ಎಐ ಜಗತ್ತಿನಲ್ಲಿ ಕಳೆದ ಒಂದು ತಿಂಗಳು ನಡೆದ ಬೆಳವಣಿಗೆಗಳ ಬಗ್ಗೆ ಟಿಪ್ಪಣಿ
ಕಳೆದ ತಿಂಗಳು ಎಐ ಜಗತ್ತನ್ನು ಆವರಿಸಿದ ದೊಡ್ಡ ವಿಷಯವೆಂದರೆ — ಭಾಷೆ ಮತ್ತು ಸಾರ್ವಭೌಮತ್ವ. ಎಐ ಒಡೆತನ ಯಾರದ್ದು? ಅದು ಯಾವ ಭಾಷೆಗಳನ್ನು ಮಾತನಾಡುತ್ತದೆ? ಎಂಬುದರ ಬಗ್ಗೆ ಸಾಕಷ್ಟು ಚರ್ಚೆಗಳಾದವು.
ಈ ತಿಂಗಳ ವಿಷಯಗಳು ಬೇರೆಯವೇ ಆಗಿವೆ. ಈ ತಿಂಗಳಿನ ವಿಷಯಗಳು ಎಐಗೆ ಹಾಕಿದ ಬೇಲಿಗಳ ಬಗ್ಗೆ.
ಎಐ ವ್ಯವಸ್ಥೆಯೊಂದನ್ನು ರಿಲೀಸ್ ಮಾಡುವ ಮುನ್ನ ಕಂಪನಿಗಳು ಅದನ್ನು ಟೆಸ್ಟ್ ಮಾಡುತ್ತವೆ. ಪ್ರಾಣಿಯೊಂದನ್ನು ಬೇಲಿಯೊಳಗೆ ಇಟ್ಟುಕೊಂಡು ಸಾಕುವ ರೀತಿ, ತೆರೆದಿಲ್ಲದ, ಮುಚ್ಚಿದ ಜಾಗವೊಂದರಲ್ಲಿ ಅದನ್ನು ಟೆಸ್ಟ್ ಮಾಡುತ್ತಾರೆ. ಇದರ ಹಿಂದೆ ಇರುವ ಐಡಿಯಾ ಬಹಳ ಸಿಂಪಲ್ ಆದದ್ದು: ಆ ಮೆಷೀನ್ ಏನಾದರೂ ಅಪಾಯಕಾರಿ ಕೆಲಸ ಮಾಡಿದರೆ, ಅದು ಬೇಲಿಯೊಳಗೆಯೇ ಉಳಿಯುತ್ತದೆ.
ಆದರೆ ಕಳೆದ ಹಲವು ವಾರಗಳಲ್ಲಿ, ಕೆಲವು ಮೆಷೀನ್ಗಳು ಬೇಲಿ ಹಾರಿ ಬಂದ ವಿಷಯಗಳನ್ನು ಕೇಳುತ್ತಿದ್ದೇವೆ.
೧. ಗೂಗಲ್ ಜೆಮಿನಿ ಹಾಗೂ ಮೂರು ಕಂಪನಿಗಳು
ಸೆಪ್ಟೆಂಬರ್ 18ರಂದು ಗೂಗಲ್ ಕಂಪನಿಯು ತನಗೆ ಮುಜುಗರ ತರುವಂತಹ ಒಂದು ವಿಷಯವನ್ನು ಒಪ್ಪಿಕೊಂಡಿತು.
ಮೇ ತಿಂಗಳಲ್ಲಿ ಇರೆಗ್ಯುಲರ್ (Irregular) ಎಂಬ ಟೆಸ್ಟಿಂಗ್ ಕಂಪನಿಯು ಗೂಗಲ್ನ ಎಐ ವ್ಯವಸ್ಥೆ — ಅಂದರೆ ಜೆಮಿನಿ — ಹ್ಯಾಕ್ ಮಾಡುವುದರಲ್ಲಿ ಎಷ್ಟು ಕ್ಷಮತೆಯುಳ್ಳದ್ದು ಎಂಬುದನ್ನು ಪರೀಕ್ಷೆ ಮಾಡುತ್ತಿತ್ತು. ಆ ಪರೀಕ್ಷೆ ಒಂದು ಆಟದಂತಿತ್ತು; ಜೆಮಿನಿಗೆ ಆಟಕ್ಕೆಂದು ಟಾರ್ಗೆಟ್ ಕಂಪನಿಯೊಂದನ್ನು ಕೊಟ್ಟು, ಅದನ್ನು ಬ್ರೇಕ್ ಮಾಡು ಎಂದು ಹೇಳಲಾಯಿತು.
