ಜೋಗದ ಸಿರಿ ಬೆಳಕಿನಲಿ ತುಂಗೆಯ ತೆನೆ ಬಳುಕಿನಲಿ- ಆಹಾ!ಈ ವರ್ಣನೆಯಲಿ ಕನ್ನಡನಾಡಿನ ಮಣ್ಣಿನ ಸಕಲ ವೈಭವವನ್ನೂ ಕಣ್ಣಿಗೆ ಕಟ್ಟಿದಂತೆ ಬರೆದ ಕವಿಯ ಚಮತ್ಕಾರ, ಜಾಣ್ಮೆ ಸಾಮಾನ್ಯವಾದುದಲ್ಲ.ಇದೇ 'ನಿತ್ಯೋತ್ಸವ ಕವಿವರೇಣ್ಯರ' ಹೆಗ್ಗಳಿಕೆ.
ಕನ್ನಡಮ್ಮನಿಗೆ ನಿತ್ಯವೂ ಉತ್ಸವದಂತೆ,ಪ್ರಕೃತಿ ಸೌಂದರ್ಯದ ತಾಣವಿದು 'ನಿತ್ಯೋತ್ಸವ ತಾಯೆ ನಿತ್ಯೋತ್ಸವ'
ಓಲೆಗರಿಯ ಸಿರಿಗಳಲಿ
ದೇಗುಲಗಳ ಭಿತ್ತಿಗಳಲಿ ನಿತ್ಯೋತ್ಸವ
ನಮ್ಮ ನಾಡಿನ ಇತಿಹಾಸ, ಚರಿತ್ರೆ, ವೈಭವ, ನಾಡನ್ನು ಆಳಿದ ರಾಜಮನೆತನಗಳು, ಶಿಲ್ಪಕಲಾ ಸೌಂದರ್ಯ ಎಲ್ಲವನ್ನೂ ಕೇವಲವಾಗಿ ನೋಡದೆ "ಹೀಗೂ ಇದೆಯೇ?ಹಿಂದೆ ಈ ರೀತಿ ಆಗಿಹೋಗಿರುವುದೇ? ಎಂಬುದನ್ನು ಕಲೆಯ ಸೌಂದರ್ಯದಲಿ ಕಾಣಬಹುದು. ಎರಡು ಸರಳ ಪದಗಳ ಸಾಲಿನ ಅರ್ಥ ಬೃಹತ್ ಅರಿತವಗೆ. ಕವಿ, ಸಾಹಿತಿಗಳ ಒಳಗಣ್ಣಿನ ಅಭಿಪ್ರಾಯಗಳೇ ಲಿಖಿತರೂಪ. ಕನ್ನಡ ಭಾಷೆಯ ಚಮತ್ಕಾರವದು. ಆದರೆ ಬಳಸುವುದರಲ್ಲಿರುವುದು.
'ಈ ಮಣ್ಣು ಹೊನ್ನಾಗಿದೆ
ಈ ಜಲವು ಅಮೃತವು'
ಅಲ್ಲವೇ?
ನಾವು ಈ ಮಣ್ಣಲಿ ಜನಿಸಿ ಬರುವುದು ಬರಿಯ ತಿಂದುಂಡು ಹೋಗುವುದಕ್ಕಲ್ಲ. ಬಂದ ಮೇಲೆ ಗಳಿಸಿದ ಒಂದು ಸಣ್ಣ ಅಂಶ ಸಮಾಜಕ್ಕೆ. ಆದರೆ ಸತ್ಪಾತ್ರರಿಗೆ ನೀಡಬೇಕು. ಅವರಿಗೆ ಪಡಕೊಳ್ಳುವ ಯೋಗ್ಯತೆಯೂ ಇರಬೇಕು. ಭೂಮಿಯ ಸಕಲ ಸೌಕರ್ಯಗಳನ್ನು ಹಾಳು, ಪೋಲು ಮಾಡದೆ ಬಳಸಬೇಕು. ನಮ್ಮ ಮುಂದಿನ ಪೀಳಿಗೆಗೂ ಬೇಕಲ್ಲ? ಹಾಗೆಯೇ ನಮ್ಮ ನಾಡಭಾಷೆಯನ್ನು ಉಳಿಸಿ, ಬಳಸಿ, ಬೆಳೆಸುವತ್ತ ಮನಮಾಡಬೇಕು.
ಚಿರಕಾಲ ಬೆಳಗಲಿ ಕನ್ನಡದ ದೀಪ
ಜನಕೆಲ್ಲ ಬೆಳಕಾಗಿ ಪುಣ್ಯ ಪ್ರದೀಪ
ಇಲ್ಲಿ ವಾಸಿಸುವ ನಮ್ಮ ಯೋಗ, ಯೋಗ್ಯತೆ, ಭಾಗ್ಯ ಎಲ್ಲವೂ ಭಗವಂತನ ಭಿಕ್ಷೆ. ಸರಿಯಾದ ರೀತಿಯಲ್ಲಿ ಕೊಂಡೊಯ್ಯುವುದು ನಮ್ಮೆಲ್ಲರ ಜವಾಬ್ದಾರಿಯೇ ಆಗಿದೆ. ಈ ನೆಲಜಲದ ಋಣ ತೀರಿಸುವುದು ಇಲ್ಲಿ ಜನಿಸಿ ಬಂದ ಕನ್ನಡಿಗರಾದ ನಮ್ಮೆಲ್ಲರ ಕರ್ತವ್ಯ.
(ಆಕರ--ಹಿರಿಯ ಕವಿಗಳ ನುಡಿಮುತ್ತು)
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!