'ಶರನ್ನವರಾತ್ರಿ' ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆಯ ಸಂಕೇತ ಇದು. ಈ ದಿನ ಜನ ಬನ್ನಿ ಮರದ (ಶಮೀ ವೃಕ್ಷ) ಎಲೆಗಳನ್ನು ಹಂಚಿ "ಬನ್ನಿ ತಕ್ಕೊಂಡು ಬಂಗಾರದಾಂಗ ಇರೋಣ" ಎಂದು ಶುಭಾಶಯಗಳನ್ನು ಕೋರುತ್ತಾರೆ. ಈ ಬನ್ನಿ ಎಲೆಗಳು ಬಂಗಾರದ ಸಂಕೇತ. ನೋಡಿ ನಮ್ಮ ಜನಪದರಿಗೆ ಸಸ್ಯಗಳು ಎಂದರೆ ಬಂಗಾರಗಳೇ.
ಕಳೆದ ಕೆಲವು ಸಂಚಿಕೆಗಳಲ್ಲಿ ಹಸಿರುಮನೆ ಪರಿಣಾಮದ ಬಗ್ಗೆ ಮಾತನಾಡುತ್ತಿದ್ದೆವು. ಇಂಗಾಲದ ಹೆಜ್ಜೆ ಗುರುತು ಪ್ರತಿ ವಸ್ತುವಿಗೂ ಭಿನ್ನ. ಅದನ್ನು ಕಡಿಮೆ ಮಾಡುವ ಪ್ರಯತ್ನ ಸಮಯದ ಅವಶ್ಯಕತೆ (need of the hour) ಎಂಬ ಬಗ್ಗೆ ತಿಳಿದೆವು. ಹಾಗೆಯೇ ಸಿಮೆಂಟ್ ನ ಇಂಗಾಲದ ಹೆಜ್ಜೆ ಗುರುತು ಹೇಗಿದೆ ಎಂದರೆ ಒಂದು ಟನ್ ಸಿಮೆಂಟ್ ಉತ್ಪಾದನೆಗೆ 900 kg ಇಂಗಾಲದ ಡೈಆಕ್ಸೈಡ್ ಉತ್ಪಾದನೆಯಾಗುತ್ತದೆ. ಅಂದರೆ ಇದು ಜಾಗತಿಕ ತಾಪಮಾನ ಹೆಚ್ಚಳದಲ್ಲಿ 8% ದಷ್ಟಾಗುತ್ತದೆ. ಆದರೆ ಸಿಮೆಂಟ್ ಉತ್ಪಾದನೆ ನಿಲ್ಲಿಸುವುದು ಸಾಧ್ಯವೇ ಎಂದರೆ ಸಾಧ್ಯವಾಗದ ಮಾತು. ನಮ್ಮೆದುರು ಇರುವ ಆಯ್ಕೆ ಎಂದರೆ ಇಂಗಾಲದ ಡೈಆಕ್ಸೈಡ್ ಬಿಡುಗಡೆಯನ್ನು ತಗ್ಗಿಸುವುದು ಮಾತ್ರ. ಇದು ಎಲ್ಲಿ ಬಿಡುಗಡೆಯಾಗುತ್ತದೆಯೋ ಅಲ್ಲಿ ಚಿಕಿತ್ಸೆ ನೀಡಬೇಕು ಅಷ್ಟೇ. ಸುಣ್ಣದ ಕಲ್ಲು, ಜೇಡಿ ಮಣ್ಣು ಮತ್ತು ಹೊಯಿಗೆಗಳನ್ನು ಚೆನ್ನಾಗಿ ಪುಡಿ ಮಾಡಿ 1400 - 1500°C ಗೆ ಕಾಯಿಸುತ್ತೇವಲ್ಲ ಇದೇ ಹಂತದಲ್ಲಿ ಜಗತ್ತನ್ನು ಕಾಯಿಸಬಲ್ಲ ಇಂಗಾಲದ ಡೈಆಕ್ಸೈಡ್ ಬಿಡುಗಡೆಯಾಗುವುದು. ನಾವು ಈ ಹಂತದಲ್ಲಿ ಜಾಗ್ರತರಾದರೆ ಸಿಮೆಂಟ್ ನ ಇಂಗಾಲದ ಹೆಜ್ಜೆ ಗುರುತನ್ನು ನಿಯಂತ್ರಿಸಬಹುದು. ಹೀಗೆ ಕಾಯಿಸಿದಾಗ ಕ್ಯಾಲ್ಸಿಯಂನ ಸಂಕೀರ್ಣವಾದ ಸಿಲಿಕೇಟ್, ಅಲ್ಯಮಿನೇಟ್ ಮತ್ತು ಫೆರೈಟ್ ಉತ್ಪತ್ತಿಯಾಗುತ್ತದೆ. ಇದು ಸಿಮೆಂಟ್ ಕ್ಲಿಂಕರ್. ಇದನ್ನು ಪುಡಿಮಾಡಿ ಜಿಪ್ಸಂ ನೊಂದಿಗೆ ಮಿಶ್ರ ಮಾಡಿದಾಗ ನಮಗೆ ದೊರೆಯುವುದು ಸಿಮೆಂಟ್. ಹೆಚ್ಚು ಹೆಚ್ಚು ಕ್ಲಿಂಕರ್ ಉತ್ಪಾದಿಸಿದರೆ ಹೆಚ್ಚು ಹೆಚ್ಚು ಹಸಿರುಮನೆ ಅನಿಲ. ಸಿಮೆಂಟ್ ನಲ್ಲಿ ಕ್ಲಿಂಕರ್ ನ ಪ್ರಮಾಣ 90%. ಇದರ ನಿಯಂತ್ರಣಕ್ಕೆ ನೀವು ಮಾಡಬೇಕಾದುದು