ತುಘಲಕ್ ಇತಿಹಾಸಕ್ಕಾಗಿ ಭೇಟಿ ಕೊಡಿ - ___LINK_OPEN_href="http://tugalak.blogspot.com/" target=_self___ತುಘಲಕ್

ಮಹಾಮಹಿಮ ಸಾಮ್ರಾಟರು ತಮ್ಮದೇ ಟ್ಯಾಬಲಾಯಿಡನ್ನು ಪ್ರಾರಂಭಿಸಿ ಅತ್ಯುತ್ತಮ ಪತ್ರಕರ್ತರಾಗಲು ಹೊರಟಿದ್ದಾರೆ. ಇದಕ್ಕಾಗಿ ಆವರು ಸಾಧ್ಯಂತ ತಾಲೀಮನ್ನು ನಡೆಸುತ್ತಿದ್ದಾರೆ. ಹಸೀ ಹಸಿ ಸುಳ್ಳನ್ನು ಜನರ ಕಣ್ಣಿಗೆ ಕಟ್ಟುವಂತೆ ಹೇಗೆ ಹೇಳಬೇಕು ಎಂಬುದರ ಬಗ್ಗೆ ಅಭ್ಯಾಸ ನಡೆಸುತ್ತಿದ್ದಾರೆ. ಪತ್ರಿಕೆಗೆ ಹಳದೀ ಬಣ್ಣದ ಲೇಪನ ಮಾಡಲಾಗಿದ್ದು ಅಕ್ಷರಗಳು ಕೆಂಪುಬಣ್ಣದಲ್ಲಿರಲಿವೆ. ಈ ಬಣ್ಣಗಳು ಪತ್ರಿಕೆಯ ಉದ್ದೇಶಕ್ಕೂ ಹೊಂದಾಣಿಕೆಯಾಗುತ್ತವೆ. ಜೊತೆಗೆ ತಮ್ಮನ್ನು ಖ್ಯಾತ ವಿಜ್ಞಾನಿಗಳ ಜೊತೆ ಹೋಲಿಕೆ ಮಾಡಬೇಕೆಂದೂ ಅದರ ಬದಲಾಗಿ ತಾವು ನಾವಿಕನಿಗೆ ಹೋಲಿಸಿ ಬರೆಯುವುದಾಗಿಯೂ ತುಘಲಕ್ ಪತ್ರಿಕೆಯ ಸಂಪಾದಕರ ಜೊತೆ ಒಪ್ಪಂದವನ್ನೂ ಮಾಡಿಕೊಂಡಿದ್ದಾರೆ.

ಈ ಪತ್ರಿಕೆಯಲ್ಲಿ ಆತ್ಮರತಿ ಮಾಡಿಕೊಳ್ಳಲು ಮೂರು ಅಂಕಣಗಳನ್ನು ಪ್ರಾರಂಭಿಸಲಿದ್ದಾರೆ. ಇನ್ನೊಬ್ಬರಿಗೆ ಬುದ್ಧಿ ಹೇಳುವ ಮೂಲಕ ತಮ್ಮನ್ನು ತಾವು ಹೊಗಳಿಕೊಳ್ಳಲು ಒಂದು ’ಹ್ಯಾಂಗಿಂಗ್ ಐಟೆಮ್’ ಎಂಬ ಅಂಕಣ, ರಾಜಕಾರಣಿಗಳನ್ನು ಬೈಯುವ ಮೂಲಕ ತಾವೆಷ್ಟು ಒಳ್ಳೆಯವರು ಎಂದು ಹೇಳಿಕೊಳ್ಳಲು ’ಸಯೋನಾರಾ’ ಮತ್ತು ಅಂತರಂಗದ ಕೊಳಕನ್ನು ಕಾರಿಕೊಳ್ಳಲು ’ವಾಂಗಿಬಾತ್’ ಎಂಬ ಅಂಕಣಗಳನ್ನು ಪ್ರಾರಂಭಿಸಲಿದ್ದಾರೆ. ಬಾದಶಹರದು ’ಕನ್ಯಾ’ರಾಶಿಯಾಗಿರುವುದ ಈ ಪತ್ರಿಕೆಯ ಎಲ್ಲಾ ಲೇಖನಗಳ ಕೆಳಗೆ ಬಿಪಾಶಾಳ ಫೊಟೋ ಇರುತ್ತದೆ. ಬಿಪಾಶಾಳ ಫೋಟೋವನ್ನು ಹಾಕಲು ಯಾವ ಜ್ಯೋತಿಷಿ ಹೇಳಿದ್ದು ಹಾಗೂ ತಮಗೆ ಆ ಜ್ಯೋತಿಷ್ಯದಲ್ಲಿ ಹೇಗೆ ನಂಬಿಕೆಯಿಲ್ಲ ಎಂದು ಖಾವಂದರು ತಮ್ಮ ’ವಾಂಗಿಬಾತ್’ ಅಂಕಣದಲ್ಲಿ ಹೇಳಿಕೊಳ್ಳಲಿದ್ದಾರೆ! ಮಹಾಮಹಿಮರು ಬರೆದಿರುವ ಒಂದು ಲೇಖನದ ಸ್ಯಾಂಪಲ್ ಅನ್ನು ಅಭಿಮಾನಿಗಳಿಗಾಗಿ ಇಲ್ಲಿ ಕೊಡಮಾಡಲಾಗಿದೆ. ಓದಿ ಎಲ್ಲರೂ ಪಾವನರಾಗಬೇಕೆಂಬುದು ರಾಜಾಜ್ಞೆ.

ಆರೋಗ್ಯ ವಜೀರ ಸಮರಸಿಂಹರೆಡ್ಡಿ ನನ್ನ ಶಿಷ್ಯ. ನಾನು ಹಾಕಿದ ಗೆರೆಯನ್ನು ದಾಟುವುದಿಲ್ಲ. ನನ್ನನ್ನು ಕೇಳದೇ ಸೂಸೂ ಸಹ ಮಾಡುವುದಿಲ್ಲ. ಮೊನ್ನೆ ರಾಜ್ಯದಲ್ಲೆಲ್ಲಾ ಕುರಿಜ್ವರ ಕಾಡುತಿದ್ದಾಗ ತನ್ನ ಹಾಲಿನ ಡೈರಿಯಲ್ಲಿ ಹಣ ಎಣಿಸುತ್ತಾ ಕುಳಿತಿದ್ದವನಿಗೆ ಫೋನ್ ಮಾಡಿ "ನೀನೇನು ಹೊಟ್ಟೆಗೆ ಹಾಲು ಕುಡೀತಿಯೋ ಟೀ ಕುಡೀತಿಯೊ?" ಎಂದು ಕ್ಯಾಕರಿಸಿ ಉಗಿದೆ. ತಕ್ಷಣವೇ ರಾಜಧಾನಿಗೆ ಬಂದ ರೆಡ್ಡಿ "ಮಾವಾ ನಾನು ಬಂದಿದ್ದೇನೆ. ಏನು ಕಿಸಿಯಲಿ?" ಎಂದ. ಕಿಸಿಯುವುದು ಮುಖ್ಯವಲ್ಲ ಮಾರಾಯ ಕಿಸಿಯುವಾಗ ಸುತ್ತಲೂ ಮೀಡಿಯಾ ಇರುವುದು ಮುಖ್ಯ ಎಂದು ಬುದ್ಧಿ ಹೇಳಿದೆ. ನಂತರ ಕುರಿಜ್ವರ ಹಿಡಿದ ಆಸ್ಪತ್ರೆಗಳಿಗೆ ಹೋಗಿ ಅವನು ಕಿಸಿದದ್ದೇನು ಎಂದು ಎಲ್ಲರಿಗೂ ಗೊತ್ತು.

