ಹೃದ್ರೋಗಗಳು ಬರದಿರಲು ಹೆಚ್ಚು ಹೆಚ್ಚು ಚುಂಬಿಸಿ!

 

ಚುಂಬನ!

ಈ ಶಬ್ದವನ್ನು ಕೇಳುತ್ತಲೇ ಕಿವಿ ನಿಮಿರುತ್ತದೆ!

ನಮ್ಮಲ್ಲಿ ಚುಂಬನದ ಬಗ್ಗೆ ಇತರ ವಯೋಮಾನದವರಿಗಿಂತ ಯುವಜನತೆಗೆ ಕುತೂಹಲ ಹೆಚ್ಚು ಇರುವುದು ಸಹಜವೆ! ಹುಡುಗ-ಹುಡುಗಿಯರಲ್ಲಿ ಪ್ರೀತಿ ಪ್ರೇಮವು ಗಾಢವಾಗುವುದಕ್ಕೆ, ಆಳವಾಗಿ ಬೇರು ಬಿಡುವುದಕ್ಕೆ, ಮದುವೆಯಂತಹ ದೀರ್ಘಕಾಲ ಸಂಬಂಧ ಬೆಳೆಯುವುದಕ್ಕೆ ಬಹುಶಃ ಚುಂಬನವೇ ಮೊದಲ ಮೆಟ್ಟಿಲಾಗುತ್ತದೆ.

ಆದರೆ ಚುಂಬನದ ಜಗತ್ತು ವಿಶಾಲವಾದದ್ದು. ಚುಂಬನವು ಕಾಮಪ್ರವರ್ತಕ. ಚುಂಬನವು ಪ್ರೀತಿಯ ದ್ಯೋತಕ. ಚುಂಬನವು ಶಾಂತಿ-ಸೌಹಾರ್ಧ ಸೂಚಕ. ಚುಂಬನವು ಒಂದು ಧಾರ್ಮಿಕ ಆಚರಣೆಯೂ ಹೌದು. ಪ್ರಸ್ತುತ ಕಾಮವರ್ಧಕ ಚುಂಬನದ ಬಗ್ಗೆ ನನ್ನ ಗಮನವನ್ನು ಕೇಂದ್ರೀಕರಿಸಿದ್ದೇನೆ.

ಚುಂಬನ ಎಂದರೆ ಏನು? ಅವುಗಳಲ್ಲಿ ಎಷ್ಟು ವಿಧಗಳಿವೆ? ಚುಂಬನವನ್ನು ನೀಡುವುದು ಹೇಗೆ? ಚುಂಬನವನ್ನು ಪಡೆಯುವುದು ಹೇಗೆ? ಯಾವ ಯಾವ ಸಂದರ್ಭದಲ್ಲಿ ಎಂತೆಂತಹ ಚುಂಬನವನ್ನು ನೀಡಬೇಕು? ಪ್ರಾಮಾಣಿಕ ಚುಂಬನವನ್ನು-ತೋರಿಕೆಯ ಚುಂಬನವನ್ನು ಗುರುತಿಸುವುದು ಹೇಗೆ ಇತ್ಯಾದಿ ವಿಷಯಗಳ ಬಗ್ಗೆ ನಾನು ಬರೆಯ ಹೋಗುವುದಿಲ್ಲ. ಏಕೆಂದರೆ ಈ ಬಗ್ಗೆ ನನಗಿಂತಲೂ ನಿಮಗೆ ಹೆಚ್ಚು ಅನುಭವ ಇರಬಹುದು. ಈ ಲೇಖನವನ್ನು ಓದಿದ ಮೇಲೆ ನೀವು ನಿಮ್ಮ ಅನುಭವವನ್ನು ಎಲ್ಲರೊಡನೆ “ಬರಹ”ದ ಮೂಲಕ ಹಂಚಿಕೊಳ್ಳಲು ನನ್ನ ಅಡ್ಡಿಯೇನೂ ಇಲ್ಲ.

