ಇತಿಹಾಸದ ಸುವರ್ಣಾಕ್ಷರದಲ್ಲಿ ಬರೆಯಲ್ಪಡುವ ಇಂದಿನ ದಿನವನ್ನು ಮರೆಯಲುಂಟೇ? ಜನವರಿ ೨೬ ಜನರೇ ಆರಿಸಿ ಕಳುಹಿಸುವ ಪ್ರತಿನಿಧಿ ದೇಶವನ್ನಾಳುವ ನಾಯಕನಾಗುವ ಬಗ್ಗೆ ಸರ್ವ ಸ್ವತಂತ್ರವಾಗಿ, ಸಂವಿಧಾನಾತ್ಮಕವಾಗಿ ಜಾರಿಗೆ ಬಂದ ದಿನ. ಏಕ ಆಡಳಿತದಡಿ ನಮ್ಮ ದೇಶದಲ್ಲಿದ್ದ ೫೫೨ ರಾಜ ಸಂಸ್ಥಾನಗಳು, ೧೧ ಬ್ರಿಟಿಷರ ಆಳ್ವಿಕೆಯ ಪ್ರಾಂತ್ಯಗಳು ಒಟ್ಟಾಗಿ ಆಡಳಿತಕ್ಕೊಳಪಟ್ಟ ದಿನ. ಇದನ್ನೇ ಗಣರಾಜ್ಯೋತ್ಸವವೆಂದು ಇಂದು ಆಚರಿಸುತ್ತೇವೆ. ಸಂವಿಧಾನದಲ್ಲಿ ಬರೆಯಲ್ಪಟ್ಟಂತೆ ಜನರಿಂದ, ಜನರಿಗಾಗಿ, ಜನರೇ ಆಳುವ ಪದ್ಧತಿ. ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಅರಿವು. ೧೪ ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಶಿಕ್ಷಣ. ಕೃಷಿ ಕ್ಷೇತ್ರದ ಅಭಿವೃದ್ಧಿ. ಭಾರತವನ್ನು ಸುಖ, ಶಾಂತಿ, ನೆಮ್ಮದಿಯಿಂದ, ಸಂಪದ್ಭರಿತ ದೇಶವನ್ನಾಗಿ ಮಾಡುವುದು, ರೀತಿ-ನೀತಿ,ಸಾಮಾಜಿಕ ನ್ಯಾಯ ಒದಗಿಸುವುದು, ಮಹಿಳೆಯರಿಗೆ, ದುರ್ಬಲರಿಗೆ, ಕಾರ್ಮಿಕರಿಗೆ ಭದ್ರತೆ ನೀಡುವುದು, ರಾಷ್ಟ್ರೀಯ ನಾಯಕರ ಆಡಳಿತಾತ್ಮಕ ತತ್ವಗಳು, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗವನ್ನೊಳಗೊಂಡ ಸಮಗ್ರ, ಬೃಹತ್ ಸಂವಿಧಾನದಡಿ ದೇಶದ ಅಖಂಡ ಆಡಳಿತ ಜಾರಿಗೆ ಬಂದ ಸುದಿನವಿಂದು. ಈ ದೇಶದಲ್ಲಿ ಹುಟ್ಟಿದ ಪ್ರತಿಯೋರ್ವ ಪ್ರಜೆಯೂ ದೇಶದ ಅಖಂಡತೆಯನ್ನು ಗೌರವಿಸಬೇಕು. ಒಂದೇ ರೀತಿಯ ತಾರತಮ್ಯವಿಲ್ಲದ ಕಾನೂನಿಗೆ ಬದ್ಧರಾಗಿ, ಧರ್ಮನಿರಪೇಕ್ಷರಾಗಿ ಬೇಕು. ಪ್ರಜಾಸತ್ತಾತ್ಮಕ ಗಣರಾಜ್ಯದಡಿ ಐಕ್ಯತೆ, ಸಮಗ್ರತೆ,ಎಲ್ಲರೊಂದೇ, ರಾಷ್ಟ್ರಪ್ರೇಮ, ಸಹಬಾಳ್ವೆ ತತ್ವದಡಿ ಪ್ರತಿಜ್ಞೆ ಕೈಗೊಂಡು, ಸಂವಿಧಾನ ಬದ್ಧರಾಗಿ ನಡೆಯೋಣ. ಈ ಪುಣ್ಯ ದಿನದಂದು ನಮ್ಮ ದೇಶದ ರಾಷ್ಟ್ರಪತಿಗಳು ರಾಷ್ಟ್ರಧ್ವಜವನ್ನು ಏರಿಸಿ ಹಾರಿಸಿ ಗೌರವ ಸಲ್ಲಿಸುವರು. ರಾಷ್ಟ್ರಧ್ವಜಕ್ಕೆ ಗೌರವ ನಮನ ಸಲ್ಲಿಸೋಣ.ಜೈ ಭಾರತ್ ಮಾತಾ…

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