ಸಿಮೆಂಟಿನ ದೃಢತೆ ಕಡಿಮೆಯಾಗದ ಹಾಗೆ ಕ್ಲಿಂಕರ್ ನ ಬಳಕೆ ಕಡಿಮೆ ಮಾಡುವುದು. ಇದಕ್ಕಾಗಿ ಈ ಕ್ಲಿಂಕರ್ ನೊಂದಿಗೆ ಹಾರು ಬೂದಿ (fly ash), LC3 (Limestone Calcined Clay Cement), ಅಥವಾ ಕೆಲವೊಂದು ಜಿಯೋ ಪಾಲಿಮರ್ಗಳನ್ನು (geo polymers) ಬಳಸುತ್ತಾರೆ. ಇದರಿಂದ ಸಿಮೆಂಟ್ ನ ದೃಢತೆ ಕಡಿಮೆಯಾಗುವುದಿಲ್ಲ. ಆದರೆ ಕ್ಲಿಂಕರ್ ನ ಬಳಕೆಯಲ್ಲಿ 50% ಕಡಿತವಾಗುತ್ತದೆ. ಕ್ಲಿಂಕರ್ ನ ಬಳಕೆ ಕಡಿತ ಎಂದರೆ ಇಂಗಾಲದ ಹೆಜ್ಜೆ ಗುರುತು ಕಡಿಮೆಯಾಗುತ್ತದೆ.
ಶಾಖೋತ್ಪಾದನೆಗೆ ಪಳೆಯುಳಿಕೆ ಇಂಧನಗಳನ್ನು ಬಳಸುವ ಬದಲಾಗಿ ವಿದ್ಯುತ್, ಜೈವಿಕ ತ್ಯಾಜ್ಯಗಳನ್ನು ಬಳಸುವ ಮೂಲಕ ಹಸಿರುಮನೆ ಅನಿಲಗಳನ್ನು ಕಡಿಮೆ ಮಾಡಬಹುದು. ಇನ್ನು ಬಿಡುಗಡೆಯಾದ ಶಾಖದ ಮರು ಬಳಕೆಯ ಮೂಲಕ ಇಂಧನಗಳ ಬಳಕೆ ಕುಗ್ಗಿಸಬಹುದು.
ಇನ್ನು ಇಲ್ಲಿ ಬಿಡುಗಡೆಯಾಗುವ ಇಂಗಾಲದ ಡೈಆಕ್ಸೈಡ್ ಅನ್ನು ಅಲ್ಲಿಯೇ ಬಂಧಿಸಿ ವಾತಾವರಣಕ್ಕೆ ತಪ್ಪಿಸಿಕೊಂಡು ಹೋಗದಂತೆ ಮಾಡುವ ಮೂಲಕ ಹೆಜ್ಜೆ ಗುರುತನ್ನು ತಗ್ಗಿಸಬಹುದು. ಈ ಇಂಗಾಲದ ಡೈಆಕ್ಸೈಡ್ ಅನ್ನು ಬೇರೆ ಕೈಗಾರಿಕಾ ಉತ್ಪನ್ನಗಳ ಉತ್ಪಾದನೆಗೆ ಬಳಸಬಹುದು. ಇನ್ನು ಈ ಸಿಮೆಂಟ್ ವಾತಾವರಣದ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಂಡು ಸಿಮೆಂಟ್ ಅನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಇದನ್ನು ಸಿಮೆಂಟ್ ನ ಇಂಗಾಲೀಕರಣ ಎನ್ನುವುದು (carbonation of cement concrete). ಇದು ಕೂಡ ಇಂಗಾಲದ ಹೆಜ್ಜೆ ಕಡಿಮೆ ಮಾಡುವ ಕ್ರಮ.
ಹೀಗೆ ಹಲವಾರು ಉಪಕ್ರಮಗಳ ಮೂಲಕ ಸಿಮೆಂಟ್ ಉತ್ಪಾದನೆಯಲ್ಲಿ ಅದರ ಇಂಗಾಲದ ಹೆಜ್ಜೆ ಗುರುತನ್ನು ನಿಯಂತ್ರಿಸುವ ಕ್ರಮ ಜಾರಿಯಲ್ಲಿದೆ. ಹಳೆಯ ಯಂತ್ರೋಪಕರಣಗಳನ್ನು ಹೊಸತಕ್ಕೆ ಬದಲಾಯಿಸುತ್ತಾ ಹೋದಂತೆ ಹೊಸ ತಂತ್ರಜ್ಞಾನ ಸೇರಿಕೊಂಡು ಇಂಗಾಲದ ಹೆಜ್ಜೆ ಗುರುತುಗಳು ಕಡಿಮೆಯಾಗುತ್ತವೆ. ಹೀಗೆ ಹಳೆಯ ತಂತ್ರಜ್ಞಾನಕ್ಕೆ ಗುಡ್ ಬೈ ಹೇಳುವುದು ಇಂಗಾಲದ ಹೆಜ್ಜೆ ಗುರುತು ಕಡಿಮೆ ಮಾಡುವ ಕ್ರಮ.
-ದಿವಾಕರ ಶೆಟ್ಟಿ ಎಚ್, ಮಂಗಳೂರು.
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!