ದೇಶದ ಪ್ರಧಾನಿಯೊಬ್ಬರು ಹೀಗೂ ಬದುಕಬಹುದು ಎಂದು ತೋರಿಸಿ ಮಾದರಿಯಾದ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. " ಜೈ ಜವಾನ್ ಜೈ ಕಿಸಾನ್ " ಘೋಷಣೆಯ ಮೂಲಕ ದೇಶದ ಅಭಿವೃದ್ಧಿಗೆ ಬಲವಾದ ಬುನಾದಿಯನ್ನು ಮುಂದುವರಿಸಿದ ರಾಜಕೀಯ ಆದರ್ಶ ವ್ಯಕ್ತಿ ಶಾಸ್ತ್ರಿಯವರು. ಗಾಂಧಿ ಯುಗದ ಮುಂದುವರಿದ ಭಾಗ ಇವರು. ಬಹುಶಃ ರಷ್ಯಾದ ತಾಷ್ಕೆಂಟ್ ನಲ್ಲಿ ಪಾಕಿಸ್ತಾನದ ಜೊತೆ ಒಪ್ಪಂದದ ಸಮಯದಲ್ಲಿ ತೀವ್ರ ಚಳಿಯಿಂದ ಹೃದಯಾಘಾತ ಸಂಭವಿಸದೇ ಮತ್ತಷ್ಟು ವರ್ಷ ಆಡಳಿತ ನಡೆಸಿದ್ದರೆ ಭಾರತದ ಅಭಿವೃದ್ಧಿಯ ವೇಗ ಮತ್ತಷ್ಟು ತೀವ್ರವಾಗಿರುತ್ತಿತ್ತು ಎಂದು ಖಚಿತವಾಗಿ ಹೇಳುವಷ್ಟು ದಕ್ಷ ಆಡಳಿತಗಾರರಾಗಿದ್ದರು ಲಾಲ್ ಬಹಾದ್ದೂರ್ ಶಾಸ್ತ್ರಿ. ಇಂದಿನ ರಾಜಕಾರಣಿಗಳು ಅವರ ಜೀವನಶೈಲಿಯಿಂದ ಕನಿಷ್ಠ ಪ್ರಮಾಣದ ಸ್ಪೂರ್ತಿ ಮತ್ತು ಪ್ರಾಮಾಣಿಕತೆಯನ್ನಾದರು ಕೇಳಿ ತಿಳಿದುಕೊಂಡು ಹಾಗೆ ನಡೆಯಲಿ ಎಂದು ಆಶಿಸುತ್ತಾ...
ಆಗಿನ ಸಮಯದಲ್ಲಿ ನೆಹರು ನಂತರ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಆಯ್ಕೆಯಾದ ಪರಿಸ್ಥಿತಿ ಮತ್ತು ಅಂದಿನ ಮೌಲ್ಯಯುತ ರಾಜಕೀಯ ವ್ಯವಸ್ಥೆಯ ಬಗ್ಗೆ ಆಶ್ಚರ್ಯ ಮತ್ತು ಪ್ರಶಂಸೆ ವ್ಯಕ್ತಪಡಿಸುತ್ತಾ.... ಮತ್ತೆ ಮಹಾತ್ಮನ ಬಗ್ಗೆ ಎರಡು ಮಾತು.
