ಈ ಸಂಚಿಕೆಯಲ್ಲಿ ಯಾವ ಶಬ್ಧವು ನಮ್ಮ ಸಮಾಜದಲ್ಲಿ ಅತೀ ಚರ್ಚೆಗೆ ಕಾರಣವಾಗಿದೆಯೋ, ಯಾವ ಪದ ಪ್ರಯೋಗ ಮಾಡಿದರೆ ಎಲ್ಲಿ ಅಲ್ಲೋಲ ಕಲ್ಲೋಲವಾಗುತ್ತದೆಯೋ ಎಂಬ ಆತಂಕ ವಿದೆಯೋ ಆ ಪದದ ಬಗ್ಗೆ ವೇದದ ದೃಷ್ಟಿಕೋನದಲ್ಲಿ ಇಂದು ವಿಚಾರ ಮಾಡೋಣ. ಆ ಪದವೇ “ ಶೂದ್ರ”
ಇಂದಿನ ಸಮಾಜದಲ್ಲಿ ಈ ಪದವು ಬಹಳ ಆತಂಕಕ್ಕೆ ಕಾರಣವಾಗಿದೆ. ಇಂದು ರೂಢಿಯಲ್ಲಿರುವ ಕೆಲವು ಜಾತಿಗಳಿಗೆ ಈ ಪದವನ್ನು ಅನ್ವಯ ಮಾಡಿದ್ದೇ ಈ ಆತಂಕಕ್ಕೆ ಕಾರಣ. ಆದರೆ ವೇದದ ಹಿನ್ನೆಲೆಯಲ್ಲಿ ಯಾವ ವರ್ಣವೂ ಶ್ರೇಷ್ಠವೂ ಅಲ್ಲ, ಯಾವ ವರ್ಣವು ಕನಿಷ್ಠವೂ ಅಲ್ಲ.ಎಲ್ಲವೂ ಸಮಾನ. ಇದಕ್ಕೆ ವೇದದ ಹಲವು ಮಂತ್ರಗಳ ಆಧಾರವಿದೆ. ಆದರೆ ಭಾರತೀಯ ಸಮಾಜದಲ್ಲಿ ಈ ಪದಗಳ ನ್ನೆಲ್ಲಾ ಜಾತಿಗೆ ಅನ್ವಯಿಸಿ ಭೇದಭಾವ ಮಾಡಿರುವುದೂ ಸುಳ್ಳಲ್ಲ. ವೇದದ ಮೇಲೆ ಒಂದು ಆರೋಪವಿದೆ. “ಶೂದ್ರರು ಭಗವಂತನ ಕಾಲಿನಿಂದ ಜನಿಸಿದರು” ಎಂಬುದು. ವೈಜ್ಞಾನಿಕವಾಗಿ ಯೋಚಿಸೋಣ. ಯಾರಾದರೂ ಕಾಲಿನಿಂದಲೋ ಮುಖದಿಂದಲೋ ಜನಿಸಲು ಸಾಧ್ಯವೇ? ಸಮಾಜದ ಒಂದೊಂದು ಜವಾಬ್ಧಾರಿಗಳನ್ನು ಹೇಳುವಾಗ ಸಮಾಜಪುರುಷನ ಒಂದೊಂದು ಅಂಗಕ್ಕೆ ಕೆಲವು ಗುಣಗಳನ್ನು ಅನ್ವಯಿಸಲಾಗಿದೆ. ಅದರಂತೆ ಶೂದ್ರ ವರ್ಣವನ್ನು ಸಮಾಜಪುರುಷನ ಪಾದಕ್ಕೆ ಅನ್ವಯಿಸಿದರೆ ಅದು ಕನಿಷ್ಟವೆಂದೇನೂ ಅಲ್ಲ.ಕಾಲಿಲ್ಲದ ಮನುಷ್ಯನು ಹೆಳವನಾಗುತ್ತಾನೆಂಬುದು ನಮಗೆ ಅರಿವಿರಬೇಕು. ಶೂದ್ರನ ಜವಾಬ್ಧಾರಿಯು ಎಲ್ಲರಿಗಿಂತಲೂ ಮಹತ್ವವನ್ನು ಪಡೆಯುತ್ತದೆ. ಇಡೀ ಸಮಾಜವು ಶೂದ್ರನ ಮೇಲೆ ನಿಂತಿದೆ, ಎಂದರೆ ಸಮಾಜಕ್ಕೆ ಶೂದ್ರನು ಬೆನ್ನೆಲುಬಾಗಿದ್ದಾನೆಂಬುದೇ ಸತ್ಯ.