ಆದರೆ ಪರೀಕ್ಷೆಗೆ ಇಟ್ಟಿದ್ದ ವ್ಯವಸ್ಥೆಯಲ್ಲಿ ಒಂದು ದೋಷವಿತ್ತು. ಅಕಸ್ಮಾತ್ ಆಗಿ ಎಐಗೆ ಅಂತರ್ಜಾಲದ ಸಂಪರ್ಕ ಸಿಕ್ಕಿಬಿಟ್ಟಿತು. ಇದಲ್ಲದೆ, ಆಟಕ್ಕೆಂದು ಕೊಟ್ಟ ಹೆಸರು ನಿಜವಾದ ಒಂದು ವೆಬ್ಸೈಟಿನ ಹೆಸರಿಗೆ ಮ್ಯಾಚ್ ಆಗುತ್ತಿತ್ತು.
ಜೆಮಿನಿ ನಿಜವಾದ ಮೂರು ಕಂಪನಿಗಳ ವ್ಯವಸ್ಥೆಗಳ ಬಾಗಿಲನ್ನು ಮುರಿದು ಒಳಪ್ರವೇಶಿಸಿಬಿಟ್ಟಿತು. ಒಂದರಲ್ಲಂತೂ ಒಂದು ಪಾಸ್ವರ್ಡ್ ಕೆಲಸ ಮಾಡುವ ತನಕ ಜೆಮಿನಿ ಪಾಸ್ವರ್ಡ್ಗಳನ್ನು ಗೆಸ್ ಮಾಡುತ್ತಲೇ ಇತ್ತು. ಇನ್ನುಳಿದ ಎರಡು ಕೇಸುಗಳಲ್ಲಿ, ಜನರು ಬೇಜವಾಬ್ದಾರಿಯಾಗಿ ಅಲ್ಲಿಲ್ಲಿ ಬಿಟ್ಟಿದ್ದ ಪಾಸ್ವರ್ಡ್ಗಳನ್ನು ಪಡೆದುಕೊಂಡು ಒಳಹೊಕ್ಕಿಬಿಟ್ಟಿತು.
ಗೂಗಲ್ ಹೇಳುವುದೇನೆಂದರೆ, ಜೆಮಿನಿ ಇದನ್ನೆಲ್ಲಾ ಪರೀಕ್ಷೆಯ ಒಂದು ಭಾಗವಾಗಿ ಕಂಡಿತು ಎಂದು. ಈ ಕಂಪನಿಗಳೆಲ್ಲಾ ನಿಜವಾದವು ಎಂದು ಜೆಮಿನಿಗೆ ತಿಳಿದಾಗ, ಅದು ನಿಂತುಕೊಂಡಿತಂತೆ.
ಇಲ್ಲಿ ಎರಡು ವಿಷಯಗಳು ಬಹಳ ಮುಖ್ಯವಾದವು:
ಮೆಷೀನ್ ತಾನಾಗಿಯೇ ಯಾವುದನ್ನೂ ಅಟ್ಯಾಕ್ ಮಾಡಲು ಪ್ರಯತ್ನಿಸಲಿಲ್ಲ. ಅದಕ್ಕೆ ಆಟಕ್ಕೆ ಕೊಟ್ಟ ಹೆಸರನ್ನು ಹ್ಯಾಕ್ ಮಾಡು ಎನ್ನಲಾಗಿತ್ತು. ತಪ್ಪು ಅದಕ್ಕೆ ಹಾಕಲಾದ ಬೇಲಿಯದ್ದು ಎನ್ನಬಹುದು. ತಾನಾಗಿಯೇ ಹೀಗೆ ಮಾಡಬೇಕೆಂಬ ಕೆಟ್ಟ ಬುದ್ಧಿ ಅದಕ್ಕೆ ಇರಲಿಲ್ಲ ಎಂದು ಹೇಳಬಹುದು.
ಆದರೆ ಗೂಗಲ್ ಕಂಪನಿಗೆ ಇದು ತಿಳಿದುಬಂದದ್ದು ಜುಲೈ ಮಾಸದ ಕೊನೆಯ ಹೊತ್ತಿಗೆ. ಜನರಿಗೆ ಗೂಗಲ್ ಇದನ್ನು ತಿಳಿಸಿದ್ದು ಸೆಪ್ಟೆಂಬರ್ 18ಕ್ಕೆ — ಅದೂ ವಾಲ್ ಸ್ಟ್ರೀಟ್ ಜರ್ನಲ್ ಎಂಬ ಅಮೆರಿಕದ ಸುದ್ದಿಪತ್ರಿಕೆ ಇದರ ಬಗ್ಗೆ ಕೇಳಿದಾಗ. ಅಲ್ಲಿಗೆ 7 ವಾರಗಳ ಗ್ಯಾಪ್ ಆಗಿಹೋಯಿತು.
೨. ಗೂಗಲ್ ಇದರಲ್ಲಿ ಏಕಾಂಗಿಯಲ್ಲ
ಈ ವರ್ಷ ಈ ರೀತಿಯಾದದ್ದು ಇದು ಮೊದಲನೇ ಘಟನೆ ಅಲ್ಲ.
