ವಿದ್ಯುತ್ ವಾಹನಗಳು ಪರಿಸರ ಮಾಲಿನ್ಯ ಮಾಡುತ್ತವೆಯೇ? ಉತ್ತರ - 'ಹೌದು'... ಆದರೆ ಕಥೆ ಅಲ್ಲಿಗೆ ಮುಗಿಯುವುದಿಲ್ಲ! ಕಳೆದ ಕೆಲವು ವರ್ಷಗಳಿಂದ ವಿದ್ಯುತ್ ವಾಹನ (EV) ಬಳಸುತ್ತಿರುವ ನನಗೆ ಕೇಳುವ ಸಾಮಾನ್ಯ ಪ್ರಶ್ನೆಗಳಲ್ಲಿ ಒಂದು: "ನೀವು ಹೇಳುವ EV ಶೂನ್ಯ ಮಾಲಿನ್ಯ ಎನ್ನುತ್ತಾರೆ. ಆದರೆ ವಿದ್ಯುತ್ ತಯಾರಿಸುವುದು ಕಲ್ಲಿದ್ದಲಿನಿಂದ ಅಲ್ಲವೇ? ಹಾಗಿದ್ದರೆ ಇದೂ ಮಾಲಿನ್ಯವೇ ಅಲ್ಲವೇ?"
ಈ ಪ್ರಶ್ನೆಗೆ ಒಂದೇ ಪದದಲ್ಲಿ ಉತ್ತರಿಸಬೇಕೆಂದರೆ – "ಹೌದು." ಆದರೆ ಅಷ್ಟೇ ಹೇಳಿದರೆ ಅದು ಅರ್ಧ ಸತ್ಯ. ಮಾನವನ ಪ್ರತಿಯೊಂದು ಚಟುವಟಿಕೆ ಮಾಲಿನ್ಯ ಉಂಟು ಮಾಡುತ್ತದೆ. ನೀವು ಈಗ ಧರಿಸಿದ ಬಟ್ಟೆ, ತಿಂದಿರುವ ಆಹಾರ, ಕೂತಿರುವ ಕುರ್ಚಿ, ವಾಸಿಸಿದ ಮನೆ, ಬಳಸುವ ಫೋನ್, ಟಿವಿ ಎಲ್ಲವೂ ವಿವಿಧ ಪ್ರಮಾಣದಲ್ಲಿ ಪರಿಸರ ಮಾಲಿನ್ಯ ಮಾಡಿದೆ. EV ಕೂಡ ಇದಕ್ಕೆ ಹೊರತೇನಲ್ಲ!
ಮಾಲಿನ್ಯ ಎಲ್ಲಿಂದ ಬರುತ್ತದೆ? ಪೆಟ್ರೋಲ್ ಅಥವಾ ಡೀಸೆಲ್ ಕಾರಿನಲ್ಲಿ ಮಾಲಿನ್ಯ ನೇರವಾಗಿ ನಿಮ್ಮ ಕಾರಿನ ಸೈಲೆನ್ಸರ್ನಿಂದ ಹೊರಬರುತ್ತದೆ. EVಯಲ್ಲಿ ಸೈಲೆನ್ಸರ್ ಇಲ್ಲ. ಆದರೆ ಅದು ಬಳಸುವ ವಿದ್ಯುತ್ ಯಾವುದೋ ಒಂದು ವಿದ್ಯುತ್ ಸ್ಥಾವರದಲ್ಲಿ ಉತ್ಪಾದನೆಯಾಗಿರುತ್ತದೆ. ಆ ಸ್ಥಾವರ ಕಲ್ಲಿದ್ದಲು ಬಳಸಿದರೆ, ಅಲ್ಲಿಯೂ ಕಾರ್ಬನ್ ಡೈಆಕ್ಸೈಡ್ ಹೊರಬರುತ್ತದೆ. ಹಾಗಾಗಿ EVಯಿಂದ ಮಾಲಿನ್ಯ ಇಲ್ಲ ಎನ್ನುವುದು ಸರಿಯಲ್ಲ. ಆದುದರಿಂದ ಪ್ರಶ್ನೆ ಬದಲಾಗಬೇಕು.
