ಇದು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆ - ಬೆಲೆ ನಲವತ್ತೇ ರೂಪಾಯಿ.
ನಾನು ಈ ಪುಸ್ತಕದ ಹೆಸರನ್ನು ನೋಡಿ ಕನ್ನಡ ಭಾಷೆಯ ಹುಟ್ಟಿದ ಬಗೆ ಇರಬೇಕೆಂದುಕೊಂಡೆ. ಆದರೆ ಅದು ಹಾಗಲ್ಲ ಎಂದು ಓದುತ್ತಿದ್ದಂತೆ ತಿಳಿಯಿತು. ಇಲ್ಲಿ ಹುಟ್ಟು ಎಂದರೆ ಜೇನುಹುಟ್ಟು. ಇರಲಿ. ಈ ಪುಸ್ತಕದ ಬಗ್ಗೆ ತಿಳಿಸಬೇಕಾದರೆ ಅಲ್ಲಿಂದಲೇ ಎತ್ತಿಕೊಂಡ ಕೆಲವಿಚಾರಗಳನ್ನು ಇಲ್ಲಿ ಕೊಡುತ್ತಿದ್ದೇನೆ.
"ನಮ್ಮ ಶಬ್ದ ಸಂಗ್ರಹವು ಎಷ್ಟೋ ಅಷ್ಟೇ ನಮ್ಮ ಮನಸ್ಸಿನ ಆಳವೂ ಇರುವುದು. ವಿವಿಧವೂ ಸೂಕ್ಷ್ಮವೂ ಕೋಮಲವೂ ಆದ ವಿಚಾರ ಮತ್ತು ಭಾವನೆಗಳು ಬಂದ ಹಾಗೆಲ್ಲ ಅದನ್ನು ನಿರ್ದೇಶಿಸುವ ಮಾತುಗಳೂ ಹೊಳೆಯಲೇಬೇಕು. ಆದುದರಿಂದ ಭಾವನೆ ಮತ್ತು ವಿಚಾರಗಳ ಆಳವು ಹೆಚ್ಚಾಗಬೇಕೆಂದು ಬಯಸುವವರೆಲ್ಲರೂ ತಮ್ಮ ಅಂತರಂಗವನ್ನು ನುಡಿಯ ಹುಟ್ಟನ್ನಾಗಿ ಮಾರ್ಪಡಿಸಿಕೊಳ್ಳಬೆಕು.
ಕನ್ನಡವೆಂದರೆ ನಮ್ಮ ಪಂಚಪ್ರಾಣ ಎಂದು ಹೆಮ್ಮೆಯಿಂದ ಪ್ರತಿಯೊಬ್ಬರೂ ಆಡಿಕೊಳ್ಳುವ ಆ ಕನ್ನಡ ಎಂದರೆ ಏನು ಎಂಬುದರ ಅರಿವು ನಮಗೆ ಇರಬೇಕಲ್ಲವೆ?
( ಕಂನಡ ವೆಂಬುದು ದೇಶವಾಚಕ , ಕಂನುಡಿ ನಮ್ಮ ನುಡಿ)
ಕಂನುಡಿಯಲ್ಲಿ ಪಂಪನ ಕಾಲದಲ್ಲಿದ್ದ ಜೀವಶಕ್ತಿಯ ಸೊಗಸು ಮುಂದೆ ಕಡಿಮೆಯಾಗುತ್ತ ಹೋದುದು ಕಂಡು ಬರುತ್ತದೆ . ಅದರಲ್ಲಿ ಮತ್ತೆ ಹೊಸಸವಿಯುಂಟಾಗಲು ಕಂನುಡಿಯ ಹುಟ್ಟನ್ನು ಅರಿತು ಅದನ್ನು ಜೋಕೆಯಿಂದ ಕಾಪಾಡಬೇಕು.
ನಾಡಿಗೊಂದು ನುಡಿಜೇನು ಇರುವದುಂಟು. ನಾಡಿಗರೆಂಬ ತುಂಬಿಗಳು ಆ ಜೇನುಹುಟ್ಟು ಬರಿದಾಗದಂತೆ ಅದನ್ನು ತುಂಬುವ ಕೆಲಸವನ್ನು ತಮಗರಿವಿಲ್ಲದೆಯೆ ಎಡೆಬಿಡದೆ ನಡೆಸಿರುತ್ತವೆ. ಇನ್ನೂ ಹೆಚ್ಚು ಚೊಕ್ಕವಾಗುವಂತೆ ಹಲವು ಹಂಚಿಕೆ ಹವಣಿಕೆಗಳಿಂದ ತಿಳಿದವರು ಈ ಕೆಲಸವನ್ನು ಮುಂದುವರಿಸಿರುತ್ತಾರೆ.
ನಮ್ಮ ಮನೆಯಲ್ಲಿ ನಮ್ಮ ಮಾತೇ ನಡೆಯಬೇಕಷ್ಟೇ. ಹೆರವರ ಮಾತು ನಡೆದರೆ ಅದು ನಮ್ಮ ದಾಸ್ಯದ ಲಕ್ಷಣ . ಆದುದರಿಂದ ಕಂನುಡಿಯು ಪರಭಾಷೆಗಳ ಬಂಧನದಲ್ಲಿ ಸಿಲುಕದಂತೆ ಪ್ರತಿಯೊಬ್ಬರೂ ಎಚ್ಚರವಾಗಿರುವದು ನಮ್ಮ ಕರ್ತವ್ಯವಾಗಿರುತ್ತದೆ. ಆದರೆ ಕಂನುಡಿಯ ಒಣಹೆಮ್ಮೆ ಯಾತಕ್ಕೂ ಬಾರದು. ಇದರ ಹೆಚ್ಚಳವನ್ನು ಹಾರೈಸುವವರೆಲ್ಲರೂ ಈ ನುಡಿಯ ತಿರುಳನ್ನು ಅರಿತುಕೊಳ್ಳಬೇಕು. ಮತ್ತು ಕೈನಡೆವವರೆಗೂ ಅಚ್ಚಕೆಚ್ಚಿನ ಕಂನುಡಿಯಲ್ಲಿಯೇ ಬರೆಯಬೇಕು, ಮಾತಾಡಬೇಕು ಎಂಬ ಜಿಗುಟುಳ್ಳವರಾಗಬೇಕು. "
ಇವಿಷ್ಟೂ ಮುನ್ನುಡಿಯ ಬಾಗಗಳು.
....
ಕನ್ನಡನುಡಿಯ ಮೂಲಪದಗಳು , ಪ್ರತ್ಯಯಗಳು , ಪಡೆನುಡಿಗಳು ಇತ್ಯಾದಿ ಹಲವು ಹತ್ತು ಮುಖಗಳನ್ನು ಇಲ್ಲಿ ಚರ್ಚಿಸಿದ್ದಾರೆ . ಕಂನುಡಿಯ ಒಳಗಂಪನ್ನೂ ತೋರಿಸಿದ್ದಾರೆ . ಪ್ರತಿಯೊಬ್ಬರ ವೈಯುಕ್ತಿಕ ಸಂಗ್ರಹದಲ್ಲಿ ಇರಲೇಬೇಕಾದ ಕೃತಿ ಇದು ಎಂದು ಬೆನ್ನುಡಿಯಲ್ಲಿ ಹೇಳಿದ್ದಾರೆ.
....
F Fleet ಎಂಬಾತನು ಹೇಳಿದ್ದು ಇಲ್ಲಿದೆ. "The kannada language... has hardly received froom the European scholars the recognitionand attention which it deserved. It is the most melliflous of all the Indian vernaculars and the richest in capability and force of expression. "
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!