ಟ್ವಿಟ್ಟರ್

(ಲೇಖನ ೪, ಅಕ್ಟೋಬರ್ ೨೦೦೯ ರ ಭಾನುವಾರ ವಿಜಯ ಕರ್ನಾಟಕದ ಸಾಪ್ತಾಹಿಕದಲ್ಲಿ ಪ್ರಕಟವಾಗಿತ್ತು)

"ಓಹೋ ಬಂತು ಗೂಗಲ್ಲಿಗೊಂದು ಪರ್ಯಾಯ" ಎಂದು ಸುದ್ದಿಯಾದಷ್ಟೇ ವೇಗದಲ್ಲಿ ಅದರ ಸದ್ದು ಅಡಗುತ್ತದೆ. ಹೀಗೆ ಬಂದ ಹೊಸ ತಂತ್ರಜ್ಞಾನಗಳು ಕ್ಷಿತಿಜದಲ್ಲಿ ಹೇಳ ಹೆಸರಿಲ್ಲದಂತೆ ಮರೆಯಾಗುತ್ತಿವೆ. ಅಂತಹ ಮೇರು ಪರ್ವತವಾಗಿ ಬೆಳೆದಿದೆ, ಗೂಗಲ್. ಗೂಗಲ್ ಪರಿಚಯ ಯಾರಿಗಿಲ್ಲ? ಸೈಬರ್ ಲೋಕದಲ್ಲಿ ವಿಹರಿಸುವವರ ಪ್ರತಿನಿತ್ಯದ ಇಂಟರ್ನೆಟ್ ಜೀವನ ಅದೆಷ್ಟು ಗೂಗಲ್ ಒದಗಿಸುವ ಸವಲತ್ತುಗಳನ್ನು ಅವಲಂಭಿಸಿದೆಯೆಂದರೆ, ಗೂಗಲ್ ಇಲ್ಲದೆ ಅಂತರ್ಜಾಲವೇ ಎಂದಿನಂತಿರದು.
ಟ್ವಿಟ್ಟರ್
ಕೆಲವು ದಿನಗಳ ಹಿಂದೆಯಷ್ಟೇ ಗೂಗಲ್ ಮೇಯ್ಲ್ ಹಾಗು ಅದರ ಇನ್ನಿತರ ಹಲವು ಸವಲತ್ತುಗಳು ಕೆಲ ಗಂಟೆಗಳ ಕಾಲ ಲಭ್ಯವಿಲ್ಲದೇ ಹೋದವು. ಆಗ ಅದರ ಗುನುಗು ಕೇಳಿಬಂದದ್ದು ಟ್ವಿಟ್ಟರ್ ಎಂಬ ಮತ್ತೊಂದು ಜನಪ್ರಿಯ ತಾಣದಲ್ಲಿ. ಆ ಸಮಯ ಈ ತಾಣದಲ್ಲಿ ಗೂಗಲ್ ಕೈಕೊಟ್ಟಿತೆಂಬುದರ ಬಗ್ಗೆ ತೇಲಿಬಂದ ಮಾತುಗಳು ಸಾವಿರಾರು. ಅದರಲ್ಲೊಂದು ಮಾತು, "ಗೂಗಲ್ ಕೆಲ ಕಾಲ ಡೌನ್ ಆದರೆ ಬಹುಶಃ ಎಲ್ಲರೂ ಸ್ವಲ್ಪ ಹೊತ್ತಾದರೂ ಹೊರ ಹೋಗಿ ನಿಜವಾದ ಜಗತ್ತಿನಲ್ಲಿ ಸಮಯ ಕಳೆಯುತ್ತಾರೆ. ಏನಂತೀರಿ?" ಎಂದಿತ್ತು. ಬೆಂಗಳೂರಿನ ಪುಸ್ತಕ ಪ್ರಕಾಶನ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ಗೌತಮ್ ಜಾಹ್ನ್ ಎಂಬುವರು ಹೀಗೆ ತಮ್ಮ ಅಭಿಪ್ರಾಯವನ್ನು ಅದೇ ಕ್ಷಣ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದರು.