ಶೂದ್ರನ ಕರ್ತವ್ಯದ ಬಗ್ಗೆ ಈಗ ವಿಚಾರವನ್ನು ಮಾಡೋಣ.
ತೃದಿಲಾ ಅತೃದಿಲಾಸೋ ಅದ್ರಯೋsಶ್ರಮಣಾ ಅಶೃಥಿತಾ ಅಮೃತ್ಯವ: |
ಅನಾತುರಾ ಅಜರಾ: ಸ್ಥಾಮವಿಷ್ಣವ: ಸುವೀವಸೋ ಅತೃಷಿತಾ ಅತೃಷ್ಣಜ: ||
[ಋಕ್- 10.94.11]
ಅರ್ಥ:-
ತೃದಿಲಾ: = ಮೋಹ ಬಂಧರಹಿತರೂ
ಅತೃದಿಲಾಸ: = ಜಗತ್ತಿನಿಂದ ದೂರ ಸರಿಯದವರು
ಅದ್ರಯ: = ಆದರಣೀಯರೂ
ಅಶ್ರಮಣಾ: = ಶ್ರಮಕ್ಕೆ ಹಿಂಜರಿಯದವರೂ
ಅಶೃಥಿತಾ: = ಸಡಿಲವಾಗದವರೂ
ಅಮೃತ್ಯವ: = ಸಾವಿಗೆ ಮಣಿಯದವರೂ
ಅನಾತುರಾ: = ರೋಗರಹಿತರೂ
ಅಜರಾ: = ಮುಪ್ಪಿಗೆ ಸೋಲದವರೂ
ಅಮವಿಷ್ಣವ: = ರಕ್ಷಣೆಯನ್ನು ಅಪೇಕ್ಷಿಸುವವರೂ
ಸುಪೀವಸ: = ದೃಢಕಾಯರೂ
ಅತೃಷಿತಾ: = ಲೋಭರಹಿತರೂ
ಅತೃಷ್ಣಜ: = ನಿರ್ಲೋಭತ್ವಕ್ಕೆ ಪ್ರಸಿದ್ಧರಾದವರೂ
ಸ್ಥ: = ಪರಿಶ್ರಮಿಗಳೂ
ಈ ಮೆಲಿನ ಗುಣಗಳನ್ನು ಹೊಂದಿದವರು ಶೂದ್ರರು
ಭಾವಾರ್ಥ:-
ಮೋಹಬಂಧನ ಇಲ್ಲದವರು, ಆದರೂ ಜಗತ್ತಿನಿಂದ ದೂರ ಸರಿಯದವರು[ ಕಮಲದ ಎಲೆಯ ಮೇಲೆ ನೀರಿದ್ದಂತೆ] ಆದರಣೀಯರು, ಶ್ರಮಕ್ಕೆ ಹಿಂಜರಿಯದವರು, ಸಡಿಲವಾಗದವರು, ಸಾವಿಗೆ ಮಣಿಯದವರು, ರೋಗರಹಿತರು, ಮುಪ್ಪಿಗೆ ಸೋಲದವರು, ರಕ್ಷಣೆಯನ್ನು ಅಪೇಕ್ಷಿಸುವವರು, ದೃಢಕಾಯರು, ಲೋಭರಹಿತರು, ಪರಿಶ್ರಮಿಗಳು…..ಇವರು ಶೂದ್ರರು.
ಒಂದೊಂದು ಗುಣಸ್ವಭಾವಗಳನ್ನೂ ಕೇಳುತ್ತಿದ್ದರೆ ಒಬ್ಬ ಶ್ರೇಷ್ಠ ವ್ಯಕ್ತಿಗೆ ಇರಬೇಕಾದ ಗುಣಸ್ವಭಾವದ ವರ್ಣನೆ! ಈ ಗುಣ ಸ್ವಭಾವ ಹೊಂದಿದ ವ್ಯಕ್ತಿಯನ್ನು ಯಾರಾದರೂ ಕನಿಷ್ಟನೆಂದು ಹೇಳಲು ಸಾಧ್ಯವೇ? ಒಂದೊಂದು ಗುಣವನ್ನೂ ವಿವರವಾಗಿ ನೋಡಿದರೆ ಅದ್ಭುತವಾದ ವ್ಯಕ್ತಿಯೊಬ್ಬನ ದರ್ಶನವಾಗುತ್ತದೆ. ಈ ಗುಣಗಳ ಬಗ್ಗೆ ಕಿಂಚಿತ್ ವಿಚಾರ ಮಾಡೋಣ.
