ಕೂಲ್ ಲಿಪ್ “Cool Lip” ಎನ್ನುವುದು ಸಾಮಾನ್ಯವಾಗಿ ತುಟಿಯ ಒಳಭಾಗದಲ್ಲಿ ಇಡುವ ತಂಬಾಕು ಅಥವಾ ನಿಕೋಟಿನ್ ನ ಪುಟ್ಟ ಪೌಚ್ ಆಗಿರುತ್ತದೆ. ಇದು ಕೆಲವೊಮ್ಮೆ snus ತರಹದ ಉತ್ಪನ್ನವಾಗಿರಬಹುದು ಅಥವಾ Zyn ತರಹ ನಿಕೋಟಿನ್ ಪೌಚ್ ಆಗಿರಬಹುದು. ಸ್ನಸ್ (snus) ಒಂದು ಪರಂಪರಾಗತ, ಪಾಸ್ಚರೈಸ್ ಮಾಡಿದ ತೇವ ತಂಬಾಕು ಉತ್ಪನ್ನವಾಗಿದೆ. ಇದರ ವಿರುದ್ಧವಾಗಿ ಝಿನ್ (Zyn ) ಒಂದು ಆಧುನಿಕ, ತಂಬಾಕು ರಹಿತ ನಿಕೋಟಿನ್ ಪೌಚ್ ಆಗಿದ್ದು, ಸಸ್ಯ ತಂತುಗಳು (plant fibers) ಮತ್ತು ನಿಕೋಟಿನ್ ಸಾಲ್ಟ್ಗಳಿಂದ ತಯಾರಿಸಲಾಗುತ್ತದೆ.
ನಿಕೋಟಿನ್ ಪೌಚ್ ಹೇಗೆ ಕಾರ್ಯ ನಿರ್ವಹಿಸುತ್ತದೆ? ನಿಕೋಟಿನ್ ಮೆದುಳಿನ ಮೆಸೋಲಿಂಬಿಕ್ ವ್ಯವಸ್ಥೆ (mesolimbic system) ಮೇಲೆ ತನ್ನ ಪ್ರಭಾವವನ್ನು ಬೀರಿ, ಆನಂದದ ಕೇಂದ್ರ ಭಾಗವಾದ ನ್ಯೂಕ್ಲಿಯಸ್ ಅಕ್ಯುಂಬೆನ್ಸ್ (Nucleus Accumbens) ನಲ್ಲಿ ಡೋಪಮೈನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ನ್ಯೂಕ್ಲಿಯಸ್ ಅಕ್ಯುಂಬೆನ್ಸ್ ಪ್ರೇರಣೆ, ಬಹುಮಾನ ಮತ್ತು ಅಭ್ಯಾಸ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಉದಾ: ನಮಗೆ ಥ್ರಿಲ್ ಕೊಡುವ ಆಟ ಪುನಃ ಪುನಃ ಆಡಬೇಕೆಂದೆನಿಸುತ್ತದೆ. ಅಂತೆಯೇ ನಿಕೋಟಿನ್ ನೀಡುವ ತಾತ್ಕಾಲಿಕ ಉಲ್ಲಾಸ ಪುನಃಪುನಃ ಬಳಕೆ ಮಾಡಲು ಮನಸ್ಸನ್ನು ಪ್ರೇರೇಪಿಸಿ ಕ್ರಮೇಣ ಅವಲಂಬನೆಯನ್ನು ಉಂಟುಮಾಡುತ್ತದೆ.
