“EV ತಗೊಳ್ಳುತ್ತೀಯಾ? ಹಾಗಾದರೆ ಬ್ಯಾಟರಿ replacement ಖರ್ಚು ಜಾಸ್ತಿ”
“ಬ್ಯಾಟರಿ ವಾರಂಟಿ ಮುಗಿದ ಮೇಲೆ, ಬ್ಯಾಟರಿ ಖರ್ಚು ನಿನ್ನ ತಲೆ ಮೇಲೆ ಬೀಳಲಿದೆ” ಹೀಗೆ EV ಬ್ಯಾಟರಿ ಬಗ್ಗೆ ಹತ್ತು ಹಲವಾರು ತಪ್ಪು ಪರಿಕಲ್ಪನೆಗಳು ಜನರಲ್ಲಿವೆ. ಅದನ್ನು ಈ ಲೇಖನದೊಂದಿಗೆ ಸರಿ ಪಡಿಸಲು ಪ್ರಯತ್ನಿಸುತ್ತೇನೆ.
EV ಬ್ಯಾಟರಿ ಬಗ್ಗೆ ಹೀಗೆ ಸಂದೇಹ ಪಡಲು ನಮಗೆ ಮೊಬೈಲ್, ಲ್ಯಾಪ್ ಟಾಪ್ ಮತ್ತು ಕೆಲವು ಹಳೆಯ EV ದ್ವಿಚಕ್ರ ವಾಹನಗಳ ಅನುಭವವೇ ಕಾರಣ. ಇವೆಲ್ಲದರ ಬ್ಯಾಟರಿಗಿಂತ EV ಬ್ಯಾಟರಿ ಹೇಗೆ ಭಿನ್ನ ಎಂದು ಸ್ವಲ್ಪದರಲ್ಲೇ ಹೇಳುವೆ.
ಲಭ್ಯವಿರುವ ಅಂತರರಾಷ್ಟ್ರೀಯ ಅಧ್ಯಯನಗಳು ಹೇಳುವುದು ಬೇರೆ ಕಥೆ. ಅಮೆರಿಕದ U.S. Department of Energy ಪ್ರಕಟಿಸಿದ ಮಾಹಿತಿಯ ಪ್ರಕಾರ, ಸುಮಾರು 15,000ಕ್ಕೂ ಹೆಚ್ಚು EV ಮತ್ತು Plug-in Hybrid ವಾಹನಗಳ ಅಧ್ಯಯನದಲ್ಲಿ, 2015ರ ನಂತರ ನಿರ್ಮಾಣವಾದ EVಗಳಲ್ಲಿ ಬ್ಯಾಟರಿ ದೋಷದಿಂದ ಬದಲಾಯಿಸಬೇಕಾದ ಪ್ರಮಾಣ 1% ಕ್ಕಿಂತಲೂ ಕಡಿಮೆ ಎಂದು ಕಂಡುಬಂದಿದೆ. ಹೆಚ್ಚಿನ ಸಂದರ್ಭಗಳಲ್ಲಿ ಅವುಗಳೂ ವಾರಂಟಿಯಲ್ಲಿಯೇ ಬದಲಾಗಿವೆ. Recurrent ಸಂಸ್ಥೆಯು 30,000ಕ್ಕೂ ಹೆಚ್ಚು EVಗಳ ಮಾಹಿತಿಯನ್ನು ವಿಶ್ಲೇಷಿಸಿದ ಮತ್ತೊಂದು ಅಧ್ಯಯನದಲ್ಲಿ, 2022ರ ನಂತರದ EVಗಳಲ್ಲಿ ಬ್ಯಾಟರಿ ಬದಲಾವಣೆ ಪ್ರಮಾಣ ಕೇವಲ 0.3% ಎಂದು ವರದಿಯಾಗಿದೆ. ಬ್ಯಾಟರಿ ರಸಾಯನಶಾಸ್ತ್ರ (chemistry), liquid cooling ಹಾಗೂ Battery Management System (BMS) ಗಳಲ್ಲಿನ ಸುಧಾರಣೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ.