 

ಕಾಮವರ್ಧಕ ಚುಂಬನ:

ಮನುಷ್ಯರಲ್ಲಿ ಚುಂಬನವು ಒಬ್ಬರ ತುಟಿ ಹಾಗೂ ಮತ್ತೊಬ್ಬರ ತುಟಿ ಇಲ್ಲವೇ ದೇಹದ ಇತರ ಅಂಗಗಳ ನಡುವೆ ನಡೆಯುವ ಸ್ಪರ್ಶಕ್ರಿಯೆ. ನಾನು ತುಟಿ-ತುಟಿಗಳ ನಡುವಿನ ಚುಂಬನದ ಬಗ್ಗೆ ಮಾತ್ರ ಇಲ್ಲಿ ವಿಚಾರ ಮಾಡುತ್ತಿದ್ದೇನೆ. ತುಟಿ-ತುಟಿಗಳ ಚುಂಬನದಲ್ಲಿ ಮೂರು ನಮೂನೆಗಳಿವೆಯಂತೆ.

  • ಮೊದಲನೆಯದು ತುಟಿಗೆ ತುಟಿಗೆ ತಾಗಿಸುವಂತಹದ್ದು.
  • ಎರಡನೆಯದು, ಒಬ್ಬರು ತಮ್ಮ ತುಟಿಯನ್ನು ಸಂಗಾತಿಯ ತುಟಿಗೆ ಆಳವಾಗಿ ಒತ್ತಿ, ಸಂಗಾತಿಯ  ಜೊಲ್ಲನ್ನು  (ಅಧರಾಮೃತ!!) ಹೀರುವುದು
  • ಮೂರನೆಯ ರೀತಿಯ ಚುಂಬನದಲ್ಲಿ ಸಂಗಾತಿಗಳ ತುಟಿಗಳ ಜೊತೆಯಲ್ಲಿ ನಾಲಿಗೆಯೂ ಪರಸ್ಪರ ಮುಖಾ (ಬಾಯಿ) ನ್ವೇಷಣೆಯನ್ನು ನಡೆಸುವುದು.

ತುಟಿಗಳಲ್ಲಿ ಮೇಲುತುಟಿಯಿದೆ. ಕೆಳತುಟಿಯಿದೆ. ಈ ತುಟಿಗಳನ್ನು “ಆರ್ಬಿಕ್ಯುಲಾರಿ ಓರಿಸ್” ಎಂಬ ಸ್ನಾಯುವುದು ರೂಪಿಸುತ್ತದೆ. ಇದೊಂದು ಉಂಗುರ ರೂಪೀ ಸ್ನಾಯು. ಚುಂಬನದಲ್ಲಿ ಈ ಸ್ನಾಯುವಿನದೇ ಪ್ರಧಾನ ಪಾತ್ರ. ಈ ಸ್ನಾಯುವಿಗೆ ನೆರವಾಗಲು ಮುಖದಲ್ಲಿರುವ ಇತರ ೩೪ ಸ್ನಾಯುಗಳು ನೆರವಾಗುತ್ತವೆ. ದೇಹದ ಉಳಿದ ೧೧೨ ನಿಲುವು ಸ್ನಾಯುಗಳು ಪರೋಕ್ಷವಾಗಿ ಸಹಾಯಮಾಡುತ್ತವೆ.

ವಿಜ್ಞಾನಿಗಳು ಪ್ರೇಮಿಗಳನ್ನು ಅಧ್ಯಯನ ಮಾಡಿರುವರು. ಪ್ರೇಮಿಯು ತನ್ನ ಸಂಗಾತಿಯನ್ನು ನೋಡಿದ ಕೂಡಲೆ ಅವನ ಮಿದುಳಿನಲ್ಲಿ ಅಸಂಖ್ಯ ಬದಲಾವಣೆಗಳಾಗುತ್ತವೆ. ಅವುಗಳಲ್ಲಿ ಡೋಪಮಿನ್ ಎಂಬ ನರರಾಸಾಯನಿಕವು ಅಧಿಕವಾಗಿ ಉತ್ಪಾದನೆಯಾಗುತ್ತದೆ. ಡೋಪಮಿನ್ ರಾಸಾಯನಿಕವು ಮಿದುಳಿನ ‘ವೆಂಟ್ರಲ್ ಟೆಗ್‍ಮೆಂಟಲ್ ಏರಿಯ” ಎಂಬ ಭಾಗದಲ್ಲಿ ಅಧಿಕವಾಗುತ್ತದೆ. ಚುಂಬನದ ಫಲವಾಗಿ ದೊರೆಯುವ ಆನಂದ ಆಸ್ವಾದನೆಗೆ ಡೋಪಮಿನ್ ತೀರಾ ಅಗತ್ಯ.

