ಸಮ್ರಾಟರ ಇತಿಹಾಸಕ್ಕಾಗಿ ಭೇಟಿ ಕೊಡಿ- ___LINK_OPEN_href="http://tugalak.blogspot.com/" target=_self___ತುಘಲಕ್

 

ಪ್ರಪಂಚ ನಶ್ವರ ಅದರಲ್ಲೂ ತಮ್ಮ ಜೀವನ ಅದಕ್ಕಿಂತಲೂ ನಶ್ವರ, ಈ ಜಗತ್ತೆಲ್ಲಾ ಮೋಹ ಮಾಯದ ಜಾಲ ಎಂದು ತಿಳಿದಿರುವ ಸಾಮ್ರಾಟರು ತಮ್ಮ ದೂರದೃಷ್ಟಿಯನ್ನು ಬಳಸಲು ಈಗ ತೊಡಗಿದ್ದಾರೆ. ತಮ್ಮ ನಂತರವೂ ಮುಂದಿನ ಪೀಳಿಗೆ ಮತ್ತು ಪ್ರಜೆಗಳು ಸುಖವಾಗಿರಬೇಕೆಂದು ಮಹಾಮಹಿಮರು ಎಲ್ಲ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಹಾಗಾಗಿ ಈಗಲೇ ಸಾಧ್ಯವಾದಷ್ಟು ಬೇಗ ಸಾಮ್ರಾಜ್ಯದ ಉತ್ತರಾಧಿಕಾರಿಗಳನ್ನು ಆಯ್ಕೆ ಮಾಡಬೇಕೆಂಬುದು ಸಾಮ್ರಾಟರ ಮಹದಿಚ್ಛೆ!
ಈ ಲೋಕಕಲ್ಯಾಣದ ಕಾಯಕಕ್ಕಾಗಿ ಸಾಮ್ರಾಟರು ಪಡುತ್ತಿರುವ ಕಷ್ಟಗಳು ಕಡಿಮೆ ಏನಲ್ಲ. ಇದಕ್ಕಾಗಿ ಅವರು ತಮ್ಮ ಹತ್ತೊಂಬತ್ತೂ ಹೆಂಡಿರ ತಲಾ ಹನ್ನೆರಡು ಮಕ್ಕಳ ಹಾಗೂ ಐವತ್ತೆರಡು ಸ್ಟೆಫನಿಗಳ ತಲಾ ಏಳು ಮಕ್ಕಳನ್ನು ತಮ್ಮ ಸಾಮ್ರಾಜ್ಯದ ವಿವಿಧ ಹುದ್ದೆಗಳಲ್ಲಿ ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅನೇಕ ಹೊಸ ಹುದ್ದೆಗಳನ್ನು ಸೃಷ್ಟಿಸುತ್ತಿದ್ದಾರೆ. ಪ್ರತೀ ಜಿಲ್ಲೆಯ ಚುನಾವಣೆಗಳಲ್ಲಿ ತಮ್ಮ ಸ್ಟೆಫನಿಗಳ ಮಕ್ಕಳನ್ನು ಗೆಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಮದಿರೆ ಮತ್ತು ಮನಿಯ ಹಂಚಿಕೆ ನಡೆದಿದೆ.
ಇದನ್ನೆಲ್ಲಾ ಬಾದಷಹರು ತಮ್ಮ ಸ್ವಂತಕ್ಕಾಗಿ ಮಾಡಿಕೊಳ್ಳುತ್ತಿದ್ದಾರೆ ಎಂದರೆ ಅದು ತಪ್ಪು ಕಲ್ಪನೆ. ಇದೆಲ್ಲಾ ಲೋಕ ಹಾಗೂ ಸಾಮ್ರಾಜ್ಯ ಕಲ್ಯಾಣಕ್ಕಾಗಿ! ಎಲ್ಲಾ ಕಡೆ ತಮ್ಮ ಹೆಂಡಿರ ಹಾಗೂ ಸ್ಟೆಫನಿಗಳ ಮಕ್ಕಳು ಅತ್ಯಂತ ಜನಪ್ರೀಯರಾಗಿದ್ದು ಅವರದೇ ಆಡಳಿತ ಬೇಕೆಂಬುದು ಜನರ ಆಸೆಯಾಗಿದೆ. ಸಾಮ್ರಾಟರ ಈ ಮೇಲ್ಪಂಕ್ತಿಯನ್ನು ಕಂಡ ವಜೀರರು ಹಾಗೂ ಅಧಿಕಾರಿಗಳು ಲೋಕೋದ್ಧಾರದ ಈ ಆದರ್ಶವನ್ನು ಪಾಲಿಸುತ್ತಿದ್ದಾರೆ. ತಮ್ಮ ನಂತರ ತಮ್ಮ ಮಕ್ಕಳೇ ಸದರಿ ಸ್ಥಾನದಲ್ಲಿ ವಿರಾಜಿಸಬೇಕೆಂದು ಅವಿರತ ಶ್ರಮಿಸುತ್ತಿದ್ದಾರೆ! ತಮ್ಮ ಮಕ್ಕಳನ್ನು ಜನಪ್ರಿಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಕೆಸರಲ್ಲಿ ಮುಳುಗಿದ್ದ ಮಕ್ಕಳಿಗೆ ಸ್ನಾನ ಮಾಡಿಸಿ ಸೇಂಟಲ್ಲಿ ತೋಯಿಸುತ್ತಿದ್ದಾರೆ.
ದಯವಿಟ್ಟು ಎಲ್ಲರೂ ಈ ಬಾರಿಯ ಚುನಾವಣೆಗಳಲ್ಲಿ ವಜೀರರ ಹೆಂಡಿರು ಮತ್ತು ಸ್ಟೆಫನಿಗಳ ಮಕ್ಕಳಿಗೇ ಮತ ನೀಡಾಬೇಕೆಂದು ವಿನಂತಿಯಾಗಿದೆ.