ಹಿಂದೆಲ್ಲ ದೊಡ್ಡ ಕುಟುಂಬವಿರುತ್ತಿತ್ತು. ಆ ಕುಟುಂಬದಲ್ಲಿ ಅಣ್ಣ ತಮ್ಮಂದಿರ ಮಕ್ಕಳು. ಆ ಮಕ್ಕಳ ಗಲಾಟೆ ಮನೇಲಿ ಗಲಗಲವಿರುತಿತ್ತು. ಆಗಿನ ಕಾಲದಲ್ಲಿ ಒಂದು ಮನೆಯಲ್ಲಿ ಎರಡಕ್ಕಿಂತ ಜಾಸ್ತಿಯೇ ಮಕ್ಕಳಿರುತ್ತಿದ್ದರು. ಬರಬರುತ್ತ (ಕಾಲಕ್ರಮೇಣ) ಒಂದು ಅಥವ ಎರಡಕ್ಕೆ ನಿಂತಿತು. ಒಂದು ಮನೆಯ ಮಕ್ಕಳು ಅವರವರೇ ಆಡಿಕೊಳ್ಳುತ್ತಿದ್ದರು. ಬೇರೆಯವರ ಜೊತೆಬೇಕು ಎನ್ನುವುದಕ್ಕಿಂತ ಅವರವರ ಮನೆಯಲ್ಲೇ ಹೆಚ್ಚಾಗಿ ಅಣ್ಣ ತಮ್ಮ ಅಕ್ಕ ತಂಗಿಯರ ಜೊತೆ ಕಾಲಕಳೆದು, ಆಟವಾಡಿ ಸಮಯ ಕಳೆಯುತ್ತಿದ್ದರು. ಆ ಮಕ್ಕಳಿಗೆ ಸಮಯ ಹೇಗೆ ಹೋಗುತ್ತದೆಂಬ ಅರಿವೇ ಇರಲಿಲ್ಲವೇನೋ?? ಅದರಲ್ಲೂ ಹಳ್ಳಿಯೆಂದರೆ ಮುಗಿದೇಹೋಯಿತು. ಏಕೆಂದರೆ ಕೆರೆಯ ನೀರಿನಲ್ಲಿ, ಹೊಲಗದ್ದೆಗಳಲ್ಲಿ, ಜಾತ್ರೆಯಲ್ಲಿ, ರಾಮೋತ್ಸವದಲ್ಲಿ- ಹೀಗೆ ಅದು ಇದು ಅಂತ ಮಕ್ಕಳು ಹಿಗ್ಗುತ್ತಿದ್ದುದುಂಟು. ಆಗಿನ ಮಕ್ಕಳಿಗೆ ಆಟಿಕೆಗಳ ಬಗ್ಗೆ ಗೊತ್ತೇ ಇರಲಿಲ್ಲ. ಆದರೆ ಈಗಿನ ಪರಿಸ್ಥಿತಿ. ಈಗೆಲ್ಲ ಒಂದು ಅಥವಾ ಎರಡು (ನಾನು ನೋಡಿರುವ ಹಾಗೆ ಒಂದೇ) ಮಕ್ಕಳೇ ಸಾಕು. ಇರಲಿ ಜನಸಂಖ್ಯೆಯ ಪರಿಣಾಮ ಅಂತ ಅಂದುಕೊಂಡ್ರು, ಆ ಒಂಟಿ ಮಗುವಿನ ಪಾಡೇನು??
ಒಂಟಿ ಮಗು ಎಲ್ಲಿ ಆಡುವುದು??