"ಮಾಲಿನ್ಯ ಆಗುತ್ತದೆಯೇ?" ಎನ್ನುವುದಕ್ಕಿಂತ, "ಮಾಲಿನ್ಯ ಎಷ್ಟು ಆಗುತ್ತದೆ?" ಎನ್ನುವುದೇ ಮುಖ್ಯ. ನಗರದ ಗಾಳಿಯ ಬಗ್ಗೆ ಯೋಚಿಸಿದ್ದೀರಾ? ಪರಿಸರ ಎಂದರೆ ಕೇವಲ ಕಾರ್ಬನ್ ಡೈಆಕ್ಸೈಡ್ ಅಲ್ಲ. ನಾವು ಪ್ರತಿದಿನ ಉಸಿರಾಡುವ ಗಾಳಿಯಲ್ಲಿ ಇರುವ NO₂ (ನೈಟ್ರೋಜನ್ ಡೈಆಕ್ಸೈಡ್), PM2.5 ಮತ್ತು PM10 ಎಂಬ ಅತಿಸೂಕ್ಷ್ಮ ಕಣಗಳೇ ನಮ್ಮ ಆರೋಗ್ಯಕ್ಕೆ ಹೆಚ್ಚು ಅಪಾಯಕಾರಿ.
ಇವುಗಳೇ ಅಸ್ತಮಾ ಹೆಚ್ಚಿಸುತ್ತವೆ. ಮಕ್ಕಳ ಶ್ವಾಸಕೋಶದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ. ಹೃದಯ ಮತ್ತು ಶ್ವಾಸಕೋಶದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ. ಈ ವಿಷಕಾರಿ ಕಣಗಳ ಬಹುಪಾಲು (40% ಗಿಂತ ಹೆಚ್ಚು) ನಗರಗಳಲ್ಲಿ ವಾಹನಗಳಿಂದಲೇ ಬರುತ್ತವೆ. ಉಳಿದಂತೆ ಕಟ್ಟಡ ನಿರ್ಮಾಣ, ರಸ್ತೆ ನಿರ್ಮಾಣ, ಕೈಗಾರಿಕಾ ಚಟುವಟಿಕೆ ಮತ್ತಿತರ ಮೂಲಗಳಿಂದ ಬರುತ್ತದೆ. ಹಾಗಾದರೆ ವಾಹನಗಳಿಂದ ಹರಡುವ ಮಾಲಿನ್ಯದ ಮೇಲೆ ಕಡಿವಾಣ ಹಾಕಿದರೆ ಪರಿಸರ ಮಾಲಿನ್ಯ ಕಡಿಮೆ ಆಗುತ್ತದೆಯೇ? ಗಾಳಿ ಸ್ವಚ್ಚವಾಗುತ್ತದೆಯೇ? ಬನ್ನಿ ಕೆಲವು ಸಜೀವ ಉದಾಹರಣೆಗಳನ್ನು ನೋಡೋಣ.
ಲಂಡನ್ ನಮಗೆ ಕಲಿಸುವ ಪಾಠ : 2019ರಲ್ಲಿ ಲಂಡನ್ ನಗರ Ultra Low Emission Zone (ULEZ) ಎಂಬ ಯೋಜನೆ ಆರಂಭಿಸಿತು. ಸರಳವಾಗಿ ಹೇಳುವುದಾದರೆ...ಹೆಚ್ಚು ಹೊಗೆ ಬಿಡುವ ಹಳೆಯ ವಾಹನಗಳಿಗೆ ನಗರ ವಲಯಗಳನ್ನು ಪ್ರವೇಶಿಸಲು ಹೆಚ್ಚುವರಿ ಶುಲ್ಕ ವಿಧಿಸಲಾಯಿತು.ಈ ನಡೆಗೆ ಬಹಳ ವಿರೋಧವೂ ವ್ಯಕ್ತವಾಯಿತು.