18 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಮೆದುಳು ಇನ್ನೂ ಪೂರ್ಣವಾಗಿ ಬೆಳೆದಿರುವುದಿಲ್ಲ. ಮುಖ್ಯವಾಗಿ ನಿರ್ಧಾರ ತೆಗೆದುಕೊಳ್ಳುವಿಕೆ, ಸ್ವಯಂ ನಿಯಂತ್ರಣ, ಗಮನ ಹಾಗೂ ಯೋಜನೆಗೆ ಸಂಬಂಧಿಸಿದ ಮುಂಭಾಗದ ಮೆದುಳಿನ ಭಾಗ (prefrontal cortex) ಅಭಿವೃದ್ಧಿ ಹೊಂದುತ್ತಿರುವ ಹಂತದಲ್ಲಿದ್ದು ಈ ಸಮಯದಲ್ಲಿ ಮೆದುಳಿನ ಆನಂದ ಏರ್ಪಡಿಸುವ ಮಾರ್ಗ(reward pathway) ಹೆಚ್ಚು ಸಂವೇದನಾಶೀಲವಾಗಿರುತ್ತದೆ. ಆದ್ದರಿಂದ ಈ ವಯಸ್ಸಿನಲ್ಲಿ ತಂಬಾಕು ಅಥವಾ ನಿಕೋಟಿನ್ ಬಳಸಿದರೆ, ಅದು ದೊಡ್ಡವರಿಗಿಂತ ಹೆಚ್ಚು ವೇಗವಾಗಿ ಮತ್ತು ಗಾಢವಾಗಿ ವ್ಯಸನ ಉಂಟುಮಾಡುತ್ತದೆ. ವೈಜ್ಞಾನಿಕ ಅಧ್ಯಯನಗಳು ತೋರಿಸಿರುವಂತೆ ನಿಕೋಟಿನ್ ಮೆದುಳಿನಲ್ಲಿ ಡೋಪಮಿನ್ ಬಿಡುಗಡೆ ಹೆಚ್ಚಿಸಿ, ಆನಂದದ ಭಾವನೆ ಉಂಟುಮಾಡುತ್ತದೆ ಮತ್ತು ಅದರಿಂದ ಮೆದುಳಿನ ಆನಂದ ಏರ್ಪಡಿಸುವ ಮಾರ್ಗಗಳಲ್ಲಿ ಶಾಶ್ವತ ಬದಲಾವಣೆಗಳು ಸಂಭವಿಸಬಹುದು. ಇದರಿಂದಾಗಿ ಮುಂದಿನ ದಿನಗಳಲ್ಲಿ ನಿಕೋಟಿನ್ ಇಲ್ಲದೆ ಸಂತೋಷ ಅಥವಾ ಶಾಂತಿ ಅನುಭವಿಸುವುದು ಕಷ್ಟವಾಗಬಹುದು. ಇಷ್ಟೇ ಅಲ್ಲದೆ ನಿಕೋಟಿನ್ ಗಮನ, ಸ್ಮರಣೆ ಮತ್ತು ಹೊಸ ಮಾಹಿತಿಯನ್ನು ಕಲಿಯುವ ಸಾಮರ್ಥ್ಯವನ್ನು ಹಾನಿಗೊಳಿಸಬಹುದು ಎಂಬುದನ್ನು ಸಾಕ್ಷ್ಯಾಧಾರಿತ ಅಧ್ಯಯನಗಳು ತಿಳಿಸಿವೆ.
ಎಳೆ ವಯಸ್ಸಿನಲ್ಲಿ ತಂಬಾಕು ಬಳಕೆ ಪ್ರಾರಂಭಿಸಿದವರು ದೊಡ್ಡವರಾದ ನಂತರ ಅದನ್ನು ಬಿಡುವುದು ಕಷ್ಟವಾಗುತ್ತದೆ. ಕೆಲವು ಅಧ್ಯಯನಗಳು ತೋರಿಸಿರುವಂತೆ, ಸಿಗರೆಟ್ ಅಥವಾ ಇತರ ತಂಬಾಕು ಉತ್ಪನ್ನಗಳನ್ನು ಬಳಸುವವರು ಮುಂದಿನ ದಿನಗಳಲ್ಲಿ ಮದ್ಯಪಾನ ಅಥವಾ ಇತರ ಮಾದಕ ವಸ್ತುಗಳ ಬಳಕೆಯ ಅಪಾಯಕ್ಕೂ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಈ ಎಲ್ಲಾ ಮಾಹಿತಿಯು ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ವರದಿಗಳು ಮತ್ತು ನರಶಾಸ್ತ್ರ ಸಂಬಂಧಿತ ಸಮೀಕ್ಷೆಗಳ ಆಧಾರದ ಮೇಲೆ ಸಾಬೀತಾಗಿರುತ್ತದೆ.