ಗೂಗಲ್ ಸಂಸ್ಥೆಯ ಯುರೋಪಿಯನ್ ಹೆಡ್ ಕ್ವಾರ್ಟರ್ಸಿನಲ್ಲಿ ಇತ್ತೀಚೆಗೆ ಬೆಂಕಿ ಕಾಣಿಸಿಕೊಂಡಿತ್ತಂತೆ. ಅಲ್ಲೇ ಎದುರಿನ ಕಟ್ಟಡವೊಂದರಲ್ಲಿರುವ ತನ್ನ ಆಫೀಸಿನಲ್ಲಿದ್ದ ಪತ್ರಕರ್ತ ಜಾನ್ ಸ್ಟಾಕ್ ಕಣ್ಣಿಗೆ ಇದು ಬೀಳದಿರಲಿಲ್ಲ. ನಂತರ ಜಾನ್ ಸ್ಟಾಕ್ 'ದಿ ವೀಕ್'ನ ಅವರ ಅಂಕಣದಲ್ಲಿ  "ಅದೇನು ತೀರ ತಲೆಕೆಡಿಸಿಕೊಳ್ಳುವಷ್ಟು ಬೆಂಕಿಯಲ್ಲ, ಚಿಕ್ಕ ಅಪಘಾತ ಅಷ್ಟೆ. ಗೂಗಲ್ ಉದ್ಯೋಗಿಗಳು ಚೆಂದದ ಬಾರ್ಬೆಕ್ಯೂಗಳೊಂದಿಗೆ ಔತಣ ಇಟ್ಟುಕೊಂಡಿದ್ದರು, ನಾವೆಲ್ಲ ಎಂದಿನ ನೀರಸ ಕ್ಯಾಂಟೀನುಗಳಲ್ಲಿ ಸಾಲುಗಟ್ಟಿ ನಿಂತಿರುವಾಗ. ಆದರೆ ಬೆಂಕಿ ಬಿದ್ದ ಸಮಯ ಅಲ್ಲಿ ನಡೆದ ಡ್ರಾಮ ಟ್ವಿಟ್ಟರ್ ತಾಣದಲ್ಲಿ ಕೂಡಲೆ ಈ ಸುದ್ದಿ ಹೊರಬೀಳುವುದಕ್ಕೆ ಸಾಕಾಗಿತ್ತು.” ಎಂದು ಬರೆದುಕೊಂಡಿದ್ದಾರೆ.

ಗೂಗಲ್ ಸವಲತ್ತುಗಳಿಗೆ ಸವಾಲೊಡ್ಡಲು ಪ್ರಾರಂಭವಾದದ್ದಲ್ಲ ಟ್ವಿಟ್ಟರ್. ಬದಲಿಗೆ ಕೇವಲ ನೂರ ನಲವತ್ತು ಅಕ್ಷರಗಳಲ್ಲಿ ನಾವೆಲ್ಲಿದ್ದೇವೆ, ನಾವೇನು ಮಾಡುತ್ತಿದ್ದೇವೆ ಅಥವ ನಮ್ಮ ಮನಸ್ಸಿಗೆ ಬಂದ ಅದೇನೋ ವಿಷಯ - ಇವೆಲ್ಲವನ್ನು ಹಂಚಿಕೊಳ್ಳಲು ಉಚಿತವಾಗಿ ಲಭ್ಯವಿರುವ ವೇದಿಕೆ. ತಾಂತ್ರಿಕವಾಗಿ ಹೇಳಬೇಕೆಂದರೆ ಇದೊಂದು ಮೈಕ್ರೋ ಬ್ಲಾಗಿಂಗ್ ಸರ್ವೀಸ್. 'ಬ್ಲಾಗ್' ಕೇಳಿದ್ದೀರಲ್ಲ? ಅವುಗಳ ಚುಟುಕು ರೂಪ! ಚುಟುಕಾಗಿ ಇಲ್ಲಿ ಬರೆದು ಹಾಕಿದ ಸಾಲುಗಳಿಗೆ "ಟ್ವೀಟ್" ಎಂಬುದು ಜನಪ್ರಿಯ ಹೆಸರು. ಈಗಂತೂ ಅದೊಂದು ನಾಮಪದವೇ ಆಗಿಹೋಗಿದೆ!