ಅದಕ್ಕೆ ಅದೆಂಥದೋ ಕಾಂಪ್ಲೆಕ್ಸ್ ಅನ್ನುತ್ತಾರೆ. ಇದು ಇರುವವರು ನನಗೆ ಅವರು ಗೊತ್ತು, ಇವರು ಗೊತ್ತು, ನನ್ನಿಂದಲೇ ಅವರು ಉದ್ಧಾರ ಅಗಿದ್ದು, ನಾನು ಹೇಳದೇ ಇವರು ಏನೂ ಕೆಲಸ ಮಾಡುವುದಿಲ್ಲ ಎಂದು ಹೇಳಿಕೊಳ್ಳುತ್ತಾರೆ. ನನಗೆ ಈ ಕಾಂಪ್ಲೆಕ್ಸ್ ಎಂದಿಗೂ ಕಾಡಿದ್ದಿಲ್ಲ. ನನಗೆ ಅನೇಕ ಚಿತ್ರನಟರು ಗೊತ್ತು, ಸುಪರ್‌ಕಾಪ್‍ಗಳು ಗೊತ್ತು, ರಾಜಕಾರಣಿಗಳು ಗೊತ್ತು, ಅಂಡರ್‍ವರ್ಲ್ಡ್ ಡಾನ್‍ಗಳು ಗೊತ್ತು . ಆದರೆ ಇವರೆಲ್ಲಾ ನನಗೆ ಗೊತ್ತು ಎಂದು ನಾನು ಯಾರಿಗೂ ಹೇಳಿಕೊಂಡಿಲ್ಲ. ಎನ್‍ಕೌಂಟರ್ ಕಿಂಗ್ ದಯನಾಯಕ್ ನನಗೆ ಫೊನ್ ಮಾಡಿ ನಾನು ಇವತ್ತು ಇಷ್ಟು ಜನರನ್ನು ಕೊಂದೆ ಸಾರ್ ಎನ್ನುತ್ತಾರೆ. ನಾಳೆ ಎಷ್ಟು ಜನರನ್ನು ಕೊಲ್ಲಲಿ ಹೇಳಿ ಎಂದು ದುಂಬಾಲು ಬೀಳುತ್ತಾರೆ. "ನೋಡಮ್ಮಾ ನಿನ್ನ ಕಾಲುಗಳನ್ನು ನೋಡಲೆಂದೇ ಜನ ನಿನ್ನ ಸಿನಿಮಾಕ್ಕೆ ಬರುತ್ತಾರೆ. ಮೈತುಂಬಾ ಬಟ್ಟೇ ಹಾಕಿಕೊಂಡು ರಸಿಕರಿಗೆ ಅನ್ಯಾಯ ಮಾಡಬೇಡ" ಎಂದು ಬಿಪಾಶಾಳಿಗೆ ಹೇಳಿದ್ದೇ ನಾನು. ಇಲ್ಲವಾದರೆ ಇಷ್ಟೊತ್ತಿಗೆ ಅವಳ ಕರೀಯರ್ ಇಲ್ಲವಾಗುತ್ತಿತ್ತು. ರಹಮಾನ್ ವಂದೇಮಾತರಂ ಕಾಂಪೊಸ್ ಮಾಡಿದಾಗ "ನೀನು ಹೀಗೆಲ್ಲಾ ಕೆಟ್ಟದಾಗಿ ಕಾಂಪೋಸ್ ಮಾಡಬೇಡ" ಎಂದು ಹೇಳಿ ಫೋನಿಟ್ಟಿದ್ದೆ. ಜನ ಸುಮ್ಮನಿರುತ್ತಾರೆ ಎಂಬ ಕಾರಣಕ್ಕೆ ದೇಶದ ಗೀತೆಯನ್ನು ಹಾಳು ಮಾಡುವುದು ನನಗೆ ಇಷ್ಟವಾಗುವುದಿಲ್ಲ. ಆದರೆ ಇವನ್ನೆಲ್ಲಾ ನಾನು ಯಾರಿಗೂ ಹೇಳಿಕೊಂಡಿದ್ದಿಲ್ಲ. ಉದಾಹರಣೆಗೆ ನನ್ನ ಅಪ್ಪಣೆಯಿಲ್ಲದೇ ಸೂಸೂ ಸಹ ಮಾಡದ ಸಮರಸಿಂಹರೆಡ್ಡಿಯ ಬಗ್ಗೆ ನಾನು ಎಲ್ಲಾದರೂ ಹೇಳಿಕೊಂಡಿದ್ದೇನಾ? ನೋಡಿ. ನನ್ನ ಹೆಂಡತಿ ಮಕ್ಕಳಾದರೂ ಅಷ್ಟೆ. ತಮ್ಮ ಬಗ್ಗೆ ಎಲ್ಲೂ ಹೆಳಿಕೊಳ್ಳುವುದಿಲ್ಲ. ಯಾಕೆಂದರೆ ನಾನೇ ಹೊಗಳಿಬಿಡುತ್ತೇನೆ. ನನ್ನ ಹೆಂಡತಿ ಮಕ್ಕಳನ್ನು ಬಿಟ್ಟು ಈ ಜಗತ್ತಿನಲ್ಲಿ ಯಾರೂ ಒಳ್ಳೆಯವರಲ್ಲ. ನನ್ನ ಹೆಂಡತಿ ಮಕ್ಕಳು ಏನು ಮಾಡಿದರೂ ನನಗೆ ಮುದ್ದೇ! ನಾನು ಹಾಗೆ ನಾನು ಹೀಗೆ ನಾನು ನಾನೇ ! ನಾನು ನಾನು ಮತ್ತು ನಾನು!