ಜಾಗತಿಕ ಯುವ ತಂಬಾಕು ಸಮೀಕ್ಷೆ 2019 ರ ಸಮೀಕ್ಷೆಯ ಪ್ರಕಾರ Global Youth Tobacco Survey (GYTS) – (ಇದು ಶಾಲಾ ವಿದ್ಯಾರ್ಥಿಗಳ 13–15 ವರ್ಷ ಮೇಲೆ ನಡೆಸುವ ರಾಷ್ಟ್ರೀಯ ಸಮೀಕ್ಷೆ. ಇದನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ( CDC) ಸಹಯೋಗದಲ್ಲಿ ನಡೆಸಲಾಗುತ್ತದೆ. ) ಭಾರತದಲ್ಲಿ ಸುಮಾರು 8.4%–8.5% ಅಂದರೆ ಸರಿ ಸುಮಾರು ನೂರರಲ್ಲಿ ಎಂಟರಿಂದ ಒಂಬತ್ತು ವಿದ್ಯಾರ್ಥಿಗಳು ತಂಬಾಕು ಬಳಸುತ್ತಾರೆ ಎಂದು ತಿಳಿಸಿದೆ.18 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಬಗ್ಗೆ ಹೆಚ್ಚು ಉಲ್ಲೇಖವಾಗುವ ಪ್ರಮುಖ ಮೂಲ ಇದೇ. ತಂಬಾಕು ಅವಲಂಬನೆ ಇದೆ ಎಂದು ದೃಡಪಡಲು ಕೆಳಕಂಡ ಅಂಶದಲ್ಲಿ ಕನಿಷ್ಠ 3 ಲಕ್ಷಣಗಳು ಇರಬೇಕು.
ತಂಬಾಕು ಬಳಕೆಗೆ ತೀವ್ರ ಆಸೆ (Craving)
ಬಳಕೆಯನ್ನು ನಿಯಂತ್ರಿಸಲು ಕಷ್ಟ.
ತಂಬಾಕು ಹಿಂತೆಗೆದ ಲಕ್ಷಣ (ಕೈ ನಡುಗುವುದು ನಿದ್ರಾಹೀನತೆ ವಾಕರಿಕೆ ತಲೆನೋವು ಇತ್ಯಾದಿ)
ಸಹಿಷ್ಣುತೆ (ನಶೆಯ ಪರಿಣಾಮಕ್ಕೆ ಹೆಚ್ಚು ಪ್ರಮಾಣ ಬೇಕಾಗುವುದು)
ಸಾಮಾಜಿಕ ಚಟುವಟಿಕೆಗಳ ನಿರ್ಲಕ್ಷ್ಯ
ಹಾನಿ ಇದ್ದರೂ ಬಳಕೆಯನ್ನು ಮುಂದುವರಿಸುವುದು.
ಹದಿಹರೆಯದವರು (ವಿದ್ಯಾರ್ಥಿಗಳು) ತಂಬಾಕು ಉತ್ಪನ್ನಗಳತ್ತ ಆಕರ್ಷಿತರಾಗುವ ಕಾರಣಗಳು ಹಲವು ಅವುಗಳೆಂದರೆ:
ಸ್ನೇಹಿತರ ಪ್ರಭಾವ (Peer Pressure): ಸ್ನೇಹಿತರು ಬಳಸುತ್ತಿದ್ದರೆ, “ನಾವು ಕೂಡ ಪ್ರಯತ್ನಿಸೋಣ” ಎಂದು ಆಕರ್ಷಣೆ ಉಂಟಾಗುತ್ತದೆ. ಸ್ನೇಹಿತರು ಬಳಸುವಂತೆ ಒತ್ತಾಯಿಸುವುದು, ನಾನು ತಂಬಾಕು ಬಳಸದೆ ಇದ್ದರೆ ಸ್ನೇಹಿತರು ತಮ್ಮ ವರ್ಗದಿಂದ ದೂರ ಮಾಡಬಹುದು ಎಂಬ ಆತಂಕ ತಂಬಾಕನ್ನು ಬಳಸುವಂತೆ ಮಾಡುತ್ತದೆ.
