ಮಕ್ಕಳಿಗೆ ಸ್ವಂತಿಕೆ ಬರುವುದು ಅವರಿಗೆ ತಮ್ಮ ಕೆಲಸವನ್ನು ತಾವೇ ಮಾಡಲು ಕಲಿಸಿ, ಪ್ರೋತ್ಸಾಹಿಸಿದಾಗ ಮಾತ್ರ. "ನೀನಿನ್ನು ಚಿಕ್ಕವನು/ಚಿಕ್ಕವಳು" ಹೇಳುವುದನ್ನು ಮೊದಲು ಬಿಡಬೇಕು. ಉಪದೇಶ ಬೇಡ, ನಯವಾಗಿ ತಿದ್ದಿ ಹೇಳಿ, ಬುದ್ಧಿವಾದ ಅಲ್ಲ, ಮಾಹಿತಿ ನೀಡಿ. ಹದಿಹರೆಯದ ಬದಲಾವಣೆಗಳ ಬಗ್ಗೆ ಸೂಕ್ಷ್ಮವಾಗಿ ತಿಳಿಸಿಕೊಡಿ. "ಮೀಸೆ ಮೂಡಿದಾಗ ದೇಶ ಕಾಣದು"ಯಾವುದೇ 'ಚಟ'ವಾಗದಂತೆ ಜಾಗ್ರತೆ ವಹಿಸಿ. ಸೋತಾಗ ಇದು ಗೆಲುವಿನ ಮೊದಲ ಮೆಟ್ಟಿಲು ಆಗಬ‌ಹುದೆನ್ನೋಣ. ಪದೇ ಪದೇ ಬುದ್ಧಿವಾದ ಹೇಳಿದರೆ ಕೇಳಿಸಿಕೊಳ್ಳುವ ತಾಳ್ಮೆ ಇಂದಿನ ಮಕ್ಕಳಿಗಿಲ್ಲ. ಅವರಿಗೆ ಕಿರಿಕಿರಿ(ಹರಟೆ) ಎನಿಸಲೂ ಬಹುದು. ಸಮಯ, ಸಂದರ್ಭ ನೋಡಿ ಹೇಳುವ ತಾಳ್ಮೆ ಹಿರಿಯರಲ್ಲಿರಬೇಕು. ಅನಾಹುತಕ್ಕೆ ನಾವೇ ದಾರಿ ಮಾಡಿಕೊಡಬಾರದಂತಿರಬೇಕು. ಈಗ ಸ್ಪರ್ಧಾಯುಗ. ಹುಟ್ಟಿ ಬರುವಾಗಲೇ ಸ್ಪರ್ಧೆ ಆರಂಭ. ಸ್ಪರ್ಧೆಯೆಂದರೆ ಯುದ್ಧವಲ್ಲ. ಪ್ರತಿಭೆ ಅರಳಲು ದಾರಿ ಎನ್ನುವುದನ್ನು ತಿಳಿಸಿ, ಮಕ್ಕಳ ಮೊಗದಲ್ಲಿ ನಗು ಮೂಡಲು ಕಾರಣರಾಗೋಣ. ಮಾಧ್ಯಮಗಳಲ್ಲಿ ಪುಟ್ಟ ಮಕ್ಕಳು (ಮುಖ್ಯವಾಗಿ ದೂರದರ್ಶನ) ಕಾಲುಗಳಿನ್ನೂ ಬಲವಾಗದ, ಗಟ್ಟಿಯಾಗದ, ಆ ಎಳೆಯ ಮಕ್ಕಳ ನೃತ್ಯವೋ, ಅದು ಸರ್ಕಸ್ಸೋ ಒಂದೂ ತಿಳಿಯದು. ಮನಸ್ಸಿಗೆ ನೋವಾಗುತ್ತದೆ. ಹೊಗಳಿದರೆ ಸಂತೋಷ. ಏನೋ ಕೊರತೆ ಹೇಳಿದರೆ ದು:ಖ, ಮನಸ್ಸು ಮುದುಡಿತು, ಮೊಗ ಬಾಡಿತು. ಹೆತ್ತವರೇ ಇದಕೆಲ್ಲ ಪ್ರೋತ್ಸಾಹ. ತಮ್ಮ ಮಕ್ಕಳ ಕೈ ಕಾಲಾದರೂ ದೃಢಗೊಳ್ಳಲಿ, ಮಾತು ಸರಿಯಾಗಿ ಆಡಲಿ, ಆ ಮೇಲೆ ವೇದಿಕೆ ಏರಿದರೆ ಸಾಕಲ್ಲ? ಶಾಲೆಗಳಲ್ಲಿ,ತಮ್ಮ ಸುತ್ತಲಿನ ಪರಿಸರದಲ್ಲಾಗುವ ಸ್ಪರ್ಧೆಗಳಲ್ಲಿ ಮೊದಲು ಭಾಗವಹಿಸಲಿ. ಆಗ ಸೋಲನ್ನು ಎದುರಿಸುವುದನ್ನು ಕಲಿಯಬಹುದು. ಕಲಿತ ವಿದ್ಯೆ ಮುಂದೆ ಆತನ/ಳ ಬದುಕಿಗೆ ದಾರಿಯಾಗಬೇಕು. ನಡೆನುಡಿ ಆದರ್ಶವಾಗಿರಬೇಕು. ಹಂತಹಂತವಾಗಿ ಮೇಲೇರಲಿ, ಅವಸರ ಯಾಕೆ?

