ನಂಗೂ ಬರೀಬೇಕು ಅಂತ ತುಂಬಾ ಸಲ ಅನ್ಸುತ್ತೆ. ಆದ್ರೆ ಏನ್ ಬರೀಬೇಕು ಅಂತಾನೇ ಗೊತ್ತಾಗಲ್ಲ.ಪೇಪರ್ ಪೆನ್ ಹಿಡಿದ ತಕ್ಷಣ ತಲೆ ಖಾಲಿ. ಓಡದೇ ಇಲ್ಲ ಅಂತ ಅನ್ನುತ್ತೆ. ನಾನ್ ಬಿಡ್ತೀನಾ, ಊಹೂಂ, ಕಡೆಗೆ ಓಂದ್ ಚಿತ್ರನಾದ್ರೂ ಬರೆದು ಏಳ್ತೀನಿ.
’ಮಕ್ಕಳು ಇರಬೇಕು ಕಣ್ರೀ ಮನೇಲಿ, ಹೀಗೇ ಏನಾದ್ರೂ ಬರೀತಾನೇ ಇರ್ತಾವೆ’ ಅನ್ನೋವರೆಗೂ ನಡೆದೇ ಇತ್ತು.
ಒಂದ್ಸಲ ಕವಿತೆ ಬರೆದೆ. ( ಎಲ್ಲರೂ ಮೊದಲಿಗೆ ಪ್ರೀತಿ ಪ್ರೇಮದ ಬಗ್ಗೇನೇ ಕವಿತೆ ಬರೀತಾರಾ? ) ಅವಳಿಗೆ ಕೊಟ್ಟೆ. ಖಿಸಕ್ಕಂತ ನಕ್ಕು ಬಿಟ್ಟಳು. ಅಭಿಪ್ರಾಯ ಕೇಳೋ ಧೈರ್ಯ ಮಾಡಲಿಲ್ಲ.
ಈ ಸಲ ಹುಚ್ಚುಚ್ಚಾಗಿ ಪ್ರೀತಿ ಪ್ರೇಮದ ಬಗ್ಗೆ ಬರೆಯಲ್ಲ, ಏನಾದ್ರು ಗಂಭೀರವಾದದ್ದರ ಬಗ್ಗೆ ಬರೀತೀನಿ ಅಂತ ನಿರ್ಧಾರ ಮಾಡ್ದೆ. ಸರಿ ವಿಷಯ ಏನು? ಬಾಲ ವಿವಾಹ, ನಿರುದ್ಯೋಗ, ಜಾತಿ ಕಲಹ, ಪ್ಚ ಇವ್ಯಾವ್ದೂ ಬೇಡ ಕ್ರಾಂತಿ ಬಗ್ಗೆ ಬರೆಯೋಣ ಆಂತ ಯೋಚಿಸ್ತಾ ಇರಬೇಕಾದ್ರೇ ’ರೀ ಸುಮ್ನೆ ಪೇಪರ್ ಪೆನ್ನು ಹಿಡಕೊಂಡು ಮಾಡು ನೋಡೋ ಬದಲು ಅಂಗಡಿಗೆ ಹೋಗಿ ಸಾಮಾನು ತಗಂಡು ಬನ್ನಿ.’ - ಅಡಿಗೆ ಮನೆಯಿಂದ ಹುಕುಂ. ಇಲ್ಲ ಅಂದರೆ ಮನೇಲೇ ಕ್ರಾಂತಿ ಶುರು. ತೆಪ್ಪಗೆ ಹೂಂ ಅಂದೆ.
ಇಲ್ಲ ಕವಿತೆ ನನ್ನ ಜಾಯಮಾನಕ್ಕೆ ಒಗ್ಗಲ್ಲ, ನಂದೇನಿದ್ರೂ ಗದ್ಯ. ಭೈರಪ್ಪನವರ ತರಹ ಎದೆ ಕಲಕೋ ರೀತಿ ಬರೀಲಾ, ತೇಜಸ್ವಿ ತರ ಮಾಮೂಲಿಯಾಗೇ ಜಾಲಿಯಾಗಿ ಬರೀಲಾ.. confusion ಶುರು. ಅದೆಲ್ಲಾ ಬೇಡ ಮೊದಲು ಕಥೆಯಿಂದ ಶುರು ಮಾಡ್ತೀನಿ. ’ ಓಂದೂರಲ್ಲಿ ಒಬ್ಬ..." ಛೇ ಚಂದಮಾಮದಲ್ಲೂ ಈಗ ಈ ರೀತಿ ಶುರು ಮಾಡಲ್ಲ.
ಕತೆ, ಕಾದಂಬರಿ ಎಲ್ಲಾ ಬೇಡ. ಗಂಭೀರ ಸಾಹಿತ್ಯ, ಲೇಖನ ಬರೀತೀನಿ ಅಂತ ನಿರ್ಧರಿಸಿದ್ದಾಗಿದೆ. ಆಳವಾದ ಅಧ್ಯಯನ ನಡೀತಿದೆ.