ವಿಷ್ಣುಶರ್ಮ ಹಾಗೂ ಶಂಕರಭಟ್ಟ ಇಬ್ಬರು ಸಂಗೀತಗಾರರು. ಇವರಿಬ್ಬರು ಒಬ್ಬರನ್ನೊಬ್ಬರು ಮೀರಿಸುವ ಸಂಗೀತಗಾರರು. ಹಾಗಾಗಿ ಇವರಿಬ್ಬರ ನಡುವೆ ಯಾವಾಗಲೂ ಸ್ಪರ್ಧೆಯಿರುತಿತ್ತು. ೧೫ ವರ್ಷಗಳ ಕಾಲ ಸಂಗೀತಾಭ್ಯಾಸವನ್ನು ಶಾಸ್ತ್ರೀಯವಾಗಿ ಗುರುಕುಲದಲ್ಲಿ ಅಧ್ಯಯನ ಮಾಡಿದರು. ನೀವು ನನ್ನಿಂದ ಕಲಿಯಬೇಕಾದುದನ್ನೆಲ್ಲ ಕಲಿತಿದ್ದೀರಿ. ಇನ್ನು ಮುಂದೆ ಸ್ವತಂತ್ರ ಸಾಧನೆಯನ್ನು ಮಾಡಿ ಎಂದು ಗುರುಗಳು ಅವರನ್ನು ಕಳುಹಿಸಿಕೊಟ್ಟರು.
ಇಬ್ಬರು ಆಶ್ರಮವನ್ನು ಬಿಟ್ಟು ತಮ್ಮ ತಮ್ಮ ಊರುಗಳಿಗೆ ಹೊರಟರು. ಇಬ್ಬರು ಹಾದಿಯು ಕವಲೊಡೆಯುವ ಸ್ಥಳದಲ್ಲಿ ನಿಂತರು. ವಿದಾಯದ ಅಂತಿಮ ಸಮಯದಲ್ಲಿಯೂ ನಾನು ಉತ್ತಮ ಸಂಗೀತಗಾರನೆಂದು, ತಾನು ಉತ್ತಮ ಸಂಗೀತಗಾರನೆಂದು ವಿವಾದ ಆರಂಭವಾಯಿತು.
‘ನಿನ್ನ ಸಂಗೀತವನ್ನು ಜನ ಬಿಡು, ಒಂದು ದನವೂ ಆಸ್ವಾದಿಸುವುದಿಲ್ಲ‘ ಎಂದ ವಿಷ್ಣುಶರ್ಮ. ‘ಹೌದಾ? ಹಾಗಿದ್ದ ಮೇಲೆ ನಿನ್ನ ಸಂಗೀತವನ್ನು ದನವು ಸವಿಯಬಲ್ಲುದೆ‘ ಎಂದು ಮರುಸವಾಲನ್ನು ಹಾಕಿದ ಶಂಕರಭಟ್ಟ.
‘ಓಹೋ..ಈಗಲೇ ಅದನ್ನು ಸಾಧಿಸಿ ತೋರಿಸುತ್ತೇನೆ‘ ಎಂದನು. ಒಂದು ದನವನ್ನು ಕರೆದೊಯ್ಯುತ್ತಿದ್ದ ರೈತನನ್ನು ನಿಲ್ಲಿಸಿದನು. ತಮ್ಮ ನಡುವೆ ಏರ್ಪಟ್ಟ ಸ್ಪರ್ಧೆಯನ್ನು ವಿವರಿಸಿದನು. ಅವನ ದನಕ್ಕಾಗಿ ತಾವು ಸಂಗೀತವನ್ನು ಹಾಡುವುದಾಗಿ ಹೇಳಿದರು. ಅದಕ್ಕೆ ರೈತನು ಒಪ್ಪಿಕೊಂಡನು. ಹಸುವನ್ನು ಅಲ್ಲೇ ಮರದ ಬುಡಕ್ಕೆ ಕಟ್ಟಿಹಾಕಿದನು. ತಾನು ಹತ್ತಿರದಲ್ಲಿದ್ದ ಕಟ್ಟೆಯ ಮೇಲೆ ಕುಳಿತುಕೊಂಡನು.
ಮೊದಲು ವಿಷ್ಣುಶರ್ಮನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಅದ್ಭುತವಾಗಿ ದನದ ಮುಂದೆ ಹಾಡಿದನು. ದನವು ನಿಂತಲ್ಲಿಯೇ ಮೆಲುಕು ಹಾಕುತಿತ್ತು. ಸಂಗೀತವನ್ನು ಆಸ್ವಾದಿಸುವ ಯಾವ ಲಕ್ಷಣವೂ ಕಾಣಲಿಲ್ಲ. ವಿಷ್ಣು ಶರ್ಮನ ತಲೆಬಾಗಿಸಿ ಎದ್ದು ಬಂದನು. ಈಗ ಶಂಕರಭಟ್ಟನು ದನದ ಮುಂದೆ ಕುಳಿತು ಸೊಗಸಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಹಾಡಲಾರಂಭಿಸಿದನು. ದನವು ತನ್ನ ಪಾಡಿಗೆ ತಾನು ಮೆಲುಕು ಹಾಕುತಿತ್ತು. ಶಂಕರಭಟ್ಟನು ಸೋತು ಮುಖವನ್ನು ಕೆಳಗೆ ಹಾಕಿದನು.
ಇದನ್ನೆಲ್ಲ ನೋಡಿದ ರೈತನು ನಕ್ಕನು. ಕೂಡಲೆ ತನ್ನ ಧ್ವನಿಯನ್ನು ಬದಲಿಸಿ ಕರುವಿನ ಹಾಗೆ ಕೂಗಿದನು. ಅವನ ಅನುಕರಣ ಎಷ್ಟು ಸಹಜವಾಗಿತ್ತೆಂದರೆ, ಹಸುವು ನಿಂತಲ್ಲಿಯೇ ‘ಅಂಬಾ‘ ಎಂದು ಮರುತ್ತರ ನೀಡಿತು. ರೈತನು ಮತ್ತಷ್ಟು ಸಹಜವಾಗಿ ಸಂಕಟದಲ್ಲಿರುವ ಕರುವಿನ ಹಾಗೆ ಮತ್ತೆ ಕೂಗಿದನು. ಆಗ ಹಸುವು ಹಗ್ಗವನ್ನು ಕಿತ್ತುಕೊಂಡು ರೈತನಿದ್ದ ಕಡೆಗೆ ಧಾವಿಸಿತು.
------
-ಡಾ.ನಾ.ಸೋಮೇಶ್ವರ
ಪ್ರತಿಕ್ರಿಯೆ (5)