"ಇದರಿಂದ ಏನೂ ಪ್ರಯೋಜನವಾಗುವುದಿಲ್ಲ" ಎಂದು ಹಲವರು ಹೇಳಿದರು. ಆದರೆ ಕೆಲವು ವರ್ಷಗಳ ನಂತರ ಬಂದ ಅಂಕಿ-ಅಂಶಗಳು ಬೇರೆ ಕಥೆಯನ್ನೇ ಹೇಳುತ್ತಿವೆ. ಲಂಡನ್ನ 99% ವಾಯು ಗುಣಮಟ್ಟದ ಮಾನಿಟರಿಂಗ್ ಕೇಂದ್ರಗಳಲ್ಲಿ ಗಾಳಿಯ ಗುಣಮಟ್ಟ ಸುಧಾರಿಸಿದೆ. ರಸ್ತೆ ಬದಿಯ NO₂ ಪ್ರಮಾಣ ಸುಮಾರು 27% ಕಡಿಮೆಯಾಗಿದೆ. ವಾಹನಗಳಿಂದ ಬರುವ PM2.5 ಕಣಗಳ ಪ್ರಮಾಣ 31% ಕಡಿಮೆಯಾಗಿದೆ. ಅತ್ಯಂತ ಮಾಲಿನ್ಯ ಪೀಡಿತ ಪ್ರದೇಶಗಳಲ್ಲಿ ಅಕ್ರಮ ಮಟ್ಟದ ವಾಯು ಮಾಲಿನ್ಯಕ್ಕೆ ಒಳಗಾಗುವ ಜನರ ಸಂಖ್ಯೆ ಸುಮಾರು 80% ಕಡಿಮೆಯಾಗಿದೆ. ಅಂದರೆ… ಒಂದೇ ದಿನದಲ್ಲಿ ಜಗತ್ತು ಬದಲಾಗಲಿಲ್ಲ. ಆದರೆ ನಗರದ ಗಾಳಿ ನಿಧಾನವಾಗಿ ಸ್ವಚ್ಛವಾಗತೊಡಗಿತು.
ಚೀನಾದ ಕಥೆಯೂ ಇದೇ… ಒಂದು ಕಾಲದಲ್ಲಿ ಚೀನಾದ ಹಲವು ಮಹಾನಗರಗಳು ಹೊಗೆ ಮತ್ತು ಮಂಜಿನಿಂದ ಮುಚ್ಚಿಕೊಂಡಿರುತ್ತಿದ್ದವು. ಬೀಜಿಂಗ್ನಂತಹ ನಗರಗಳಲ್ಲಿ ನೀಲಿ ಆಕಾಶ ನೋಡುವುದೇ ಕಷ್ಟವಾಗಿತ್ತು. ನಂತರ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿತು. ಲಕ್ಷಾಂತರ ವಿದ್ಯುತ್ ಬಸ್ಸುಗಳು. ವಿಶ್ವದಲ್ಲೇ ಅತಿ ಹೆಚ್ಚು EVಗಳ ಬಳಕೆ. ಹಳೆಯ ಡೀಸೆಲ್ ವಾಹನಗಳಿಗೆ ನಿರ್ಬಂಧ. ಕಲ್ಲಿದ್ದಲು ವಿದ್ಯುತ್ ಸ್ಥಾವರಗಳ ಮೇಲಿನ ಕಠಿಣ ನಿಯಂತ್ರಣ. ಸೌರ ಮತ್ತು ಗಾಳಿ ವಿದ್ಯುತ್ ಉತ್ಪಾದನೆಯಲ್ಲಿ ಭಾರೀ ಹೂಡಿಕೆ. ಇದರಿಂದ ಅನೇಕ ನಗರಗಳಲ್ಲಿ ವಾಯು ಗುಣಮಟ್ಟ ಗಮನಾರ್ಹವಾಗಿ ಸುಧಾರಿಸಿದೆ. ಚೀನಾದ ಅನುಭವವೂ ಒಂದೇ ವಿಷಯ ಹೇಳುತ್ತದೆ. ಕೇವಲ EVಗಳಿಂದಲೇ ಸಮಸ್ಯೆ ಪರಿಹಾರವಾಗುವುದಿಲ್ಲ. ಆದರೆ EVಗಳು ಪರಿಹಾರದ ಪ್ರಮುಖ ಭಾಗವಾಗುತ್ತವೆ.
