ಬಂದ ಬಂದ ಸಣ್ ತಮ್ಮಣ್ಣ

ಕಲ್ಯಾಣ ಸೇವೆ ಜೇಬಿನ ಬುಡದಲಿ

ಪುಟಾಣಿ ಪುರಿಯು ಮೇಲೊಂದಿಷ್ಟು

ಗೋಲಿ ಬಳಪ ಮತ್ತೊಂದಿಷ್ಟು

ಬಂದ ಬಂದ ಸಣ್ಣ ತಮ್ಮಣ್ಣ....

ಪ್ರಾಥಮಿಕ ಶಾಲೆಯ ಭಾಷಾ ಪಠ್ಯದ ಸುಂದರ ಶಿಶುಗೀತೆ ಓದಿ ಸಂತಸಪಟ್ಟವರು ನಾವು. ರಚಿಸಿದವರು ಹಿರಿಯ ಕೀರ್ತಿಶೇಷ ಸಾಹಿತಿಯವರಾದ ಲಕ್ಷ್ಮಣರಾಯರು, ಕಾವ್ಯನಾಮ 'ಹೊಯ್ಸಳ'ರು. (ಚಿತ್ರ ನೋಡಿ) ಭೂಗೋಳದ ಅಧ್ಯಾಪಕರಾದರೂ ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಪ್ರಸಿದ್ಧಿ ಪಡೆದವರು. ನಡೆ ನುಡಿ, ಆಚಾರ ವಿಚಾರ, ಶಿಸ್ತಿನ ಸಪಾಯಿಯಂತೆ. ಸ್ಕೌಟ್ ದಳವನ್ನು ತೆರೆದು ಹಲವು ಸ್ಕೌಟ್ ಗೀತೆಗಳನ್ನು ರಚಿಸಿದವರು. ನಾಡು ಕಂಡ ಅಪರೂಪದ ವ್ಯಕ್ತಿತ್ವದ ಶ್ರೀಯುತರು ಕನ್ನಡಮ್ಮನ ಸೇವೆಯನ್ನು ಅಭಿಮಾನದಿಂದ ಮಾಡಿದವರೆಂದು ತಿಳಿದುಬರುತ್ತದೆ. ಶಿಶುಸಾಹಿತ್ಯದಲ್ಲಿ ಅಪಾರ ಆಸಕ್ತಿ ಸಹ. ಸ್ವತಃ ಬರೆದು, ತಾವೇ ಹಾಡಿ ಕುಣಿದು ಶಿಬಿರಗಳಲ್ಲಿ ಕಲಿಸುತ್ತಿದ್ದರಂತೆ. ಜೀವನಯಾನದಲ್ಲಿ ಕನ್ನಡದ ಕೈಂಕರ್ಯಕ್ಕೆ ಅಪಾರ ಶ್ರಮ ವಹಿಸಿದ ನಾಡು ಕಂಡ ಬರವಣಿಗೆದಾರರು. ಸದ್ದಿಲ್ಲದೆ ಕನ್ನಡದ ನೆಲಜಲಕ್ಕಾಗಿ ದುಡಿದವರು. ಕನ್ನಡಮ್ಮನ ಈ ಪ್ರಕೃತಿಯ ಗರ್ಭದೊಳಗಿನ ನೆಲ, ಆಕಾಶ, ನೀರು, ಖಗಮೃಗ, ಪುಟ್ಟ ಮಕ್ಕಳ ತೊದಲ್ನುಡಿ, ಕಂಡು ಕೇಳಿದ ಅನುಭವಗಳ ಭಾಂಡವೇ ಕಥೆ, ಕವನ ಬರವಣಿಗೆಗೆ ಪ್ರೇರಣೆಯಾಯಿತೆಂದು ಶ್ರೀಯುತರ ಬಗ್ಗೆ ಓದಿದ ನೆನಪು. ಮೊದಲು ನಾವು ನಮ್ಮನ್ನು, ನಮ್ಮ ಪರಿಸರವನ್ನು, ನಮ್ಮ ಬರವಣಿಗೆಯನ್ನು ಪ್ರೀತಿಸಿದರೆ, ನಮ್ಮ ಆಲೋಚನೆಗಳಿಗೆ, ಮನಸ್ಸಿನ ಭಾವನೆಗಳಿಗೆ ಉತ್ತರ ಸಿಗಬಹುದು,‌ ಸಾಹಿತ್ಯದ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು. 'ರವಿ ಕಾಣದ್ದನ್ನು ಕವಿ ಕಂಡನಂತೆ' ಅಲ್ಲವೇ? ಕವಿಯಾದವನ ಅಂತರಂಗದೊಳಗಿನ ಕಲ್ಪನೆಗಳಿಗೆ ಗರಿ ಮೂಡಿದಾಗ ಒಂದು ಉತ್ತಮ ಕವನವೋ, ಲೇಖನವೋ, ಕಥೆಯೋ ಆಗಬಹುದು. ಸ್ನೇಹಿತರೇ, ಕನ್ನಡ ಮಣ್ಣಿನಲ್ಲಿ ಜನಿಸಿದ ಮೇಲೆ, ಬದುಕು ಕಟ್ಟಿಕೊಂಡ ನಾವೆಲ್ಲ ಅಕ್ಷರ ಅಕ್ಷರ ಜೋಡಿಸಿ ಪದಪದ ಬರೆಯೋಣ, ಕನ್ನಡವ ಕಟ್ಟೋಣ, ಬೆಳೆಸೋಣ, ಜೊತೆಗೆ ಬೆಳಗೋಣ, ಪ್ರೋತ್ಸಾಹಿಸೋಣ.

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