ನಿನ್ನೆ ಮೊನ್ನೆಯಷ್ಟೇ 'ಮಗದಿರ' ಅನ್ನುವ ತೆಲುಗು ಚಿತ್ರದ ಮೇಲೆ ಕನ್ನಡ ಚಿತ್ರ ರಂಗದ ಮಂದಿ ಮುರಕೊಂಡು ಬಿದ್ದಿದ್ರಲ್ವಾ,ಕನ್ನಡ ಸಿನೆಮ ಪ್ರದರ್ಶನಕ್ಕೆ ಸಿನಿಮಾ ಮಂದಿರ ಇಲ್ಲ ಅಂತ.ಈ ರಾದ್ಧಾಂತಗಳೆಲ್ಲ ಮೊದಲು ಆಗಿವೆ ಬಿಡಿ.ರಜನಿ-ಗಜಿನಿಗಳು ಚಿತ್ರ ಮಂದಿರ ಆಕ್ರಮಿಸಿಕೊಂಡಾಗ ಇವೆಲ್ಲ ಆಗ್ತಾನೆ ಇರುತ್ತೆ.

ಅನ್ಯ ಭಾಷೆಯ ಚಿತ್ರಗಳಿಂದ ಬಿಡಿ,ಕೆಲವೊಮ್ಮೆ ನಮ್ಮ ನಮ್ಮವರೇ ಕಿತ್ತಾಡಿದ ಉದಾಹರಣೆಗಳು ಇವೆ. ಅದೇನೋ ಒಂದು ಮಾತಿದೆಯಲ್ವಾ 'ಹೆಣ್ಣಿಗೆ ಹೆಣ್ಣೇ ಶತ್ರು' (ಬೇಕಾದ್ರೆ ಗಂಡು ಅಂತನೂ ಬದಲಾಯಿಸಿಕೊಳ್ಳಿ ;) ) ಹಾಗೆ ಮೊನ್ನೆ ಕನ್ನಡ ಚಿತ್ರ ನೋಡಲು ಹೋದಾಗ ನನಗನ್ನಿಸಿದ್ದು 'ಕನ್ನಡ ಸಿನೆಮಾಕ್ಕೆ ಕನ್ನಡ ಸಿನೆಮಾನೆ ಶತ್ರು!' ಅಂತ.

ಮೊನ್ನೆ ನಗರದ ಹಳೆಯ ಹಾಗೂ ಪ್ರತಿಷ್ಠಿತ ಚಿತ್ರ ಮಂದಿರಕ್ಕೆ 'ಯಾರದು!' ಚಿತ್ರ ನೋಡ ಹೋಗಿ, ಕಡೆಗೆ 'ಎಲ್ಲದು? ಎಲ್ಲದು!?' ಅಂತ ಹುಡುಕಿದರೆ ಅಲ್ಲಿ ಪ್ರದರ್ಶನವಿದ್ದಿದ್ದು ಈ ಹೊಚ್ಚ ಹೊಸ ಸಿನೆಮ ಬಿಟ್ಟು ೯೦ರ ದಶಕದ ಹಿಟ್ ಸಿನಿಮಾ 'ಓಂ' ನ ೧-೨ ಅಲ್ಲ ಬರೋಬ್ಬರಿ ೫ ಶೋಗಳು!.

ವಿಮರ್ಶೆ ಚೆನ್ನಾಗಿತ್ತು ಅಂತ ನೋಡೋಕೆ ಹೋದ್ರೆ ಹಿಂಗಾಯ್ತಲ್ಲ ಅಂತ ಶ್ಯಾನೆ ಬೇಸರ ಮಾಡ್ಕಂಡು, ಏನು ಹೇಳೋದು ಅಂತ ಗೊತ್ತಾಗದೆ ಅಲ್ಲಿಂದ ಹೊರಟವನು ಮನದಲ್ಲೇ ಅಂದುಕೊಂಡೆ


 "ಯಾರದು!? ಎಲ್ಲದು!? ಹೇಗಿದು!? ಏನಿದು!? ಯಾಕಿದು!?"