 

 

ಹುಟ್ಟು:

ತಾಯಿಯು ಮಗುವನ್ನು ಅಪ್ಪಿಕೊಂಡು ಮುತ್ತಿಡುವುದು, ಮಗುವು ಬಂದು ಅಮ್ಮನ ಮಡಿಲಲ್ಲಿ ಮಲಗುವುದು ಒಂದು ಅವಿನಾಭಾವ ಸಂಬಂಧ. ತಾಯಿಯು ಮುಗುವಿಗೆ ಮುತ್ತನ್ನು ನೀಡಿದಾಗ ಅಲ್ಲಿ ಲೈಂಗಿಕತೆ ಸ್ಥಾನವೇ ಇಲ್ಲ.  ಇಂತಹ ಮುತ್ತಿನಲ್ಲಿ ತುಟಿ-ತುಟಿಗಳ ಮುತ್ತು ಇರುವುದಿಲ್ಲ. ತಾಯಿಯು ಮಗುವಿನ ಹಣೆ, ಗಲ್ಲ, ಗದ್ದ, ತಲೆ, ಹೊಟ್ಟೆ ಇತ್ಯಾದಿಗಳನ್ನು ಮುತ್ತಿಡಬಹುದಷ್ಟೆ. ಇಲ್ಲಿ ಕೇವಲ ಮಾತೃ ಪ್ರೀತಿ ಮಾತ್ರ ವ್ಯಕ್ತವಾಗುತ್ತದೆ. ಇಂತಹ ಪ್ರೀತಿಯ ಹಿನ್ನೆಲೆಯಲ್ಲಿಯೂ ಡೋಪಮಿನ್ ಹಾರ್ಮೋನಿನ ಪಾತ್ರವಿರುತ್ತದೆ. ಈ ಡೋಪಮಿನ್ ಮನುಷ್ಯರಲ್ಲಿ ಮಾತ್ರವಿಲ್ಲದ ಅನೇಕ ಕಶೇರುಕ ಜೀವಿಗಳ (ವರ್ಟಿಬ್ರೇಟ್ಸ್) ಮಿದುಳಲ್ಲಿ ಇರುತ್ತದೆ. ಹಾಗಾಗಿ ನಾಯಿ, ಬೆಕ್ಕು, ಹಸು, ಮಂಗ ಇತ್ಯಾದಿಗಳಿಲ್ಲ ತಮ್ಮ ಮಗುವನ್ನು ನೆಕ್ಕುವುದರ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುತ್ತವೆ. ಇಲ್ಲಿ ನೆಕ್ಕುವಿಕೆಯನ್ನು ಚುಂಬನದ ಸಮೀಪ ಪ್ರಕ್ರಿಯೆ ಎಂದು ಭಾವಿಸಬಹುದು. ತಾಯಿ-ಮಕ್ಕಳ ನಡುವಿನ ಚುಂಬನ ಸಹಜವಾದದ್ದು. ಜನ್ಮದತ್ತವಾದದ್ದು.

ನನ್ನ ಪ್ರಶ್ನೆ, ಗಂಡು-ಹೆಣ್ಣುಗಳ ನಡುವೆ ನಡೆಯುವ, ತುಟಿಗೆ ತುಟಿಯನ್ನು ಮುತ್ತಿಕ್ಕುವ, ಕಾಮಪ್ರವರ್ಧಕ ಚುಂಬನವು ಸಹಜವಾದದ್ದೆ? ಇದು ಜನ್ಮದತ್ತವಾದದ್ದೆ ಅಥವ ಬದುಕಿನಲ್ಲಿ ಕಲಿತದ್ದೆ?