ಒಂದು ಲೀಟರ್ ಪೆಟ್ರೋಲ್ ಸುಟ್ಟರೆ? : ಒಂದು ಲೀಟರ್ ಪೆಟ್ರೋಲ್ ಸುಟ್ಟಾಗ ಸುಮಾರು 2.3 ಕಿಲೋಗ್ರಾಂ ಕಾರ್ಬನ್ ಡೈಆಕ್ಸೈಡ್ ವಾತಾವರಣಕ್ಕೆ ಸೇರುತ್ತದೆ. ಅದು ನಿಮ್ಮ ಕಾರಿನ ಹಿಂದೆ ನಿಂತಿರುವವರೇ ಉಸಿರಾಡುವ ಗಾಳಿಯಲ್ಲಿ ಸೇರಿಕೊಳ್ಳುತ್ತದೆ. EVಯಲ್ಲಿ ಆ ಹೊಗೆ ನಿಮ್ಮ ಮನೆಯ ಮುಂದೆ ಬರುವುದಿಲ್ಲ. ಇದು ಚಿಕ್ಕ ವ್ಯತ್ಯಾಸ ಅಲ್ಲ. ಒಂದು ಪೆಟ್ರೋಲ್ ವಾಹನಕ್ಕಿಂತ ಕಡಿಮೆ ಮಟ್ಟದ ಮಾಲಿನ್ಯ ಪರೋಕ್ಷವಾಗಿ ದೂರದ ವಿದ್ಯುತ್ ಸ್ಥಾವರದ ಮೂಲಕ ಆಗುತ್ತದೆ. ಆ ಪ್ರದೇಶಗಳನ್ನು ಮಾಲಿನ್ಯ ನಿಯಂತ್ರಣಕ್ಕೆ ತರುವುದು ಸುಲಭವಾಗುತ್ತದೆ. ಅಂದರೆ ವಿಮಾನ ನಿಲ್ದಾಣ, ಬಸ್ ನಿಲ್ದಾಣ, ಆಫೀಸುಗಳಲ್ಲಿ ಅಲ್ಲಲ್ಲಿ ಸಿಗರೇಟ್ ಸೇವನೆ ನಿಷೇಧಿಸಿ, ಅದರ ಬದಲು ನಿರ್ದಿಷ್ಟ ಸ್ಮೋಕಿಂಗ್ ಜೋನ್ ಗಳಲ್ಲಿ ಸಿಗರೇಟ್ ಸೇದುವವರಿಗೆ ಹೇಳಿ, ಆ ಜೋನ್ ಗಳಲ್ಲಿ ವಾಯು ನಿಯಂತ್ರಣ ಮಾಡಿದಂತೆ!
EVಯಲ್ಲೂ ಕಾರ್ಬನ್ ಇರುತ್ತದೆ... ಆದರೆ ಕಡಿಮೆ/ ಇಂದು ಭಾರತದ ವಿದ್ಯುತ್ ಉತ್ಪಾದನೆಯ ಬಹುಭಾಗ ಇನ್ನೂ ಕಲ್ಲಿದ್ದಲಿನ ಮೇಲೆ ಅವಲಂಬಿತವಾಗಿದೆ. ಹಾಗಾಗಿ EV ಚಾರ್ಜ್ ಮಾಡುವಾಗಲೂ ಪರೋಕ್ಷವಾಗಿ ಕಾರ್ಬನ್ ಹೊರಬರುತ್ತದೆ. ಆದರೆ ಒಂದು ದೊಡ್ಡ ವ್ಯತ್ಯಾಸ ಇದೆ. ವಿದ್ಯುತ್ ಸ್ಥಾವರಗಳನ್ನು ಸುಧಾರಿಸಬಹುದು. ಕಲ್ಲಿದ್ದಲಿನಿಂದ ಸೌರ, ಗಾಳಿ ಅಥವಾ ಜಲವಿದ್ಯುತ್ಗೆ ಬದಲಾಯಿಸಬಹುದು. ಒಂದು ನಗರಕ್ಕೆ ಲಕ್ಷಾಂತರ ಕಾರುಗಳನ್ನು ಬದಲಾಯಿಸುವುದಕ್ಕಿಂತ, ಕೆಲವು ವಿದ್ಯುತ್ ಸ್ಥಾವರಗಳನ್ನು ಸುಧಾರಿಸುವುದು ಸುಲಭ. ಆದರೆ ನಿಮ್ಮ ಮನೆಯ ಮುಂದೆ ನಿಂತಿರುವ ಪೆಟ್ರೋಲ್ ಕಾರು… ಹತ್ತು ವರ್ಷಗಳ ನಂತರವೂ ಪೆಟ್ರೋಲ್ ನ್ನೇ ಸುಡುತ್ತದೆ.