ಜುಲೈ ತಿಂಗಳಲ್ಲಿ ಓಪನ್ಎಐ (ಚಾಟ್ಜಿಪಿಟಿಯ ಹಿಂದಿರುವ ಕಂಪನಿ), ತನ್ನ ಎಐ ವ್ಯವಸ್ಥೆಗಳು ಹಗ್ಗಿಂಗ್ ಫೇಸ್ ಎನ್ನುವ ಬಹು ಜನಪ್ರಿಯ ಅಂತರ್ಜಾಲ ತಾಣದ ಬಾಗಿಲನ್ನು ಮುರಿದು ಒಳಹೊಕ್ಕವು ಎಂದು ತಿಳಿಸಿತು. ಈ ತಾಣ ಎಐ ಸಂಶೋಧಕರು ತಮ್ಮ ಕೆಲಸಗಳನ್ನು ಹಂಚಿಕೊಳ್ಳುವ ತಾಣ.
ಆಗಸ್ಟ್ ತಿಂಗಳಲ್ಲಿ ಮೆಟಾ ಕಂಪನಿ (ಫೇಸ್ಬುಕ್ ಮತ್ತು ವಾಟ್ಸಾಪ್ ಹಿಂದಿರುವ ಕಂಪನಿ) ಕೂಡ, ತನ್ನ ಎಐ ಬೇರೊಂದು ಕಂಪನಿಯ ಸೇವೆಯಲ್ಲಿದ್ದ ದೌರ್ಬಲ್ಯವೊಂದನ್ನು ದುರ್ಬಳಕೆ ಮಾಡಿಕೊಂಡಿತು ಎನ್ನುವ ವಿಷಯವನ್ನು ಒಪ್ಪಿಕೊಂಡಿತು.
ಆಂಥ್ರೋಪಿಕ್ ಕಂಪನಿ (ಕ್ಲಾಡ್ ಎಂಬ ಎಐ ವ್ಯವಸ್ಥೆಯ ಹಿಂದಿರುವ ಕಂಪನಿ) ಕೂಡ, ಒಂದು ಲಕ್ಷ 40 ಸಾವಿರಕ್ಕಿಂತ ಹೆಚ್ಚಿನ ಪರೀಕ್ಷೆಗಳನ್ನು ಪರಿಶೀಲಿಸಿದ ತರುವಾಯ ಇಂತಹ ಮೂರು ಕೇಸುಗಳನ್ನು ಕಂಡೆವು ಎಂದು ಹೇಳಿಕೊಂಡಿತು. ಯಾವ ರೀತಿಯ ಕೇಸುಗಳು? ಇದೇ ರೀತಿ ವ್ಯವಸ್ಥೆಯಲ್ಲಿದ್ದ ದೋಷಗಳಿಂದಾಗಿ ಎಐ ನಿಜವಾದ ಸಂಸ್ಥೆಗಳ ವ್ಯವಸ್ಥೆಗಳನ್ನು ಹೊಕ್ಕದ್ದು.
⠀ಈ ಎಲ್ಲಾ ಕೇಸುಗಳಲ್ಲಿ ತಪ್ಪು ಸಮರ್ಪಕ ಬೇಲಿ ಹಾಕಲು ವಿಫಲರಾದ ಮನುಷ್ಯರದ್ದು ಎಂದು ಹೇಳಲಾಯಿತು. ಆದರೆ ಮೆಷೀನ್ಗಳು ಪಾಸ್ವರ್ಡ್ಗಳನ್ನು ಗೆಸ್ ಮಾಡಿದ್ದು, ಅಲ್ಲಿಲ್ಲಿ ಲೀಕ್ ಆದ ಪಾಸ್ವರ್ಡ್ಗಳನ್ನು ಬಳಸಿಕೊಂಡಿದ್ದು ನಿಜ.
"ಎಐ ಹಳಿತಪ್ಪಿ ಪುಂಡನಾಯಿತು" ಎನ್ನುವುದೂ, "ಏನೂ ಆಗಿಲ್ಲ" ಎನ್ನುವುದೂ — ಎರಡೂ ಸರಿಯಲ್ಲ. ಸತ್ಯ ಇವೆರಡರ ಮಧ್ಯದಲ್ಲಿ ಎಲ್ಲೋ ಇದೆ.
೩. ವಾರ್ನಿಂಗ್ ಲೇಬಲ್ ಜೊತೆಗೆ ಬಂದ ಜಿಪಿಟಿ-6
ಸೆಪ್ಟೆಂಬರ್ 3ರಂದು ಓಪನ್ಎಐ ತನ್ನ ಹೊಸ ಎಐ ವ್ಯವಸ್ಥೆ ಜಿಪಿಟಿ-6 ಆಸ್ಟ್ರಾವನ್ನು ಹೊರತಂದಿತು.