ಜನ್ಮದತ್ತ:

ಕೆಲವು ಚರ್ಯೆಯಗಳು ನಮ್ಮ ಬದುಕಿನಲ್ಲಿ ಹುಟ್ಟಿನೊಡನೆ ಬರುತ್ತವೆ. ಉದಾಹರಣೆಗೆ ಶಿಶುವು ಹುಟ್ಟಿದ ಕೂಡಲೇ ತಾಯಿಯ ಮೊಲೆಯನ್ನು ಹುಡುಕಿಕೊಂಡು ಹೋಗಿ ಹಾಲನ್ನು ಕುಡಿಯುತ್ತದೆ. ಹಾಲನ್ನು ಕುಡಿಯುವ ಅರಿವು ಮಗುವಿಗೆ ಹುಟ್ಟಿನಿಂದಲೇ ಬಂದಿರಬೇಕು. ಇಲ್ಲದಿದ್ದರೆ ಆ ಮಗುವು ಮೊಲೆಯನ್ನು ಹುಡುಕಿಕೊಂಡು ಹೋಗಿ ಹಾಲನ್ನು ಕುಡಿಯಲಾರದು. ಹೀಗೆ ಕುಡಿಯುವ ಬುದ್ಧಿಯು ಶಿಶುವಿಗೆ ಅದರ ಹುಟ್ಟಿನೊಡನೆಯೇ ಬಂದಿರಬೇಕು. ಹಾಗೆ ಬರದೇ ಹೋದರೆ ಆ ಮಗುವು ಸಾಯಬೇಕಾಗುತ್ತದೆ. ಶಿಶುವಿನ ಅಸ್ತಿತ್ವಕ್ಕೆ ಅಗತ್ಯವಾದ ಕೆಲವು “ವಿದ್ಯೆ”ಗಳು ಜನ್ಮದತ್ತವಾಗಿ (ವಂಶವಾಹಿಗಳ ಮೂಲಕ ಬಂದಿರುತ್ತದೆ) ಬರಲೇಬೇಕು. ಆದರೆ ಚುಂಬನ ಎನ್ನುವುದು ಹೀಗೆ ಹುಟ್ಟಿನೊಡನೆ ಬಂದಿರುವ ವಿದ್ಯೆಯೆ? ಅಥವ ಜೀವಿಗಳು ಬದುಕಿನಲ್ಲಿ ಹೊಸದಾಗಿ ಕಲಿತದ್ದೋ???

ಕಲಿತದ್ದು:

ಕಾಮವರ್ಧಕ ಚುಂಬನವು ಜನ್ಮದತ್ತವಾದದ್ದಲ್ಲ. ಹಾಗಾಗಿ ಇದು ಆನುವಂಶಿಕವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಿದುಬರುವ ಪ್ರಶ್ನೆಯೇ ಬರುವುದಿಲ್ಲ. ಪ್ರತಿಯೊಂದು ಜೀವಿಯು ಚುಂಬನವನ್ನು ನೀಡುವುದನ್ನು ಹಾಗೂ ಪಡೆಯುವುದನ್ನು ತನ್ನ ಬದುಕಿನಲ್ಲಿ ಹೊಸದಾಗಿ ಕಲಿಯಬೇಕಾಗುತ್ತದೆ. ಚುಂಬನವು ಒಂದು ಜೀವಿಯ ಅಸ್ತಿತ್ವಕ್ಕೆ ತೀರಾ ಅಗತ್ಯವೇನಿಲ್ಲ.