'ಬ್ಲಾಗ್' ಒಂದರಲ್ಲಿ ಬರೆದು ಹಂಚಿಕೊಂಡ ವಿಷಯವನ್ನು ಓದಲು ಎಲ್ಲರೂ ಅಂತರ್ಜಾಲಕ್ಕೇ ಬರಬೇಕು. ಆದರೆ ಟ್ವಿಟ್ಟರ್ ನಲ್ಲಿ ಬರೆದದ್ದು ಎಸ್ ಎಮ್ ಎಸ್ ಮೂಲಕ ಕೂಡ ಜನರನ್ನು ತಲುಪುತ್ತದೆ. ಅಲ್ಲದೆ ಎಸ್ ಎಮ್ ಎಸ್ ಮೂಲಕ ಕೂಡ ಇದಕ್ಕೆ ಬರೆಯಬಹುದು! ಹೀಗಾಗಿಯೇ ೧೪೦ ಅಕ್ಷರಗಳ ಮಿತಿ. ಪ್ರತಿಯೊಬ್ಬರಿಬ್ಬಗೂ ಟ್ವಿಟ್ಟರಿನಲ್ಲಿ ತಮ್ಮದೇ ಅಕೌಂಟ್ ಸಿಗುತ್ತದೆ. ಆ ಅಕೌಂಟ್ ಬಳಸಿ ನೇರ ನಿಮ್ಮ ಮನಸ್ಸಿನಲ್ಲಿದ್ದದ್ದನ್ನು 'ಟ್ವೀಟ್' ಮಾಡಲು (ಟ್ವಿಟ್ಟರಿನಲ್ಲಿ ಹಂಚಿಕೊಳ್ಳಲು) ಪ್ರಾರಂಭಿಸಬಹುದು. ನಿಮ್ಮದೇ ಆಸಕ್ತಿಗಳ ಸುತ್ತ ಇರುವ ಗೆಳೆಯರ ಒಂದು ವರ್ಚುಯಲ್ ಜಗತ್ತು ಕ್ರಮೇಣ ಸೃಷ್ಟಿಯಾಗಿಬಿಡುತ್ತದೆ. ಅವರು ನಿಮ್ಮ ಸಂದೇಶಗಳನ್ನು 'ಫಾಲೋ' ಮಾಡಬಹುದು. ನೀವು ಬರೆದು ಹಾಕಿದ 'ಟ್ವೀಟ್'ಗಳಿಗೆ ಪ್ರತಿಕ್ರಿಯೆ ಕಳುಹಿಸಬಹುದು.  ನಿಮ್ಮ ಸ್ನೇಹಿತರು ನೀವು ಬರೆದದ್ದನ್ನು ಉಳಿದವರೊಂದಿಗೆ ಹಂಚಿಕೊಳ್ಳಲೂಬಹುದು. ಒಟ್ಟಾರೆ ಒಂದು ಆಸಕ್ತರ 'ಸಮುದಾಯ' ಕೂಡಲೆ ರೆಡಿ. ಆಸಕ್ತಿ ಏನಾದರೂ ಇರಬಹುದು. ಜಿಯೋಗ್ರಾಫಿಕ್ ಮಿತಿಗಳಿಲ್ಲದ್ದರಿಂದ ಜಗತ್ತಿನ ವಿವಿಧ ಭಾಗಗಳಿಂದಲೂ ಆಸಕ್ತರು ಭಾಗವಹಿಸುತ್ತಾರೆ.

