ಸುಬ್ಬಣ್ಣ ಅಲ್ಲಿ ಎಲ್ಲರಿಗೂ ಚಿರಪರಿಚಿತರು. ಯಾವುದೇ ಪುಸ್ತಕ ಬೇಕಿದ್ದರೂ, “ಸುಬ್ಬಣ್ಣನನ್ನು ಕೇಳಿ ನೋಡು; ಎಲ್ಲಿ ಸಿಗುತ್ತದೆ ಎಂದು ಹೇಳುತ್ತಾರೆ, ಇಲ್ಲವಾದರೆ ತರಿಸಿಕೊಡುತ್ತಾರೆ. ಅವರ ಲೈಬ್ರರಿಯಲ್ಲೇ ಇರಲಿಕ್ಕೂ ಸಾಕು” ಎಂಬ ಮಾತು ವಿದ್ಯಾರಣ್ಯಪುರದಲ್ಲಿಯೇ ಸಾಮಾನ್ಯವಾಗಿತ್ತು. ಸುಬ್ಬಣ್ಣನ ಲೈಬ್ರರಿ ತನ್ನದೇ ಆದ ಒಂದು ಲೋಕ. ಅಲ್ಲಿಗೆ ಹೋದವರು ಪುಸ್ತಕಗಳಲ್ಲಿ ಮುಳುಗಿಬಿಡುತ್ತಿದ್ದರು. ಅಲ್ಲಿಯೇ ಓದಲು ಸುಬ್ಬಣ್ಣ ಯಾರಿಂದಲೂ ದುಡ್ಡು ತೆಗೆದುಕೊಳ್ಳುತ್ತಿರಲಿಲ್ಲ. ಎಷ್ಟೋ ಜನ ಹುಡುಗರು ಗಂಟೆಗಟ್ಟಲೆ ಕಾಂಪಿಟೇಷನ್ ಸಕ್ಸೆಸ್, ಮುಂತಾದ ಪುಸ್ತಕಗಳನ್ನು ಎರವಲು ಪಡೆಯದೆ ಅಲ್ಲಿಯೇ ಕುಳಿತು ಓದಿ ಹೋಗುತ್ತಿದ್ದರು. ಕೆಲವು ‘ನೋಟ್ಸ್’ ಮಾಡಿಕೊಂಡು ಮನೆಗೆ ಹಿಂದಿರುಗುತ್ತಿದ್ದರು. ಪರೀಕ್ಷೆಗಳಿಗೆ ತಯಾರಿ ನಡೆಸಲೆಂದೇ ಬರುತ್ತಿದ್ದ ಪುಸ್ತಕಗಳನ್ನು ಯಾರಾದರೂ ಎರವಲು ಪಡೆದು ತೆಗೆದುಕೊಂಡು ಹೋದರೆ ಕಾಪಿ ಇಲ್ಲದಂತಾಗುತ್ತಿತ್ತು. ಅದಕ್ಕಾಗಿ ಸುಬ್ಬಣ್ಣ ಈ ರೀತಿಯ ಪುಸ್ತಕಗಳನ್ನು ಎರಡೆರಡು ಕಾಪಿಯಂತಲೋ, ಮೂರು ಕಾಪಿಯಂತಲೋ ತೆಗೆದುಕೊಂಡು ಇಡುತ್ತಿದ್ದರು. ಒಂದು ತಿಂಗಳಾದ ನಂತರ ಗುಜರಿಗೆ ಹೋಗುವ ಪುಸ್ತಕಗಳು ಅವು. ಆದರೂ ಹೆಚ್ಚಿನ ಕಾಪಿಗಳನ್ನು ತರಿಸುವಲ್ಲಿ ಸುಬ್ಬಣ್ಣ ಜಿಪುಣತನ ಮಾಡುತ್ತಿರಲಿಲ್ಲ. ಯಾವುದೇ ಪುಸ್ತಕ ಕೇಳಿದರೂ ತರಿಸಿ ಲೈಬ್ರರಿಯಲ್ಲಿಡುತ್ತಿದ್ದರು. ಪುಸ್ತಕ ಹೆಚ್ಚು ಓಡಲಿ, ಬಿಡಲಿ. ಒಟ್ಟು ಸುಬ್ಬಣ್ಣನ ಲೈಬ್ರರಿಗೆ ಹೋದವರಿಗೆ ಯಾರಿಗೂ ಪುಸ್ತಕ ಸಿಗದೆ ಹೋಗುತ್ತಿದ್ದುದು ಕಡಿಮೆ. ಸರ್ಕ್ಯುಲೇಟ್ ಆದ ಹಣದಲ್ಲಿ ಅವರು ಹಾಕುತ್ತಿದ್ದ ದುಡ್ಡು ವಾಪಸ್ ಬರುತ್ತಿತ್ತೋ ಇಲ್ಲವೋ - ಸುಬ್ಬಣ್ಣನ ಲೈಬ್ರರಿಯಲ್ಲಿ ಆಸ್ಟ್ರಿಕ್ಸ್ (Asterix), ಟಿನ್ ಟಿನ್, ಟಿಂಕಲ್, ಟಿಂಕಲ್ ಡೈಜೆಸ್ಟ್, ಚಂದಮಾಮ, ಬಾಲಮಿತ್ರ, ಮುಂತಾದ ಎಲ್ಲವನ್ನೂ ಖರ್ಚಿಗೆ ಲೆಕ್ಕ ಇಲ್ಲ ಅನ್ನುವ ಹಾಗೆ ತರಿಸಿಟ್ಟಿರುತ್ತಿದ್ದರು. ಇವೆಲ್ಲ ಪುಸ್ತಕಗಳು ಒಂದೆಡೆಯೇ ಸಿಗುತ್ತಿದ್ದು ಆಗ ಶಾಲೆಯಲ್ಲಿ ಓದುತ್ತಿದ್ದವರಾದ ನಾವು ಪ್ರತಿದಿನ ಅಲ್ಲಿಗೆ ಹೋಗುವುದೊಂದು ಚಾಳಿಯಂತಾಗಿಬಿಟ್ಟಿತ್ತು. ಸರ್ಕಾರಿ ಗ್ರಂಥಾಲಯದಲ್ಲಿ ಸಿಗದ ಪುಸ್ತಕಗಳು ಇಲ್ಲಿ ಸಿಗುತ್ತಿದ್ದವು. ಎಲ್ಲ ಟೈಟಲ್ಲುಗಳೂ ಇಲ್ಲಿ ಇರುತ್ತಿದ್ದವು. ಹೊಸತೊಂದು ಆಸ್ಟ್ರಿಕ್ಸ್ ಪುಸ್ತಕ ಬಂದಾಗ ಸುಬ್ಬಣ್ಣ “ಇಗೋ 5 ರೂಪಾಯಿ ದಿನಕ್ಕೆ… ತಗೊಂಡು ಹೋಗ್ತೀಯಾ?” ಎಂದು ನನಗೆ ತಮಾಷೆಗೆ ಕೇಳಿದ್ದು ಇವತ್ತಿಗೂ ನೆನಪಿದೆ. ಜೇಬಿನಲ್ಲಿ 5 ರೂಪಾಯಿ ಇರದಿದ್ದ ನಾನು ಅಲ್ಲಿಯೇ ಕುಳಿತು ಓದಿ ಪುಸ್ತಕವನ್ನಿಟ್ಟು ಬರುತ್ತಿದ್ದೆ. ಸುಬ್ಬಣ್ಣನಿಗೆ ಅದರಿಂದ ಏನೂ ಬೇಸರವಿರುತ್ತಿರಲಿಲ್ಲ.

