ಈ ತಿಂಗಳು ಮಾತಿಗೆ ಸಿಕ್ಕ ಹಲವಾರು ಪರಿಚಿತ ರೈತರು ಮೊದಲು ತಿಳಿಸಿದ್ದೇ ಬಿಗಡಾಯಿಸಿರುವ ನೀರಿನ ಪರಿಸ್ಥಿತಿಯ ಬಗ್ಗೆ. ಈ ವರ್ಷ ಮಳೆ ಬರಲಿಲ್ಲ, ನೀರು ಕಡಿಮೆಯಾಗಿ ಹೋಗಿದೆ. ಮಳೆ ಇಲ್ಲದ ಕಾರಣ ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಇಳಿದು ಹೋಗಿದೆ, ಕೆಲವೆಡೆ ನೀರು ಬರುತ್ತಲೇ ಇಲ್ಲ.

ಇಲ್ಲಿ ಕುಣಿಗಲ್ ಬಳಿ ಕೃಷಿ ಮಾಡುತ್ತಿರುವ ಪರಿಚಿತರೊಬ್ಬರು ತಮ್ಮ ಜಮೀನಿನಲ್ಲಿ ಈ ತಿಂಗಳು ಎಲ್ಲವನ್ನೂ ನಿಲ್ಲಿಸಿಬಿಟ್ಟಿದ್ದಾರೆ. ಹತ್ತಿರದಲ್ಲೇ ಇರುವ ಮತ್ತೊಬ್ಬ ಗೆಳೆಯರ ಜಮೀನಿನಲ್ಲಿ ನೀರಿಲ್ಲದೆ ಜಾನುವಾರುಗಳಿಗೆ ತೊಂದರೆಯಾಗಿಬಿಟ್ಟಿದೆ. ಪಕ್ಕದ ಜಮೀನಿನ ರೈತರು ಸದ್ಯಕ್ಕೆ ನೀರು ಕೊಟ್ಟು ಸಹಾಯ ಮಾಡುತ್ತಿದ್ದಾರೆ. ಆದರೆ ಆ ಬೋರ್‌ವೆಲ್ ಕೂಡ ಎಷ್ಟು ದಿನ ಬಾಳುತ್ತದೆ ಎಂಬುದೇ ಒಂದು ಪ್ರಶ್ನಾರ್ಥಕ ಚಿಹ್ನೆ.

ನೀರಿನ ಸಮಸ್ಯೆ ರೈತನನ್ನು ತೀರಾ ಸಂದಿಗ್ಧಕ್ಕೆ ಒಳಪಡಿಸುವಂಥದ್ದು. ನೀರಿಲ್ಲದೆ ಏನೂ ಇಲ್ಲ. ಅಡಿಕೆ ಬೆಳೆದವರು ಟ್ರ್ಯಾಕ್ಟರ್‌ಗಳಲ್ಲಿ ನೀರು ತರಿಸಬಹುದು, ಅಡಿಕೆಯಿಂದ ಬಂದ ದುಡ್ಡಿನಲ್ಲಿ ಈ ಖರ್ಚು ತೂಗಿ ಹೋಗುತ್ತದೆ ಎಂಬ ಆಲೋಚನೆಯಲ್ಲಿ. ಅದರಲ್ಲೂ ಕೂಡ ಏನೂ ಹೇಳಲಾಗದು. ಅಡಿಕೆ ಬೆಳೆ ಬರಲಿಲ್ಲ ಎಂದರೆ ಅದಕ್ಕೆ ಹಾಕಿದ ದುಡ್ಡೆಲ್ಲ ನೀರಿನಲ್ಲಿ ಹೋಮ ಮಾಡಿದಂತೆ. ಆದರೂ ನಾನು ನೋಡುತ್ತಿರುವಂತೆ, ಅಡಿಕೆ ತೋಟ ಕಟ್ಟಿರುವ ಹಲವಾರು ರೈತರು ಬೋರೆವೆಲ್ ನೀರು ಕಡಿಮೆಯಾದಾಗ ಟ್ರ್ಯಾಕ್ಟರ್‌ಗಳಲ್ಲಿ ನೀರನ್ನು ಹೊಡೆಸುತ್ತಿದ್ದಾರೆ.