ಕಂಪ್ಯೂಟರ್ ಇಲ್ಲದೆಯೇ, ಅಂತರ್ಜಾಲ ಇಲ್ಲದೆಯೇ ನೂರೆಂಟು ಸಮಸ್ಯೆಗಳು ಇವೆ. ಅವೆಲ್ಲವುಗಳ ನಡುವೆ ಇದನ್ನೆಲ್ಲ ಯಾರು ಮಾಡುತ್ತಾರೆ? ನಮಗ್ಯಾಕೆ ಬೇಕು ಇದೆಲ್ಲ ಎಂದನಿಸುವುದು ಸಹಜ. ಟ್ವಿಟ್ಟರ್ ಇಲ್ಲದೆಯೂ ಜೀವನ ನಡೆಯುತ್ತದೆ. ಗೂಗಲ್ ಇಲ್ಲದೆಯೂ... ಅಥವ ನಾವು ಹಾಗಂದುಕೊಂಡಿದ್ದೆವು.

"ಬೆಂಗಳೂರಿಗೆ ಬಂದಿರುವೆ. ರೆಸಿಡೆನ್ಸಿ ರೋಡಿನಲ್ಲಿದ್ದೇನೆ. ಇಲ್ಲಿ ಯಾವುದಾದರೂ ಒಳ್ಳೆಯ ಪುಸ್ತಕ ಮಳಿಗೆ ಗೊತ್ತ?" ಎಂದು ಟ್ವಿಟ್ಟರಿನಲ್ಲಿ ಸಂದೇಶ ಹಾಕಿದ್ದರು ಒಬ್ಬರು. ಕ್ಷಣಾರ್ಧದಲ್ಲಿ ಅವರಿಗೆ ನಾಲ್ಕೈದು ಉತ್ತರಗಳು ಬಂದುವು. ಬೆಂಗಳೂರಿನ ಯಾವುದೇ ಫೋನಿನ ಡೈರೆಕ್ಟರಿಗೆ ಅವರು ಫೋನ್ ಮಾಡುತ್ತ ಕುಳಿತಿದ್ದರೂ ಇಷ್ಟು ಖರೆ ಮಾಹಿತಿ, ಅದರೊಂದಿಗೆ ಯಾವ ಪುಸ್ತಕ ಮಳಿಗೆ ಚೆಂದವಿದೆ ಎಂಬ ಅಭಿಪ್ರಾಯ, ಆಪ್ತ ಸಲಹೆಗಳು ಬಹುಶಃ ಅಷ್ಟು ಕೂಡಲೆ ಸಿಗುತ್ತಿರಲಿಲ್ಲ.

ಇದೊಂದು ಉದಾಹರಣೆಯಷ್ಟೆ. ನಮಗೆ ಬೇಕೋ ಬೇಡವೋ ದಿನ ನಿತ್ಯದ ಜೀವನಕ್ಕೆ ಬೇಕಾದ ಇದೇ ರೀತಿಯ ಎಷ್ಟೋ ವಿಷಯಗಳನ್ನು ಮುಟ್ಟುತ್ತದೆ, ಈ ಹೊಸ ಪೀಳಿಗೆಯ ಹೊಸ ತಂತ್ರಜ್ಞಾನ. ಬಹಳಷ್ಟು ಬದಲಾವಣೆಗಳನ್ನೂ ಜೀವನದಲ್ಲಿ ತಂದಿಡುತ್ತವೆ.