ಗಾಂಧಿ.. ಗುಜರಾತಿನ ಪೋರಬಂದರ್ ನ ಸಾಮಾನ್ಯ ಶಿಶು, ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿ, ಇಂಗ್ಲೇಂಡಿನಲ್ಲಿ ಕಾನೂನು ಶಿಕ್ಷಣ ಪಡೆಯಲು ಹೊರಟ ಕನಸುಗಣ್ಣಿನ ಯುವಕ, ಅಲ್ಲಿ ಬ್ಯಾರಿಸ್ಟರ್ ಪದವಿ ಪಡೆದು ಹಿಂತಿರುಗಿದ ಕುಟುಂಬದ ಹೆಮ್ಮೆಯ ಪುತ್ರ, ಆಕಸ್ಮಿಕವಾಗಿ ದೊರೆತ ಅವಕಾಶದಿಂದ ದಕ್ಷಿಣ ಆಫ್ರಿಕಾದಲ್ಲಿ ವಾದ ಮಂಡಿಸಲು ಹೊರಟ ವಕೀಲ, ವಕೀಲಿ ವೃತ್ತಿಯಲ್ಲಿ ಅನಿವಾರ್ಯವಾಗಿ ತಮ್ಮ ಕಕ್ಷೀದಾರರನ್ನು ಸಮರ್ಥಿಸಲು ಸುಳ್ಳು ಹೇಳಬೇಕಾದ ಮುಜುಗರ ತಪ್ಪಿಸಿಕೊಳ್ಳಲು ಆತ್ಮವಿಮರ್ಶೆ ಮಾಡಿಕೊಂಡು ಆ ವೃತ್ತಿಯ ಬಗ್ಗೆ ನಿರಾಸಕ್ತಿ ಬೆಳೆಸಿಕೊಂಡ ಅದರಿಂದ ಮುಕ್ತನಾದ ಪ್ರಾಮಾಣಿಕ, ದಕ್ಷಿಣ ಆಫ್ರಿಕಾದಲ್ಲಿ ಆದ ಅನಿರೀಕ್ಷಿತ, ಅವಮಾನಕರ ಘಟನೆಗಳಿಂದ ಸ್ವಾಭಿಮಾನ ಜಾಗೃತವಾಗಿ ಮೂಲಭೂತ ಅವಶ್ಯಕತೆಗಳಿಗಾಗಿ, ಹಕ್ಕುಗಳಿಗಾಗಿ ಪ್ರತಿಭಟನೆ ಮಾಡಿದ ಬಂಡಾಯಗಾರ,
ಅದಕ್ಕಾಗಿ ಆಗಿನ ಆಡಳಿತದೊಂದಿಗೆ ಪತ್ರ ವ್ಯವಹಾರ, ಕಾನೂನು ಸಮರ, ಚರ್ಚೆ, ಪತ್ರಿಕಾ ಲೇಖನ, ಮುಷ್ಕರ ರೂಪಿಸಿದ ಮಾನವೀಯ ಕಾಳಜಿಯ ಶ್ರಮಜೀವಿ, ತನ್ನ ಆ ಹೋರಾಟದಲ್ಲಿ ಸ್ವಲ್ಪ ಮಟ್ಟಿನ ಯಶಸ್ಸು ಪಡೆದು ಸಾರ್ವಜನಿಕ ವಲಯದಲ್ಲಿ ಜನಪ್ರಿಯರಾಗಿ ಪ್ರಸಿದ್ಧರಾದ ಚಳವಳಿಗಾರ, ಆ ಜನಪ್ರಿಯತೆ, ಸಂವಹನ ಕಲೆ, ಬ್ರಿಟಿಷ್ ಆಡಳಿತದೊಂದಿಗೆ ಸಂಪರ್ಕ ಸಾಧಿಸಿದ ವಿಧಾನ ಎಲ್ಲದರಗಳಿಂದ ಭಾರತದ ಆಗಿನ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಭರವಸೆ ಮೂಡಿಸಿ ಇಲ್ಲಿನ ಚಳುವಳಿಯಲ್ಲಿ ಭಾಗವಹಿಸಲು ಆಹ್ವಾನ ಪಡೆದ ನಾಯಕ, ಭಾರತಕ್ಕೆ ಬಂದು ನೇರ ಹೋರಾಟದಲ್ಲಿ ಭಾಗಿಯಾಗದೆ ಇಡೀ ಭಾರತವನ್ನು ತೃತೀಯ ದರ್ಜೆ ರೈಲಿನಲ್ಲಿ ಪ್ರಯಾಣಿಸಿ ಇಲ್ಲಿನ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಜನಜೀವನ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ ಅಧ್ಯಯನಕಾರ,
