ಬದುಕು ಹಾಗೆಲ್ಲ ಸುಖಾಸುಮ್ಮನೆ ಎಲ್ಲರಿಗೂ ದಕ್ಕುವುದಿಲ್ಲ .ಏನನ್ನೋ ಅರಿತೆವು ಎಂದುಕೊಳ್ಳುವಷ್ಟರಲ್ಲೇ ಇನ್ನ್ಯಾವುದೋ ಪ್ರಶ್ನೆ ಎದುರಾಗಿರುತ್ತದೆ. ಕಂಡ ಕನಸುಗಳನ್ನು ಗೋರಿಯಾಗಿಸಿ ಮರಳುತ್ತಿರುವಂತೆ ಮತ್ತ್ಯಾವುದೋ ಕನಸು ಕೈಹಿಡಿದೆಳೆಯುತ್ತಿರುತ್ತದೆ. 'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ' ತುಡಿಯುತ್ತಿರುತ್ತದೆ ಮನ. ಆರದ ಗಾಯ, ಬೇಡದ ನೋವು, ಸಿಗದ ಒಲವು, ಕ್ಷಣದ ನಲಿವು, ಗಳಿಸಿದ ಗೆಲುವು- ಎಲ್ಲ ಮನಸಿನ ತಿರುಗಣಿ ಮಡುವಿನಲ್ಲಿ ಬಿದ್ದ ಎಲೆಗಳಂತೆ ನೆನಪೆಂಬ ಗಾಳಿ ಬೀಸಿದಾಗ ಮತ್ತೆ ಮತ್ತೆ ಮೇಲೇರಿ ಮನದ ಕಣ್ಣಮುಂದೆ ಪ್ರತ್ಯಕ್ಷವಾಗುತ್ತವೆ. ಕಥೆಗಾರ ಎಂ. ವ್ಯಾಸರು ಹೇಳುವಂತೆ : "ಮನುಷ್ಯ ಜೀವಿತದ ಗೂಢತೆಗೆ ನಾವು ಯಾರೂ ಅರ್ಥ ಬರೆಯಲಾರೆವು ಬರೆಯಬಾರದು". ನಮ್ಮೆಲ್ಲ ಪ್ರಯತ್ನಗಳು ಕೇವಲ ಬದುಕೆಂಬ ಮಾಯೆಯ ಹಲ ಕೆಲವು ಚದುರಿದ ಚಿತ್ರಗಳನ್ನು ದಾಖಲಿಸುವುದರಲ್ಲಿ ಕೊನೆಗೊಳ್ಳುತ್ತವೆ. ಪ್ರಶ್ನಾರ್ಥಕ ಚಿಹ್ನೆ (?) ಮತ್ತು ಉದ್ಘಾರವಾಚಕ (!) ಚಿಹ್ನೆಗಳಲ್ಲಿ ಒಂದರಿಂದ ಬದುಕನ್ನು ವಿವರಿಸಬಹುದೆ?