ಅಂದು ಮುಂಬೈನಲ್ಲಿ ಉಗ್ರಗಾಮಿಗಳು ಎಲ್ಲಂದರಲ್ಲಿ ಶೂಟ್ ಮಾಡುತ್ತಿದ್ದರು. ಆಗ ಸರಿಯಾದ ಮಾಹಿತಿ ಸಿಗದೆ ಮಾಧ್ಯಮಗಳೂ ದಿಕ್ಕೆಟ್ಟು ಮಾಹಿತಿ ಹೆಕ್ಕುತ್ತಿರುವಾಗ ಅಲ್ಲಲ್ಲಿ ಪ್ರತ್ಯಕ್ಷ ಕಂಡವರು ಟ್ವಿಟ್ಟರ್ ಬಳಸಿ ಮಾಹಿತಿ ಹಂಚಿಕೊಂಡಿದ್ದರು, ಯಾವ ಮಾಧ್ಯಮದವರಿಗೂ ಸಿಗದ ಉಪಯುಕ್ತ ಮಾಹಿತಿ ತುಣುಕುಗಳು ಇಲ್ಲಿ ಹರಿದವು! ಅದನ್ನು ಬಿಬಿಸಿ ಮುಂತಾದ ಸುದ್ದಿ ಸಂಸ್ಥೆಗಳು ನೇರ ತಮ್ಮ ಸುದ್ದಿಯಲ್ಲಿ ಬಳಸಿಕೊಂಡದ್ದು ಈಗ ಇತಿಹಾಸ. ಟ್ವಿಟ್ಟರಿನ ಪ್ರಾಮುಖ್ಯತೆ ಇಂಥವುಗಳಿಂದ ಹೆಚ್ಚುತ್ತಲೇ ಬಂದಿದೆ. 

ತಮಾಷೆಯೆಂದರೆ ಮೇರು ಪರ್ವತ ಗೂಗಲ್ ತನ್ನೆಲ್ಲ ಇಂಜಿನೀಯರುಗಳನ್ನು ಒಟ್ಟು ಹಾಕಿ ಸಾಧ್ಯವಾಗಿಸಲಾಗದ ಕೆಲವು ಮೊದಲುಗಳನ್ನು ಟ್ವಿಟ್ಟರ್ ಸಾಧಿಸಿದೆ. ಅಥವ ಟ್ವಿಟ್ಟರಿನಲ್ಲಿರುವ ಸಮುದಾಯ ಸಾಧಿಸಿದೆಯೆನ್ನಬಹುದು. ಗೂಗಲ್ ಮುಂದಿನ ವರ್ಷ ಟ್ವಿಟ್ಟರ್ ಹಿಂದಿರುವ ಕಂಪೆನಿಯನ್ನು ಕೊಳ್ಳುತ್ತದೆ ಎಂಬ ಗುಲ್ಲು ಕೂಡ ಹಬ್ಬಿದೆ. ಅದೇನೆ ಇರಲಿ, ಗೂಗಲ್ಲಿನಲ್ಲಿ ಸರಿಯಾಗಿ ಸಿಗದ ಕೆಲವು ಮಾಹಿತಿ ಈಗ ಟ್ವಿಟ್ಟರಿನಲ್ಲಿ ಸುಲಭವಾಗಿ ಸಿಗುತ್ತಿದೆ. ಗೂಗಲ್ಲಿನ ತಂತ್ರಾಂಶಗಳಿಗೂ ತನ್ನದೇ ಆದ ಮಿತಿ ಇದೆ. ಅಲ್ಲದೆ, ಗೂಗಲ್ ಉತ್ತಮ ಪಡಿಸುತ್ತ ಹೋದಂತೆಯೂ ಅದರ ಸರ್ಚ್ ವ್ಯವಸ್ಥೆಗೇ ಟೋಪಿ ಹಾಕಿ ಅದನ್ನು ದಾರಿ ತಪ್ಪಿಸುವ ಪ್ರಯತ್ನದಲ್ಲಿ ನಿರಂತರ ಕೆಲಸ ಮಾಡುತ್ತಿರುವ  ಮೆದುಳುಗಳಿವೆ. ಇವರುಗಳು ದಾರಿ ತಪ್ಪಿಸುತ್ತಿರುವಂತೆಯೇ ಹೊಸ ದಾರಿ ಕಂಡುಕೊಳ್ಳುತ್ತಲೇ ಇರಬೇಕಾದ ಸವಾಲು ಕೂಡ ಗೂಗಲ್ ತಲೆಯ ಮೇಲಿದೆ.  "Don't be evil" ಎಂಬುದನ್ನೇ ಧ್ಯೇಯ ವಾಕ್ಯ ಮಾಡಿಕೊಂಡಿರುವ ಗೂಗಲ್ ದೈತ್ಯಾಕಾರವಾಗಿ ಬೆಳೆದು ನಿಂತಿರುವ ಈ ಸಮಯ ತನ್ನದೇ ಧ್ಯೇಯವಾಕ್ಯವನ್ನು ಎಷ್ಟರಮಟ್ಟಿಗೆ ಪಾಲಿಸುತ್ತದೆ ಎಂಬ ಪ್ರಶ್ನೆಗಳು ಕೂಡ ಅಲ್ಲಲ್ಲಿ ಮೂಡಿಬರುತ್ತಿದೆ. ಚೀನಾ ದೇಶದ ಸರಕಾರ ಬಯಸಿದಂತೆ ತನ್ನ  ಸರ್ಚ್ ವ್ಯವಸ್ಥೆಗೆ ಬದಲಾವಣೆ ತರಲು ಒಪ್ಪಿದ ಸಮಯದಲ್ಲಿ ಜಗತ್ತಿನಾದ್ಯಂತ ಗೂಗಲ್ ತೀಕ್ಷ್ಣ ಪ್ರತಿಕ್ರಿಯೆ ಎದುರಿಸಿತ್ತು. ಈ ಸಂದರ್ಭದಲ್ಲಿ ಅದನ್ನೂ ಮೀರಿಸುವ ಸಾಮರ್ಥ್ಯವುಳ್ಳ ಪರ್ಯಾಯಗಳು ಯಾವುದೇ ಪ್ರಮಾಣದಲ್ಲಿರಲಿ, ಒಟ್ಟು ರೂಪುಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಅದೂ, ಗೂಗಲ್ ತನ್ನ ವ್ಯಾಪಾರ ಸಾಮರ್ಥ್ಯದಿಂದ ಇವುಗಳನ್ನೂ ತನ್ನ ತೆಕ್ಕೆಗೆ ಹಾಕಿಕೊಳ್ಳುವವರೆಗೆ...

ಲೇಖನ: ಹರಿ ಪ್ರಸಾದ್ ನಾಡಿಗ್

Blurbs:
ಚೈನಾ ಮತ್ತು ಗೂಗಲ್
ಎಲ್ಲ ಬಹುರಾಷ್ಟ್ರೀಯ ಕಂಪೆನಿಗಳಿಗಿರುವಂತೆ ಗೂಗಲ್ ಕಂಪೆನಿಗೂ ಭಾರತ ಹಾಗು ಚೈನಾ ಗಾತ್ರದಲ್ಲಿ ಬಹುದೊಡ್ಡ ಮಾರುಕಟ್ಟೆಗಳು. ೨೦೦೬ರಲ್ಲಿ ಗೂಗಲ್ ಚೈನಾ ಮಾರುಕಟ್ಟೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರವೇಶಿಸಲು ಅಲ್ಲಿನ ಸರಕಾರಕ್ಕೆ ತಲೆಬಾಗಿ ತನ್ನ ಸರ್ಚ್ ವ್ಯವಸ್ಥೆಯನ್ನು ಅಲ್ಲಿನ ಸರಕಾರ ಬಯಸುವಂತೆ "ಸೆನ್ಸಾರ್" ಮಾಡಲು