ಇರಲಿ, ಈ ಪರಿಸ್ಥಿತಿಗೆ ನಾವು ಬಂದದ್ದು ಹೇಗೆ? ಹೋದ ವರ್ಷ ಮಳೆ ಆಗಿತ್ತು ತಾನೇ? ಈ ವರ್ಷದಂತೆ ಮಳೆಯೇ ಬಂದಿಲ್ಲವೆಂದರೆ ಅದು ಬೇರೆ ವಿಷಯ. ಆದರೆ ಕಳೆದ ಹತ್ತು ವರ್ಷಗಳ ಮಳೆಯ ಲೆಕ್ಕ ಹಾಕಿದರೆ, ನಡುವೆ ಬರಗಾಲ ಬಂದರೂ ಮಳೆಯಂತೂ ಆಗಿದೆ. ಆ ನೀರೆಲ್ಲ ಎಲ್ಲಿಗೆ ಹೋಯಿತು?

ನಮ್ಮ ಜಮೀನಿನ ಭೂಮಿಗೆ ನೀರಿಂಗಿಸುವ ಕ್ಷಮತೆ ಎಷ್ಟಿರುತ್ತದೋ ಅಷ್ಟೇ ಮಳೆನೀರು ಇಂಗುತ್ತದೆ. ಉಳಿದದ್ದು ಹರಿದು ಹೋಗುತ್ತದೆ.

ನಮ್ಮ ನಮ್ಮ ಜಮೀನುಗಳಲ್ಲಿ ನೀರನ್ನು ಭೂಮಿಗೆ ಇಂಗಿಸಲು ಹಲವು ವಿಧಾನಗಳಿವೆ. ಮೊದಲನೆಯದು ಮಾನವ ನಿರ್ಮಿತ ಇಂಗುಗುಂಡಿಗಳು. ಇದನ್ನು ಮಾಡಬೇಕೆಂದು ಹೊರಟರೆ ಖರ್ಚು ತಗಲುತ್ತದೆ.

ಎರಡನೆಯದು ಸ್ಥಳೀಯ ಮರಗಳನ್ನು ಬೆಳೆಸುವುದು. ಆದರೆ ಸ್ಥಳೀಯ ಮರಗಳು ಬೆಳೆಯುವುದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ವರ್ಷಾನುಗಟ್ಟಲೆ ಬೆಳೆದ ಮೇಲಷ್ಟೇ ಅವುಗಳ ಬೇರುಗಳು ನೀರನ್ನು ಭೂಮಿಯಲ್ಲಿ ಸಮರ್ಪಕವಾಗಿ ಇಂಗಿಸುವ ಕೆಲಸ ಮಾಡುತ್ತವೆ. ಅಲ್ಲದೆ, ಈಗ ರೈತರು ಸ್ಥಳೀಯ ಮರಗಳನ್ನು ಹಾಕುವುದೇ ಕಡಿಮೆ. ಹೀಗಾಗಿ ಈ ವಿಧಾನ ಕೂಡ ಕಾರ್ಯಸಾಧ್ಯತೆಯಲ್ಲಿ ತೀರ ಹಿಂದಿನದ್ದು.

ಮೂರನೆಯ ವಿಧಾನ ಲಾವಂಚ ಹುಲ್ಲನ್ನು ಬೆಳೆಯುವುದು. ಲಾವಂಚ ಸಮರ್ಪಕವಾಗಿ ಬೆಳೆಯಿತೆಂದರೆ ಅದರ ಬೇರು ಹತ್ತು ಅಡಿ ಆಳದವರೆಗೆ ಹೋಗಬಲ್ಲದು. ಪರಿಸರವೇ ಇಂಗುಗುಂಡಿಯೊಂದನ್ನು ನಿರ್ಮಾಣ ಮಾಡಿದಂತೆ ಆಗುತ್ತದೆ. ಮಣ್ಣಿನ ಗುಣವನ್ನು ಕೂಡ ಇದು ಸುಧಾರಿಸುತ್ತದೆ.