ಮೋಹಬಂಧನ ಇಲ್ಲದವರು: ಮೋಹವೆಂಬ ಈ ಗುಣ ಮನುಷ್ಯನನ್ನು ಎಷ್ಟರ ಮಟ್ಟಿಗೆ ಪಾತಾಳಕ್ಕೆ ತಳ್ಳುತ್ತದೆಂಬುದನ್ನು ಹಲವು ರಾಜಕಾರಣಿಗಳ ಪುತ್ರವ್ಯಾಮೋಹದಿಂದ ಅವರ ವ್ಯಕ್ತಿತ್ವವೇ ನಾಶವಾದ ಉಧಾಹರಣೆಗಳನ್ನು ನಾವು ಕಂಡಿದ್ದೇವೆ. ಅಂತಹಾ ಮೋಹದಿಂದ ಬಿಡುಗಡೆ ಎಂಬುದು ಬಲು ಕಷ್ಟದ ಸಂಗತಿ. ಮೋಹ ಇಲ್ಲದವನು ಶೂದ್ರ ಎನ್ನುವಾಗ ಅವನೆತ್ತರ ಅದೆಷ್ಟಿರಬಹುದೆಂಬುದು ಕಲ್ಪನಾತೀತ
ಆದರಣೀಯರು: ಸಮಾಜದ ಆದರಕ್ಕೆ ಪಾತ್ರವಾಗಬೇಕಾದರೆ ಅವನು ಸದ್ಗುಣದ ಗಣಿಯೇ ಆಗಿರಬೇಕಲ್ಲವೇ? ಇಂತವನು ಶೂದ್ರ.
ಶ್ರಮಕ್ಕೆ ಹಿಂಜರಿಯದವರು : ಶೂದ್ರನ ಈ ಒಂದು ಸ್ವಭಾವದಿಂದಲೇ ಇಡೀ ಸಮಾಜ ಬದುಕಿರುವುದು.ಒಂದು ಸಣ್ಣ ಉಧಾಹರಣೆ ನೀಡಬಯಸುವೆ. ಮೂರು-ನಾಲ್ಕು ಮಹಡಿಗಳ ಮನೆಯನ್ನು ಕಟ್ಟುವಾಗ ಅಲ್ಲಿನ ನಾಲ್ಕನೇ ಮಹಡಿಯ ತುದಿಯಲ್ಲಿ ಏಣಿಯ ಮೇಲೆ ನಿಂತು ಗಾರೆ ಕೆಲಸ ಮಾಡುವ ಕೆಲಸಗಾರರನ್ನು ಗಮನಿಸಿದ್ದೀರಾ? ಲೀಲಾಜಾಲವಾಗಿ ಹಾಡು ಹೇಳಿಕೊಂಡು ಅವರ ಪಾಡಿಗೆ ಅವರು ಕೆಲಸ ಮಾಡುತ್ತಿರುತ್ತಾರೆ. ನೀವು ಅವನ ಜಾಗದಲ್ಲಿ ಎರಡು ನಿಮಿಷ ನಿಂತು ಒಮ್ಮೆ ಕೆಳಗೆ ನೋಡಿ. ತಲೆ ತಿರುಗಿ ಗಾಭರಿ ಆಗದೆ ಇರದು. ಗಾರೆ ಕೆಲಸಗಾರನಿಗೆ ಅದು ಲೀಲಾಜಾಲ.ಅವನಿಗೆ ಅದು ಶ್ರಮವೇ ಅಲ್ಲ. ಶ್ರಮಕ್ಕೆ ಹಿಂಜರಿಯುವ ಸ್ವಭಾವ ಅವನದಲ್ಲ.
ಸಡಿಲವಾಗದವರು:
ಶ್ರಮದ ಕೆಲಸ ಮಾಡುವ ಶ್ರಮಜೀವಿಯು ಅವನ ಈ ಸ್ವಭಾವದಿಂದ ಎಂತಹ ಭಾರೀ ಕೆಲಸವನ್ನೂ ಪಟ್ಟು ಬಿಡದೆ ಮಾಡಿ ಮುಗಿಸುತ್ತಾನೆ. ಅವನು ಒಮ್ಮೆ ಮನಸ್ಸು ಸಡಿಲಮಾಡಿದರೆ ಅವನಿಗಷ್ಟೇ ಅಲ್ಲ, ಅವನನ್ನು ನಂಬಿರುವ ವ್ಯಕ್ತಿಗೆ ಬಲು ನಷ್ಟವಾಗುತ್ತದೆ. ಆದರೆ ಶ್ರಮಜೀವಿಯು ಸಡಿಲವಾಗಲಾರ. ಅದು ಅವನ ಸ್ವಭಾವ.