ಬದುಕು ಕದನದ ತೆರನೆ;ನೋಡೆ ಲೀಲೆಯ ಕದನ/

ಮೊದಲು ಮುಗಿವುಗಳಿರದ ಚಿತ್ರಲೀಲೆಯದು//

ಇದರೊಳೆಂದಿಗುಮಿರದು ಸೋಲ್ಗೆಲವು ಕಡೆಯೆಣಿಕೆ/

ಸದರದಾಟವೆ ಮುಖ್ಯ--ಮಂಕುತಿಮ್ಮ//

ಈ ಜೀವನ ಬದುಕೆನ್ನುವುದು ಒಂದು ಯುದ್ಧದಂತೆ,ಇದರಿಂದ ಕಲಿಯಬೇಕಾದ್ದು ಬಹಳವಿದೆ. ವಿನೋದವೋ, ವಿಶಾದವೋ, ಸೋಲು-ಗೆಲುವುಗಳ ಆಡೊಂಬಲವಿದು. ಹುಟ್ಟಿನಿಂದ ಕೊನೆ ಉಸಿರವರೆಗೂ ನಿರಂತರ ಪ್ರಯಾಣವಿದು. ಮೊದಲೂ ಇಲ್ಲ ಮುಕ್ತಾಯವೂ ಇಲ್ಲ. ಯಾರು ಗೆಲ್ಲುತ್ತಾರೋ ಯಾರು ಸೋಲುತ್ತಾರೋ  ಭಗವಂತ ಮೊದಲೇ ಬರೆದಿರುತ್ತಾನೆ .ಜಾಣತನದಿಂದ, ಬುದ್ಧಿವಂತಿಕೆಯಿಂದ ಯೋಚಿಸಿ ಮುಂದಡಿಯಿಡುವುದಕ್ಕೆ ಪ್ರಾಮುಖ್ಯತೆ ಕೊಡಬೇಕು. ಇದನ್ನು ಮನೆ ಮನೆಯ ಮಕ್ಕಳಿಗೆ ಕಲಿಸುವ, ಹೇಳುವ ಅಗತ್ಯ ಇಂದು ಆಗಬೇಕಾಗಿದೆ. ವಿಧಿ ಬಲ ಒಂದೆಡೆ, ನಮ್ಮ ಶ್ರಮ, ವಿವೇಚನೆ, ಅಭ್ಯಾಸ, ಜವಾಬ್ದಾರಿ ಮೇಲೆ ಪ್ರೀತಿ, ವಿಶ್ವಾಸ, ನಂಬಿಕೆ, ಹಿಡಿತ ಇವೆಲ್ಲದರ ಸಮ್ಮಿಳಿತವೇ ಈ ಜೀವನವೆನ್ನುವ ರಂಗದ ಹೋರಾಟ, ಗೆಲುವು ಸಾಧಿಸುವುದು ಅವರವರ ಕೈಯಲ್ಲಿದೆ. ಲಾಭ-ನಷ್ಟ ಬೇಡ, ಸಮಚಿತ್ತರಾಗೋಣ, ಅದನ್ನು ಬೆಳೆಯುವ ಮಕ್ಕಳಿಗೂ ಪ್ರೀತಿ-ವಾತ್ಸಲ್ಯದಿಂದ ಹೇಳೋಣ. ಪ್ರತಿ ಮಗು ಸಹ ಮನೆಯ ನಂದಾದೀಪ, ಆರದಂತೆ ಜೋಪಾನ ಮಾಡೋಣ.

(ಕಗ್ಗ : ಮಾನ್ಯ ಡಿ.ವಿ.ಜಿಯವರ ಮಂಕುತಿಮ್ಮನ ಕಗ್ಗ)

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