ಅರಿವಿನ ಗುರು, ನಿರಂಜನ ಪ್ರಣವ ಮಂತ್ರದ ಜ್ಞಾನ ದೀವಿಗೆಯನ್ನು ಬೆಳಗಿದ, ಮಾನವ ಕುಲದ ಕಲ್ಯಾಣಕ್ಕಾಗಿ ಶ್ರಮಿಸಿದ, ಆಧ್ಯಾತ್ಮಿಕ ಬೆಳಕನ್ನು ತೋರಿದ, ನಿಜ ಶರಣ ಯೋಗಿ ಅಲ್ಲಮನ ಕುರಿತಾದ ನಾಟಕ. ಬರೋಬ್ಬರಿ ಒಂದು ಗಂಟೆ ಇಪ್ಪತ್ತು ನಿಮಿಷಗಳ ಅವಧಿಯ ಕತೆ.
ಅಲ್ಲಮನ ಹುಟ್ಟಿನೊಂದಿಗೆ ನಾಟಕದ ಆರಂಭ. ಬಾಲ್ಯ ಕಳೆದು ಬೆಳೆದಂತೆಲ್ಲ ಅಲ್ಲಮ ಜ್ಞಾನದ ಹಸಿವೆಯನ್ನು ಅರಸಿ ಪರ್ಯಟನೆಗೆ ಹೊರಟು ಬಿಡುತ್ತಾನೆ. ದೈವತ್ವದ ಸಾಕ್ಷಾತ್ಕಾರ ಮಾಡಿಕೊಳ್ಳುವ ಉತ್ಕಟೇಚ್ಛೆ ಅವನದು.
ಹಾಗೇ ಹೊರಟು ಕದಂಬರ ರಾಜಧಾನಿ ಬನವಾಸಿಗೆ ಮಧುಕೇಶ್ವರ ದೇವಸ್ಥಾನಕ್ಕೆ ಆಗಮಿಸುತ್ತಾನೆ. ಅಲ್ಲಿ ಮಾಯೆಯನ್ನು ಸಂಧಿಸುತ್ತಾನೆ.
ಅವಳೋ ಮಹಾ ಸುಂದರಿ. ಹದಿಹರೆಯದ ಬೆಡಗಿ. ನಾಟ್ಯ ಮಯೂರಿ. ಕದಂಬ ರಾಜನ ಏಕೈಕ ಪುತ್ರಿ. ದೇವಸ್ಥಾನಕ್ಕೆ ಮಧುಕೇಶ್ವರನಿಗೆ ತನ್ನ ನೃತ್ಯದಿಂದ ಪೂಜಾ ಸೇವೆಗೈಯಲು ಬಂದಿರುತ್ತಾಳೆ. ಅಲ್ಲಿ ಅಲ್ಲಮನಿಗೆ ಅವನ ಮೃದಂಗ -ಮದ್ದಳೆಯಿಂದ ತನ್ನನ್ನು ನಾಟ್ಯದಲ್ಲಿ ಸೋಲಿಸಲು ಸವಾಲು ಒಡ್ಡುತ್ತಾಳೆ.
ಮಾಯೆಯ ನೃತ್ಯ , ಅಲ್ಲಮನ ಮದ್ದಳೆಯ ಸ್ಪರ್ಧೆ ಶುರುವಾಗುತ್ತದೆ . ದೀರ್ಘಾವಧಿಯವರೆಗೆ ಸಾಗಿದ ತಾಳ-ಮೇಳದಲ್ಲಿ ಅಲ್ಲಮನ ಕಲಾ ಚತುರತೆಗೆ, ನೈಪುಣ್ಯತೆಗೆ ಮಾಯಾದೇವಿ ತನ್ನನ್ನು ತಾನು ಸಮೀಕರಿಸಿಕೊಳ್ಳಲಾಗದೆ ಅವನಿಗೇ ಮನ ಸೋತು ಬಿಡುತ್ತಾಳೆ. ತನ್ನ ಮನದ ಇಚ್ಛೆಯನ್ನು ಅಲ್ಲಮನ ಮುಂದೆ ಅರುಹಿ, ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಾಳೆ.