ಸಾವಿಗೆ ಮಣಿಯದವರು, ರೋಗರಹಿತರು:
ಶ್ರಮಜೀವಿಯ ಸ್ವಭಾವವೇ ಹಾಗೆ. ಅವನಿಗೆ ಮೃತ್ಯುವಿನ ಭೀತಿಯಿಲ್ಲ.ಆದ್ದರಿಂದಲೇ ಶಿಖರದೆತ್ತರದಲ್ಲಿಕೆಲಸ ಮಾಡಬಲ್ಲ.ಎಂತಹ ಕಠಿಣ ಪರಿಸ್ಥಿತಿಯಲ್ಲೂ ಕೆಲಸ ಮಾಡುವ ಸ್ವಭಾವ ಅವನದು.ಹಾಗಾಗಿಯೇ ಎಡಬಿಡದೆ ಸಕ್ರಿಯನಾಗಿರುವ ಶ್ರಮ ಜೀವಿಗೆ ರೋಗ ಎಲ್ಲಿಂದ ಬರಬೇಕು?
ದೃಢಕಾಯರು, ಲೋಭರಹಿತರು, ಪರಿಶ್ರಮಿಗಳು :
ಶ್ರಮದ ಕೆಲಸ ಮಾಡುವ ವ್ಯಕ್ತಿ ಆರೋಗ್ಯದಿಂದಿದ್ದು ದೃಢಕಾಯನಾಗಿರಲೇ ಬೇಕು. ಅವನ ಇನ್ನೊಂದು ಮುಖ್ಯ ಗುಣವೆಂದರೆ ಅವನು ಲೋಭರಹಿತ. ಅವನಿಗೆ ಅತಿಯಾಸೆಯೂ ಇಲ್ಲ ಹಾಗೂ ಜಿಪುಣತನವೂ ಇಲ್ಲ. ಕಷ್ಟಪಟ್ಟು ದುಡಿಯುತ್ತಾನೆ, ಬಂದ ಸಂಪಾದನೆಯಲ್ಲಿ ತೃಪ್ತಜೀವನ ನಡೆಸುತ್ತಾನೆ. ಅವನಲ್ಲಿದ್ದುದರಲ್ಲಿ ಜಿಪುಣತನ ಮಾಡದೆ ಉದಾರಿಯಾಗಿ ಬದುಕುತ್ತಾನೆ.
ಇಷ್ಟು ಗುಣ ವಿಶೇಷತೆ ಹೊಂದಿರುವ ಶೂದ್ರನನ್ನು ಯಾರಾದರೂ ಕನಿಷ್ಟನೆನ್ನಲು ಸಾಧ್ಯವೇ? ವೇದವು ಹೇಳಿರುವ ಇಷ್ಟು ಗುಣಗಳನ್ನು ಹೊಂದಿ ಶೂದ್ರನೆನಸುವುದು ಸುಲಭದ ಮಾತೇ?
ಬ್ರಾಹ್ಮಣ ವರ್ಣದ ಬಗ್ಗೆ ಏನು ಹೇಳಿದ್ದೆನೋ ಅದೇ ಮಾತು ಇಲ್ಲೂ ಅನ್ವಯವಾಗುತ್ತದೆ. ವೇದ ಕಾಲದ ವರ್ಣದಂತೆ ನಿಜ ಬ್ರಾಹ್ಮಣ, ನಿಜ ಕ್ಷತ್ರಿಯ, ನಿಜ ವೈಶ್ಯ ಮತ್ತು ನಿಜ ಶೂದ್ರನಾಗುವುದು ಸುಲಭದ ಮಾತಲ್ಲ. ವೇದದಲ್ಲಿ ಎಲ್ಲಿಯೂ ನಾಲ್ಕೂ ವರ್ಣಗಳಲ್ಲಿ ಯಾವುದನ್ನೂ ಕನಿಷ್ಠ ವೆಂದಿಲ್ಲ. ಎಲ್ಲವೂ ಪರಸ್ಪರ ಸಹಾಯಕ ಮತ್ತು ಎಲ್ಲವೂ ಒಂದು ಸುಂದರ ಸಮಾಜದ ಆಧಾರ ಸ್ಥಂಭಗಳು.
ಪ್ರತಿಕ್ರಿಯೆ (2)