ಭಾರತದ ಶಕ್ತಿ ಸಾಮರ್ಥ್ಯ, ದೌರ್ಬಲ್ಯ, ಸಾಮಾಜಿಕ ರಚನೆಯ ವಿಭಜನಾತ್ಮಕ ಗುಣ, ಇಲ್ಲಿನ ಮೌಲ್ಯಗಳು, ಜಾತಿ, ಧರ್ಮ, ಆರ್ಥಿಕ ಅಸಮಾನತೆ ಎಲ್ಲವನ್ನು ಅಭ್ಯಸಿಸಿ ಸ್ವಾತಂತ್ರ ಚಳುವಳಿಯ ರೂಪರೇಷೆಗಳನ್ನು ಮನಸ್ಸಿನಲ್ಲಿ ಸ್ಪಷ್ಟ ಪಡಿಸಿಕೊಂಡ ಯೋಚನಾಕಾರ, ಸ್ಪಷ್ಟವಾದ ಗುರಿಯೊಂದಿಗೆ ಭಾರತದ ಸ್ವಾತಂತ್ರ್ಯ ಚಳುವಳಿಯ ಮುಂಚೂಣಿಯಲ್ಲಿ ನಿಂತು ಮಾರ್ಗದರ್ಶನ ಮಾಡುತ್ತಾ ಬೆಳೆದ ದೂರದೃಷ್ಟಿಯ ಹರಿಕಾರ, ತಮ್ಮ ಹೋರಾಟದ ಅನುಭವದಲ್ಲೇ ಸತ್ಯ, ಅಹಿಂಸೆ, ಸರಳತೆ, ಸತ್ಯಾಗ್ರಹ, ಪ್ರಾಮಾಣಿಕತೆ ಇವುಗಳನ್ನೇ ಸ್ವಾತಂತ್ರ್ಯ ಹೋರಾಟದ ಪ್ರಮುಖ ಅಸ್ತ್ರಗಳಾಗಿ ಉಪಯೋಗಿಸಿದ ಮಾನವತಾವಾದಿ, ಅನೇಕ ಸಂಘರ್ಷ, ಆರೋಪ ಪ್ರತ್ಯಾರೋಪ, ವಾದ ವಿವಾದ, ಘರ್ಷಣೆ, ಸೋಲು ಗೆಲುವು, ಆಸೆ ನಿರಾಶಗಳ ನಡುವೆಯೂ ಭಾರತದ ಸ್ವಾತಂತ್ರ್ಯ ಚಳುವಳಿಯನ್ನು ಕ್ರಮಬದ್ಧಗೊಳಿಸಿ ಯಶಸ್ವಿಯಾದ ಮಹಾಪುರುಷ, ಸ್ವಾತಂತ್ರ್ಯ ಗಳಿಸಿದ ಕೆಲವೇ ತಿಂಗಳುಗಳಲ್ಲಿ ಹಂತಕನ ಗುಂಡಿಗೆ ಬಲಿಯಾದ ಮಹಾತ್ಮ, ನನ್ನ ಜೀವನವೇ ನನ್ನ ಸಂದೇಶ ಎಂದು ಸಾರಿದ ಧೀಮಂತ ವ್ಯಕ್ತಿತ್ವ,
ಯಾವುದೇ ಅಧಿಕಾರ ಹಣ ಅಂತಸ್ತುಗಳಿಗೆ ಶರಣಾಗದ, ಆಮಿಷಕ್ಕೊಳ್ಳಲಾಗದ ತ್ಯಾಗಜೀವಿ, ಸೂಟು ಬೂಟಿನಿಂದ ಬರಿಮೈ ಫಕೀರನಾಗಿ ಬದಲಾದ ಸರಳ ಜೀವಿ, ಸ್ವಾತಂತ್ರ್ಯ ನಂತರ ದೇಶದ ಉದ್ದಗಲಕ್ಕೂ ಮಹಾತ್ಮನಾಗಿ, ರಾಷ್ಟ್ರಪಿತನಾಗಿ ಅಜರಾಮರರಾದ ಆದರ್ಶ ವ್ಯಕ್ತಿ, 80ರ ದಶಕದ ಆರಂಭದಲ್ಲಿ ಗಾಂಧಿ ನಿಜವಾಗಲೂ ರಾಷ್ಟ್ರಪಿತನೇ, ಮಹಾತ್ಮನೇ ಎಂಬ ಹಿಂದಿನ ಚರ್ಚೆಯ ವಿಷಯ ಮತ್ತೆ ಮುನ್ನೆಲೆಗೆ ಬಂದ ಚರ್ಚಾಸ್ಪದ ವ್ಯಕ್ತಿ, 90ರ ದಶಕದ ಅಂತ್ಯದ ವೇಳೆಗೆ ಗಾಂಧಿ ಮಹಾತ್ಮನಲ್ಲ, ದೇಶ ವಿಭಜನೆಯ ದ್ರೋಹಿ ಎಂಬುದಾಗಿ ನಿಧಾನವಾಗಿ ಜನಮಾನಸದಲ್ಲಿ ಬೇರೂರ ತೊಡಗಿದ ವ್ಯಕ್ತಿ, ನಿಧಾನವಾಗಿ ಯುವ ಜನತೆಯಲ್ಲಿ ಗಾಂಧಿ ತಾತನನ್ನು ಒಬ್ಬ ಹೇಡಿಯಂತೆ ಚಿತ್ರಿಸಿ ಹಾಸ್ಯಾಸ್ಪದ ವ್ಯಕ್ತಿಯಾದ ಗಾಂಧಿ, ಹಾಗೆಯೇ ತದನಂತರದಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆತದ್ದು ಗಾಂಧಿಯ ಅಹಿಂಸೆಯಿಂದಲೂ ಅಲ್ಲ, ಸತ್ಯಾಗ್ರಹದಿಂದಲೂ ಅಲ್ಲ, ಹೋರಾಟದಿಂದಲೂ ಅಲ್ಲ. ಅದೆಲ್ಲವೂ ಕಪಟ ನಾಟಕ. ಅವರೊಬ್ಬ ಬ್ರಿಟಿಷ್ ಏಜೆಂಟ್. ಶಸ್ತ್ರ ಮತ್ತು ಶಾಸ್ತ್ರದ ಬಲದಿಂದಲೇ ಸ್ವಾತಂತ್ರ್ಯ ಗಳಿಸಿದ್ದು ಎಂಬುದಾಗಿ ಚರ್ಚೆಗಳು ಸಾಮಾಜಿಕ ಜಾಲತಾಣಗಳ ಮುಖಾಂತರ, ಸಂಘ ಸಂಸ್ಥೆಗಳ ಮುಖಾಂತರ, ಕೆಲವು ಪತ್ರಿಕೆಗಳ ಮುಖಾಂತರ ಹರಡತೊಡಗಿ ಖಳನಾಯಕನಾದ ವ್ಯಕ್ತಿ, ಗಾಂಧಿ ಒಬ್ಬ ಸನಾತನ ಧರ್ಮ ವ್ಯವಸ್ಥೆಯ ಪ್ರತಿಪಾದಕ, ವರ್ಣಾಶ್ರಮ ಧರ್ಮದಲ್ಲಿ ನಂಬಿಕೆ ಇದ್ದ ವ್ಯಕ್ತಿ, ಸ್ತ್ರೀ ಸ್ವಾತಂತ್ರ್ಯದ ವಿರೋಧಿ ಮುಂತಾದ ಗುಣ ವಿಶೇಷಗಳೊಂದಿಗೆ ಮಹಾತ್ಮನಲ್ಲ ದುರಾತ್ಮ ಎಂಬುದಾಗಿ ಬಿಂಬಿತವಾದ ವ್ಯಕ್ತಿ, ದೇಶದಾದ್ಯಂತ ಪ್ರತಿಷ್ಠಾಪಿಸಲಾಗಿದ್ದ ಗಾಂಧಿಯ ಪ್ರತಿಮೆಗಳು ನಿಧಾನವಾಗಿ ಮರೆಯಾಗುತ್ತಾ, ಇತರರ ಪ್ರತಿಮೆಗಳು ಹೆಚ್ಚಾಗುತ್ತಾ ಜನರ ಮನಸ್ಸಿನಲ್ಲೂ ಮರೆಯಾಗುತ್ತಿರುವ ವ್ಯಕ್ತಿ,
ವಿಶ್ವದ ನಾಲ್ಕನೇ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತದಲ್ಲಿ, ಅದೇ ವೇಗದಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವ, ನಾಶವಾಗುತ್ತಿರುವ ಸಂದರ್ಭದಲ್ಲಿ ಗಾಂಧಿ, ಗಾಂಧಿಯ ಮೌಲ್ಯಗಳು, ವ್ಯಕ್ತಿತ್ವ, ವಿಚಾರಗಳು ಸಹ ನಿಧಾನವಾಗಿ ಇಲ್ಲವಾಗುತ್ತಿರುವ ಸಂದರ್ಭದಲ್ಲಿ ಭಾರತ, ಭಾರತೀಯತೆ, ಭಾರತೀಯರು ಎತ್ತ ಸಾಗುತ್ತಿದ್ದಾರೆ. ಇವುಗಳಿಗೆ ಒಂದಕ್ಕೊಂದು ಸಂಬಂಧ ಇದೆಯೇ ಎಂಬುದನ್ನು ನಿಮ್ಮ ವಿವೇಚನೆಗೆ ಬಿಡುತ್ತಾ,..
