ಬಾರಯ್ಯ ಬಾ! ವಿರೋಧಿ ನಾಮ ಸಂವತ್ಸರವೇ ಬಾ!
ನನ್ನ ಅಹವಾಲಿಗೆ ವಿರೋಧ ಒಡ್ಡದೆ ಒಳಗೆ ಬಾ!
ಅಲ್ಲಯ್ಯ! ಧರ್ಮ ನಾಲ್ಕು ಕಾಲುಗಳಲ್ಲಿ ನಿಂತಿದ್ದ ಕೃತಯುಗದಲ್ಲಿ ಬರದೆ,
ಒಂಟಿಗಾಲಲ್ಲಿ ಕುಂಟುತ್ತಾ ಸಾಗುತ್ತಿರುವ ಕಲಿಯುಗದಲ್ಲಿ ಬಂದೆಯಲ್ಲ
ಕೃಷ್ಣ ಸತ್ತ ನಂತರ!
ಒಂದಿಷ್ಟಾದರೂ ಬುದ್ಧಿ ಬೇಡವೆ ನಿನಗೆ!
ಕೋಪ ಮಾಡಿಕೊಳ್ಳಬೇಡಯ್ಯ
ನಿನ್ನ ಘನತೆಗೆ ತಕ್ಕ ಹಾಗೆ ಸ್ವಾಗತಿಸಲಾಗದ
ನನ್ನ ಅಸಹಾಯಕತೆಗೆ ಹಾಗಂದೆ
ಬೇಸರ ಮಾಡಿಕೊಳ್ಳಬೇಡಯ್ಯ!
ಏನು ಮಾಡಲಿ..ಜಲಮಂಡಳಿ ನೀರನ್ನು ಬಿಟ್ಟು
ವಾರವಾಯ್ತು..ನಾನು ಭಗೀರಥನಾಗಿದ್ದೇನೆ
ಓಲಾಡುವ ಸೀಲಿಂಗ್ ಫ್ಯಾನ್,
ಸಿಂಗಲ್ಲಿ ಫೇಸಲ್ಲಿ ಓಡಲಾರೆ ಎಂದು ಕಿರುಗುಡುತ್ತಿದೆ!
ಇಲ್ಲೇಬಾ! ಕುಳಿತುಕೊ.
ಬೆಂಗಳೂರು ಬೇಯಿಸುವ ಕಾಳೂರಾಗಿದೆ
ಸ್ವಲ್ಪ ದಣಿವಾರಿಸಿಕೋ, ಬೆವರನೊರೆಸಿಕೋ!
ಬಾಗಿಲಿಗೆ ಮಾವಿನೆಲೆಯ ತೋರಣ ಪ್ಲಾಸ್ಟಿಕ್ಕಿನದು
ಅಸಲಿ ಬೇವನ್ನು ತರಲು ಬೇವಿನ ಮರದ ರಸ್ತೆ ತುಂಬಾ ಅಲೆದೆ
ಮನಸ್ಸು ಕಹಿ ಕಹಿಯಾದದ್ದಷ್ಟೇ ಲಾಭ
ನನ್ನವಳು ಪಕ್ಕದ ಮನೆಯಿಂದ
ಒಂದಷ್ಟು ಬೇವಿನ ಎಸಳು, ಹೂವನ್ನು ತಂದಿದ್ದಾಳೆ
ಕಡವಾಗಿ!
ವಿಕ್ರೀತನ ಕೃಪೆಯಿದ್ದರೆ, ಮುಂದಿನ ವರ್ಷ ತೀರಿಸುವೆ!
ನಾನು ಕರ್ನಾಟಕದಲ್ಲಿ ಹುಟ್ಟುವ ಬದಲು,
ಆಂಧ್ರದಲ್ಲಿಯಾದರೂ ಹುಟ್ಟಬೇಕಿತ್ತು!
