ಮಹಾಮಹಿಮ ತುಘಲಕರ ಸಾಮ್ರಾಜ್ಯದಲ್ಲಿ ಪಡುವಣ ದೇಶದಿಂದ ಕುರಿ ಜ್ವರವು ಧಾಳಿ ಮಾಡಿದೆ. ಕುರಿ ಜ್ವರ ಎಂದ ಕೂಡಲೇ ಇದರಿಂದ ಮಟನ್ ವ್ಯಾಪಾರಕ್ಕೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಇದಕ್ಕೆ ಕೆ೧ ಏನ್ ೧ ಎಂದು ಹೆಸರಿಸಲಾಗಿದೆ. ಈ ಜ್ವರವು ಸಾಮ್ರಾಜ್ಯದೊಳಗೆ ಬರದಿರಲು ಪ್ರತೀ ಕೊಟ್ಟಿಗೆ ಕುದುರೆ ಲಾಯ ಕುರಿ ದೊಡ್ದಿಗಳಲ್ಲಿ ತಪಾಸಣೆಗಳನ್ನು ಕೈಗೊಂಡಿದ್ದರೂ ಹೇಗೋ ಕಣ್ಣು ತಪ್ಪಿಸಿ ಒಳಗೆ ಬಂದು ಬಿಟ್ಟಿದೆ.
ಇಲ್ಲಿಯವರೆಗೆ ಈ ತಿಂಗಳಲ್ಲಿ ಕುರಿಜ್ವರದಿಂದ ಹದಿಮೂರು ಜನ ನೆಗೆದು ಬಿದ್ದಿದ್ದಾರೆ. ಪ್ರತೀ ತಿಂಗಳು ಕೆಮ್ಮಿನಿಂದ, ಟಿ ಬಿ ಯಿಂದ ಸಾವಿರಾರು ಜನ ಸಾಯುತ್ತಿದ್ದರೂ ಕುರಿಜ್ವರವನ್ನು ಅವೆಲ್ಲವಕ್ಕಿಂತ ಭಯಾನಕ ರೋಗ ಎಂದು ಖಾವಂದರು ಪರಿಗಣಿಸಿದ್ದಾರೆ. ಕುರಿಜ್ವರ ಸೊಂಕಿತರಾದವರ ಸಾಯುವ ಸಾಧ್ಯತೆ ಶೇ ೦.೦೦೧ ಇದ್ದರೂ ಅಷ್ಟು ಜನ ಕುರಿಜ್ವರದಿಂದ ಸಾಯುವ ಬದಲು ಬೇರೆ ರೀತಿಯಿಂದ ಸಾಯಲಿ ಎಂಬುದು ಚಕ್ರವರ್ತಿಗಳ ಘನ ಉದ್ದೇಶ. ಅದಕ್ಕಾಗಿ ಕುರಿಜ್ವರದಿಂದ ಬಳಲುತ್ತಿರುವವರ ಚಿಕಿತ್ಸೆಗೆ ನೂರು ವರಹಗಳ ಸಬ್ಸಿಡಿಯನ್ನು ಸಾಮ್ರಾಟರು ಘೋಷಿಸಿದ್ದಾರೆ. ಕುರಿಜ್ವರದಿಂದ ಸತ್ತವರ ಬಗ್ಗೆ ಮೀಡಿಯಾಗಳಲ್ಲಿ ಸಾಕಷ್ಟು ವರದಿಗಳು ಪ್ರಸಾರವಾಗಿ ಕುರಿಜ್ವರದಿಂದ ಸತ್ತವರೆಲ್ಲ ವಿ ಐ ಪಿ ಸ್ಥಾನವನ್ನು ಪಡೆದಿರುವುದರಿಂದ ಅವರನ್ನೆಲ್ಲ ಗಂಧದ ಕಟ್ಟಿಗೆಯಲ್ಲಿ ಸುಡಬೇಕು ಎಂದು ಆದೇಶ ಹೊರಡಿಸಲಾಗಿದೆ. ಕುರಿಜ್ವರದಿಂದ ಸತ್ತು ಅದ್ಭುತ ಸಾಧನೆಗೈದ ಕುರಿಜ್ವರ ಆವಾಹನೆಯ ಏಕೈಕ ಸಾಧನೆಯಿಂದಲೇ ವಿಶ್ವವಿಖ್ಯತರಾದವರ ತ್ಯಾಗ ಬಲಿದಾನಗಳನ್ನು ಸ್ಮರಿಸಲು ಸ್ಮಾರಕವನ್ನು ನಿರ್ಮಿಸಲು ಐದು ಸಾವಿರ ವರಹಗಳನ್ನು ಬಿಡುಗಡೆ ಮಾಡಲಾಗಿದೆ.
