ಹಿಂದಿನ ಘಟನೆಗಳತ್ತ. ಹಾಗಂತ ನಿಂತರೂ ಏನು ಮಾಡುವುದು? ನಗರದ ದಟ್ಟಣೆಯ ಬೀದಿಗಳಲ್ಲಿ, ವಾಹನ ಸವಾರರಿಗೆ “ನಿಲುಗಡೆಯನ್ನು ನಿಷೇಧಿಸಲಾಗಿದೆ!”, “ಶಿರಸ್ತ್ರಾಣ ಕಡ್ಡಾಯ!!” ಎನ್ನುವ ಎಚ್ಚರಿಕೆಯ ಫಲಕಗಳನ್ನು ಹಾಕುವಂತೆ, ಮನದ ವಿಶಾಲ ಅಂಗಳದಲ್ಲಿ “ಸುಮ್ಮನಿರುವುದನ್ನು ನಿಷೇಧಿಸಲಾಗಿದೆ!”, “ಚಂಚಲತೆ ಕಡ್ಡಾಯ!!” ಇತ್ಯಾದಿಸೂಚನಾ ಫಲಕಗಳನ್ನು ತೂಗು ಹಾಕಿದಂತಿದೆ. ಈ ದೇಹವನ್ನು ಸ್ತಬ್ಧ ಮಾಡಬಹುದು, ಹೆಚ್ಚಿನ ಪ್ರಯತ್ನದಿಂದ ನಮ್ಮ ಇಂದ್ರಿಯದ ಸದ್ದನ್ನೂ ಅಡಗಿಸಬಹುದು, ಆದರೆ ಮನದ ಆಲೋಚನೆಯ ಅಲೆಗಳನ್ನು… ನಿಲ್ಲಿಸಲಾದೀತೇ? ಆದರೂ ಒಂದು ದಿನ ಈ ಅಲಿಖಿತ ನಿಯಮವನ್ನು ಉಲ್ಲಂಘಿಸಿ, ಮನಸ್ಸನ್ನು ನಿಲ್ಲಿಸುವ ಬದಲು, ಅದರ ಓಟವನ್ನೇ ನೋಡೋಣ ಎಂದು ಒಂದು ಮೂಲೆಯಲ್ಲಿ ನಿಂತು, ಓಡುವ ಮನಸ್ಸನ್ನು ವೀಕ್ಷಿಸಿದಾಗ ನಾ ಕಂಡಿದ್ದು ಹೀಗಿದೆ… 

ನಮ್ಮ ಮನಸ್ಸು (ದೃಷ್ಟಿಕೋನ) ಒಪ್ಪಿದ್ದುಸತ್ಯ, ಒಪ್ಪದ್ದು ಸುಳ್ಳು; ಮನಸ್ಸಿನ ಊಹೆಗೆ ಸಿಕ್ಕಿದ್ದು ಕಲ್ಪನೆ, ಎಟುಕದ್ದು ಮಾಯೆ ಎಂದು ತಳ್ಳಿಹಾಕುವುದು. ಮನಸ್ಸಿಗೆ ಅಸಾಧ್ಯ ಎನ್ನುವುದು ಏನಿದೆ? ಅಬ್ಭಾ!, ಇದೇನು ಮನದ ಕುಶಲತೆಯೇ ಇಲ್ಲಾ ಕುಟಿಲತೆಯೇ? ಮನಸ್ಸಿಗೆ ಇಷ್ಟುದೊಡ್ಡ ಜವಾಬ್ದಾರಿಯನ್ನು ಯಾರು ಕೊಟ್ಟರು? ಅರೆ!, ಮನಸ್ಸು ಈ ನ್ಯಾಯಾಧಿಕಾರವನ್ನು ಎಲ್ಲಿಂದ ಕಸಿಯಿತು? ಮನಸ್ಸಿನ ಈ ಜವಾಬ್ದಾರಿ ಪ್ರಕೃತಿದತ್ತವೇ ಇಲ್ಲಾ ‘ನನ್ನ’ತನದ ಶರಣಾಗತಿಯ ಫಲವೇ?! ಈ ಪ್ರಶ್ನೆಗಳಿಗೆ ಉತ್ತರ ಹುಡುಕಿ ಹೊರಟಾಗ, ‘ನೀನೇ ಕಟ್ಟಿದ ಮಾಯಾಕೋಟೆ’ ಎನ್ನುವ ಕ್ಷೀಣ ಧ್ವನಿ ನನ್ನ ಅಂತರಾಳದಿಂದ ಕೇಳಿಬಂತು. ಅದಾರೆಂದು ಹುಡುಕಿದಾಗ ನನ್ನೆದುರು ಇನ್ನೊಂದು ಅಚ್ಚರಿ ಕಾದಿತ್ತು! ನನಗೆ ನನ್ನ ಅರಿವೆಂಬ ಕೋಟೆಯ ಮಿತಿಗಳೇ ಕಾಣತೊಡಗಿದವು. ಇದು ಮೊದಲ ಬಾರಿ ನನ್ನ ಪ್ರಜ್ಞೆ ತನ್ನನ್ನು ತಾನೇ ಪ್ರಶ್ನಿಸಿದ ಕ್ಷಣ. ನನಗಾಗ, ಮಾಯೆಗೂ ಅದರದೇ ಆದ ಕಾರ್ಯವಿಧಾನ ಇದೆಯೇನೋ ಎಂದು ಅನಿಸಿತು. ಮನಸ್ಸು ಒಪ್ಪದಿದ್ದರೆ, ನೀವೇನೇ ಸಮಜಾಯಿಷಿ ಕೊಟ್ಟರೂ ಮನಸ್ಸಿನ ಒಪ್ಪಿಗೆ ಸಿಗದು. ಅದೇ ಮನಸ್ಸು ಕೆಲ ವಿಷಯವನ್ನು, ಯಾವ ಆಧಾರವೂ ಇಲ್ಲದೆ ಒಪ್ಪುವುದು. ಉದಾ: ಹೆಂಡತಿಯ ಮಾತಿಗೆ ‘ಕಿವಿ’ಗೊಟ್ಟು, ಅವಳ ಇಂಗಿತವನ್ನು ಗ್ರಹಿಸುವ ‘ಹೃದಯ’ವಂತಿಕೆ ಎಷ್ಟು ಗಂಡಂದಿರಿಗಿದೆ? ವಿಷಯ ಇಬ್ಬರಲ್ಲಿ ಯಾರು ಸರಿ ಎಂದಲ್ಲ, ಹೃದಯ ಕೆಲಸ ಮಾಡಬೇಕಾದಲ್ಲಿ ತಲೆ ಹಾಕಿದರೆ, ದುಷ್ಪರಿಣಾಮ ಕಟ್ಟಿಟ್ಟಬುತ್ತಿ! ಕೆಲಬಾರಿ ಹೃದಯ ಮೊದಲು ತೀರ್ಮಾನಿಸಿದ ನಂತರ, ಮನಸ್ಸಿಗೆ ಸಾಕ್ಷ್ಯಾಧಾರವನ್ನು ತರಲು ಆದೇಶಿಸುವುದು. ಹೀಗೆ ನಮ್ಮ ನಂಬಿಕೆಗೆ ಹೊಂದುವ ಮಾಹಿತಿಯನ್ನು ಪರಿಶೀಲಿಸದೆ ಒಪ್ಪಿಕೊಳ್ಳುವುದು ಮತ್ತು ಹೊಂದದ ಮಾಹಿತಿಯನ್ನು ವಿವೇಚಿಸದೆ ತಳ್ಳಿಹಾಕುವುದು ಮಾನವನ ಪ್ರವೃತ್ತಿ. ಮನಸ್ಸಿನ ವರ್ತನೆಯ ಈ ವೈಪರೀತ್ಯಕ್ಕೆ, ಉತ್ತರದ ಹುಡುಕಾಟ ನನ್ನಲ್ಲಿ ಇನ್ನೂ ಮುಂದುವರೆದಿದೆ. ನೀವೂ ನಿಂತು, ಓಡುವ ಮನಸ್ಸನ್ನು ವೀಕ್ಷಿಸಿದಾಗ ನೋಡಿದ್ದನ್ನು ನನಗೆ ತಿಳಿಸುವಿರಾ?! 

(ಇದು ಪುಸ್ತಕವಾಗಿ ಬರಲು ನಿಮ್ಮ ಸಲಹೆ, ವಿಮರ್ಶೆಗಳಿಗೆ ನಾನು ಸದಾ ಋಣಿ.)