ಯಾವುದೀ ಕರ್ಕಶ ಸ್ವರ......?


ಮೊದಲೇ ಬೇಸಿಗೆ ಕಾಲ.ರಾತ್ರಿಯೆಲ್ಲ ಅತ್ತಿಂದ್ದಿತ್ತ ಹೊರಳಾಡಿ ಬೆಳಗಿನ ಹೊತ್ತಿಗೆ ನಿದ್ದೆಯ ಮಂಪರು ಆವರಿಸಿತ್ತು.ಇನ್ನೇನು ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ಕೆಲಸಗಳಿಗೆ ಅಣಿಯಾಗಬೇಕೆಂದುಕೊಳ್ಳುವಷ್ಟರಲ್ಲಿ ಎಲ್ಲಿಂದಲೋ ಕೋಗಿಲೆಯ" ಕರ್ಕಶ " ಸ್ವರ ಕೇಳಿಸಿತು. ಕಿಟಕಿಯಿಂದ ಇಣುಕಿ ನೋಡಿದರೆ ವಿದ್ಯುತ್ ತಂತಿಯ ಮೇಲೆ ಕುಳಿತ ಕೋಗಿಲೆ ತನ್ನ ಕರ್ಕಶ ಸ್ವರವನ್ನು ಇನ್ನೂ ಹೆಚ್ಚಿಸುತ್ತಿತ್ತು. ಈ ಬೇಸಿಗೆಯಲ್ಲಿ ಕೋಗಿಲೆಯ ಇಂಪಾದ ಸ್ವರದ ಬದಲು ಇದ್ಯಾವುದಿದು ಕರ್ಕಶ ಸ್ವರ.........ಆಶ್ಚರ್ಯವಾಯಿತು ! ತೀರಾ ಹತಾಶೆಯಿಂದ ಹೊರಬಂದಿದ್ದ ಸ್ವರದಂತಿತ್ತು ಅದು.......ನನಗೊಂದು ಅನುಮಾನ ಮೂಡಿತು.ಯಾರಿಂದಲಾದರೂ ಏನೋ ಅನ್ಯಾಯವಾಗಿರುವುದರಿಂದ ಎಲ್ಲರೆದುರಿಗೆ ತನ್ನ ಅಳಲನ್ನು ತೋಡಿಕೊಳ್ಳಲು ಈ ರೀತಿ ವರ್ತಿಸುತ್ತಿರಬಹುದೇ..........! ಅಥವಾ ಅದೇನಾದರೂ ಹೆಣ್ಣು ಕೋಗಿಲೆಯಾಗಿದ್ದು ತನ್ನ ಸಂಗಾತಿಯನ್ನು ಅರಸುತ್ತ ಹೊರಟು, ಸಂಗಾತಿ ಸಿಗದಿದ್ದಾಗ ಈ ರೀತಿ ಅರುಚಿಕೊಂಡು ತನ್ನ ದುಃಖವನ್ನು ತೋಡಿಕೊಳ್ಳುತ್ತಿರಬಹುದೇ......! ಒಂದು ಕೋಗಿಲೆ ಕುಹೂ....ಎಂದು ಕೂಗಿದಾಗ ಮತ್ತೊಂದು ಕೋಗಿಲೆಯೂ ಕುಹೂ.....ಎಂದು ಮಾರ್ದನಿ ನೀಡುತ್ತದೆ.ಎಸ್ಟು ಕಿರುಚಿಕೊಂಡರೂ ಮಾರ್ದನಿ ಬರದಿದ್ದಾಗ ತನ್ನನ್ಯಾರೂ ಗಮನಿಸುತ್ತಿಲ್ಲವೆಂದು ಈ ರೀತಿ ಮಾಡುತ್ತಿರಬಹುದೇ........! ಇಲ್ಲಾ ಬೇಸಿಗೆ ಕಾಲದಲ್ಲೆಲ್ಲಾ ನನ್ನದೇ ಸಾಮ್ರಾಜ್ಯ............ಎನ್ನುತ್ತಾ ತನ್ನ ಪುಂಡಾಟವನ್ನು ತೋರಿಸುತ್ತಿರಬಹುದೇ...........! ಮತ್ತೆ ಮತ್ತೆ ಕಿಚ್ಚಿಗೆ ಬಿದ್ದಂತೆ ಕತ್ತನ್ನು ಮೇಲೂ ಕೆಳಗೂ ಆಡಿಸುತ್ತಾ ಕೂಗುತ್ತಿರುವುದನ್ನು ಗಮನಿಸಿದರೆ ಇದರಲ್ಲೇನೊ ಇದೆ ಅನ್ನಿಸಿತು.

ಮರುದಿನ ಮತ್ತದೇ ಕರ್ಕಶ ಸ್ವರ........! ನನ್ನ ಅನುಮಾನ ಮತ್ತಸ್ಟು ಹೆಚ್ಚಾಗಿ ಕುತೂಹಲವೂ ಗರಿಗೆದರಿತು.ನನ್ನ ಮಗಳೂ ಕೂಡ ತನಗೆ ಬೇಕಾದ ವಸ್ತು ಸಿಗದಿದ್ದಾಗ.......ಅಥವಾ ನಾವು ಕೊಡಿಸದಿದ್ದಾಗ ಅದು ಮನೆಯೋ......ರಸ್ತೆಯೋ......ಎಂದು ನೋಡದೇ ಇದೇ ರೀತಿ ರಚ್ಚೆ ಹಿಡಿದು ಕೂರುತ್ತಾಳೆ. ಆಗ ಅವಳನ್ನು ಸಮಾಧಾನಪಡಿಸಲು ಚತುರೋಪಾಯಗಳನ್ನೂ ಉಪಯೋಗಿಸಬೇಕಾಗುತ್ತದೆ. ಈ ಕೋಗಿಲೆಗೆ ಅದೇನು ಬೇಕಾಗಿದೆಯೋ........ಅದನ್ನು ಸಮಾಧಾನಪಡಿಸಲು ಇನ್ಯಾವ ಉಪಾಯ ಹುಡುಕಬೇಕೋ .......ಗೊತ್ತಾಗಲಿಲ್ಲ. ಈಗಲೂ ತಿಳಿದಿಲ್ಲ.........

ನಿಮಗೇನಾದರೂ ತಿಳಿದಿದ್ದರೆ...........ನನಗೂ ಸ್ವಲ್ಪ ತಿಳಿಸುವಿರಾ...........!?