ಅಲ್ಲಮನೋ ಶುದ್ಧ ಬೈರಾಗಿ. ದೈವವನ್ನು ಅರಸಿ ಹೊರಟು ನಿಂತವನು.
"ನಾನು ನಿನ್ನನ್ನು ಪ್ರೇಮಿಸುತ್ತೇನೆ, ನನ್ನನ್ನು ವರಿಸು" ಎನ್ನುತ್ತಾಳೆ.
"ನಾನೂ ಪ್ರೇಮಿಸುತ್ತೇನೆ... ಎಲ್ಲರನ್ನೂ, ಎಲ್ಲವನ್ನೂ ..."ಎನ್ನುತ್ತಾನೆ.
"...ಆದರೆ ನನ್ನ ಪ್ರೇಮ ದೈವತ್ವದ ಕಡೆಗೆ ನೀನು ಮಾಯೆ, ಭೋಗಿ ನೀನು. ಯೋಗಿ ನಾನು. ನಿನ್ನದು ಕ್ಷಣಿಕ ಸುಖದ ಪ್ರಣಯ. ನನ್ನದೋ ಪರಿಶುದ್ಧ ದೈವ ಪ್ರೇಮ. ಸಂಸಾರ ಬಂಧನದ ಆಸೆ ನನಗಿಲ್ಲ" ವೈರಾಗ್ಯದ ನುಡಿಗಳು ಅವನವು.
"ನಾನು ಈ ರಾಜ್ಯದ ರಾಜಕುಮಾರಿ. ನನ್ನ ಆಜ್ಞೆಯನ್ನು ಮೀರುತ್ತೀಯಾ " ಗರ್ವದಿಂದ ನುಡಿಯುತ್ತಾಳೆ. ಅವನದು ಮುಗುಳುನಗೆ.
"ಗುರು ಆಜ್ಞೆಯ ಮುಂದೆ ರಾಜಾಜ್ಞೆ ದೊಡ್ಡದಲ್ಲ. ವಿರಾಗಿಗೆ ಯಾವ ಕಟ್ಟುಪಾಡುಗಳು ಬಾಧಿಸುವುದಿಲ್ಲ " ದೃಢವಾಗಿ ಅರುಹುತ್ತಾನೆ.
"ನೀನು ಮಾಯೆಯೊಳಗೋ ಮಾಯೆ ನಿನ್ನೊಳಗೋ ನೀನೇ ತಿಳಿದುಕೋ. 'ನಾನು' ಎನ್ನುವುದು ಬಿಟ್ಟು 'ನೀನು' ಎನ್ನುವುದಕ್ಕೆ ಓಗೊಡು. ದೈವ ಸಾಕ್ಷಾತ್ಕಾರ ಪಡೆಯುತ್ತೀಯಾ". ಎಂದು ಅರಿವಿನ ಜ್ಞಾನವನ್ನು ಬೋಧಿಸಿ ಅಲ್ಲಿಂದ ಹೊರಟು ಬಿಡುತ್ತಾನೆ.
ಮಾಯಾದೇವಿಗೆ ಭೋಗ ಜೀವನದ, ಕ್ಷಣಿಕ ಸುಖದ, ಪ್ರಣಯ-ಪ್ರೇಮದ ಕತ್ತಲೆಯಿಂದ, ದೈವತ್ವದ ಸಾಕ್ಷಾತ್ಕಾರ ತೋರಿದ ಅನುಭಾವಿ.