ಇದರಲ್ಲಿ ವಿಶೇಷವಾದದ್ದು, ಭಿನ್ನವಾದದ್ದು ಏನಪ್ಪಾ ಅಂದರೆ, ಓಪನ್ಎಐ ತಾನೇ ಅದಕ್ಕೊಂದು ವಾರ್ನಿಂಗ್ ಲೇಬಲ್ ಹಚ್ಚಿದ್ದು. ಓಪನ್ಎಐ ಹೇಳುವ ಪ್ರಕಾರ, ಈ ವ್ಯವಸ್ಥೆಗೆ ಸರಿಯಾದ ಸಲಕರಣೆಗಳನ್ನು ಕೊಟ್ಟಾಗ, ಅದು ಅಡಗಿರುವ ದೌರ್ಬಲ್ಯಗಳನ್ನು ಹುಡುಕಿ, ಸರಿಯಾಗಿ ರಕ್ಷಣೆ ಒದಗಿಸಿರುವ ಕಂಪ್ಯೂಟರ್ ವ್ಯವಸ್ಥೆಗಳನ್ನೂ ಪ್ರವೇಶಿಸುವ ದಾರಿಯನ್ನು ಹುಡುಕಬಲ್ಲದು. ಹೀಗೆ ಮಾಡುವಾಗ ಅದಕ್ಕೆ ವ್ಯಕ್ತಿಯೊಬ್ಬರ ಕ್ರಮವಾದ ಸೂಚನೆಗಳು ಬೇಕಿಲ್ಲವಂತೆ.
ಇದರಿಂದಾಗಿ ಓಪನ್ಎಐ ಇದನ್ನು ಎಲ್ಲರಿಗೂ ಒಮ್ಮೆಲೇ ರಿಲೀಸ್ ಮಾಡಲಿಲ್ಲ. ಮೊದಲು ಸೈಬರ್ ಸೆಕ್ಯೂರಿಟಿ ಸಂಸ್ಥೆಗಳ ಒಂದು ಸಣ್ಣ ಸಮೂಹಕ್ಕೆ ಇದನ್ನು ಕೊಡಲಾಯಿತಂತೆ. ಸ್ವಲ್ಪ ದಿನಗಳ ನಂತರ, ದುಡ್ಡು ಕಟ್ಟಿ ಬಳಸುವ ಸಾಮಾನ್ಯ ಬಳಕೆದಾರರಿಗೆ ಇದರ ಆಕ್ಸೆಸ್ ಕೊಡಲಾಯಿತಂತೆ.
ಇದಲ್ಲದೆ, ಓಪನ್ಎಐ 1 ಬಿಲಿಯನ್ ಡಾಲರ್ ಮೊತ್ತದ — ಅಂದರೆ ಸುಮಾರು 8,300 ಕೋಟಿ ರೂಪಾಯಿಗಳ — ಫಂಡ್ ಒಂದನ್ನು ಕೂಡ ಅನೌನ್ಸ್ ಮಾಡಿದೆ. ಕಂಪ್ಯೂಟರ್ ವ್ಯವಸ್ಥೆಗಳನ್ನು ರಕ್ಷಣೆ ಮಾಡುವಂಥವರಿಗೆ ಸಹಾಯ ಮಾಡಲೆಂದು ಇದನ್ನು ಮೀಸಲಾಗಿ ಇಡಲಾಗಿದೆಯಂತೆ.
ಇದರ ಅರ್ಥ ಏನು ಎಂಬುದನ್ನು ಆಲೋಚಿಸಿ. ಜಗತ್ತಿನ ಅತ್ಯಂತ ಶಕ್ತಿಶಾಲಿ ಎಐ ವ್ಯವಸ್ಥೆಗಳು ಈಗ ಹ್ಯಾಕಿಂಗ್ ಮಾಡುವುದರಲ್ಲೂ ನಿಸ್ಸೀಮರು. ಇದೇ ಕೌಶಲ ಬ್ಯಾಂಕ್ ಒಂದನ್ನು ಉಳಿಸಬಹುದು, ಅಥವಾ ಅದನ್ನು ದೋಚಿಕೊಂಡು ಕೂಡ ಹೋಗಬಹುದು.
೪. ಕೆಲವೇ ದಿನಗಳಲ್ಲಿ ಹಲವು ಎಐ ವ್ಯವಸ್ಥೆಗಳು
ಸೆಪ್ಟೆಂಬರಿನ ಮೊದಲ ವಾರದಲ್ಲಿ ಎಲ್ಲ ದೊಡ್ಡ ಎಐ ಕಂಪನಿಗಳೂ ಒಂದೊಂದು ಹೊಸತನ್ನು ತಂದವು.
ಆಂಥ್ರೋಪಿಕ್, ಕ್ಲಾಡ್ ಫೇಬಲ್ 5.1 ಅನ್ನು ಸೆಪ್ಟೆಂಬರ್ 1ನೇ ತಾರೀಖು ರಿಲೀಸ್ ಮಾಡಿತು.