ನಿನ್ನನ್ನು ಸೊಗಸಾದ ಬೇವಿನ ಪಚಡಿಯೊಂದಿಗೆ ಸ್ವಾಗತಿಸಬಹುದಿತ್ತು!
ಮಾವಿನ ಮಿಡಿಗೆ ಒಂದೆರಡು ಬೇವಿನ ಹೂವು ಸೇರಿಸಿ
ಅದಕ್ಕಷ್ಟು ಬೆಲ್ಲ, ಎಲ್ಲ ಮುಳುಗಿಸುವಷ್ಟು ಹುಣಸೇ ರಸ ಹಸಿಮೆಣಸು,
ರುಚಿಗೆ ತಕ್ಕಷ್ಟು ಉಪ್ಪು ಹಾಕಿ
ರುಚಿ ರುಚಿ ಷಡ್ರಸ ಭಕ್ಷ್ಯ ನೀಡಬಹುದಿತ್ತು.
ಏನು ಮಾಡಲಿ! ಕರ್ನಾಟಕದಲ್ಲಿ ಹುಟ್ಟಿಬಿಟ್ಟೆ!!
ಇಲ್ಲಿ ಬೇವು ಬೆಲ್ಲ ಎರಡೆ.
ಸಪ್ತಜ್ಞಾನಪೀಠಿಗಳ ಬೆಲ್ಲದ ನಾಡಿನಲ್ಲಿ
ಶಾಸ್ತ್ರೀಯಾ ಭಾಷಾ ಕಹಿ.
ಕೂಗಳತೆಯ ದೂರದಲ್ಲಿ ಚುನಾವಣೆ ನೀಡುತ್ತಿರುವ
ಭರವಸೆಗಳ ಬೆಲ್ಲದಲ್ಲಿ ಖಂಡುಗ ಖಂಡುಗ ಕಹಿ!
ಎಲ್ಲವನ್ನು ಕಣ್ಣುಮುಚ್ಚಿಕೊಂಡು ನುಂಗಬೇಕಿದೆ.
ಹಬ್ಬಕ್ಕೆ ಹೋಳಿಗೆ ಮಾಡಿ ಭರ್ಜರೀ ಊಟ
ಹಾಕೋಣ ಎಂದೇ ಇದ್ದೆವು ನಿನಗೆ
ಆದರೇನು ಮಾಡಲಿ!
ನಿನಗೇ ಗೊತ್ತಲ್ಲ ಕಳದೈದು ವರ್ಷಗಳಿಂದ
ನಾನು ಸಿಹಿ ಸಿಹಿ ಮನುಷ್ಯ ಡಯಾಬಿಟಿಸ್
ಈ ವರ್ಷ ನನ್ನವಳಿಗೂ ಕಾಣಿಸಿಕೊಂಡಿದೆ
ಹಾಗಾಗಿ ಕೃತಕ ಸಕ್ಕರೆಯ ಹೋಳಿಗೆ
ಸ್ವಲ್ಪ ಅಡ್ಜಸ್ಟ್ ಮಾಡಿಕೋ,
ವಿರೋಧ ಒಡ್ಡದೆ
ನನ್ನವಳು ಬೇವಿಗೆ ಹಾಕಿದ್ದಾಳೆ ನಿಜವಾದ ಬೆಲ್ಲ
ಮುನಿಯ ಬೇಡ ಕಹಿ ಮರೆಸುವಷ್ಟು ಬೆಲ್ಲ ಇಲ್ಲ!
ಕನ್ನಡಿಗರಿಗೆ ಬೇವು ಉಂಡೂ ಉಂಡೂ ಅಭ್ಯಾಸವಾಗಿದೆ
ನೀನೂ ಅಭ್ಯಾಸ ಮಾಡಿಕೋ
ಯಾವುದೇ ಪ್ರತಿರೋಧ ಒಡ್ಡದೆ.
-ನಾಸೋ
ಪ್ರತಿಕ್ರಿಯೆ (11)