"ಓ ನನ್ನ ಚೇತನ,

ಆಗು ನೀ ಅನಿಕೇತನ!

ರೂಪ ರೂಪಗಳನು ದಾಟಿ'

ನಾಮಕೋಟಿಗಳನು ಮೀಟಿ,

ಎದೆಯ ಬಿರಿಯೆ ಭಾವದೀಟಿ,

ಓ ನನ್ನ ಚೇತನ,

ಆಗು ನೀ ಅನಿಕೇತನ!

ಈ ಭಾವಗೀತೆಯನ್ನು ರಚಿಸಿದವರು 'ರಾಷ್ಟ್ರಕವಿ ರಸ ಋಷಿ, ಮಲೆನಾಡನ್ನು ಪ್ರೀತಿಸುವ, ಜ್ಞಾನಪೀಠ ಪುರಸ್ಕೃತರಾದ, ಗೌರವ ಡಾಕ್ಟರೇಟಿಗೆ ಪಾತ್ರರಾದ ಕೆ.ವಿ.ಪುಟ್ಟಪ್ಪ ಕುವೆಂಪುರವರು. ಡಿಸೆಂಬರ್ ೨೯ ಈ ಮಹಾನ್ ಸಾಹಿತಿಯವರ ಜನ್ಮ ದಿನ.

ಮಲೆನಾಡನ್ನು ಅತ್ಯಂತ ಪ್ರೀತಿಸುವ ರಸ ಋಷಿಯವರ ಈ ರಚನೆಯ ಸಾಲುಗಳು ತೂಕಭರಿತ. 'ನಾವು ಈ ಸಮಾಜದಲ್ಲಿ ಇದ್ದೂ ಇಲ್ಲದಂತಿರಬೇಕು. ತಾವರೆ ಎಲೆಯ ಮೇಲಿನ ನೀರಿನ ಹನಿಗಳಂತಿರಬೇಕು. ಕೈಗೆ ಹಿಡಿಯಲು ಸಿಗಬಾರದು. ತಾವರೆಯ ಕೊಯ್ಯಲು ಹೋಗಿ ಕೆಸರಿಗೆ ಬೀಳದೆ, ಜಾರುವ ಜಲಬಿಂದುವಾಗಬೇಕು. ಆ ಮತ ಈ ಮತ ಬೇಡ, ಅದು ಬರಿಯ ಜಳ್ಳು-ಪೊಳ್ಳು, ಅದನ್ನು ಸರಿಪಡಿಸಿ, ಅಕ್ಕಿಯಂತಾಗೋಣ. ಉಪಕಾರ ದೃಷ್ಟಿಯಿರಲಿ. ಅರೆಬೆಂದ ಅನ್ನವಾಗದಿರೋಣ. ಬುವಿ-ಬಾನು ಒಂದಾದಂತೆ ಕಂಡರೂ, ಯಾವತ್ತು ಅದು ಸಾಧ್ಯವಾಗದ ಮಾತು. ನಿನ್ನದೆಂಬುದೇನಿಲ್ಲ, ನಿಲ್ಲದೆ ಮುಂದಕ್ಕೆ ಹೋಗುತ್ತಿರಬೇಕು. ನಮ್ಮ ದೇಹ ವಸ್ತ್ರವಂತೆ, ಆತ್ಮಧಾರಕನಂತೆ, ಅದನ್ನರಿತು ಬದುಕಬೇಕು. ಅರಿಯಬೇಕಾದ್ದು ಬಹಳಷ್ಟಿದೆ.ಅನುಭವದೊಡನೆ ಅರಿಯುತ್ತಾ ಸಾಗಬೇಕು. ಎಲ್ಲಿಯೂ ನಿಲ್ಲದೆ ಬದುಕಿನ ಹಾದಿಯಲ್ಲಿ ಕಲಿಯುತ್ತಾ ಹೋಗಬೇಕು. ಈ ಪ್ರಪಂಚವೊಂದು ಬಿಡಿಸಿದ ಚಿತ್ರದಂತೆ. ಅನಂತವಾಗಿರುವುದನ್ನು ತಲುಪಲು ಅಸಾಧ್ಯ, ಆದರೆ ಪ್ರಯತ್ನಿಸು.ಮನದ ಭಾವನೆಗಳೊಂದಿಗೆ' ಪುಟ್ಟ ಮಗುವಿನ ಬೆಳವಣಿಗೆಯಂತೆ ಬೆಳೆಯುತ್ತಾ ಹೋಗಬೇಕೆಂದರು. ಪ್ರಕೃತಿ ಸೌಂದರ್ಯದ ಆರಾಧಕರು, ಅಲ್ಲೇ ಕುಳಿತು ಅನುಭವಿಸುತ್ತಾ ಬರೆದುದನ್ನು ಕಾದಂಬರಿ, ನಾಟಕ, ಕವನಗಳಲ್ಲಿ ಕಾಣಬಹುದು. ವಿಶ್ವಮಾನವ ಸಂದೇಶದ ಹರಿಕಾರ. ಶ್ರೀರಾಮಾಯಣ ಮಹಾದರ್ಶನಂ ಮಹಾಕೃತಿಯನ್ನು ಲೋಕಕ್ಕೆ ನೀಡಿದವರು. 'ಸತ್ಯಕ್ಕೆ ಹೆದರದಿರಿ, ಸುಳ್ಳಿಗೆ ಆಯುಷ್ಯವಿಲ್ಲ' ಎಂದು ಸಾರಿದ ದಾರ್ಶನಿಕರು. ಶ್ರಮ, ಪ್ರಾಮಾಣಿಕತನದ ಪ್ರತೀಕ, ಕನ್ನಡಮ್ಮನ ಹೆಮ್ಮೆಯ ಪುತ್ರರತ್ನರನು ನೆನೆಯೋಣ ಈ ದಿನ.

(ಆಕರ: ಹಿರಿಯ ಸಾಹಿತಿಗಳ ನುಡಿಮುತ್ತು)

-ರತ್ನಾ ಕೆ. ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