ಕುರಿಜ್ವರಕ್ಕೆ ಲಸಿಕೆಯನ್ನು ಕಂಡು ಹಿಡಿಯಲಾಗಿದೆ. ಬೇರೆ ಲಸಿಕೆಗಳನ್ನು ತಯಾರಿಸಲು ಐದಾರು ತಿಂಗಳುಗಳು ಬೇಕಾದರೂ ಕುರಿಜ್ವರಕ್ಕೆ ಮಾತ್ರ ಲಸಿಕೆಯನ್ನು ಒಂದೇ ತಿಂಗಳಲ್ಲಿ ಕಂಡು ಹಿಡಿಯಲಾಗಿದೆ. ಈ ಲಸಿಕೆಯನ್ನು ಆಮದು ಮಾಡಿಕೊಳ್ಳಲು ಎಲ್ಲಾ ಸಿದ್ಧತೆಗಳು ನಡೆದಿದ್ದು ಬಾದಶಹರು ಕಂಪನಿಗಳೊಡನೆ ಮಾತುಕತೆಗೆ ಕೂತಿದ್ದಾರೆ. ಲಸಿಕೆಯಲ್ಲಿ ಅನೇಕ ದೋಷಗಳಿದ್ದು ಕುರಿಜ್ವರದ ಲಸಿಕೆ ತಿಂದವರು ನೊಣ ಜ್ವರದಿಂದ ಸಾಯುವ ಸಾಧ್ಯತೆ ಇದೆ ಎಂದು ಕೆಲವರು ದೂರಿದ್ದಾರೆ. ಆದರೆ ಖಾವಂದರು ಮತ್ತು ಅಧಿಕಾರಿಗಳಿಗೆ ತವುಡು ತಿನ್ನಿಸಿ ಈ ಲಸಿಕೆಯು ಹಾನಿಕಾರಕವಲ್ಲ ಇದನ್ನು ತಿಂದವರು ಎಂದೂ ನೊಣ ಜ್ವರದಿಂದ ಸಾಯುವುದಿಲ್ಲ ಎಂದು ಸಮರ್ಥವಾಗಿ ಮತ್ತು ನಿರ್ಲಜ್ಜವಾಗಿ ನಿರೂಪಿಸಿದ್ದಾರೆ. ಲಸಿಕೆಯನ್ನು ಮಕ್ಕಳಿಗೆ ಮುದುಕರಿಗೆ ಗಂಡಸರಿಗೆ ಹೆಂಗಸರಿಗೆ ನಪುಮ್ಸಕರಿಗೆ ಎಲ್ಲರಿಗೂ ತಿನ್ನಿಸಲು ಗಲ್ಲಿ ಗಲ್ಲಿಗಳಲ್ಲಿ ಬೀದಿ ಬೀದಿಗಳಲ್ಲಿ ಬೂತ್ ಗಳನ್ನೂ ಸ್ಥಾಪಿಸಲಾಗಿದೆ. ಶೌಚಾಲಯಗಳಲ್ಲಿ, ಮೂತ್ರಾಲಯಗಳಲ್ಲಿ, ಕೊಟ್ಟಿಗೆಗಳಲ್ಲಿ, ದೊಡ್ದಿಗಳಲ್ಲಿ, ಲಾಯಗಳಲ್ಲಿ ಅಷ್ಟೇ ಏಕೆ ಹಜಾಮತಿಯ ಅಂಗಡಿಗಳ ಮುಂದೆಯೂ ಅಕ್ಕ ತಂಗಿಯರು, ತಂದೆಗಳು, ಹುಡುಗರು ಬಿಳಿ ಬಟ್ಟೆ ತೊಟ್ಟು ಸಾಲಾಗಿ ನಿಂತಿದ್ದಾರೆ. ಬಾದಶಹರು ತವುಡು ತಿಂದ ಕೂಡಲೇ ಎಲ್ಲರಿಗೂ ಲಸಿಕೆಯನ್ನು ತಿನ್ನಿಸಲಾಗುವುದು. ಕುರಿಜ್ವರದ ಬಗ್ಗೆ ಭಯ ಬೇಡ ನಾನೂ ಸಹ ನಮ್ಮವರೊಬ್ಬರು ಸಾಯುವವರೆಗೂ ಭಯ ಪಡುವುದಿಲ್ಲ ಎಂದು ಸಾಮ್ರಾಟರು ಜನರಲ್ಲಿ ಅರಿಕೆ ಮಾಡಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಯಾರನ್ನೂ ಸಂಪರ್ಕಿಸಬೇಡಿ. ಸಂಪರ್ಕಿಸಿದಷ್ಟೂ ಗೊಂದಲ ಹೆಚ್ಚಾಗುತ್ತದೆ ಎಂದು ದರ'ಬಾರಿ'ನ ಪ್ರಕಟಣೆ ತಿಳಿಸಿದೆ. ಇನ್ನು ಮುಂದೆ ಬಾಂಧವರೆಲ್ಲ "ನಾವು ಕುರೀದು ಹೆಣದ್ದು ಮಟನ್ ಗೆ ತಿನ್ನಾಕಿಲ್ಲ. ಕೋಳಿ ಹೆಣ ಮಾತ್ರ ತಿಂತಾರೆ" ಎಂದು ಹಠ ಮಾಡದೆ ಕುರಿಯನ್ನು ,ತಿನ್ನಬೇಕೆಂದೂ ಬಾಂಧವರಲ್ಲದವರು ಜಾತ್ರೆಗಳಲ್ಲಿ ಹಿಂಜರಿಯದೆ ಕುರಿಗಳನ್ನು ಬಲಿ ಕೊಡಬೇಕೆಂದೂ ಸಹ ಪ್ರಕಟಣೆ ತಿಳಿಸಿದೆ.
ಪ್ರತಿಕ್ರಿಯೆ (3)