ಹಾಗಾದರೆ ಬ್ಯಾಟರಿ ಎಷ್ಟು ವರ್ಷ ಇರುತ್ತದೆ? ಯಾವುದೇ ಲಿಥಿಯಂ-ಐಯಾನ್ ಬ್ಯಾಟರಿ ನಿಧಾನವಾಗಿ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಆದರೆ ಅದು ಹಠಾತ್ತನೆ "ಸತ್ತಂತೆ" ಆಗುವುದಿಲ್ಲ. ಅಧ್ಯಯನಗಳು ತೋರಿಸುವಂತೆ, ಹೆಚ್ಚಿನ EVಗಳಲ್ಲಿ ವರ್ಷಕ್ಕೆ ಸರಾಸರಿ 1–2% ರೇಂಜ್ ಕುಸಿತ ಮಾತ್ರ ಕಂಡುಬರುತ್ತದೆ. ಅನೇಕ ವಾಹನಗಳು 2.5 ಲಕ್ಷದಿಂದ 5 ಲಕ್ಷ ಕಿಲೋಮೀಟರ್ ತನಕ ಮೂಲ ಬ್ಯಾಟರಿಯನ್ನೇ ಬಳಸುತ್ತಿವೆ.
ಭಾರತದಲ್ಲಿ ಪರಿಸ್ಥಿತಿ ಹೇಗೆ? ಭಾರತದಲ್ಲಿ EV ಮಾರುಕಟ್ಟೆ ಇನ್ನೂ ಹೊಸದು. ಆದ್ದರಿಂದ 10–15 ವರ್ಷ ಹಳೆಯ EVಗಳ ದೊಡ್ಡ ಪ್ರಮಾಣದ ಮಾಹಿತಿ ಇನ್ನೂ ಲಭ್ಯವಿಲ್ಲ. ಆದರೆ ಭಾರತದಲ್ಲಿ ಮಾರಾಟವಾಗುವ ಬಹುತೇಕ EVಗಳಿಗೆ ತಯಾರಕರು 8 ವರ್ಷ ಅಥವಾ ಸುಮಾರು 1.6 ಲಕ್ಷ ಕಿ.ಮೀ.ವರೆಗೆ ಬ್ಯಾಟರಿ ವಾರಂಟಿ ನೀಡುತ್ತಿದ್ದಾರೆ. ಕೆಲವು ಬ್ರ್ಯಾಂಡ್ಗಳು ಮೊದಲ ಮಾಲೀಕನಿಗೆ ಕಾರಿನ ಜೀವಾವಧಿ (15 ವರ್ಷ) ತನಕ ಬ್ಯಾಟರಿ ವಾರಂಟಿ ನೀಡುತ್ತಿವೆ. ತಯಾರಕರು ಇಂತಹ ವಾರಂಟಿ ನೀಡುತ್ತಿರುವುದೇ ಬ್ಯಾಟರಿಯ ಮೇಲಿನ ವಿಶ್ವಾಸವನ್ನು ತೋರಿಸುತ್ತದೆ.
ಈಗ ಮೊಬೈಲ್ ಬ್ಯಾಟರಿ ಮತ್ತು EV ಬ್ಯಾಟರಿ ಬಗ್ಗೆ ಮಾತಾಡೋಣ. ಮೊಬೈಲ್ ಬ್ಯಾಟರಿ ಮತ್ತು EV ಬ್ಯಾಟರಿ ಒಂದೇ ಅಲ್ಲ. ಎರಡೂ ಬ್ಯಾಟರಿಗಳ ಕಾರ್ಯವೈಖರಿ ಒಂದೇ, ಆದರೆ ಇವೆರಡರ ನಡುವೆ ಮೂಲಭೂತ ವ್ಯತ್ಯಾಸವಿದೆ. ಅದನ್ನು ಅರ್ಥ ಮಾಡಿ ಕೊಳ್ಳುವ ಮೊದಲು charging cycle ಎಂದರೇನು ಎಂಬುದನ್ನು ತಿಳಿದುಕೊಳ್ಳೋಣ. Charging cycle ಎಂದರೆ, ಬ್ಯಾಟರಿಯ ಸಂಪೂರ್ಣ ಸಾಮರ್ಥ್ಯದ 100% ವಿದ್ಯುತ್ ಬಳಸುವುದು ಮತ್ತು ಅದನ್ನು ಮತ್ತೆ ತುಂಬುವುದು. ಇದು ಒಂದೇ ಬಾರಿಯಲ್ಲಿ ಆಗಬಹುದು, ಅಥವಾ ಎರಡು-ಮೂರು ಬಾರಿ ಭಾಗಶಃ ಚಾರ್ಜ್ ಮಾಡಿ ಬಳಸಿದರೂ ಒಟ್ಟಾರೆ 100% ಬಳಕೆಯಾದಾಗ ಒಂದು charging cycle ಪೂರ್ಣವಾದಂತೆ.