ಒಪ್ಪಿಕೊಂಡಿತು. ಜಗತ್ತಿನಾದ್ಯಂತ ತೀಕ್ಷ್ಣ ಪ್ರತಿಕ್ರಿಯೆ ಎದುರಿಸಿತು. ಚೈನಾ ಸರಕಾರದ "ಗೋಲ್ಡನ್ ಶೀಲ್ಡ್ ಯೋಜನೆ" 'ದಿ ಗ್ರೇಟ್ ಫೈರ್ ವಾಲ್ ಆಫ್ ಚೈನಾ' ಎಂದೇ ಸುಪ್ರಸಿದ್ಧ. ಅದನ್ನು ಅಲ್ಲಿನ ಸರಕಾರ ತನ್ನ ಪ್ರಜೆಗಳ ಮೇಲೆ ಸದಾ ಕಾಲ ನಿಗಾ ಇಡಲೆಂದು ಪ್ರಾರಂಭಿಸಲಾದ ಯೋಜನೆಯೆಂದೇ ಹೇಳಲಾಗುತ್ತದೆ. ಈ ಯೋಜನೆಯಡಿ ಸರ್ಚ್ ವ್ಯವಸ್ಥೆಗಳನ್ನು ಕೂಡ ತನ್ನ ಸೆನ್ಸರ್ ಪದ್ಧತಿಗೆ ಅನುಗುಣವಾಗಿ ತಿರುಚಿ ಬಳಕೆದಾರರಿಗೆ ರವಾನಿಸಲಾಗುತ್ತದೆ ಎಂಬ ವದಂತಿ ಇದೆ.

ಟ್ವಿಟ್ಟರ್ ಬೆಳೆದುಬಂದದ್ದು...
ಟ್ವಿಟ್ಟರ್ ಹುಟ್ಟಿದ್ದು ೨೦೦೬ರಲ್ಲಿ. 'ಓಡಿಯೋ' ಎಂಬ ಕಂಪೆನಿಯ ಬೋರ್ಡ್ ಸದಸ್ಯರು ತಮ್ಮ ವೆಬ್ಸೈಟಿನಲ್ಲಿ ಏನೂ ಹೊಸತಿಲ್ಲದ್ದರ ಬಗ್ಗೆ ಬೇಸತ್ತು ದಿನವೆಲ್ಲ ಚರ್ಚೆ ಮಾಡಿ ಒಂದು ಐಡಿಯ ಹಾಕಿದರಂತೆ. ಮೊಬೈಲ್ ಬಳಸುವವರು 'ಎಸ್ ಎಮ್ ಎಸ್ ಮೂಲಕ ಚಿಕ್ಕ ಗುಂಪೊಂದನ್ನು ತಲುಪುವಂತೆ ಮಾಡುವ' ಎಂಬ ಈ ಪುಟ್ಟ ಐಡಿಯ 'ಟ್ವಿಟ್ಟರ್'ನ ರೂಪ ಪಡೆದುಕೊಂಡಿತು. ಟ್ವಿಟ್ಟರ್ ಎಂದರೆ ಇಂಗ್ಲೀಷಿನಲ್ಲಿ ಚಿಲಿಪಿಲಿಗುಟ್ಟೋದು ಅಂತಲ್ವ? ಒಂದೇ ಸಮ ಚಿಲಿಪಿಲಿಗುಟ್ಟುವ ಸಮೂಹದ ಮಾಧ್ಯಮ ಇದಾಯಿತು. ೨೦೦೭ರಲ್ಲಿ ತನ್ನದೇ ಕಂಪೆನಿಯೊಂದನ್ನು ಈ ಯೋಜನೆ ಸ್ಥಾಪಿಸಿಕೊಂಡಿತು. ಅಲ್ಲಿಂದ ಇಲ್ಲಿಯವೆರೆಗೆ ಸುಮಾರು ಐವತ್ತೇಳು ಮಿಲಿಯನ್  ಅಮೇರಿಕನ್ ಡಾಲರಿನಷ್ಟು ಹಣವನ್ನು ಈ ಯೋಜನೆ ವೆಂಚರ್ ಕ್ಯಾಪಿಟಲಿಸ್ಟುಗಳಿಂದ ಒಟ್ಟುಗೂಡಿಸಿದೆಯಂತೆ. 