ಚುಂಬನ ಎನ್ನುವುದು ಮಿಲಿಯಗಟ್ಟಲೇ ವರ್ಷಗಳ ಹಿಂದೆ ಹುಟ್ಟಿರಬೇಕು. ತಾಯಿಯು ಗಟ್ಟಿಯಾದ ಆಹಾರವನ್ನು ಜಗಿದು, ನುಣ್ಣಗೆ ಮಾಡಿ, ಅದನ್ನು ಹಾಗೆಯೇ ಮಗುವಿನ ಬಾಯಿಯಲ್ಲಿ ಇಡುತ್ತಿದ್ದಳು. ಈ ಪದ್ಧತಿಯನ್ನು ಇಂದಿಗೂ ಸಹಾ ಪಪುವ ನ್ಯೂಗಿನಿ ಹಾಗೂ ನೈಋತ್ಯ ಆಫ್ರಿಕದ ಸ್ಯಾನ್ ಬುಡಕಟ್ಟಿನ ತಾಯಂದಿರು ಅನುಸರಿಸುತ್ತಿದ್ದಾರೆ. (ಹಕ್ಕಿಗಳು ಹೀಗೆಯೇ ಮರಿಗಳ ಬಾಯಿಗೆ ತನ್ನ ಕೊಕ್ಕೊನ ಮೂಲಕ ಊಡುತ್ತದೆ ಎಂಬುದನ್ನು ಇಲ್ಲಿ ಪ್ರಾಸಂಗಿಕವಾಗಿ ನೆನಪಿಸಿಕೊಳ್ಳಬಹುದು) ಈ ಹಿನ್ನೆಲೆಯಲ್ಲಿ ಚುಂಬನವು ಆಹಾರ-ಪ್ರೀತಿಯನ್ನು ಪಡೆಯುವ ಉದ್ದೇಶದಿಂದ ಹುಟ್ಟಿತು ಎನ್ನಬಹುದು.

ಕಾಮಪ್ರಚೋದಕ ಚುಂಬನವು ಭಾರತದಲ್ಲಿ ಹುಟ್ಟಿತು; ಆ ನಂತರ ಅದು ಯೂರೋಪಿಗೆ ಹರಡಿತು ಎನ್ನುವ ವಾದವಿದೆ. ಗ್ರೀಕ್ ಸಾಹಿತ್ಯದಲ್ಲಿ ಕಾಮಪ್ರವರ್ಧಕ ಚುಂಬನದ ಪ್ರಸ್ತಾಪ ದೊರೆಯುವುದಿಲ್ಲವಂತೆ. ರೋಮನ್ನರು ಚುಂಬನದ ವಿವಿಧ ರೀತಿಗಳಲ್ಲಿ ಆವಿಷ್ಕರಿಸಿದವರು. ರೋಮನ್ನರಿಂದ ಚುಂಬನವು ಇಡೀ ಯೂರೋಪಿಗೆ ಪರಿಚಯವಾಯಿತು. ಬೈಬಲ್ಲಿನಲ್ಲಿ ಚುಂಬನದ ಪ್ರಸ್ತಾಪ ಬರುತ್ತದೆ. ಆದರೆ ಅದು ಹೆಚ್ಚಿಗೆ ಧಾರ್ಮಿಕ ಸ್ವರೂಪದ್ದು ಎನ್ನಬಹುದು. ಚೀನಾ, ಜಪಾನ್, ಆಫ್ರಿಕ ದೇಶಗಳಿಗೆ ಯೂರೋಪಿಯನ್ನರು ಕಾಮಪ್ರವರ್ಧಕ ಚುಂಬನದ ಪರಿಚಯ ಮಾಡಿದರು. ಆದರೂ ಈ ದೇಶಗಳಲ್ಲಿ ಗಂಡು-ಹೆಣ್ಣುಗಳು ಬಹಿರಂಗವಾಗಿ ಚುಂಬಿಸುವುದನ್ನು ಕಾಣಲಾರೆವು.

 

ರೋಗಗಳು:

ಕಾಮಪ್ರವರ್ಧಕ ಚುಂಬನದ ಎರಡು ಮತ್ತು ಮೂರನೆಯ ನಮೂನೆಯು ಆರೋಗ್ಯಕರವಾದದ್ದೆ?