೧. ಮಕ್ಕಳು ಎಲ್ಲಿ ಆಡಬೇಕು? ಮೈದಾನದಲ್ಲಿ. ಆದರೆ ಈಗಿನ ಮಹಾನಗರಿ, ಸಿಲಿಕಾನ ಸಿಟಿ ಬೆಂಗಳೂರಿನಲ್ಲಿ ಕೆರೆ ಮುಚ್ಚಿ ಮನೆ, ಮರಗಳನ್ನು ಕಡಿದು ಸೈಟು, ಹೀಗೆ ಇರುವಾಗ ಮಕ್ಕಳಿಗೆ ಆಟದ ಮೈದಾನವೇ ಇಲ್ಲ. ಅದರಲ್ಲೂ ಸ್ವಲ್ಪ ಬೆಂಗಳೂರಿನ ಆಚೆ ಹೋದರೆ ಅಲ್ಲಲ್ಲಿ ಮೈದಾನಗಳು ಕಾಣಸಿಗುವುದು. ಆಟದ ಮೈದಾನವು ಇಲ್ವೇ ಇಲ್ಲ ಅಂತ ಅಲ್ಲ. ಇದೆ. ಆದರೆ ದೂರದಲ್ಲಿ ಇರುತ್ತದೆ. ಅಲ್ಲಿ ಕಳುಹಿಸಲು ತಂದೆತಾಯಿ ಒಪ್ಪುವುದಿಲ್ಲ. ಮೈದಾನವೇ ಇಲ್ಲದ ಕಾರಣ, ಮಕ್ಕಳು ರಸ್ತೆಯಲ್ಲೇ ಆಡುತ್ತಾರೆ. ರಸ್ತೆಯಲ್ಲಿ ಆಡಿದರೆ ವಾಹನಗಳ ಕಾಟ. ಯಾವಾಗ ಯಾವ ವಾಹನ ವೇಗವಾಗಿ ಬಂದು ಅಪಘಾತವಾಗುವುದೆಂಬ ಭಯದಿಂದ ಮಕ್ಕಳನ್ನು ಆಚೆಗೆ ಬಿಡುವುದಿಲ್ಲ. ಕಡೆಗೆ ಮಕ್ಕಳಿಗೆ ಒಳ್ಳೊಳ್ಳೆಯ ಆಟಿಕೆಗಳನ್ನು ಕೊಡಿಸಿ, ಅದರಲ್ಲೇ ಆಟ ಆಡು ಅಂತ ಹೇಳಿಬಿಡುತ್ತಾರೆ? ಹಾಗೆಯೇ ಈಗ ಕಂಪ್ಯೂಟರ್ ಯುಗವಾದ್ದರಿಂದ, ಮಕ್ಕಳಿಗೆ ಕಂಪ್ಯೂಟರ್ ನಲ್ಲಿ ಆಟವಾಡಲು ಬಿಡುತ್ತಾರೆ. ಶಾಲೆಯಲಿ ಬಿಟ್ಟರೆ ಮಗುವಿಗೆ ಹೊರಗಡೆ ಆಡಲು ಅವಕಾಶವೇ ಇರುವುದಿಲ್ಲ.
೨. ಅಕ್ಕ ಪಕ್ಕದವರ ಜೊತೆ ಆಟವಾಡಬೇಕು? ಈಗಿನ ಪರಿಸ್ಥಿತಿಯಲ್ಲಿ, ಅಪ್ಪ ಅಮ್ಮ ಇಬ್ಬರು ಕೆಲಸದಲ್ಲಿ ಇರುತ್ತಾರೆ. ಆಗ ಮಗುವನ್ನು ಪ್ಲೇಹೋಮ್ ನಲ್ಲಿ ಬಿಡುತ್ತಾರೆ. ನಾನೇ ನೋಡಿರುವ ಹಾಗೆ ಅಪ್ಪ ಅಮ್ಮ ಇಬ್ಬರು ಸಾಫ್ಟ್ ವೇರ ಸಂಸ್ಥೆಯಲ್ಲಿದ್ದರೆ ಅವರಿಬ್ಬರು ಬರುವುದು ಸಂಜೆ ಅಂದರೆ ಏಳ ರ ನಂತರ. ಆಗ ಮಗುವನ್ನು ಕರೆದುಕೊಂಡು ಮನೆಗೆ ಹೋಗ್ತಾರೆ. ಆಗ ಮಗು ಆಟವಾಡುವ ಸಮಯವಲ್ಲ. ಪ್ಲೇಹೋಮ್ ನಲ್ಲಿ ಅವರ ಕಾಂಪೌಂಡ್ ಬಿಟ್ಟು ಬೇರೆಲ್ಲೂ ಕಳುಹಿಸುವುದಿಲ್ಲ, ಜವಾಬ್ದಾರಿಯ ಕಾರಣಕ್ಕಾಗಿ. ಪ್ಲೇಹೋಮ್ ನಲ್ಲಿ ಆಡಿದರು, ಬರೀ ಜಾರಬಂಡೆ, ಆಟಿಕೆಯ ಜೊತೆ, ಅದೇ ಮಕ್ಕಳ ಜೊತೆ ಆಡಬೇಕು. ಪ್ಲೇಹೋಮ್ನಲ್ಲಿ ಬೆಳೆಯುವ ಮಗುವಿಗೆ ಅಕ್ಕ ಪಕ್ಕದವರ ಜೊತೆ ಬೆರೆಯಲು ಅವಕಾಶವೇ ಸಿಗುವುದಿಲ್ಲ.
ಹೀಗೆ ಮುಂದುವರೆದರೆ ಮುಂದೊಂದು ದಿನ ಮಕ್ಕಳು ಹೊರಗಡೆ ಆಟವಾಡುವುದನ್ನೇ ಮರೆತುಬಿಡುತ್ತಾರೇನೋ ಎಂಬ ಭಯವಿದೆ.
ನಿಮ್ಮ ಅನಿಸಿಕೆಗಳನ್ನು ಪ್ರತಿಕ್ರಿಯೆ ಮೂಲಕ ಬರೆಯಿರಿ.
ಪ್ರತಿಕ್ರಿಯೆ (7)