ಗೂಗಲ್ಲಿಗೂ ಬಾಂಬ್ ಹಾಕುವವರು
ಗೂಗಲ್ ಅಂತರ್ಜಾಲದ ಅತ್ಯಂತ ಜನಪ್ರಿಯ ಸರ್ಚ್ ವ್ಯವಸ್ಥೆ. ಅರಿವಿನ ವ್ಯಾಪ್ತಿಯಲ್ಲಿರುವ ಅಂತರ್ಜಾಲ ಪುಟಗಳಲ್ಲಿ ಸುಮಾರು ಎಲ್ಲವನ್ನೂ ಗೂಗಲ್ ಪತ್ತೆ ಹಚ್ಚಿ, ಬರೆದಿಟ್ಟುಕೊಂಡು ನಿಮಗದರಲ್ಲಿ ಹುಡುಕಿಕೊಳ್ಳುವ ಸವಲತ್ತು ನೀಡುತ್ತದೆ. ಆದರೆ ಯಾವುದಾದರೂ ವಿಷಯದ ಬಗ್ಗೆ ನೀವು ಹುಡುಕಲು ಹೊರಟರೆ ನೂರಾರು ಪುಟಗಳಷ್ಟು ಮಾಹಿತಿ   ಅಥವ   ಅದಕ್ಕೂ ಹೆಚ್ಚು ಸಿಗಲೂಬಹುದು. ಅದರಲ್ಲಿ ಮೊದಲ ಉತ್ತರ ಯಾವುದಿರಬೇಕು? ಅಥವ ನೀವು ಹುಡುಕುತ್ತಿದ್ದ ಮಾಹಿತಿಯೇ ಹೇಗೆ ಖರೆಯಾಗಿ ನಿಮಗೆ ಮೇಲಿಟ್ಟು ತಲುಪಿಸುವುದು? - ಇದನ್ನು ಸಾಧಿಸಲು ಗೂಗಲ್ ಹಲವಾರು ಕ್ರಮ ಹಾಗು ವಿಧಾನಗಳನ್ನು ಅನುಸರಿಸುತ್ತದೆ. ಈ ವಿಧಾನಗಳು ಹಳತಾಗುತ್ತಿದ್ದಂತೆ ಅದಕ್ಕೆ ಟೋಪಿ ಹಾಕಿ ಗೂಗಲ್ ಸರ್ಚ್ ವ್ಯವಸ್ಥೆಯನ್ನೇ ಮೋಸ ಹೋಗಿಸುವವರ ಸಂಖ್ಯೆಯೂ ಹೆಚ್ಚುತ್ತ ಹೋಗುತ್ತದೆ. ಗೂಗಲ್ ಒದಗಿಸುವ ಉತ್ತರಗಳಲ್ಲಿ ಮೊದಲು ತಮ್ಮದೇ ಪುಟ ಬಂದರೆ ವ್ಯಾಪಾರ ಹೆಚ್ಚು ಅಲ್ಲವೆ? ಹೀಗಾಗಿ ಹಣ ಕೊಟ್ಟು ಇದನ್ನು ಮಾಡಿಸುವವರಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಕೂಡ ಗೂಗಲ್ ಸರ್ಚ್ ಮೋಸ ಹೋದದ್ದುಂಟು. ಇದಕ್ಕೆ ಇಂಟರ್ನೆಟ್ಟಿನ ಆಡುನುಡಿಯಲ್ಲಿ 'ಗೂಗಲ್ ಬಾಂಬ್' ಎಂದೇ ಹೆಸರು.