ಒಮ್ಮೆ ಬ್ರಿಟಿಷ್ ವ್ಯಕ್ತಿಯೊಬ್ಬ ಗಾಂಧಿಯವರ ಬಳಿ ಅವರ ಸತ್ಯ ನಿಷ್ಠೆಯನ್ನು ಪ್ರಶ್ನೆ ಮಾಡುವ ಅಥವಾ ಅವಹೇಳನ ಮಾಡುವ ರೀತಿಯಲ್ಲಿ ಅವರಿಗೆ ಹೀಗೆ ಹೇಳುತ್ತಾನೆ. " ಗಾಂಧಿಯವರೆ, ನಿಮ್ಮ ಕಠೋರ ಸತ್ಯ ಎಷ್ಟೊಂದು ಅಮಾನವೀಯ ಗೊತ್ತೆ. ಒಮ್ಮೆ ಒಬ್ಬ ಬೇಟೆಗಾರ ಒಂದು ಜಿಂಕೆಯನ್ನು ಬೇಟೆಯಾಡಲು ಅಟ್ಟಿಸಿಕೊಂಡು ಬರುತ್ತಾನೆ. ಅವನಿಂದ ತಪ್ಪಿಸಿಕೊಂಡು ಓಡುತ್ತಾ ಬರುವ ಜಿಂಕೆ ದಾರಿಯಲ್ಲಿ ಒಂದು ಮರದ ಕೆಳಗೆ ತಪಸ್ಸು ಮಾಡುತ್ತಾ ಕುಳಿತಿದ್ದ ಮಹಾನ್ ಸತ್ಯಸಂಧ ಮುನಿಯ ಬಳಿ " ಅಯ್ಯಾ ಋಷಿ , ಬೇಟೆಗಾರನೊಬ್ಬ ನನ್ನನ್ನು ಕೊಲ್ಲಲು ಬರುತ್ತಿದ್ದಾನೆ. ದಯವಿಟ್ಟು ರಕ್ಷಿಸು. ತಪ್ಪಿಸಿಕೊಳ್ಳಲು ಜಾಗ ತೋರಿಸು " ಎಂದು ಕೇಳಿಕೊಳ್ಳುತ್ತದೆ.
ಆಗ ಋಷಿ ' ಆಯಿತು. ಇಲ್ಲೇ ನನ್ನ ಹಿಂದೆ ಇರುವ ಆ ಗುಹೆಯಲ್ಲಿ ಅಡಗಿಕೋ' ಎಂದು ಹೇಳುತ್ತಾನೆ. ಸ್ವಲ್ಪ ಹೊತ್ತಿನಲ್ಲಿ ಜಿಂಕೆಯನ್ನು ಹುಡುಕುತ್ತಾ ಅದೇ ದಾರಿಯಲ್ಲಿ ಬಂದ ಬೇಟೆಗಾರ ಅಲ್ಲಿದ್ದ ಅದೇ ಮುನಿಯನ್ನು " ಋಷಿವರ್ಯ ನಾನೊಂದು ಜಿಂಕೆಯನ್ನು ಬೇಟೆಯಾಡಲು ಅಟ್ಟಿಸಿಕೊಂಡು ಬಂದೆ ನೀವೇನಾದರೂ ನೋಡಿದಿರೆ "
ಅದಕ್ಕೆ ಎಂದೂ ಸುಳ್ಳಾಡದ ಆ ಮುನಿ ' ಹೌದು ನೋಡಿದೆ ' ಎನ್ನುತ್ತಾನೆ. ಬೇಟೆಗಾರ ' ಹಾಗಾದರೆ ಎಲ್ಲಿ ಹೋಯಿತು'
