ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೆಲವರಿದ್ದಾರೆ, ಜೀವನದಲ್ಲಿ ೮೦ ಶೇಕಡದಷ್ಟು ಸಮಯ ತುಳು ಭಾಷೆಯನ್ನು ಮಾತ್ರ ಮಾತನಾಡಿ ಗೊತ್ತಿದ್ದವರು. ಇವರಿಗೆ ಕನ್ನಡದ 'ಳ' ಉಚ್ಛಾರ ಯಾವತ್ತಿಗೂ ಮರೀಚಿಕೆಯೇ. 'ಳ' ಇದ್ದಲ್ಲಿ 'ಲ' ಹಾಕಿಯೇ ಇವರುಗಳು ಮಾತನಾಡುವುದು. ಇದರರ್ಥ ಎಲ್ಲಾ ತುಳುವರಿಗೆ 'ಳ' ಉಚ್ಛಾರ ಬರುದಿಲ್ಲವೆಂದೇನಿಲ್ಲ. ಅತಿ ಕಡಿಮೆ ಕನ್ನಡ ಬಳಸುವವರಲ್ಲಿ ಕನ್ನಡ ಮಾತನಾಡಿದರೆ 'ಳ' ಎಂಬಲ್ಲಿ 'ಲ' ಬಂದು ಮನೋರಂಜನೆ ಗ್ಯಾರಂಟೀಡ್. ಎಂತಹ ವಿಪರ್ಯಾಸ ನೋಡಿ, 'ತುಳು' ಎಂಬ ಶಬ್ದದಲ್ಲೇ 'ಳ' ಉಚ್ಛಾರ ಇದೆ, ಆದರೂ....
ವಾಹನಕ್ಕೆ ಇಂಧನ ತುಂಬಿಸಿ 'ಬ್ಲೋ' ಚೆಕ್ ಮಾಡಲು ಹೋದರೆ, ಅಲ್ಲಿನ ಹುಡುಗ 'ಗಾಲಿ ಇಲ್ಲ. ಹಾಲಾಗಿದೆ. ಮುಂದಿನ ಪೆಟ್ರೋಲ್ ಬಂಕಿನಲ್ಲಿ ಹಾಕಿಕೊಲ್ಲಿ' ಎನ್ನುತ್ತಾನೆ. ಬಸ್ಸಿನಿಂದ ಇಳಿಯುವವರಿಗೆ 'ಬೇಗ ಇಲೀರಿ, ಬೇಗ ಇಲೀರಿ' ಎಂದು, ಮೊಬೈಲಿನಲ್ಲಿ ಮಾತನಾಡಲು ತಡವರಿಸಿದರೆ 'ಬೇಗ ಹೇಲಿ(?), ಕಾಲ್ ಚಾರ್ಜೆ ಆಗ್ತಾ ಇದೆ' ಎಂದು ಹೀಗೆ ವಿವಿಧ ಕಡೆ ಈ 'ಳ' ಬದಲು 'ಲ' ಅವಾಂತರ ಕೇಳಬಹುದು. ಇವರಿಗೆ ಈ ಕೆಳಗಿನ ಡೈಲಾಗ್ ಓದಲು ಹೇಳಿದರೆ ಏನಾಗಬಹುದು?
'ಎಷ್ಟು ಸಲ ಹೇಳುವುದು ಮಾರಾಯ ನಿನಗೆ? ನಂಗಂತೂ ಹೇಳಿ ಹೇಳಿ ಸಾಕಾಯ್ತು. ಬೇರೆಯವರಿಂದ ಕೂಡಾ ಹೇಳಿಸಿ ಆಯ್ತು. ಆದರೂ ನಿಂಗೆ ಅರ್ಥವಾಗ್ತಾ ಇಲ್ಲ. ಮುಖದ ಮೇಲೆ ಹೇಳಿದರೂ ನೀನು ಕೇಳ್ತಾ ಇಲ್ಲ. ನನ್ನನ್ನು ಬಿಡು, ನಿನ್ನ ಆಪ್ತರು ಹೇಳಿದ್ರೂ ಕೇಳುದಿಲ್ಲ ನೀನು! ಇನ್ನು ಹೇಗೆ ಹೇಳುವುದು ನಿನಗೆ? ಊರಿನ ಎಲ್ಲರಿಂದ ಹೇಳಿಸುವುದು ಒಂದು ಬಾಕಿ ಇದೆ ಇನ್ನು'.