ಕುಟುಂಬದ ಪ್ರಭಾವ (Family Influence) : ಕುಟುಂಬದಲ್ಲಿ ಅಪ್ಪ, ಅಮ್ಮ, ಅಣ್ಣ, ಅಥವಾ ಇತರ ಹಿರಿಯರು ತಂಬಾಕು ಬಳಸುತ್ತಿದ್ದರೆ, ಮಕ್ಕಳ ಮೇಲೆ ಅದರ ಪರಿಣಾಮ ಹೆಚ್ಚು. ಮಕ್ಕಳು ಹಿರಿಯರನ್ನು ನೋಡಿ ಅನುಕರಣೆ ಮಾಡುತ್ತ ಕಲಿಯುತ್ತಾರೆ. ಮನೆಯಲ್ಲಿ ಎಲ್ಲರೂ ಬಳಸುತ್ತಿದ್ದರೆ ಇದು ಸಾಮಾನ್ಯ ಎಂದು ಭಾವಿಸಬಹುದು. ಮನೆಯವರಿಂದ ತಂಬಾಕು ಬಳಕೆಯ ಬಗ್ಗೆ ಕಟ್ಟುನಿಟ್ಟಿನ ವಿರೋಧ ಇಲ್ಲದಿದ್ದರೆ, ಪ್ರಯತ್ನಿಸುವ ಸಾಧ್ಯತೆ ಹೆಚ್ಚು, ಮನೆಯಲ್ಲಿ ಸುಲಭವಾಗಿ ಲಭ್ಯವಿರುವುದರಿಂದ ಮಕ್ಕಳಿಗೆ ಪ್ರಯೋಗಿಸಲು ಅವಕಾಶ ಸಿಕ್ಕು ಇದರ ಅಭ್ಯಾಸ ಬೆಳೆಸಿಕೊಳ್ಳುತ್ತಾರೆ ಎಂಬುದನ್ನು ಸಾಕಷ್ಟು ಅಧ್ಯಯನಗಳು ಹೇಳುತ್ತದೆ..
ಕುತೂಹಲ: ಹದಿಹರೆಯದ ಈ ವಯಸ್ಸಿನಲ್ಲಿ ಹೊಸದನ್ನು ಪ್ರಯತ್ನಿಸುವ ಆಸಕ್ತಿ ಹೆಚ್ಚು ಇರುತ್ತದೆ. ತಂಬಾಕು ತನ್ನ ಮೇಲೆ ಯಾವ ರೀತಿ ಪ್ರಭಾವ ಬೀರಬಹುದು ಎಂಬುದನ್ನು ಪ್ರಯೋಗದಿಂದ ತಿಳಿದುಕೊಳ್ಳುವ ತವಕ ಹಾಗೂ ದೊಡ್ಡವರಂತೆ ಕಾಣಬೇಕು ಎಂಬ ಆಸೆ ತಂಬಾಕು ಸೇವನೆಗೆ ಕಾರಣವಾಗುತ್ತದೆ.
ಮಾಧ್ಯಮ ಮತ್ತು ಮಾದರಿ ವ್ಯಕ್ತಿಗಳ ಪ್ರಭಾವ : ಸಿನಿಮಾಗಳಲ್ಲಿ ನಾಯಕರು ತಂಬಾಕು ಬಳಕೆಯನ್ನು ಸ್ಟೈಲಾಗಿ ತೋರಿಸಿ ಮಕ್ಕಳಲ್ಲಿ ವಿವೇಚನೆಗೆ ಒಳಪಡಿಸುವ ಮೆದುಳು ಪೂರ್ಣ ಪ್ರಮಾಣದಲ್ಲಿ ಬೆಳೆಯದ ಕಾರಣ ಸುಲಭದಲ್ಲಿ ಅವರ ಪ್ರಭಾವಕ್ಕೆ ಒಳಗಾಗಿ ತಂಬಾಕನ್ನು ಬಳಸಲು ಪ್ರೇರಣೆ ಪಡೆದುಕೊಳ್ಳುತ್ತಾರೆ.