ಆಗ ಮುನಿ ' ನನ್ನನ್ನು ರಕ್ಷಣೆಗಾಗಿ ಕೇಳಿಕೊಂಡಿತು. ನಾನೇ ಹಿಂದೆ ಇರುವ ಗುಹೆಯಲ್ಲಿ ಬಚ್ಚಿಟ್ಟುಕೊಳ್ಳಲು ಹೇಳಿದ್ದೇನೆ' ಅದನ್ನು ಕೇಳಿದ ಬೇಟೆಗಾರ ಗುಹೆಗೆ ಹೋಗಿ ಜಿಂಕೆಯನ್ನು ಕೊಂದು ಹೊತ್ತೊಯ್ಯುತ್ತಾನೆ." ಈ ಕಥೆಯನ್ನು ಗಾಂಧಿಗೆ ಹೇಳಿದ ಆ ಬ್ರಿಟಿಷ್ " ನೋಡಿದಿರಾ ಗಾಂಧಿ, ಸಾಮಾನ್ಯ ಸಮಯ ಪ್ರಜ್ಞೆ ಇಲ್ಲದ ಮುನಿ ಒಂದು ಸಣ್ಣ ಸುಳ್ಳು ಹೇಳಿದ್ದರೆ ಆ ಅಮಾಯಕ ಜಿಂಕೆಯ ಪ್ರಾಣ ಉಳಿಸಬಹುದಿತ್ತು. ನಿಮ್ಮ ಆ ಸತ್ಯ ಕೂಡ ಕೆಲವೊಮ್ಮೆ ಎಷ್ಟೊಂದು ಕಠೋರ "
ಅದಕ್ಕೆ ಗಾಂಧಿಯ ಉತ್ತರ " ಗೆಳೆಯ, ನಿಮ್ಮ ಕಥೆಯಲ್ಲಿ ತಪ್ಪು ಸತ್ಯದ್ದಲ್ಲ. ಅದು ಋಷಿಮುನಿಯದು. ಒಂದು ವೇಳೆ ನಾನು ಋಷಿಯ ಜಾಗದಲ್ಲಿದ್ದಿದ್ದರೆ ಬೇಟೆಗಾರ ಬಂದು ಕೇಳಿದಾಗ ' ಹೌದು ಜಿಂಕೆಯನ್ನು ನಾನೇ ಬಚ್ಚಿಟ್ಟಿದ್ದೇನೆ, ಅದು ಇರುವ ಜಾಗ ತಿಳಿದಿದೆ. ಆದರೆ ಅದನ್ನು ನೀನು ಕೊಲ್ಲುವುದರಿಂದ ಅದು ಎಲ್ಲಿದೆ ಎಂದು ಹೇಳುವುದಿಲ್ಲ.ಅದಕ್ಕಾಗಿ ನನ್ನ ಪ್ರಾಣ ತ್ಯಾಗಕ್ಕೂ ಸಿದ್ದ ಎಂದೇ ಹೇಳುತ್ತೇನೆ. ಸಮಸ್ಯೆ ಇರುವುದು ಸತ್ಯದ ಆಳದಲ್ಲಿ ಅಲ್ಲ. ಅದರ ಆಚರಣೆಗಳ ಪ್ರಾಮಾಣಿಕತೆಯಲ್ಲಿ." ಎನ್ನುತ್ತಾರೆ. ಮುಂದಿನ ವಿವರಣೆ ಬೇಕಿಲ್ಲ ಅಲ್ಲವೇ ? ಸತ್ಯದ ದೈವಿಕತೆಯ ಸಾಕ್ಷಾತ್ಕಾರವೆಂದರೆ ಇದೇ....
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (1)
ಗಾಂಧೀಜಿ ಮತ್ತವರ ಅನುಯಾಯಿಗಳು ಇಂಥ ಎಷ್ಟೊಂದು ಜಿಂಕೆಗಳನ್ನ ರಕ್ಷಿಸುವ ಕಥೆಯೇ ನಮ್ಮ ಸ್ವತಂತ್ರ ಸಮರ! ದೇವರು ಅವರ ಹೆಸರನ್ನ ಅಜರಾಮರವಾಗಿ ಇಟ್ಟಿರಲಿ!