ಇವರಿಗೆ ತದ್ವಿರುದ್ಧವಾದ ಇನ್ನೊಂದು 'ಸೆಟ್ ಆಫ್ ಪೀಪಲ್' ಇದ್ದಾರೆ. ಉಡುಪಿ ಮತ್ತು ದಕ್ಷಿಣ ಕನ್ನಡದ ಬ್ರಾಹ್ಮಣರಿವರು. ಇವರಿಗೆ ತಿಪ್ಪರಲಾಗ ಹಾಕಿದರೂ 'ಲ' ಹೇಳಲು ಬರುವುದಿಲ್ಲ. 'ಲ' ಇದ್ದಲ್ಲಿ 'ಳ' ಹಾಕಿ ಮಾತನಾಡುವುದು ಇವರ 'ಹವ್ಯಾಸ'! ಹೆಚ್ಚಾಗಿ ಮಠಗಳಲ್ಲಿ ಓದುವವರು, ಬಹಳ ಮಡಿವಂತರು, ತಮ್ಮ ಬ್ರಾಹ್ಮಣ ಜಾತಿಯನ್ನು ಬಿಟ್ಟು ಬೇರೆ ಜಾತಿಯ ಸಂಪರ್ಕವಿಲ್ಲದವರು ಮತ್ತು ಮಠಗಳನ್ನು ಬಿಟ್ಟು ಹೊರಜಗತ್ತು ನೋಡದವರು 'ಲ' ಇದ್ದಲ್ಲಿ 'ಳ' ಬಳಸುತ್ತಾರೆ. ಎಷ್ಟೇ ತಲೆ ಬಡಿದುಕೊಂಡರೂ ಇವರೆನ್ನುವುದು 'ಗುಳಾಬಿ ಹೂವು' ಎಂದೇ. ಎಷ್ಟೇ ತಿದ್ದಿದರೂ ಇವರೆನ್ನುವುದು 'ಹುಳಿ ಗರ್ಜಿಸಿತು' ಎಂದೇ.
ನಗಬಾರದು...ಆದರೆ ನಗದೇ ಇರಲು ಸಾಧ್ಯವೇ?
ಪ್ರತಿಕ್ರಿಯೆ (7)
ನಮ್ಮ ಹೆಚ್ಚಿನ ಉಚ್ಛಾರ ದೋಷಗಳು ಸ್ವಂತನುಡಿಯಿಂದ ಬರುತ್ತವೆ.
ಕನ್ನಡಿಗರು "ಜೀರೊ" (ಜ಼ೀರೊ), "ಅಜರ್" (ಅಜ಼ರ್), "ಫಿಶ್" (ಫ಼ಿಶ್) ಅನ್ನುವುದು, ತಮಿಳರು "ಯಮಗ", "ಮಗೇಶ್", "ತಾಮೋದರನ್" ( ಹ => ಗ, ದಾ => ತಾ) ಅನ್ನುವುದು, ಮಲಯಾಳಿಗಳು ದೀಬ (ಪ => ಬ) ಅನ್ನುವುದು ಈ ಬಗೆಯವು ಎಂದು ನನ್ನ ಅಭಿಪ್ರಾಯ.
ಆದರೆ, "ಅ" ಮತ್ತು "ಹ" ಕಾರದ ಉದಾಹರಣೆ ನನಗೆ ಸಮಂಜಸವೆನಿಸಲಿಲ್ಲ.
ಈ ದೋಷಗಳನ್ನು ಮಾಡುವವರು ಕನ್ನಡ ಬಿಟ್ಟು ಇನ್ನೇನೂ ಗೊತ್ತಿಲ್ಲದವರು.
ಕನ್ನಡದಲ್ಲಿ ಅನಾದಿ ಕಾಲದಿಂದಲೂ ಇವೆರಡೂ ಬೇರೆ, ಬೇರೆ ಅಕ್ಷರಗಳು.