ನೀರಿನಲ್ಲಿ ಲಾವಂಚ ಹಾಕಿ ಕುದಿಸಿ ಕುಡಿಯುವುದನ್ನು ನಾವು ನೋಡಿರುತ್ತೇವೆ, ಕೇಳಿರುತ್ತೇವೆ. ಲಾವಂಚಕ್ಕೆ ನೀರನ್ನು ಶುದ್ಧಿ ಮಾಡುವ ಗುಣವಿದೆ. ಮಣ್ಣು ಕೊಚ್ಚಿಕೊಂಡು ಹೋಗುವುದನ್ನು ತಡೆಯುವ ಕೆಲಸವನ್ನೂ ಅದು ಮಾಡಬಲ್ಲದು.

ಹಿಂದಿನ ಕಾಲದಲ್ಲಿ ಕೆರೆಗಳ ಸುತ್ತಲೂ ಲಾವಂಚ ಹುಲ್ಲನ್ನು ನೆಡುತ್ತಿದ್ದರು. ಅದು ನೀರನ್ನು ಸ್ವಚ್ಛವಾಗಿಡುತ್ತಿತ್ತು, ಕೆರೆಯ ದಡವನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತಿತ್ತು, ಜೊತೆಗೆ ನೀರನ್ನು ಭೂಮಿಯಲ್ಲಿ ಇಂಗಿಸುವ ಕೆಲಸವನ್ನೂ ಮಾಡುತ್ತಿತ್ತು. ಇದರಿಂದಾಗಿಯೇ ಬಾವಿಗಳು ಬದುಕುಳಿದಿದ್ದವು.

ಲಾವಂಚದ ಬೇರು ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟವೂ ಆಗುತ್ತಿದೆ. ಅದರ ಬೇರಿನಿಂದ ತೆಗೆದ ಎಣ್ಣೆ ಅಮೂಲ್ಯವಾದದ್ದು.

ಕೇಂದ್ರ ಸರ್ಕಾರ ಕೆಲ ವರ್ಷಗಳಿಂದ ಅರೋಮಾ ಮಿಷನ್ ಎಂಬ ಯೋಜನೆಯಡಿ ಲಾವಂಚ ಮತ್ತು ಸುಗಂಧ ಎಣ್ಣೆ ತೆಗೆಯಬಹುದಾದ ಇನ್ನೂ ಹಲವು ಗಿಡಗಳನ್ನು ರೈತರಿಗೆ ಉಚಿತವಾಗಿ ಕೊಡುತ್ತಿದೆ. ಸಿಮ್ಯಾಪ್ (CIMAP) ಎಂಬ ಸಂಸ್ಥೆ ಈ ಯೋಜನೆಯನ್ನು ನಡೆಸುತ್ತಿದೆ. ಬೆಂಗಳೂರಿನ ಜಿಕೆವಿಕೆ ಕ್ಯಾಂಪಸಿನ ಪಕ್ಕದಲ್ಲಿ ಈ ಸಂಸ್ಥೆಯ ಕ್ಯಾಂಪಸ್ ಇದೆ. ಹಸಿರಿನಿಂದ ತುಂಬಿದ ಈ ಆವರಣದಲ್ಲಿ ಹಲವು ಗಿಡಗಳನ್ನು ಪ್ರದರ್ಶನಕ್ಕೆಂದು ಇಟ್ಟಿದ್ದಾರೆ. ರೈತರಿಗೆ ಒಂದು ಎಕರೆಗೆ ಇಂತಿಷ್ಟು ಗಿಡಗಳೆಂದು ಉಚಿತವಾಗಿ ಕೊಡಲಾಗುತ್ತಿದೆ. ನೀವು ಕೂಡ ನಿಮ್ಮ ರೈತರ ಗುರುತು ಚೀಟಿ ಅಥವ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಿ ಗಿಡಗಳನ್ನು ಪಡೆದುಕೊಳ್ಳಬಹುದು. ಹೋಗುವ ಮೊದಲು ಒಮ್ಮೆ ವಿಚಾರಿಸಿಕೊಂಡು ಹೋಗುವುದು ಒಳ್ಳೆಯದು.