ಓಪನ್ಎಐ, ಜಿಪಿಟಿ-6 ಆಸ್ಟ್ರಾವನ್ನು ಸೆಪ್ಟೆಂಬರ್ 3ರಂದು ರಿಲೀಸ್ ಮಾಡಿತು.
ಗೂಗಲ್, ತನ್ನ ಜೆಮಿನಿಯ ಹೊಸ ಆವೃತ್ತಿಯನ್ನು ಸೆಪ್ಟೆಂಬರ್ 2ರಂದು ರಿಲೀಸ್ ಮಾಡಿತು. ಇದರ ವಿಶೇಷ ಸೆಕ್ಯೂರಿಟಿ ಆವೃತ್ತಿಯನ್ನು ಕೆಲವೇ ನಂಬಿಕಾರ್ಹ ರಕ್ಷಕರಿಗೆ ಕೊಡಲಾಯಿತು.
ಮೆಟಾ ತನ್ನ ಎಐನ ಹೊಸ ಆವೃತ್ತಿಯನ್ನು ಕೂಡ ಅದೇ ದಿನ ರಿಲೀಸ್ ಮಾಡಿತು.
⠀ಇಲ್ಲಿ ನಾವು ಒಂದು ಸಾಮಾನ್ಯವಾದ ಪ್ಯಾಟರ್ನ್ ಕಾಣಬಹುದು. ಅದೇನಪ್ಪಾ ಅಂದರೆ, ಪ್ರತಿಯೊಂದು ಕಂಪನಿ ಕೂಡ ತನ್ನ ಅತ್ಯಂತ ಅಪಾಯಕಾರಿ ಕ್ಷಮತೆಗಳನ್ನು ಲಾಕ್ ಮಾಡಿ ಇಟ್ಟುಕೊಂಡಿದೆ; ಕೆಲವೇ ನಂಬಿಕಾರ್ಹ ಸಂಸ್ಥೆಗಳಿಗೆ ಇದನ್ನು ಕೊಡಲಾಗುತ್ತಿದೆ ಎಂದು ಹೇಳಿಕೊಂಡಿವೆ.
ಆಂಥ್ರೋಪಿಕ್ ಸಂಸ್ಥೆಯ ರಿಲೀಸ್ನಲ್ಲಿ ಎರಡು ಆಸಕ್ತಿದಾಯಕ ಬದಲಾವಣೆಗಳು ಕಂಡುಬಂದವು:
ಕಾಪಿ ಮಾಡುವುದರ ವಿರುದ್ಧ ರಕ್ಷಣೆ: ಕೆಲವು ಕಂಪನಿಗಳು ಶಕ್ತಿಶಾಲಿ ಎಐಗಳನ್ನು ಕಾಪಿ ಮಾಡಲು ಪ್ರಯತ್ನಿಸುತ್ತಿವೆಯಂತೆ. ಅದು ಹೇಗೆಂದರೆ, ನಕಲಿ ಖಾತೆಗಳನ್ನು ಇಟ್ಟುಕೊಂಡು ಅದಕ್ಕೆ ಸಾವಿರಾರು ಪ್ರಶ್ನೆಗಳನ್ನು ಕೇಳಿ, ಬಂದ ಉತ್ತರಗಳಿಂದ ತಮ್ಮದೇ ಎಐ ವ್ಯವಸ್ಥೆಯನ್ನು ಟ್ರೈನ್ ಮಾಡುವುದು. ಇದಕ್ಕೆ ಬಳಸಲಾಗುವ, ಎಲ್ಲರಿಗೂ ತಿಳಿದಿರುವಂತಹ ದಾರಿಯೊಂದನ್ನು ಆಂಥ್ರೋಪಿಕ್ ಬಂದ್ ಮಾಡಿದೆಯಂತೆ. ಚೈನೀಸ್ ಕಂಪನಿಯೊಂದು ಈ ರೀತಿ ಮಾಡುತ್ತಿದೆ ಎಂಬ ಆರೋಪವನ್ನು ನಾವು ಸುದ್ದಿ ಮಾಧ್ಯಮಗಳಲ್ಲಿ ಕೇಳಿದ್ದೆವು.
ಅದೃಶ್ಯ ವಾಟರ್ಮಾರ್ಕ್: ಯುರೋಪಿನ ಕಾನೂನಿಗೆ ಅನುಗುಣವಾಗಿ, ಈ ಎಐ ಬರೆಯುವ ಪ್ರತಿಯೊಂದು ಬರಹದಲ್ಲೂ ಈಗ ಅದೃಶ್ಯವಾದ ವಾಟರ್ಮಾರ್ಕ್ ಇರುತ್ತದೆ. ನಮಗೆಲ್ಲ ಅದು ಕಾಣುವುದಿಲ್ಲ. ಆದರೆ ಎಐ ಬಳಸಿ ಬರೆದದ್ದು ಎಂಬುದನ್ನು ವಿಶೇಷ ಸಲಕರಣೆಗಳಿಂದ ಡಿಟೆಕ್ಟ್ ಮಾಡಬಹುದು. ಈಗಿನಂತೆ ರೆಗ್ಯುಲೇಟರ್ಗಳು, ಫ್ಯಾಕ್ಟ್-ಚೆಕರ್ಗಳು ಹಾಗೂ ಸಂಶೋಧಕರಿಗೆ ಮಾತ್ರ ಈ ಸಲಕರಣೆಗಳನ್ನು ಕೊಡಲಾಗಿದೆಯಂತೆ.