ಅಲೆಮಾರಿಯ ಜೀವನದಲ್ಲಿ ಇದು ಒಂದು ಭಾಗವಾದರೆ, ಮುಂದಿನ ಅರ್ಧಭಾಗದ ನಾಟಕದಲ್ಲಿ ಕಲ್ಯಾಣ ಕ್ರಾಂತಿಯ ಹರಿಕಾರ ಬಸವಣ್ಣನಿರುವಲ್ಲಿಗೆ ತೆರಳಿ, ಸಕಲ ಶರಣ ಗಣಂಗಳು ನೆಲೆ ನಿಂತ, ಅನುಭಾವದ ಅನುಭವ ಮಂಟಪದ ಶೂನ್ಯ ಸಿಂಹಾಸನ ಅಲಂಕರಿಸಿದ ಮಹಾಯೋಗಿ. ಶಿವಯೋಗಿ ಸಿದ್ಧರಾಮನ ಅಹಂಕಾರದ ಬೆಂಕಿ ನಂದಿಸಿದ ಜ್ಞಾನಿ. ಬಸವಣ್ಣ, ಚೆನ್ನಬಸವಣ್ಣ, ಮಾಚಿದೇವ, ಅಪ್ಪಣ್ಣ, ಕಕ್ಕಯ್ಯ ಅಂಬಿಗರ ಚೌಡಯ್ಯ, ಅಕ್ಕ ಮಹಾದೇವಿ ಮುಂತಾದ ಸಕಲ ಶರಣ ಗಣಂಗಳ ಜೊತೆ ಸೇರಿ ಕಲ್ಯಾಣದ ಜ್ಞಾನ ದೀವಿಗೆಯನ್ನು ಬೆಳಗಿದ ಮಹಾನ್ ಸಂತ.
ಇಂತಹ ಒಂದು ಅದ್ಭುತವಾದ ನಾಟಕವನ್ನು "ಕೇಳುವ" ಸುಯೋಗ ಒದಗಿ ಬಂದದ್ದು ಶಿವರಾತ್ರಿಯ ದಿನದಂದು ರಾತ್ರಿ ೯-೩೦ ಗಂಟೆಗೆ. ಅದೂ ಆಕಾಶ ವಾಣಿ ಕಲಬುರ್ಗಿ ಕೇಂದ್ರದಿಂದ ೨೬-೦೨-೨೦೨೫ರಂದು ಪ್ರಸಾರವಾದ ನಾಟಕ ಇದು. ಸಿ.ಅಶ್ವತ್ಥ, ಎಸ್ ಜಾನಕಿ, ಎಚ್ ಕೆ ನಾಗನೂರು ಇನ್ನಿತರರ ಶ್ರಾವ್ಯವಾದ ಹಾಡುಗಳು - ಗಾಯನವನ್ನು ಹಿನ್ನೆಲೆಯಲ್ಲಿ ಸಂದರ್ಭೋಚಿತವಾಗಿ ಬಳಸಿಕೊಂಡದ್ದು ನಿರ್ದೇಶಕನ ಜಾಣ್ಮೆಯನ್ನು ಪ್ರತಿಬಿಂಬಿಸುತ್ತದೆ. ಇಷ್ಟಕ್ಕೂ ಈ ನಾಟಕವನ್ನು ಬಾನುಲಿಗಾಗಿ ನಿರ್ದೇಶಿಸಿದ್ದು ನಮ್ಮ ಇಳಕಲ್ಲಿನ ನಾಟ್ಯ ಕಲಾ ಶಾಲೆಯ ಹವ್ಯಾಸಿ ರಂಗಕರ್ಮಿ, ರಾಜ್ಯ ಪ್ರಶಸ್ತಿ ವಿಜೇತ ಶ್ರೀಯುತ ಮಹಾಂತೇಶ ಗಜೇಂದ್ರಗಡ ಇವರು. ಆಧ್ಯಾತ್ಮಿಕತೆಯ ರಸ ಸ್ವಾದವನ್ನು ತುಂಬಾ ಸುಂದರವಾಗಿ ಕಟ್ಟಿಕೊಟ್ವ ಶ್ರೀಯುತ ಮಹಾಂತೇಶ ಗಜೇಂದ್ರಗಡ ಅವರಿಗೆ, ಇಳಕಲ್ಲಿನ ನಾಟ್ಯ ಕಲಾ ಶಾಲೆಯ ಎಲ್ಲಾ ಕಲಾವಿದರಿಗೆ ಅನಂತ ಅಭಿನಂದನೆಗಳು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!