ಲಾವಂಚವನ್ನು ಹೇಗೆ ನೆಡುವುದು? ನಿಮ್ಮ ಜಮೀನಿನಲ್ಲಿ ಗ್ರಿಡ್ ಒಂದನ್ನು ರಚಿಸಿ ಎಲ್ಲೆಡೆ ಲಾವಂಚವನ್ನು ಹಾಕಬಹುದು. ತೋಟಗಾರಿಕೆ ಮಾಡುತ್ತಿರುವವರಿಗೆ ಇದು ಸುಲಭ. ಮರಗಳ ನಡುವೆ ಲಾವಂಚವನ್ನು ನೆಡಬಹುದು. ಮರಗಳು ಬೇರು ಬಿಟ್ಟುಕೊಳ್ಳುವುದಕ್ಕೂ ಇದು ಸಹಾಯ ಮಾಡಬಲ್ಲದು. ಬೇಲಿಯಲ್ಲಿ ಕೂಡ ಹಾಕಿಕೊಳ್ಳಬಹುದು. ಜಮೀನಿನಲ್ಲಿ ಹೊಂಡ, ಗುಂಡಿಗಳನ್ನು ತೋಡಿಸಿದ್ದಲ್ಲಿ ಅವುಗಳ ಸುತ್ತಲೂ ಹಾಕಬಹುದು.

ನನ್ನ ಜಮೀನಿನಲ್ಲಿ ನಾನು ಗ್ರಿಡ್ ವಿಧಾನವನ್ನೇ ಅನುಸರಿಸಿದೆ. ಮೂರು ಎಕರೆಯ ಜಾಗದಲ್ಲಿ ಉದ್ದಕ್ಕೂ ಅಡ್ಡಕ್ಕೂ ಗ್ರಿಡ್ ಒಂದನ್ನು ರಚಿಸಿ, ಪ್ರತಿಯೊಂದು ಚೌಕದಲ್ಲೂ ಒಂದೊಂದು ಲಾವಂಚ ಗಿಡವನ್ನು ಹಾಕಿಕೊಂಡು ಬಂದೆ. ಈಗ ಲಾವಂಚ ಹುಲ್ಲು ದೊಡ್ಡದಾಗಿ ಬೀಜ ಬಿಟ್ಟು ತಾನಾಗಿಯೇ ಎಲ್ಲೆಡೆ ಹರಡುತ್ತಿದೆ. ಹಾಗೆಂದು ಇದು ಕಳೆಯಂತೆ ಬೇರೆ ಗಿಡಗಳಿಗೆ ತೊಂದರೆ ಮಾಡುವುದಿಲ್ಲ. ಆಗಾಗ ನಾವು ಅದರ ಫಸಲು ತೆಗೆದುಕೊಳ್ಳುತ್ತಿರುವುದರಿಂದ ಕಳೆ ಹುಲ್ಲನ್ನು ನಿಭಾಯಿಸಿದಂತೆ ಇದನ್ನು ನಿಭಾಯಿಸುವ ಪ್ರಮೇಯವೂ ಬರದು.

ನಿಮ್ಮ ತೋಟದಲ್ಲೂ ಲಾವಂಚ ಹುಲ್ಲನ್ನು ಹಾಕಿ ನೋಡಿ. ಮಣ್ಣಿನಲ್ಲಿ ನೀರು ಇಂಗಿದರೆ ನಿಮ್ಮ ಬೋರ್‌ವೆಲ್‌ಗಳು ಉಳಿಯುತ್ತವೆ. ಮಾನವ ನಿರ್ಮಿತ ಇಂಗುಗುಂಡಿಗಳು ಮಾಡುವುದಕ್ಕಿಂತ ಹೆಚ್ಚಿನ ಕೆಲಸವನ್ನು ಈ ಹುಲ್ಲಿನ ಗಿಡಗಳು ಮಾಡುತ್ತವೆ.