ಸೌರಶಕ್ತಿ ಬಂದಾಗ?: ಇದು EVಗಳ ಅತ್ಯಂತ ದೊಡ್ಡ ಶಕ್ತಿ. ನೀವು ಇಂದು ಪೆಟ್ರೋಲ್ ಕಾರು ಖರೀದಿಸಿದರೆ, ಹತ್ತು ವರ್ಷಗಳ ನಂತರವೂ ಅದು ಪೆಟ್ರೋಲ್ನ್ನೇ ಬಳಸುತ್ತದೆ. ಆದರೆ ನೀವು ಇಂದು EV ಖರೀದಿಸಿದರೆ… ನಾಳೆ ಮನೆಯ ಮೇಲೆ ಸೌರ ಫಲಕ ಅಳವಡಿಸಿದ ಕ್ಷಣದಿಂದಲೇ ಅದೇ ಕಾರು ಇನ್ನಷ್ಟು ಪರಿಸರ ಸ್ನೇಹಿಯಾಗುತ್ತದೆ. ವಿದ್ಯುತ್ ಉತ್ಪಾದಿಸುವ ಇನ್ನಷ್ಟು ಅನುಕೂಲಕರ, ಪರಿಸರ ಸ್ನೇಹಿ ವಿಧಾನ ಬಂದರೆ ಇನ್ನಷ್ಟು ಸುಧಾರಣೆಯಾಗುತ್ತದೆ. ಕಾರು ಬದಲಾಯಿಸುವ ಅಗತ್ಯವೇ ಇಲ್ಲ. ವಿದ್ಯುತ್ ಮೂಲ ಬದಲಾದರೆ ಸಾಕು.
ಬ್ಯಾಟರಿ ತಯಾರಿಸುವುದೂ ಮಾಲಿನ್ಯವೇ? ಖಂಡಿತ. EV ಬ್ಯಾಟರಿ ತಯಾರಿಸಲು ಲಿಥಿಯಂ, ನಿಕಲ್, ಕೋಬಾಲ್ಟ್ ಮುಂತಾದ ಖನಿಜಗಳನ್ನು ಗಣಿಗಾರಿಕೆ ಮಾಡಬೇಕು. ಅದರಲ್ಲೂ ಪರಿಸರದ ಮೇಲೆ ಪರಿಣಾಮವಿದೆ. ಆದರೆ ಒಮ್ಮೆ ಗಣಿಗಾರಿಕೆ ಮಾಡಿದ ಬ್ಯಾಟರಿ ಸಾಮಗ್ರಿಗಳು ರಿಸೈಕಲ್ ಮಾಡುವುದರ ಮೂಲಕ ಮುಂದಿನ 30-40 ವರ್ಷ ಬ್ಯಾಟರಿಯಲ್ಲೇ ಇರುತ್ತದೆ. ಒಮ್ಮೆ ಸುಟ್ಟ ಪೆಟ್ರೋಲ್ ಮತ್ತೆ ಮರಳಿ ಬರುವುದೇ ಇಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಕೂಡ ಭೂಮಿಯಿಂದ ಉಚಿತವಾಗಿ ಬರುವುದಿಲ್ಲ. ತೈಲ ಬಾವಿಗಳು… ಸಾವಿರಾರು ಕಿಲೋಮೀಟರ್ ಸಾಗಣೆ… ರಿಫೈನರಿಗಳು… ನಿರಂತರ ಇಂಧನ ಸಾಗಣೆ… ಇವೆಲ್ಲವೂ ಪರಿಸರದ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ ಬ್ಯಾಟರಿಯನ್ನು ಮಾತ್ರ ಪ್ರತ್ಯೇಕವಾಗಿ ನೋಡಿದರೆ ಸಂಪೂರ್ಣ ಚಿತ್ರ ಕಾಣುವುದಿಲ್ಲ.