೫. ಬೆಂಗಳೂರಿನ ಪ್ರೊಫೆಸರ್ ಒಬ್ಬರು ಎಐ ಬಗ್ಗೆ ಮಾತನಾಡಿದ್ದು, ವೈರಲ್ ಆದದ್ದು
ಹ್ಯಾಕಿಂಗ್ ಹಾಗೂ ಎಐ ಬೇಲಿ ಹಾರಿದ ಕಥೆಗಳ ನಡುವೆ, ಬೆಂಗಳೂರಿನಿಂದ ಒಂದು ವಿಷಯ ಬಹಳ ಚರ್ಚೆಗೊಳಪಟ್ಟಿತು.
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ), ಬೆಂಗಳೂರಿನ ಪ್ರೊಫೆಸರ್ ಪ್ರತೋಷ್ ಎ.ಪಿ. ಅವರು ವಾಗ್ಧೇನು ಎಂಬ ಎಐ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದವರು. ಇದನ್ನು ಅವರು ಜೂನ್ ತಿಂಗಳಲ್ಲಿ ಹೊರತಂದಿದ್ದರು. ಈ ತಿಂಗಳು ಅವರು ಹಾಕಿದ ಒಂದು ವಿಡಿಯೋ ವೈರಲ್ ಆಗಿ ಹೋಯಿತು. ವಿಡಿಯೋ ಕುರಿತಾಗಿ ಮಾತನಾಡುವುದಕ್ಕೆ ಮುಂಚೆ, ವಾಗ್ಧೇನು ಬಗ್ಗೆ ಸ್ವಲ್ಪ ತಿಳಿಯೋಣ.
ವಾಗ್ಧೇನು
ವಾಗ್ಧೇನು ತಾವು 15 ವರ್ಷಗಳ ಕಾಲ ಕಂಡ ಕನಸನ್ನು ನನಸಾಗಿಸಿದ್ದು ಎಂದು ಪ್ರತೋಷ್ ಅವರು ಹೇಳುತ್ತಾರೆ. ಅದಕ್ಕೆ ಯಾವುದೇ ಸಂಸ್ಕೃತ ಶ್ಲೋಕ ಕೊಡಿ, ಅದನ್ನು ಅದು ಓದಿ ಹೇಳುತ್ತದೆ. ಓದಿ ಹೇಳುವುದು ಅಷ್ಟೇ ಅಲ್ಲ, ಅದನ್ನು ಸರಿಯಾಗಿ ಉಚ್ಚಾರ ಮಾಡುತ್ತದೆ.
ಏನಪ್ಪಾ ಇದರ ವಿಶೇಷ? ಅದು ಶ್ಲೋಕದ ಛಂದಸ್ಸನ್ನು ಅರ್ಥಮಾಡಿಕೊಳ್ಳುತ್ತದೆ. ವಿಶೇಷವಾಗಿ, ಕನ್ನಡದ ಲಿಪಿಯ ಸಹಾಯವನ್ನು ಪಡೆಯುತ್ತದೆ. ಕಷ್ಟವಾದ, ಕ್ಲಿಷ್ಟಕರ ಉಚ್ಚಾರಗಳನ್ನು ಕೂಡ ಅದು ಸರಿಯಾಗಿ ನಿರ್ವಹಿಸುತ್ತದೆ. ಕೇವಲ 5 ಗಂಟೆಗಳ ಕಾಲ ರೆಕಾರ್ಡ್ ಮಾಡಿದ ಶ್ಲೋಕ ಪಠಣದಿಂದ ಇದು ಕಲಿತುಕೊಂಡಿತಂತೆ.
ಈಗಾಗಲೇ ಶ್ರೀಮದ್ ಭಾಗವತದ 18,000ಕ್ಕೂ ಹೆಚ್ಚು ಶ್ಲೋಕಗಳನ್ನು, ಮಧ್ವಾಚಾರ್ಯರ ಮಹಾಭಾರತ ತಾತ್ಪರ್ಯ ನಿರ್ಣಯದ 5,183 ಶ್ಲೋಕಗಳನ್ನು ಇದು ಉಚ್ಚಾರ ಮಾಡಿದೆಯಂತೆ.