ಉದಾಹರಣೆಗೆ, ಇಂದು 100%ರಿಂದ 50% ಬ್ಯಾಟರಿ ಬಳಸಿದರೆ ಅದು ಅರ್ಧ charging cycle. ನಾಳೆ ಮತ್ತೆ 100%ರಿಂದ 50% ಬಳಸಿದರೆ ಇನ್ನೊಂದು ಅರ್ಧ. ಈ ಎರಡೂ ಸೇರಿ ಒಂದು ಪೂರ್ಣ charging cycle ಆಗುತ್ತದೆ. ಸಾಮಾನ್ಯವಾಗಿ ಬ್ಯಾಟರಿಯ ಜೀವಾವಧಿ charging cycle ಮೇಲೆ ಲೆಕ್ಕ ಹಾಕುತ್ತಾರೆ. ಅಂದರೆ ಒಂದು ಬ್ಯಾಟರಿ ಸುಮಾರು 1000 charging cycle ಆದ ನಂತರ ದುರ್ಬಲವಾಗುತ್ತದೆ.
ಈಗ ಮೊಬೈಲ್ ಮತ್ತು EV ಅನ್ನು ಹೋಲಿಸಿ ನೋಡೋಣ. ಹೆಚ್ಚಿನ ಜನರು ತಮ್ಮ ಮೊಬೈಲ್ ಫೋನ್ ಅನ್ನು ಪ್ರತಿದಿನ ಸುಮಾರು ಒಂದು ಪೂರ್ಣ charging cycle ಬಳಸುತ್ತಾರೆ. ಹೆಚ್ಚಿನವರ ಮೊಬೈಲ್ ಬೆಳಿಗ್ಗೆ 100% ಚಾರ್ಜ್ ಆಗಿದ್ದರೆ ರಾತ್ರಿ ಹೊತ್ತಿನಲ್ಲಿ 10% ನಷ್ಟು ಇಳಿದಿರುತ್ತದೆ. ಪ್ರತಿ ದಿನ ಒಂದು charging cycle ಅಂದರೆ ವರ್ಷಕ್ಕೆ 365 charging cycles. ಮೂರು ವರ್ಷಗಳಲ್ಲಿ ಸಾವಿರಕ್ಕೂ ಹೆಚ್ಚು charging cycles ಆಗಿರುತ್ತವೆ. ಆದ್ದರಿಂದ ಕೆಲವು ವರ್ಷಗಳ ನಂತರ ಮೊಬೈಲ್ ಬ್ಯಾಟರಿಯ ಸಾಮರ್ಥ್ಯ ಕಡಿಮೆಯಾಗುವುದು ಸಹಜ.
