ನಾವು ಕಣ್ಣು ಕಾಣಿಸದೆ ಇದ್ದವರನ್ನು ಮುಲಾಜಿಲ್ಲದೆ ಕುರುಡರು ಹೇಳುತ್ತೇವೆ. ಆದರೆ ನಿಜವಾಗಿ ನೋಡಿದರೆ ಭಗವಂತ ಎರಡು ಕಣ್ಣುಗಳನ್ನು ಕೊಟ್ಟಿದ್ದರೂ,‌ ಸುತ್ತಮುತ್ತಲಿನ ಅನ್ಯಾಯವನ್ನೆಲ್ಲ ನೋಡುತ್ತಾ, ತನ್ನಲ್ಲಿರುವ ತಪ್ಪುಗಳನ್ನು ಮುಚ್ಚಿಡುತ್ತಾ, ಜಾಣಕುರುಡರಾಗಿ, ಇತರರ ತಪ್ಪುಗಳನ್ನು ಹೇಳಿ ವ್ಯಂಗ್ಯವಾಡುವ ಮನುಜರೆಲ್ಲ ಕಣ್ಣಿದ್ದೂ ಕುರುಡರು. ಬೂದಿ ಮುಚ್ಚಿದ ಕೆಂಡವು ಒಂದಿಲ್ಲೊಂದು ದಿನ ಭಗ್ಗನೆ ಹೊತ್ತಿ ಉರಿಯಬಹುದು, ಅದು ಸದಾ ಒಳಗೊಳಗೆ ಹೊಗೆಯಾಡುತ್ತಿರುತ್ತದೆ. ಹಾಗಾಗದಿರಲಿ ಬದುಕು. ನಮ್ಮ ಒಳಹೊರಗೆ ಇರುವ ದೋಷವನ್ನು ತಿದ್ದಿಕೊಂಡು, ನಿವಾರಿಸಿ ಮುಂದೆ ಹೋಗೋಣವೇ?

ತಿದ್ದಿಕೊಳೊ ನಿನ್ನ ನೀಂ;ಜಗವ ತಿದ್ದುವುದಿರಲಿ/

ತಿದ್ದಿಕೆಗಮೊಂದು ಮಿತಿಯುಂಟು ಮರೆಯದಿರು//

ಉದ್ದ ನೀಂ ಬೆರಳನಿತು ಬೆಳೆದೀಯೆ ಸಾಮಿಂದೆ/

ಸ್ಪರ್ಧಿಯೆ ತ್ರಿವಿಕ್ರಮಗೆ?--ಮಂಕುತಿಮ್ಮ//

ಬಲಿ ಚಕ್ರವರ್ತಿಯ ಕಥೆ ನಮಗೆ ತಿಳಿದಿದೆ. ಆಸೆಗಳಿಗೆ ಕಡಿವಾಣ ಮುಖ್ಯ. ಜಗದ ನಿಯಮವನ್ನು, ನಡವಳಿಕೆಗಳನ್ನು ತಿದ್ದಲು ಹೊರಡುವುದು ಮತ್ತೆ. ಮೊದಲು ನಮ್ಮ ನಡವಳಿಕೆಯನ್ನು ತಿದ್ದಲು ಪ್ರಯತ್ನಿಸೋಣ. ಯಾವುದಕ್ಕೂ ಇತಿ-ಮಿತಿಯಿದೆ. ಮಿತಿ ಮೀರಿದರೆ ಅಪಾಯ. ಬಲಿಯ ಹಾಗೆ ಪಾತಾಳಕ್ಕೆ ಹೋಗಬೇಕಾಗಬಹುದು. (ವಿಧಿ ನಿಯಮವೂ ಇರಬಹುದು) ಆಲೋಚಿಸೋಣವೇ?

(ಕಗ್ಗ:ಮಾನ್ಯ ಡಿ.ವಿ.ಜಿಯವರ ಮಂಕುತಿಮ್ಮನ ಕಗ್ಗ)

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