ಈ ಹಬ್ಬ ಹರಿದಿನಗಳು ಬಂತೆಂದರೆ, ಮೊಬೈಲ್ ಗಳಲ್ಲಿ ಎಸ್ಸೆಮ್ಮೆಸ್ ಗಳು ಮಿಂಚಿನಂತೆ ಸುಳಿದಾಡುವುದುಂಟು. ಸಾಮಾನ್ಯವಾಗಿ ಎಲ್ಲರೂ ಇಂಗ್ಲಿಶ್ನಲ್ಲೇ ಎಸ್ಸೆಮ್ಮೆಸ್ ಕಳಿಸ್ತಾರೆ. ಇಂಗ್ಲಿಶ್ ಬರ್ದೆ ಇರೋರು ಕೂಡ. ಆದ್ರೆ, ಕನ್ನಡ ರಾಜ್ಯೋತ್ಸವದ ದಿನಾನೂ, ಕನ್ನಡ ರಾಜ್ಯೋತ್ಸವದ ಸಂದೇಶಾನೂ ಇಂಗ್ಲಿಶ್ನಲ್ಲಿ ಕಳಿಸೋದೇ!

ನನಗೆ ನಿನ್ನೆ ಮತ್ತು ಈವತ್ತು ಬಂದ ಎಸ್ಸೆಮ್ಮೆಸ್ ಒಂದನ್ನು ಇಲ್ಲಿ ಕೊಡ್ತಿದ್ದೇನೆ. ನನಗೆ ಗೊತ್ತಿರೋ ಹಾಗೆ, ಇದೇ ಅತಿ ಹೆಚ್ಚು ಹರಿದಾಡುವ ಎಸ್ಸೆಮ್ಮೆಸ್. ಯಾಕೆಂದರೆ, ಕಳೆದ ವರ್ಶವೂ ನನಗೆ ಇದೇ ಎಸ್ಸೆಮ್ಮೆಸ್ ಬಂದಿತ್ತು. ನಿನ್ನೆಯಿಂದ ನಾಲ್ಕೈದು ಬಾರಿ ಬಂದಿದೆ. ನನ್ನ ಹಾಗೆ ಬಹಳಶ್ಟು ಜನಕ್ಕೆ ಇದೇ ಎಸ್ಸೆಮ್ಮೆಸ್ ಹೋಗಿರಬಹುದು.

"Kannada" means

K - kalitavarige
A - amrutha
N - nenedavarige
N - neralu
A - andharige
D - daarideepa
A - appiko niinu Kannadiga

Happy Kannada Rajyotsava!

ಅಂತಾನೇ ನಾಲ್ಕೈದು ಎಸ್ಸೆಮ್ಮೆಸ್ ಗಳು ಬಂದ್ವು. ಈ ಸಂದೇಶಕ್ಕೆ ಸಾಮಾನ್ಯವಾಗಿ ಎಲ್ರೂ Thank you. Same to you ಅಂತಾನೋ, Thank you. Wish you the same ಅಂತ ಪ್ರತಿಕ್ರಿಯೆ ನೀಡಿರ್ತಾರೆ.

ನಿಜ ಬಹಳಶ್ಟು ಮೊಬೈಲ್ ಗಳಲ್ಲಿ ಕನ್ನಡ ಲಿಪಿಯನ್ನ ಬಳಸೋದಕ್ಕಾಗೊಲ್ಲ. ಆದ್ರೆ, ಕನ್ನಡ ಭಾಶೆಯನ್ನ ಬಳಸ್ಬೋದಲ್ವ? ಕನ್ನಡ ಸಂದೇಶಗಳನ್ನು ನೋಡಿದಾಗ ಆಗೋ ಖುಶಿ ಬೇರೆ ಭಾಶೆಯ ಸಂದೇಶಗಳನ್ನ ನೋಡಿದಾಗ ಆಗುತ್ತಾ? ಅದೃಶ್ಟಕ್ಕೆ ನನ್ನ ಗೆಳೆಯರೊಬ್ಬರು ಕನ್ನಡ ಲಿಪಿಯಲ್ಲೇ ಬರೆದ ಸಂದೇಶವೊಂದನ್ನ ಕಳಿಸಿದ್ದರು. ನನ್ನ ಮೊಬೈಲ್ ನಲ್ಲಿ ಆ ಸೌಕರ್ಯವಿಲ್ಲ. ಎಲ್ಲ ಮೊಬೈಲ್ ಗಳಲ್ಲಿ ಕನ್ನಡ ಲಿಪಿಯನ್ನೇ ಟೈಪ್ ಮಾಡೋ ಹಾಗೆ ಮಾಡ್ಬೇಕು. ನಮ್ಮ ಮೊಬೈಲ್ ಗಳಲ್ಲೂ ಕನ್ನಡ ಹರಿದಾಡ್ಬೇಕು ಅನ್ನೋದೇ ನನ್ನ ಆಸೆ.

ಅಂದ ಹಾಗೆ, ನಿಮಗೆಲ್ಲ ಯಾವಯಾವ ತರದ ಎಸ್ಸೆಮ್ಮೆಸ್ ಗಳು ಬಂದಿದ್ವು?