ಹಾಗಾಗಿ ಈ ಹವ್ಯಾಸಕ್ಕೆ ಏನು ಕಾರಣ ಅಂತ ನನಗೆ ಇನ್ನೂ ಗೊತ್ತಾಗಿಲ್ಲ.
ಮೊದಲೆಲ್ಲ, ಆಸನ-ಹರಸೀಕೆರೆ, ಹವರೇಕಾಳು-ಆಗಲಕಾಯಿ ಅಂತ ಗೇಲಿ ಮಾಡುತ್ತ ಇದ್ದೆ ನಾನು.
ಆದರೆ, ಅರಿವಿಲ್ಲದೆಯೋ, ರೂಢಿಯಿಂದಲೋ ಹಾಗೆನ್ನುವವರನ್ನು ನಾವು ಗೇಲಿ ಮಾಡುವುದು ತಪ್ಪು ಎಂದು ಒಬ್ಬ ಸ್ನೇಹಿತರು ತಿಳಿಸಿ ಹೇಳಿದ್ದರಿಂದ ಅದನ್ನು ನಿಲ್ಲಿಸಿದ್ದೇನೆ.
ಕೊನೆಗೆ - ಅ ಹ ಅದಲು ಬದಲು ಮಾಡುವ ಖ್ಯಾತರು:
ಚಿತ್ರ ನಟಿ ರಾಧಿಕಾ, ಸಂಸದೆ ತೇಜಸ್ವಿನಿ, ಶಾಸಕ ಡಿಕೆಶಿ ಮತ್ತು ಕರವೇ ಯ ನಾರಾಯಣ ಗೌಡರು.
ನೋಡಿದರೆ ವಿಷಯ ಎಲ್ಲೆಲ್ಲೋ ಹೋಗಿ ಬಂದಿದೆ.
ಮತ್ತೆ ಮೊದಲಿನ ವಿಷಯಕ್ಕೆ ಬರೋಣ.
ಬೆನಕರವರ ವಿವರಣೆ ಸಮರ್ಪಕ ಅನ್ನಿಸಿತು (ನನಗೆ).
ಆದರೆ ಅ ವನ್ನು ಹ ಕಾರ ಎಂದು ಉಚ್ಚರಿಸುವುದು ಭಾಷೆಯ ಲಕ್ಷಣ ಎಂಬ ಬಗ್ಗೆ ಸಂದೇಹ.
ನನಗೆ ತಿಳಿದ ಮಟ್ಟಿಗೆ ಭಾಷೆಯ ಈ ಲಕ್ಷಣಗಳು [ಉದಾ: "ಹ" ಸೇರ್ಪಡೆ] ಒಮ್ಮುಖವಾಗಿರುತ್ತವೆ.
ಅಂದರೆ "ಹ" ಕಾರ ಸೇರ್ಪಡೆಯಾಗುತ್ತಿದ್ದಂತೆ, ಬಳಕೆಯಲ್ಲಿ "ಅ" ಕಾರವೇ ರೂಢಿಯಾಗಿರಬಹುದು.
ಆದರೆ "ಅ" ಕಾರವೇ ಇರಬೇಕಾದಲ್ಲಿ "ಹ" ಕಾರ ಉಪಯೋಗಿಸುವ ರೂಢಿಯಾದುದಕ್ಕೆ ಕಾರಣ ಸರಿಯಾಗಿ ಅರ್ಥವಾಗಲಿಲ್ಲ.
ಬಲ್ಲವರಲ್ಲಿ ಒಂದು ಪ್ರಶ್ನೆ :
"ಅ" ಕಾರವೇ ಇರಬೇಕಾದಲ್ಲಿ "ಹ" ಕಾರ ಉಪಯೋಗಿಸುವುದು ಸರ್ವೇ ಸಾಮಾನ್ಯವೆ ? ಅಥವಾ ಕೇವಲ ಬೆರಳೆಣಿಕೆಯ ಜನರಿಗಷ್ಟೇ ಸೀಮಿತವೆ ?