ಆದರೆ EVಯ ಪರಿಸ್ಥಿತಿ ಸಂಪೂರ್ಣ ಭಿನ್ನ. ಭಾರತದಲ್ಲಿ ಒಂದು ಕಾರು ಸರಾಸರಿ ದಿನಕ್ಕೆ ಸುಮಾರು 30 ಕಿ.ಮೀ. ಮಾತ್ರ ಸಂಚರಿಸುತ್ತದೆ. 400 ಕಿ.ಮೀ. ರೇಂಜ್ ಇರುವ EVಗೆ ಆ ಬಳಕೆಯಲ್ಲಿ ಸುಮಾರು 10–13 ದಿನಗಳಿಗೊಮ್ಮೆ ಮಾತ್ರ ಒಂದು ಪೂರ್ಣ charging cycle ಆಗುತ್ತದೆ. ಅಂದರೆ ವರ್ಷಕ್ಕೆ ಕೇವಲ 30–40 charging cycles. ಸರಳವಾಗಿ ಹೇಳುವುದಾದರೆ, ಒಂದು ವರ್ಷದಲ್ಲಿ ಮೊಬೈಲ್ ಬ್ಯಾಟರಿ ಅನುಭವಿಸುವಷ್ಟು charging cycles ಅನ್ನು, ಒಂದು ಸಾಮಾನ್ಯ EV ಸುಮಾರು ಹತ್ತು ವರ್ಷಗಳಾದರೂ ಅನುಭವಿಸುವುದಿಲ್ಲ. ಹತ್ತು ವರ್ಷಗಳ ನಂತರ EV ಬ್ಯಾಟರಿ ಅನುಭವಿಸುವುದು ಕಾಲಾವಧಿಯ ಮುಪ್ಪು (calendar ageing).
ಮೊಬೈಲ್ ಬ್ಯಾಟರಿ ಮತ್ತು EV ಬ್ಯಾಟರಿಯ ಇನ್ನೊಂದು ಪ್ರಮುಖ ವ್ಯತ್ಯಾಸವೆಂದರೆ ತಂಪುಗೊಳಿಸುವ ವ್ಯವಸ್ಥೆ. ಹೆಚ್ಚಿನ ಮೊಬೈಲ್ ಫೋನ್ಗಳಲ್ಲಿ ಲಿಕ್ವಿಡ್ ಕೂಲಿಂಗ್ ಇರುವುದಿಲ್ಲ. ಗ್ರಾಫೈಟ್ ಶೀಟ್, ಕಾಪರ್ ಫಾಯಿಲ್ ಅಥವಾ ಕೆಲವು ದುಬಾರಿ ಫೋನ್ಗಳಲ್ಲಿ ವೇಪರ್ ಚೇಂಬರ್ (vapor chamber) ಮೂಲಕವೇ ಶಾಖವನ್ನು ಹೊರಹಾಕಲಾಗುತ್ತದೆ. ಏಕೆಂದರೆ ಮೊಬೈಲ್ ಬ್ಯಾಟರಿ ಚಿಕ್ಕದಾಗಿದ್ದು, ಉತ್ಪತ್ತಿಯಾಗುವ ಶಾಖವೂ ಕಡಿಮೆ.
ಆದರೆ EV ಬ್ಯಾಟರಿ ಸಾವಿರಾರು ಪಟ್ಟು ಹೆಚ್ಚಿನ ಶಕ್ತಿಯನ್ನು ಸಂಗ್ರಹಿಸುತ್ತದೆ. ವೇಗವಾಗಿ ಚಾರ್ಜ್ ಮಾಡುವಾಗ ಅಥವಾ ವಾಹನ ಹೆಚ್ಚು ಶಕ್ತಿ ಬಳಸುವಾಗ ಬ್ಯಾಟರಿ ಹೆಚ್ಚು ಬಿಸಿಯಾಗುತ್ತದೆ. ಇದೇ ಕಾರಣಕ್ಕೆ ಹೆಚ್ಚಿನ ಆಧುನಿಕ EVಗಳಲ್ಲಿ ಲಿಕ್ವಿಡ್ ಕೂಲಿಂಗ್ ಮತ್ತು ಹೀಟಿಂಗ್ ವ್ಯವಸ್ಥೆ ಇರುತ್ತದೆ. ಬ್ಯಾಟರಿಯ ಪ್ರತಿಯೊಂದು ಸೆಲ್ ಅನ್ನು ಸೂಕ್ತ ತಾಪಮಾನದಲ್ಲಿ ಇಡುವುದರಿಂದ ಅದರ ಕಾರ್ಯಕ್ಷಮತೆ, ಸುರಕ್ಷತೆ ಮತ್ತು ಬಾಳಿಕೆ ಗಮನಾರ್ಹವಾಗಿ ಹೆಚ್ಚುತ್ತದೆ.