ಈ ಪ್ರಶ್ನೆಗೆ ಉತ್ತರವನ್ನು ನೀಡಬೇಕೆಂದರೆ, ಗಂಡು-ಹೆಣ್ಣು ಇಬ್ಬರೂ ಆರೋಗ್ಯವಂತರಾಗಿದ್ದರೆ, ಅವರು ಪರಸ್ಪರ ನೀಡುವ ಚುಂಬನವೂ ಆರೋಗ್ಯಕರವಾಗಿರುತ್ತದೆ. ಇಬ್ಬರಲ್ಲಿ ಯಾರಾದರೊಬ್ಬರು ರೋಗಗ್ರಸ್ತರಾಗಿದ್ದರೆ, ಕೆಲವು ರೋಗಗಳು ಆರೋಗ್ಯವಂತರಿಗೆ ಹರಡಬಹುದು. ಅಂತಹ ರೋಗಗಳಲ್ಲಿ ಹರ್ಪೆಸ್ ಮತ್ತು ಇನ್‍ಫೆಕ್ಷಿಯಸ್ ಮಾನೋನ್ಯೂಕ್ಲಿಯೋಸಿಸ್ ಮುಖ್ಯವಾದವು. ಎಚ್.ಐ.ವಿ ಸಹಾ ಮೂರನೆಯ ನಮೂನೆಯ ಚುಂಬನದಿಂದ ಹರಡುತ್ತದೆ ಎನ್ನಲಾಗಿದೆ. ಚುಂಬಿಗರ ವಸಡುಗಳು ಆರೋಗ್ಯವಾಗಿರಬೇಕು. ವಸಡುಗಳಿಂದ ರಕ್ತಸ್ರಾವವಾಗುತ್ತಿದ್ದರೆ, ಎಚ್.ಐ.ವಿ ಹರಡುವ ಸಾಧ್ಯತೆಯು ಅಧಿಕವಾಗಿರುತ್ತದೆ. ಆರೋಗ್ಯವಂತ ಚುಂಬಿಗರ ನಡುವೆ ಯಾವುದೇ ರೀತಿಯ ರೋಗಗಳು ಹರಡದಿದ್ದರೂ ಸಹಾ ೨೭೮ ನಮೂನೆಯ ಕೂಡು ಬ್ಯಾಕ್ಟೀರಿಯಗಳ (ಕಮೆನ್ಸಾಲ್ಸ್) ವಿನಿಮಯವಂತೂ ನಡೆಯುತ್ತದೆ!

ಲಾಭಗಳು:

ಚುಂಬನದ ಲಾಭಗಳನ್ನು ನಾನು ವಿವರಿಸಬೇಕಾಗಿಲ್ಲ. ಹುಡುಗ-ಹುಡುಗಿಯರಿಬ್ಬರು ಏಕಪ್ರಕಾರವಾಗಿ ಪ್ರೀತಿಸುತ್ತಿದ್ದರೆ, ಅದು ಖಂಡಿತ ಅವರ ಚುಂಬನದಲ್ಲಿ ವ್ಯಕ್ತವಾಗುತ್ತದೆ. ಅಂತಹ ಚುಂಬನವು ಮದುವೆಗೆ ಅವಕಾಶವನ್ನು ಮಾಡಿಕೊಡಬಹುದು.

ಚುಂಬನವು ಒತ್ತಡವನ್ನು ಕಡಿಮೆ ಮಾಡುತ್ತದೆ ಎನ್ನುವುದಕ್ಕೆ ಪುರಾವೆಯಿದೆ. ಹಾಗಾಗಿ ದಂಪತಿಗಳು ಒಬ್ಬರಿಗೊಬ್ಬರು ಚುಂಬನ ಚಿಕಿತ್ಸೆಯನ್ನು ನೀಡಬಹುದು.

ಎಲ್ಲಕ್ಕಿಂತಲೂ ಕುತೂಹಲಕರವಾದದ್ದು ಎಂದರೆ, ಹೆಚ್ಚು ಹೆಚ್ಚು ಚುಂಬಿಸುತ್ತಿದ್ದರೆ ಕೊಲೆಸ್ಟೀರಾಲ್ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆಯಂತೆ! ಹಾಗಾಗಿ ಹೆಣ್ಣು ಮಕ್ಕಳಲ್ಲಿ ಒಂದು ಮನವಿ. ನಿಮ್ಮ ಸಂಗಾತಿಗೆ ಕೊಲೆಸ್ಟೀರಾಲ್ ಹೆಚ್ಚಿ, ಹೃದ್ರೋಗಗಳು ಬರದಿರಬೇಕಾದರೆ, ಆತನನ್ನು ಹೆಚ್ಚು ಹೆಚ್ಚು ಚುಂಬಿಸಿ!!!! :)

 

-      ಡಾ.ನಾ.ಸೋಮೇಶ್ವರ