ಇದರಿಂದ ಎರಡು ಉಚಿತ ಸಲಕರಣೆಗಳು ಹೊರಬಂದಿವೆ:
ಭಾಗವತ ವಾಣಿ: ಈ ಆ್ಯಪ್ ಸಂಪೂರ್ಣ ಭಾಗವತವನ್ನು ಆಡಿಯೋದೊಂದಿಗೆ ನಿಮಗೆ ಕೊಡುತ್ತದೆ. 10 ಭಾರತೀಯ ಲಿಪಿಗಳಲ್ಲಿದೆ. ಇಂಟರ್ನೆಟ್ ಇಲ್ಲದೆಯೂ ಕಾರ್ಯ ನಿರ್ವಹಿಸುತ್ತದೆ. ಜೊತೆಗೆ ಜಾಹೀರಾತು ಕೂಡ ಇಲ್ಲ. ಆಂಡ್ರಾಯ್ಡ್ ಮತ್ತು ಐಫೋನಿನಲ್ಲಿ ಲಭ್ಯವಿದೆ.
ವಾಗ್ಬೋಧಿನೀ: ಈ ಸಲಕರಣೆ ನಿಮ್ಮ ಮಾತನ್ನು ಕೇಳಿಸಿಕೊಳ್ಳುತ್ತದೆ. ನೀವು ಯಾವುದೇ ಶ್ಲೋಕವನ್ನು ಹೇಳಿ, ಅದರಲ್ಲಿ ಏನು ತಪ್ಪು ಮಾಡಿದಿರಿ ಎಂಬುದನ್ನು ನಿಮಗೆ ತಿಳಿಸುತ್ತದೆ.
⠀ಇದೆಲ್ಲವನ್ನೂ ಎಲ್ಲರಿಗೂ ಉಚಿತವಾಗಿ ಲಭ್ಯವಾಗಿಸಿದ್ದಾರೆ. ಆದರೆ ವೇದ ಮಂತ್ರಗಳ ಉಚ್ಚಾರಕ್ಕೆ ಇದನ್ನು ಬಳಸಬಾರದೆಂದು ಪ್ರೊಫೆಸರ್ ಕೇಳಿಕೊಂಡಿದ್ದಾರೆ.
ಎಐ ಜಗತ್ತಿಗೆ ಈ ಸಂಪ್ರದಾಯದ ಬಗ್ಗೆ ಏನೂ ತಿಳಿದಿಲ್ಲದ ಕಾಲದಲ್ಲಿ, ಈ ರೀತಿಯ ಒಂದು ವಿಷಯ ಬಂದಿರುವುದು ಬಹಳ ಉಪಯುಕ್ತ ಹಾಗೂ ಕುತೂಹಲ ಕೆರಳಿಸುವ ಸಂಗತಿ.
ವೈರಲ್ ಆದ ವಿಡಿಯೋ
ಪ್ರೊಫೆಸರ್ ಪ್ರತೋಷ್ ಕನ್ನಡಿಗರು. ಅವರು ಮತ್ತೊಂದು ವಿಷಯವಾಗಿ ಈ ತಿಂಗಳು ಸುದ್ದಿಯಲ್ಲಿದ್ದರು.
ಅವರು ತಮ್ಮ ಕ್ಲಾಸಿನಲ್ಲಿ ಏನೂ ಪೂರ್ವ ತಯಾರಿ ಇಲ್ಲದೆ ತಮ್ಮ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಹಜವಾದ ಚರ್ಚೆಯನ್ನು ಆನ್ಲೈನ್ನಲ್ಲಿ ಹಾಕಿದ್ದರು. ಈ ಚರ್ಚೆ ಎಐ, ಉನ್ನತ ಶಿಕ್ಷಣ ಹಾಗೂ ಮನುಷ್ಯನ ಮೌಲ್ಯದ ಬಗ್ಗೆ ಆಗಿತ್ತು.
ಅವರ ಚರ್ಚೆಯ ಮುಖ್ಯವಾದ ಮಾತು ಅಹಿತಕರ ಎನ್ನಿಸಬಹುದು. ಅವರು ಹೇಳಿದ್ದು, ಬೌದ್ಧಿಕ ಚಟುವಟಿಕೆಯಿಂದ ನಡೆಸುವ ಕೆಲಸಗಳನ್ನು ಎಐ ಸರಾಗವಾಗಿ ನಿರ್ವಹಿಸುತ್ತಿರುವ ಬಗ್ಗೆ. ಓದಿ ಕಷ್ಟಪಟ್ಟು ಕಲಿತ ಜನ ಈ ರೀತಿಯ ಕೆಲಸಗಳನ್ನು ಮಾಡಿ ಅದಕ್ಕೆ ಸಂಬಳ ಪಡೆದುಕೊಳ್ಳುತ್ತಿರುವಾಗ, ಅದೇ ಕೆಲಸ ಸುಲಭದಲ್ಲಿ, ಕಡಿಮೆ ಬೆಲೆಯಲ್ಲಿ ಆಗುತ್ತಿರುವುದರ ಬಗ್ಗೆ.
