ಸಮಯಕ್ಕೆ ಹೊಳೆಯದಿಹ ಜಾಣತನವೇಕೆ?

ಅಪಾಯವನು ಉಪಾಯದಲಿ ದೂಡದಿಹ ಬುದ್ಧಿಯದು ಯಾಕೆ?

ಕಷ್ಟ-ಸುಖಗಳಲಿ ಕೈಚಾಚದಿಹ ಸ್ನೇಹಿತನು ಬೇಕೇ?

ಒಗ್ಗೂಡಿ ಬಾಳ ನೌಕೆಯ ದಾಟದಿಹ ಸಂಸಾರವೇಕೆ?

ಮೌಲ್ಯಂಗಳ ಕಡೆಗಣಿಸಿ ನಡೆದರೆ ಮಾತೆ 'ಶ್ರೀದುರ್ಗೆ' ಹರಸುವಳೇ ತಿಳಿ ಮನುಜ ನಾವು ಬುದ್ಧಿವಂತರಾದರೆ ಸಾಲದು.ಅದನ್ನು ಸಮಯ,ಸಂದರ್ಭಕ್ಕೆ ಸರಿಯಾಗಿ ಉಪಯೋಗಿಸುವ ಜಾಣ್ಮೆಯಿರಬೇಕು. ನೂರಕ್ಕೆ ನೂರು ಅಂಕ ಪಡೆದವರು ಬದುಕಿನ ಆಡೊಂಬಲದಲ್ಲಿ ಸೋತದ್ದನ್ನು ಕಂಡಿದ್ದೇವಲ್ಲ? ಭೂತಕಾಲದ ಅನುಭವಗಳ ಪಾಠ ವರ್ತಮಾನದ ಹಾದಿಯನ್ನು ತಾನಾಗಿ ತೋರಿಸುತ್ತದೆ. ಆತ ಭವಿಷ್ಯವನ್ನೂ ಸಹ ಊಹಿಸಬಲ್ಲವನಾಗಿರುತ್ತಾನೆ. ಬುದ್ಧಿಯನ್ನು,ಕಲಿತ ವಿದ್ಯೆಯನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವುದು ಮುಖ್ಯ. ಬರಿಯ ಪುಸ್ತಕಗಳನ್ನು ಅಷ್ಟು ಓದಿದೆ, ಇಷ್ಟು ಓದಿದೆ ಎನ್ನುವವರು ಇದ್ದಾರೆ. ಓದಿದ್ದನ್ನು ಅಳವಡಿಸಿಕೊಂಡವರು ಇದ್ದಾರೆಯೇ ಎಂದರೆ ಬೆರಳೆಣಿಕೆಯ ಮಂದಿ.ಇದೇ ದುರಂತ. ಪುಸ್ತಕಗಳೆಂದರೆ ಬದುಕಿನ ಹಾದಿಯಲ್ಲಿ ಸಹಕರಿಸುವ ಜೀವಂತ ದೇವರಂತೆ, ಈ ಸಾಲನ್ನು ಓದಿದ ನೆನಪಿದೆ. ಅವುಗಳನ್ನು ಕೊಂಡು ಓದೋಣ, ಅರ್ಥೈಸಿಕೊಂಡರೆ ಜೀವನಕ್ಕೆ ಪ್ರಯೋಜನವಾಗಬಹುದು. ಪ್ರತಿಭೆ, ಪ್ರಶಂಸೆ ಸುಮ್ಮನೆ ಸಿಗದು. ಕಷ್ಟ ಪಡಬೇಕು. ಕುಳಿತಲ್ಲಿಗೆ ಸಿಕ್ಕಿದಕ್ಕೆ ಮೌಲ್ಯವಿಲ್ಲ. ಸತತ ಪ್ರಯತ್ನ ಬೇಕು. ಭಗವಂತನ ಧ್ಯಾನ ಬಾಳಿಗೆ ನವ ಚೈತನ್ಯ. ಅದು ತೋರಿಕೆಯದಾಗುವುದು ಬೇಡ. ಶ್ರದ್ಧೆಯಿರಬೇಕು, ಆಡಂಬರ, ಗೌಜಿ ಗದ್ದಲ ಯಾಕೆ? ಅನ್ಯರನು ಮೆಚ್ಚಿಸಲು ದೇವರನು ಬಳಸಬಾರದು. ದೇವ 'ಕಣ್ಣಿಗೆ ಕಾಣಿಸದ, ನಮ್ಮನ್ನು ಸದಾ ರಕ್ಷಿಸುವ ,ಹೃದಯ ವೈಶಾಲ್ಯತೆ ಹೊಂದಿದ ಮಹಾನ್ ವ್ಯಕ್ತಿತ್ವದ ಶಕ್ತಿ ' ಎನ್ನುವ ನಂಬಿಕೆ ನಮಗಿರಬೇಕು. ನಮ್ಮ ಆಗು-ಹೋಗುಗಳನ್ನು ಅರಿತು ನೀಡುವವ. ಯೋಗ್ಯತೆಯಿಂದ ಪಡೆಯುವ ಯೋಗ ನಮ್ಮದಾಗಿರಬೇಕು. ಸ್ವಚ್ಛ, ಶುದ್ಧ ಮನಸ್ಸಿನಿಂದ ಪಡೆದಾಗ ತೃಪ್ತಿ .ಅಂತರಂಗ, ಬಹಿರಂಗ ಎರಡೂ ನಿರ್ಮಲವಾಗಿದ್ದಾಗ ತಾನಾಗಿ ಸಿಗಬಹುದಲ್ಲವೇ? ಸ್ವಲ್ಪ ತಡವಾಗಬಹುದು. 'ತಾಳಿದವನು ಬಾಳಿಯಾನು'. ತಾಳ್ಮೆಯೇ ತಪಸ್ಸು, ಅದೊಂದು ರೀತಿಯ ಜಾಗೃತಿ ಮೂಡಿಸುವ ತಂತ್ರವೂ ಸಹ. ಯಾವುದರಲ್ಲೂ ಅವಸರ ಸಲ್ಲದು. ಜಾಗ್ರತೆ ವಹಿಸಿದರೆ ಅಪಾಯ ತಪ್ಪಿಸಬಹುದು. ಆದರೆ ನಮಗೆ ಎಲ್ಲವೂ ಶೀಘ್ರವಾಗಬೇಕು. 'ಮನೆಗೆ ಬೆಂಕಿ ಬಿದ್ದ ಮೇಲೆ ನೀರಿಗಾಗಿ ಬಾವಿ ತೋಡಿದರಾಗದು'. ಬುದ್ಧಿಯನ್ನು ಉಪಯೋಗಿಸುವ ಕಲೆ ಕರಗತ ಮಾಡಿಕೊಂಡವಗೆ ಭಯ, ಅಂಜಿಕೆ, ಯೋಚನೆ ಹತ್ತಿರ ಸುಳಿಯದು. ಸಮಯ, ಸಂದರ್ಭಕ್ಕೆ ತಕ್ಕಂತೆ ನೋಡಿಕೊಂಡು ವ್ಯವಹರಿಸಲು ಕಲಿಯೋಣ, ಆದಷ್ಟೂ ಉತ್ತಮ ಬದುಕನ್ನು ರೂಪಿಸಿಕೊಳ್ಳೋಣ.

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