ಒಂದು ಸಂಜೆಯಲಿ, ಶುರುವಾಯ್ತು ಮಾತುಕತೆ ಲೋಕಾಭಿರಾಮವಾಗಿ
ನನಗೂ ಹರ್ಷನಿಗು ಹಲವು ವರ್ಷದ ಗುರುತು ತೂಗಿತ್ತು ಸ್ನೇಹ ಮಾಗಿ!
ಇಳಿಸಂಜೆ ಚಳಿಯಿತ್ತು, ಮಡದಿ ಮನೆಯಲ್ಲಿಲ್ಲ,
ಹೊತ್ತು ಕಳೆಯಲು ಸಿಗರೇಟು ಹತ್ತು,
ಬಾಯಾರದಿರಲೆಂದು ಮದ್ಯದ ಸವಲತ್ತು!
ಮೊದಮೊದಲು ಏನಿಲ್ಲ, ಅದೂ ಇದು ಮಾತಾಯ್ತು.
ನಡುನಡುವೆ ಮದ್ಯ ಮುತ್ತಿಕ್ಕುತಿತ್ತು.
ಬೆಳಿಗ್ಗೆ ಬಾರದ ಮೋಷನ್ನು, ಗ್ಲೋಬಲೈಸೇಶನ್ನು,
ಮನೆಕೆಲಸದ ರಂಗಿ ಕಾಮಸೂತ್ರದ ಭಂಗಿ
ಗೊರಟಿಲ್ಲದ ಹರಟೆ ಹೊರಳುತಿತ್ತು.
ಅರ್ಧ ಬಾಟಲಿ ಮದ್ಯ ಖಾಲಿಯಾಗಿತ್ತು, ಐದು ಸಿಗರೇಟಿತ್ತು!
ಆಗಲೇ ಅನಿಸಿದ್ದು ಇಬ್ಬರಿಗು ಒಳಗೊಳಗೆ ಗಹನವಾದದ್ದೇನೊ ಮೆಲ್ಲಬೇಕು,
ಜೊಳ್ಳು ಪೊಳ್ಳಿನ ಮಾತನೆಲ್ಲವ ಸತ್ವಯುತ ತತ್ವದಲಿ ಮೀರಬೇಕು
ಸರಿ ಈಗ ಶುರುವಾಯ್ತು ಹೊಸ ಗಾಂಧಿ, ಗೌತಮ ಬುದ್ಧ, ಮುಸ್ಲಿಮರ ಮಹಾಯುದ್ಧ.
ಒಳಗಿರುವ ಏನಕ್ಕೋ ಮದ್ಯ ನೀರೆರೆದಿರಲು ಇಬ್ಬರಲು ಚಿಗುರುತಿದೆ ಗೆಲುವಿನಾಸೆ!
ತುಂಬ ತುದಿಯಲ್ಲುಂಟು ಒಂದು ಹೊಸ ಪಟ್ಟು ಹೊಗೆಯ ಜೊತೆಗೇ ಈಗ ಬರುವುದುಂಟು
ವಿಶ್ವ ಸಾಹಿತ್ಯವನೆ ಅರೆದು ಕುಡಿದಿಹೆ ನಾನು, ಬಿಡಿಸಲಾರೆನೆ ನಿನ್ನ ಬ್ರಹ್ಮಗಂಟು
ಇಕೋ ಇಲ್ಲುಂಟು ನನ್ನ ಲಾ ಪಾಯಿಂಟು, ಕೆಸರೆಸೆದು ಕೈ ತೊಳೆದುಕೊಂಡು ಕುಳಿತೆ!
ಅವನ ನೆತ್ತಿಯ ಮೇಲೆ ನಾಲ್ಕು ಹನಿ ಮೂಡಿರಲು,ಮೊದಲ ಮಳೆ ಬಿದ್ದ ಇಳೆಯೊಳಗೆ ಪುಳಕ
ಏನು ತಿಣುಕುವೆ ಗೆಳೆಯ? ಎಲ್ಲಿ ತುರಿಸಿದರಷ್ಟೆ!
ಹುಬ್ಬು ಗಂಟಿಕ್ಕುತಿದೆ ನರಗಳುಬ್ಬಿ!
ನೋಟ ಕೆಳಗಿಳಿಯುತಿದೆ ಸೋಲ ತಬ್ಬಿ!
ಅರೆರೆ ಏನಾಯ್ತಯ್ಯ ಹೀಗೆ ಹೊರಡುವುದೇನು ಎಸೆದು ಕುರ್ಚಿಯ ದೂರ, ಗೇಟು ದಬ್ಬಿ?
ನೀ ಬಿಟ್ಟ ಕೊನೆ ಗುಟುಕು ನಾನೆ ಕುಡಿಯುವೆ ಗೆಳೆಯ, ಮಲಗುವೆನು ಗೆಲುವಿನ ಖುಷಿಯ ತಬ್ಬಿ!
ಪ್ರತಿಕ್ರಿಯೆ (1)