ಅದೊಂದು ವರ್ಷ ಸುಬ್ಬಣ್ಣನ ಲೈಬ್ರರಿ ಎದುರಿಗೆ ಒಂದು ಹೊಸ ಪುಸ್ತಕದ ಅಂಗಡಿ ತೆರೆದುಕೊಂಡಿತು. ಅದು ಎರಡಂತಸ್ತಿನ ಪುಸ್ತಕದ ಮಳಿಗೆ. ಅಲ್ಲಿ ಕೂಡ ಪುಸ್ತಕ ಓದಲು ಬಂದವರಿಗೆ ಯಾವುದೇ ತಡೆ ಇರದಂತೆ ವ್ಯವಸ್ಥೆ ಮಾಡಿದ್ದರು. ಅದನ್ನು ನೋಡಿಕೊಳ್ಳಲು ಕೌಂಟರುಗಳಲ್ಲಿ ನವತರುಣರು, ತರುಣಿಯರು. ಅಷ್ಟೇ ಅಲ್ಲ, ಅವರ ಬಳಿ ಪುಸ್ತಕಗಳಲ್ಲದೆ ಬೇರೆ ಇನ್ನೂ ಹಲವು ವಸ್ತುಗಳು ಸಿಗುತ್ತಿದ್ದವು. ಕಾಲೇಜು ಹುಡುಗರು "ಗ್ರೀಟಿಂಗ್ ಕಾರ್ಡ್" ತೆಗೆದುಕೊಳ್ಳಲು ಅಲ್ಲಿಗೆ ಹೋಗಲು ಶುರುಮಾಡಿದರು. ಪೆನ್ನು, ಪೇಪರ್, ಎರೇಸರ್, ಪರೀಕ್ಷೆಗೆ ರೊಟ್ಟು, ಸ್ಟೆಪ್ಲರ್, ಎಲ್ಲವೂ ಅಲ್ಲಿಯೇ ಸಿಗುತ್ತಿತ್ತು. “ಈಗ ಅಪರೂಪದ ಪುಸ್ತಕಗಳನ್ನು ಹುಡುಕುತ್ತಿರುವವರಿಗೆ ಮಾತ್ರ ಸುಬ್ಬಣ್ಣನ ನೆನಪಾಗುವುದು” - ಈ ಮಳಿಗೆಯಲ್ಲಿ ಸದಾ ಕಾಲ ಇರುತ್ತಿದ್ದ ಜನಸ್ತೋಮವನ್ನು ಕಂಡು ಸುಬ್ಬಣ್ಣ ತಮಾಷೆ ಮಾಡುತ್ತಿದ್ದರು. ನಂತರ ಹೊಸ ಅಂಗಡಿಯಲ್ಲಿ ಮ್ಯಾಗಜೀನುಗಳ ಒಂದು ಡಿಸ್ಪ್ಲೇ ಬಾಗಿಲ ಬಳಿಯೇ ಮೂಡಿತು. ಅಲ್ಲಿಗೆ ಸುಬ್ಬಣ್ಣನ ಸರ್ಕ್ಯುಲೇಟಿಂಗ್ ಲೈಬ್ರರಿಗೆ ಓದಲು ಬರುತ್ತಿದ್ದ ಹುಡುಗರ ಸಂಖ್ಯೆಯೂ ಕಡಿಮೆಯಾಯಿತು.

ಒಂದು ದಿನ ಸುಬ್ಬಣ್ಣನ ಜೊತೆ ಹಿರಿಯರೊಬ್ಬರು ಮಾತಿನಲ್ಲಿ ತೊಡಗಿದ್ದರು. ಆಗ ಸುಬ್ಬಣ್ಣ ಹೇಳಿದ ಮಾತು ನನಗೆ ಇವತ್ತಿಗೂ ನೆನಪಿದೆ: "ನನ್ನ ಮಕ್ಕಳೆಲ್ಲಾ ಅಮೆರಿಕಾ ಸೇರಿದರು. ಇದರಲ್ಲಿ ನನ್ನ ಹೊತ್ತು ಹೋಗುತ್ತಿತ್ತು. ನನ್ನ ಮಗ ದೊಡ್ಡ ಅಂಗಡಿ ಹಾಕಿಸಿಕೊಡುತ್ತೇನೆ ಎಂದು ಹೇಳಿದ, ಆದರೆ ನನಗೆ ಅದರಲ್ಲೆಲ್ಲಾ ಆಸಕ್ತಿ ಇಲ್ಲ. ನನಗಿರುವ ಆಸಕ್ತಿ ಪುಸ್ತಕಗಳ ಬಗ್ಗೆ ಅಷ್ಟೇ. ಎಷ್ಟೋ ಹುಡುಗರು ಇಲ್ಲಿ ಓದಿಕೊಂಡು ಹೋಗಿ ಎಂದೋ ಎಷ್ಟೋ ವರ್ಷಗಳ ಬಳಿಕ ವಾಪಸ್ ಬಂದು, “ನೀವು ಅವತ್ತು ನನಗೆ ಪುಸ್ತಕ ಓದಲು ಕೊಟ್ಟಿರಿ, ಇವತ್ತು ನಾನು ಉತ್ತಮ ಸ್ಥಿತಿಯಲ್ಲಿದ್ದೇನೆ" ಎಂದು ಹೇಳಿದಾಗ ನನಗೆ ಸಿಗುವ ಖುಷಿ ಲಕ್ಷಗಟ್ಟಲೆ ದುಡಿದಷ್ಟು. ನನ್ನದು ಖರ್ಚು ಕಡಿಮೆ. ಇನ್ನು ದೊಡ್ಡ ಅಂಗಡಿ ಯಾರಿಗೆ?”