ಬ್ಯಾಟರಿ ಹೆಚ್ಚು ಕಾಲ ಬಾಳಲು ಏನು ಮಾಡಬೇಕು?
ಸಾಧ್ಯವಾದಷ್ಟು ಮನೆ ಅಥವಾ AC charging ಬಳಸುವುದು.
ತುಂಬಾ ಬಿಸಿ ವಾತಾವರಣದಲ್ಲಿ 100% charge ಮಾಡಿ ದೀರ್ಘಕಾಲ ನಿಲ್ಲಿಸದಿರುವುದು.
ಅಗತ್ಯವಿದ್ದಾಗ ಮಾತ್ರ ಅತಿವೇಗದ DC fast charging ಬಳಸುವುದು.
Battery Management System ನೀಡುವ ಸಲಹೆಗಳನ್ನು ಪಾಲಿಸುವುದು.
ಒಂದು ತಪ್ಪು ಕಲ್ಪನೆ
ಬಹಳ ಜನರು "ಬ್ಯಾಟರಿ ಬದಲಿಸಬೇಕಾದರೆ ₹8–10 ಲಕ್ಷ ಖರ್ಚು" ಎಂಬ ಸುದ್ದಿಯನ್ನು ಮಾತ್ರ ನೆನಪಿಡುತ್ತಾರೆ. ಆದರೆ ವಾಸ್ತವದಲ್ಲಿ ಪ್ರಶ್ನೆ ಅದು ಅಲ್ಲ. ಪ್ರಶ್ನೆ ಎಂದರೆ — ಅಷ್ಟು ದೊಡ್ಡ ಖರ್ಚು ಬರುವ ಸಾಧ್ಯತೆ ಎಷ್ಟು? ಇಲ್ಲಿಯವರೆಗೆ ಲಭ್ಯವಿರುವ ಜಾಗತಿಕ ಅಂಕಿ-ಅಂಶಗಳು ಹೇಳುವುದು, ಆ ಸಾಧ್ಯತೆ ಜನರು ಊಹಿಸುವುದಕ್ಕಿಂತ ಬಹಳ ಅಂದರೆ ಬಹಳ ಕಡಿಮೆ. ಅಧುನಿಕ ವಾಹನಗಳ ಬ್ಯಾಟರಿ ಇನ್ನಷ್ಟು ಉತ್ತಮಗೊಂಡಿದೆ. ಆದ್ದರಿಂದ ಬ್ಯಾಟರಿ ಬದಲಾವಣೆ ಕಾರುಗಳಲ್ಲಿ ಬೇಕೇ ಇಲ್ಲ ಎನ್ನುವಷ್ಟು ವಿರಳವಾಗಲಿವೆ. ಕೆಲವು ಮೊದಲ ಜನರೇಶನ್ tata nexon, tiago ಗಾಡಿಗಳಲ್ಲಿ ಬ್ಯಾಟರಿ ಸಮಸ್ಯೆ ಹೆಚ್ಚಿನ ಸಂಖ್ಯೆಯಲ್ಲಿ ರಿಪೋರ್ಟ್ ಆಗಿವೆ. ಹೊಸ ಕಾರು, ಸ್ಕೂಟರ್ ಗಳಲ್ಲಿ ಬ್ಯಾಟರಿ ಬಾಳಿಕೆ ಇನ್ನಷ್ಟು ಉತ್ತಮಗೊಂಡಿವೆ.
ನಿಮ್ಮ EV ಅನುಭವ, ಬ್ಯಾಟರಿ replacement ಇದ್ದಲ್ಲಿ ಕಾಮೆಂಟ್ ಸೆಕ್ಷನ್ ನಲ್ಲಿ ಹಂಚಿ, ಕಾಮೆಂಟ್ ಗಳು ಸಭ್ಯತೆಯಿಂದ ಇರಲಿ!
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!