ಒತ್ತಡ ಕಡಿಮೆ ಆಗುತ್ತದೆ ಎಂಬ ತಪ್ಪು ನಂಬಿಕೆ: ಪರೀಕ್ಷೆ ಒತ್ತಡ ಅಥವಾ ಮಾನಸಿಕ ಒತ್ತಡ / ಕಿರಿಕಿರಿ ಕಡಿಮೆ ಮಾಡಲು ತಂಬಾಕು ಉಪಯೋಗವಾಗುತ್ತದೆ ಎಂದು ಬಲವಾಗಿ ನಂಬಿಸುವ ವರ್ಗದವರಿಂದ ಪ್ರೇರಣೆಗೆ ಒಳಪಟ್ಟು ತಂಬಾಕಿನ ಉತ್ಪನ್ನವನ್ನು ಬಳಸುತ್ತಾರೆ.
ರುಚಿ (ಫ್ಲೇವರ್) ಉತ್ಪನ್ನಗಳ ಆಕರ್ಷಣೆ : ಕೆಲವು ತಂಬಾಕು ಉತ್ಪನ್ನಗಳಲ್ಲಿ ಮಿಂಟ್, ಚಾಕೊಲೇಟ್, ಹಣ್ಣುಗಳ ರುಚಿ ಇತ್ಯಾದಿ ಸೇರಿರುತ್ತದೆ. ಇದರಿಂದ ತಂಬಾಕಿನ ಕಹಿ ರುಚಿ ಕಡಿಮೆಯಾಗುತ್ತದೆ. ಇದು ಹಾನಿಕಾರಕ ಅಲ್ಲ ಎಂಬ ತಪ್ಪು ಭಾವನೆ ಮೂಡಿ ಹೊಸದಾಗಿ ಪ್ರಯತ್ನಿಸುವ ಯುವಕರಿಗೆ ಸುಲಭವಾಗುತ್ತದೆ. ಪ್ಯಾಕೆಟ್ಗಳ ಬಣ್ಣ ಮತ್ತು ಆಕರ್ಷಕ ವಿನ್ಯಾಸವೂ ಗಮನ ಸೆಳೆಯುತ್ತದೆ.
ಬೇಸರ, ಏಕಾಂತ ಅಥವಾ ಖಾಲಿ ಸಮಯ : ಕೆಲವು ಯುವಕರು ಸಮಯ ಕಳೆಯಲು ಅಥವಾ ಬೇಸರವನ್ನು ದೂರ ಮಾಡಲು ತಂಬಾಕು ಬಳಸುಸುತ್ತಾರೆ. ಖಾಲಿ ಸಮಯ ಹೆಚ್ಚು ಇದ್ದಾಗ ಏನಾದರೂ ಹೊಸದನ್ನು ಪ್ರಯತ್ನಿಸೋಣ ಎಂಬ ಮನೋಭಾವ ಮೂಡಬಹುದು. ಏಕಾಂತ ಅಥವಾ ಒಳ್ಳೆಯ ಹವ್ಯಾಸಗಳ ಕೊರತೆ ಇದ್ದಾಗ ತಾತ್ಕಾಲಿಕ ಸಾಂತ್ವನಕ್ಕಾಗಿ ತಂಬಾಕು ಉತ್ಪನ್ನದಂತಹ ವಸ್ತುವಿನ ಮೊರೆಹೋಗುವ ಸಾಧ್ಯತೆ ಇರುತ್ತದೆ.
(ಇನ್ನೂ ಇದೆ)
-ಗಿರೀಶ್ ಎಂ ಎನ್, ಕೌನ್ಸೆಲಿಂಗ್ ಮನಶಾಸ್ತ್ರಜ್ಞರು, ಉಡುಪಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!