ಅಲ್ಲಿ ಅವರು ಕೇಳಿದ ಒಂದು ಪ್ರಶ್ನೆ: ಇನ್ನು ಮುಂದಿನ 5 ರಿಂದ 10 ವರ್ಷಗಳಲ್ಲಿ ಕಂಪನಿಗಳು ಕ್ಯಾಂಪಸ್ಗಳಿಗೆ ಬಂದು ವಿದ್ಯಾರ್ಥಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳುವುದನ್ನು ನಿಲ್ಲಿಸಿದರೆ — ಭಾರತದ ಅತಿ ಶ್ರೇಷ್ಠ ವಿದ್ಯಾಲಯಗಳಲ್ಲೂ ಈ ರೀತಿ ಆದರೆ — ವಿಶ್ವವಿದ್ಯಾಲಯದ ಶಿಕ್ಷಣ ಯಾತಕ್ಕಾಗಿ? ಎಂಬುದು.
ಇದಕ್ಕೆ ಸಿಕ್ಕ ಪ್ರತಿಕ್ರಿಯೆ ಅವರಿಗೂ ಅಚ್ಚರಿ ಮೂಡಿಸಿತು. ಮಿಲಿಯನ್ಗಟ್ಟಲೆ ಜನ ಅದನ್ನು ಕೇಳಿ ತಮ್ಮ ಅಭಿಪ್ರಾಯಗಳನ್ನೆಲ್ಲ ದಾಖಲಿಸಿದರು. ಈ ವಿಡಿಯೋವನ್ನು ನಾನು ಈ ಲೇಖನದಲ್ಲಿ ಎಂಬೆಡ್ ಮಾಡಿದ್ದೇನೆ. ನೀವು ಕೂಡ ಇದನ್ನು ನೋಡಬಹುದು.
ಎಐ ಕುರಿತಾಗಿ ಕೆಲಸ ಮಾಡುತ್ತಿರುವ ಪ್ರೊಫೆಸರ್ ಒಬ್ಬರು ಅದರ ಬಗ್ಗೆ ಕ್ಲಿಷ್ಟವಾದ ಪ್ರಶ್ನೆಗಳನ್ನು ಕೇಳುತ್ತಿರುವುದು, ಶಿಕ್ಷಣದ ಭವಿಷ್ಯವನ್ನು ಕುರಿತಾಗಿ ಮಾತನಾಡುತ್ತಿರುವುದು ನಮಗೆ ಅಚ್ಚರಿ ಮೂಡಿಸಬಹುದು. ಆದರೆ ಅವರ ಉತ್ತರ ಕೂಡ ಇದರಲ್ಲಿಯೇ ಅಡಗಿರುವುದನ್ನು ನಾವು ಕಾಣಬಹುದು.
ಕೊನೆಯ ಮಾತು
ಎಐ ಜಗತ್ತಿನಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಗಮನಿಸುವುದೇ ಈಗ ಪೂರ್ಣ ಪ್ರಮಾಣದ ಕೆಲಸವಾಗಿ ಹೋಗುತ್ತಿದೆ. ಅಷ್ಟೊಂದು ಬೆಳವಣಿಗೆಗಳು ಪ್ರತಿನಿತ್ಯ ಆಗುತ್ತಿವೆ.
ಹೀಗಿರುವಾಗ ಭಾರತದಲ್ಲಿ ಕೂಡ ಎಐ ಕುರಿತಾಗಿ ಸಾಕಷ್ಟು ಬೆಳವಣಿಗೆಗಳು ಆಗುತ್ತಿರುವುದು, ದಿನನಿತ್ಯ ಹೊಸತುಗಳು ಬರುತ್ತಿರುವುದು ಒಂದು ರೀತಿಯಲ್ಲಿ ಪ್ರೋತ್ಸಾಹ ಕೊಡುವಂಥದ್ದು. ಹಾಗೆಯೇ ಜಗತ್ತಿನಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ನೋಡುವಾಗ ಒಂದಷ್ಟು ತಳಮಳ ತಂದೊಡ್ಡುವುದೂ ಹೌದು.
ಎಐನಿಂದಾಗಿ ಜಗತ್ತು ಬದಲಾಗುತ್ತಿದೆ. ಪ್ರತೋಷರು ಹೇಳುವ ಮಾತಿನಲ್ಲೇ ಹೇಳಬೇಕೆಂದರೆ, ಇದು “ಸಿವಿಲೈಸೇಷನಲ್ ಚೇಂಜ್”. ನಾವೆಲ್ಲಾ ಈ ಯಾತ್ರೆಯಲ್ಲಿ ಒಂದು ಟರ್ನಿಂಗ್ ಪಾಯಿಂಟ್ನಲ್ಲಿದ್ದೇವೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!