ಆದರಿಂದ ಎಲ್ಲರೂ ಸಹ ನನ್ನ ಹಾಗೆ ತನ್ನ ಬಣ್ಣಿಸದೇ ಬದುಕಬೇಕು. ಸಾಧ್ಯವಾದರೆ ಯಾರಾದರೂ ತನ್ನನ್ನು ಬಣ್ಣಿಸುವಂತೆ ಒಪ್ಪಂದ ಮಾಡಿಕೊಳ್ಳಬೇಕು.

ಇದು ಬಾದಶಹರ ಲೇಖನ. ಇದನ್ನು ಓದಿ ಉದ್ಧಾರ ಆದ ಎಲ್ಲರಿಗೂ ಶರಣು ಶರಣಾರ್ಥಿಗಳು!

ಅಂದಹಾಗೆ ಕುರಿಜ್ವರರೋಗಿಗಳ ಆರೋಗ್ಯ ವಿಚಾರಿಸಲು ಜಯದೇವ ಆಸ್ಪತ್ರೆಗೆ ತೆರಳಿದ್ದ ಸಮರಸಿಂಹ ರೆಡ್ಡಿಯವರು ಸದರಿ ಆಸ್ಪತ್ರೆಯ ಶಿಸ್ತು,ಕ್ವಾಲಿಟಿ ಮತ್ತು ಶುಚಿತ್ವವನ್ನು ನೋಡಿ ಇಂತಹ ಒಳ್ಳೆಯ ಆಸ್ಪತ್ರೆ ಸರ್ಕಾರಿ ಆಸ್ಪತ್ರೆಯಾಗಿರಲು ಲಾಯಕ್ಕಾದ ಆಸ್ಪತ್ರೆಯಲ್ಲ, ಇದನ್ನು ಖಾಸಗಿಯವರಿಗೆ ತಕ್ಷಣವೇ ಒಪ್ಪಿಸಬೇಕು ಎಂದು ಆಜ್ಞೆ ಹೊರಡಿಸಿದ್ದಾರೆ. ಹೆಚ್ಚು ತವಡು ತಿನ್ನಿಸುವ ತಾಕತ್ತಿರುವ ಗುತ್ತಿಗೆದಾರರಿಗೆ ಟೆಂಡರ್ ನೀಡಬೇಕೆಂದು ಒಳಾಜ್ಞೆಯಾಗಿದೆ ಎಂದು ತಿಳಿದುಬಂದಿದೆ.