ಭಗವಾನ್ ಸೂರ್ಯನಾರಾಯಣನ ಹುಟ್ಟುಹಬ್ಬವೀ ದಿನದ ವಿಶೇಷ. ನಮ್ಮ ಹಿರಿಯರು ಗಿಡ, ಮರ, ನದಿ, ಸಮುದ್ರ, ಪ್ರಕೃತಿಯ ಆರಾಧಕರು. ಸೂರ್ಯ ಚಂದ್ರರಿಲ್ಲದ ಜಗತ್ತನ್ನು ಊಹಿಸಲೂ ಸಾಧ್ಯವಿಲ್ಲ. ಅದಿತಿ ಕಶ್ಯಪರ ಪುತ್ರ ಸೂರ್ಯದೇವನು ತನ್ನ ಸಪ್ತಾಶ್ವಗಳನ್ನೇರಿ ಈ ಮಾಘಮಾಸ ಶುಕ್ಲಪಕ್ಷದ ಸಪ್ತಮಿಯ ತಿಥಿಯಂದು ಉತ್ತರಾಭಿಮುಖವಾಗಿ ಚಲಿಸುವ, ಚಳಿಗಾಲದ ಅಂತ್ಯವನ್ನು ಸೂಚಿಸುವ ದಿನವೇ ರಥಸಪ್ತಮಿ, ಸೂರ್ಯ ಜಯಂತಿ, ಮಾಘ ಸಪ್ತಮಿ. 'ಆರೋಗ್ಯಂ ಭಾಸ್ಕರಾದಿಚ್ಛೇತ್' ಎನ್ನುವಂತೆ ಆರೋಗ್ಯದಿಂದಿರುವಿಕೆ, ಚರ್ಮವ್ಯಾಧಿ ನಿವಾರಣೆ, ಚೈತನ್ಯದಾಯಕ ಸೂರ್ಯ. ಅಧಿಕಾರವನ್ನು ಪ್ರತಿನಿಧಿಸುವ, ನಿಖರತೆ, ಸ್ಪಷ್ಟತೆ, ಸಮಯಪಾಲನೆಯ ಪ್ರತೀಕ. ಆದಿತ್ಯಹೃದಯ ಸ್ತೋತ್ರ ಪಠಣ, ಎಕ್ಕದ ಎಲೆಯನ್ನು ಹಾಕಿದ ನೀರಿನ ಸ್ನಾನ ಅರ್ಘ್ಯ, ಸೂರ್ಯ ನಮಸ್ಕಾರದ ಮೂಲಕ ಆರಾಧನೆ ಮಾಡಿದರೆ ಒಳ್ಳೆಯದು. ಕೆಲವು ಜನರು ನದಿ, ಸಮುದ್ರಸ್ನಾನವನ್ನೂ ಮಾಡುವರು. ಏಳು ಅಶ್ವಗಳು ಏಳು ವಾರದ ದಿನಗಳು, ಹನ್ನೆರಡು ಚಕ್ರಗಳನ್ನು ಹನ್ನೆರಡು ರಾಶಿಗಳೆನ್ನುವರು. ಸೂರ್ಯದೇವನಿಗೆ ಅಕ್ಕಿಯ ಪಾಯಸದ ನೈವೇದ್ಯಹಿತವಂತೆ. ಸಕ್ಕರೆ, ವಸ್ತ್ರ, ಗೋಧಿಯ ದಾನ ಮಾಡಿ ಏಳೇಳು ಜನ್ಮಗಳ ಪಾಪ ನೀಗಿಸಬಹುದೆಂದು ಪುರಾಣದಲ್ಲಿ ಉಲ್ಲೇಖವಿದೆ. ಜೀವನದ ಹೊಸ ಹುಟ್ಟು, ಸೂರ್ಯದೇವನ ಈ ಚಲನೆಯ ಗತಿ ಬದಲಾವಣೆಯನ್ನು ಆಚರಿಸಿ, ಧನ್ಯರಾಗೋಣ
ಮಾಘ ಮಾಸ ಶುಕ್ಲಪಕ್ಷದ ಸಪ್ತಮಿ ತಿಥಿಯಿಂದು
ಸಪ್ತಾಶ್ವವೇರಿ ಉತ್ತರದತ್ತ ದಿನಕರನ ಪಯಣವಿಂದು
ಅದಿತಿ ಕಶ್ಯಪರ ಸುಕುಮಾರ ಭಗವಾನ್ ಸೂರ್ಯದೇವನಂತೆ
ಅರುಣೋದಯದ ಸ್ನಾನ ಅರ್ಘ್ಯ ಸೂರ್ಯನಮಸ್ಕಾರ ವಿಶೇಷವಂತೆ
ಜಗಕೆ ಹರುಷದ ದಿನವು ಬಂದಿತು
ಜಗದ ಕೊಳೆಯನು ತೊಳೆದು ನಿಂದಿತು
ಜಗದ ಸೂರ್ಯನ ಜನುಮ ಸುದಿನದ ಬಾನ ದಿನವಂತೆ
ಜಗಕೆ ಭಾಗ್ಯದ ಶುಭದ ಮಾಸವು
ಜಗದಿ ಕೋಟಿಯ ತೇಜ ಹೊಮ್ಮಲು
ಜಗದ ತುಂಬಾ ಹೀಗೆ ರಥಸಪ್ತಮಿಯ ಚೆಲುವಂತೆ
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!