ಹಾಗಾದರೆ EV ಸಂಪೂರ್ಣ ಹಸಿರು ವಾಹನವೇ? ಇಲ್ಲ. ಇಂದು ಯಾವುದೇ ವಾಹನವನ್ನು "ಶೂನ್ಯ ಮಾಲಿನ್ಯ" ಎಂದು ಕರೆಯಲು ಸಾಧ್ಯವಿಲ್ಲ. ಆದರೆ ಲಭ್ಯವಿರುವ ತಂತ್ರಜ್ಞಾನಗಳಲ್ಲಿ, ವಿಶೇಷವಾಗಿ ನಗರ ಸಂಚಾರಕ್ಕೆ, EVಗಳು ಕಡಿಮೆ ಮಾಲಿನ್ಯ ಉಂಟುಮಾಡುವ ಆಯ್ಕೆಗಳಲ್ಲಿ ಒಂದಾಗಿವೆ. ಅದಕ್ಕಿಂತಲೂ ಮುಖ್ಯವಾಗಿ… EVಗಳು ವರ್ಷದಿಂದ ವರ್ಷಕ್ಕೆ ಇನ್ನಷ್ಟು ಪರಿಸರ ಸ್ನೇಹಿಯಾಗುತ್ತವೆ. ಏಕೆಂದರೆ ವಿದ್ಯುತ್ ಉತ್ಪಾದನೆ ಹಸಿರಾಗುತ್ತಿದೆ. ಪೆಟ್ರೋಲ್ ಕಾರುಗಳಿಗೆ ಆ ಅವಕಾಶವೇ ಇಲ್ಲ.
ಕೊನೆಯ ಮಾತು: EV ಎಂದರೆ ಪರಿಸರವನ್ನು ಒಂದೇ ದಿನದಲ್ಲಿ ಉಳಿಸುವ ಮಾಯಾಜಾಲ ಅಲ್ಲ. ಹಾಗೆಯೇ ಅದು ಕೆಲವರು ಹೇಳುವಂತೆ "ಕಲ್ಲಿದ್ದಲು ಕಾರು" ಕೂಡ ಅಲ್ಲ. ಸತ್ಯ ಈ ಎರಡರ ಮಧ್ಯದಲ್ಲಿದೆ. ಲಂಡನ್ ತೋರಿಸಿಕೊಟ್ಟಿದೆ... ಚೀನಾ ತೋರಿಸಿಕೊಟ್ಟಿದೆ… ನಗರದಲ್ಲಿ ವಾಹನಗಳ ಹೊಗೆ ಕಡಿಮೆಯಾದರೆ ಜನರು ಸ್ವಚ್ಛವಾದ ಗಾಳಿಯನ್ನು ಉಸಿರಾಡಬಹುದು. ಶುದ್ಧ ವಿದ್ಯುತ್ ಮತ್ತು ವಿದ್ಯುತ್ ವಾಹನಗಳು ಒಟ್ಟಿಗೆ ಬಂದಾಗ ದೊಡ್ಡ ಮಟ್ಟದಲ್ಲಿ ಬದಲಾವಣೆ ಸಾಧ್ಯ. ಪರಿಸರವನ್ನು ಉಳಿಸುವುದು ಒಂದೇ ತಂತ್ರಜ್ಞಾನದಿಂದ ಆಗುವುದಿಲ್ಲ. ಆದರೆ ಪ್ರತಿಯೊಂದು ಉತ್ತಮ ಹೆಜ್ಜೆಯೂ ಮಹತ್ವದ್ದು. EV ಅಂತಹ ಒಂದು ಹೆಜ್ಜೆ. ಬಹುಶಃ, ಮುಂದಿನ ಪೀಳಿಗೆಗೆ ಸ್ವಲ್ಪ ಹೆಚ್ಚು ಸ್ವಚ್ಛವಾದ ಗಾಳಿಯನ್ನು ಉಸಿರಾಡಲು ಸಹಾಯ ಮಾಡುವ ಹೆಜ್ಜೆ.
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!